|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸೆ.27- ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿಗರಿಗೆ ಪ್ರದರ್ಶಿಸಬೇಕಿದೆ ಕರಾವಳಿಯ ಸಾಂಸ್ಕೃತಿಕ ಸಂಪತ್ತು

ಸೆ.27- ವಿಶ್ವ ಪ್ರವಾಸೋದ್ಯಮ ದಿನ: ಪ್ರವಾಸಿಗರಿಗೆ ಪ್ರದರ್ಶಿಸಬೇಕಿದೆ ಕರಾವಳಿಯ ಸಾಂಸ್ಕೃತಿಕ ಸಂಪತ್ತು



ಕರಾವಳಿ ಜಿಲ್ಲೆಗಳಲ್ಲಿ ವಿಫುಲವಾದ ಅವಕಾಶಗಳಿದ್ದರೂ ಪ್ರವಾಸೋದ್ಯಮ ಎಷ್ಟು ಅಭಿವೃದ್ಧಿಯಾಗಿದೆ? ಇಲ್ಲಿರುವ ಪ್ರವಾಸಿ ಆಕರ್ಷಣೆಯ ಎಷ್ಟು ವಿಷಯಗಳು ಈಗಾಗಲೇ ತೆರೆದುಕೊಂಡಿವೆ- ತೆರೆಯಲಾಗಿದೆ ಅಥವಾ ಪರಿಚಯಿಸಲಾಗಿದೆ, ಗೊತ್ತಿಲ್ಲ! ಆದರೆ ನಮ್ಮ ಪ್ರವಾಸೋದ್ಯಮ ಸಂಬಂಧಿ ಚಟುವಟಿಕೆ‌ಗಳು‌ ಕಡಲ ದಡವನ್ನು‌ ಬಿಟ್ಟು ಪೂರ್ವಾಭಿಮುಖವಾಗಿ ನೋಡಿದ ಹಾಗೆ ಅನಿಸುವುದೇ ಇಲ್ಲ. ಹಾಗಾದರೆ ಕಡಲು- ಘಟ್ಟದ ನಡುವೆ ಏನಿದೆ?


ನಮ್ಮ ಉಭಯ ಜಿಲ್ಲೆಗಳಲ್ಲಿ ಸಮೃದ್ಧವಾಗಿ ಬೆಳೆದಿರುವ ಸಂಸ್ಕೃತಿಯು ವೈಶಿಷ್ಟ್ಯ ಪೂರ್ಣವಾದುದು. ಇಲ್ಲಿ ಜಾನಪದ ಮೂಲದ ಆಚರಣೆ, ನಂಬಿಕೆಗಳಿವೆ. ಆರಾಧನಾ ಕಲೆಗಳು, ಪ್ರದರ್ಶನ ರಂಗ ಕಲೆಗಳಿವೆ. ಪರ್ವತ, ಗುಡ್ಡ, ಬೆಟ್ಟ, ಜಲಪಾತ, ಝರಿ, ನದಿ, ಹೊಳೆ, ಸಮುದ್ರ ಎಲ್ಲವೂ ಇದೆ. ಆಹಾರ ಪದಾರ್ಥಗಳ ವೈವಿಧ್ಯತೆ ಇದೆ . ಆಕರ್ಷಕ ಉತ್ಪನ್ನಗಳಿವೆ. ಇತಿಹಾಸ ಹೇಳುವ ಪುರಾತನ  ನಿರ್ಮಿತಿಗಳಿವೆ. ವೀರರ, ಪ್ರತಿಭಾವಂತರ, ಸಾಧಕರ, ದೈವೀಪುರುಷರ ಆಡುಂಬೊಲವಿದೆ. ಭವ್ಯವಾಗಿ ಬೆಳೆದ ದೇವಾಲಯ ಸಂಸ್ಕೃತಿಯಿದೆ. ಒಟ್ಟಿನಲ್ಲಿ ಮನಮೋಹಕ ಪರಿಸರದಲ್ಲಿ ಹಾಡು- ಕುಣಿತಗಳಿಗೆ ಪೂರಕವಾಗಿ ವಾದ್ಯಗಳ ಘೋಷ- ಇದಕ್ಕೆ ಬಣ್ಣದ ಮೆರಗಿನೊಂದಿಗೆ ಪ್ರತಿದಿನ ದೈವ- ದೇವಲೋಕಗಳು, ನಾಗ- ಬ್ರಹ್ಮ ಸನ್ನಿಧಾನಗಳು ಸನ್ನಿಹಿತವಾಗುತ್ತವೆ, ಪುರಾಣ ಪ್ರಪಂಚ ತೆರೆದುಕೊಳ್ಳುತ್ತದೆ. ರಾತ್ರಿಗಳು ಬೆಳ್ಳಂಬೆಳಗಾಗುತ್ತವೆ. ಲೌಕಿಕದಲ್ಲಿ ಅಲೌಕಿಕ ಸಂಭವಿಸುತ್ತದೆ.


