ಕವನ: ಸಂಪದವು ದೊರೆತಾಗ.....! (ಮುಕ್ತಕ)

Upayuktha
0


ಸಂಪದವು ದೊರೆತಾಗ ಅಹಮಿಕೆಯು ತರವಲ್ಲ  

ಸೊಂಪಾದ ಜೀವನವ ನಡೆಸುವುದು ಲೇಸು | 

ಗುಂಪಿನಲಿ ಬಡವರನು ಕರೆದು ದಾನವ ಮಾಡು  

ಇಂಪಾದ ಮಾತಿನಲಿ - ಪುಟ್ಟಕಂದ || ೧ ||  


ಕೊರಗದಿರು ಜೀವನದಿ ಸಂಪದವು ದೊರಕದಿರೆ  

ವರಧೈರ್ಯ ನಿನಗಿರಲಿ ದುಡಿದು ಗಳಿಸಲಿಕೆ |  

ನೆರೆನಂಬಿ ದೇವರನು ದುಡಿಮೆಯಲಿ ತೊಡಗಿದರೆ  

ಸಿರಿಲಕುಮಿಯೊಲಿಯುವಳು - ಪುಟ್ಟಕಂದ || ೨ ||  


ಗರ್ವದಲಿ ಬೀಗದಿರು ಧನಕನಕ ದೊರೆತಾಗ  

ಸರ್ವರನು ಆದರಿಸಿ ಗೌರವದಿ ಬದುಕು |  

ಪರ್ವಕಾಲದಿ ಕರೆದು ದಾನವನು ಮಾಡಿದರೆ  

ಸರ್ವೇಶನೊಲಿಯುವನು - ಪುಟ್ಟಕಂದ || ೩ ||   


ಕೊರಗಿದರೆ ಜೀವನದಿ ಮನಕೆ ನೆಮ್ಮದಿಯಿರದು   

ಬರಿದೆ ಕುಳಿತಿರಲು ಭವಿತವ್ಯವೆಲ್ಲಿಹುದು |  

ನರನಾಗಿ ಜನಿಸಿರಲು ಕರ್ತವ್ಯ ಬಲುಹಿರಿದು  

ಧರಣಿಯಲಿ ಮನುಜರಿಗೆ - ಪುಟ್ಟಕಂದ || ೪ ||  

(ಇಂದಿನ ಶ್ರೀ ಸೂಕ್ತಿಯ ಪ್ರಭಾವದಿಂದ ರಚಿಸಿದ ಛಂದೋಬದ್ಧ ಆಶು ಮುಕ್ತಕಗಳು) 

- ವಿ.ಬಿ.ಕುಳಮರ್ವ , ಕುಂಬ್ಳೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top