ಇದನ್ನೆಲ್ಲ ನಮ್ಮ ಸಂಸ್ಕೃತಿ ಎಂಬ ಗೌರವದೊಂದಿಗೆ ಪ್ರವಾಸಿಗೆ ತೋರಿಸಬೇಕು. ವಿವಿಧ ಸೌಲಭ್ಯಗಳೊಂದಿಗೆ ಈ ಸಾಂಸ್ಕೃತಿಕ ಸಂಪತ್ತಿನ ಖಜಾನೆಯ ಬಾಗಿಲು ತೆರೆಯಬೇಕು. ಆಗ ನಮ್ಮ ಸಂಸ್ಕೃತಿ ಜಗಜ್ಜಾಹೀರಾಗುತ್ತದೆ. ಬಹುತ್ವದ, ಬಹು ಆಯಾಮಗಳುಳ್ಳ ಒಂದು ಸಂಸ್ಕೃತಿ ಗೌರವಯುತವಾಗಿ ಪ್ರಸ್ತುತಪಡುವುದು ಹೆಮ್ಮೆಯಲ್ಲವೆ. ಆದರೆ ಪ್ರಸ್ತುತಿ ಹೇಗಾಗುತ್ತಿದೆ ಗೊತ್ತಿಲ್ಲ. ಅಂತಹ ಯಾವುದೇ ಮಾಹಿತಿ ಇಲ್ಲ. ನದಿಯಲ್ಲಿ ಸಾಹಸದ, ರೋಚಕ ದೋಣಿಪ್ರವಾಸದ ಬಗ್ಗೆ ಕೇಳಿ ಬರುತ್ತದೆ, ಸಮುದ್ರದಲ್ಲಿ ಬೋಟಿಂಗ್ ನೋಡ ಸಿಗುತ್ತದೆ. ರೆಸಾರ್ಟ್ ಗಳೂ ಇವೆ. ಬೇಕಾದಷ್ಟು ಬೀಚ್ ಉತ್ಸವಗಳು ಕಡಲ ಕಿನಾರೆಯ ಉದ್ದಕ್ಕೂ ನಡೆಯುತ್ತವೆ. ಬೈಕ್ ರಾಲಿಗಳು ಸಂಘಟಿಸಲ್ಪಡುತ್ತವೆ. ಅಷ್ಟಕ್ಕೆ ಸೀಮಿತವೇ?


|‍ಸಮುದ್ರ ಕಿನಾರೆ| 

ಸಮುದ್ರ ಎಂದರೆ ಭಯ ಭವ್ಯತೆಯನ್ನು ಹೊಂದಿ ಮನೆಸೂರೆಗೊಳ್ಳುವ ಒಂದು ವಿಸ್ಮಯ. ನದಿಗಳು ಸಾಗರ ಸಂಗಮಿಸುವ ಅಳಿವೆಗಳು ಪ್ರಕೃತಿ ನಿರ್ಮಿಸಿದ  ಸುಂದರ ಪ್ರದೇಶ. ನಿಸರ್ಗ ಸಹಜ ದ್ವೀಪಗಳು (ಕುದುರು) ಪ್ರವಾಸಿ ತಾಣಗಳು. ಹಿನ್ನೀರಿನ ನೋಟವು ಅಗಾಧ ಜಲರಾಶಿ. ಇಂತಹ ಆಕರ್ಷಣೀಯ ಪರಿಸರ ಪ್ರವಾಸಿ ತಾಣಗಳಾಗಿವೆ.




 |ಧಾರ್ಮಿಕ ಕ್ಷೇತ್ರಗಳು|

ಪ್ರಸಿದ್ಧ ದೇವಾಲಯಗಳು, ಪವಿತ್ರ ನದಿ ಸ್ನಾನ- ತೀರ್ಥಸ್ನಾನದ ನದಿ ದಡಗಳು, ನಾಗ ಸನ್ನಿಧಾನಗಳು, ಮಾರಿಗುಡಿಗಳು, ಬ್ರಹ್ಮಸ್ಥಾನಗಳು, ದೈವಸ್ಥಾನಗಳು, ಸಿರಿ ಕ್ಷೇತ್ರಗಳು (ಆಲಡೆಗಳು) ಧಾರ್ಮಿಕ ಮಹತ್ವಗಳೊಂದಿಗೆ ಯಾತ್ರಿಕರನ್ನು ಸೆಳೆಯುತ್ತವೆ. ಧಾರ್ಮಿಕ ಪ್ರವಾಸೋದ್ಯಮವನ್ನು ವಿಸ್ತರಿಸುವ ಸಾಧ್ಯತೆ ಇದೆ.


ಇಂತಹ ದೇವಾಲಯ, ದೈವಸ್ಥಾನಗಳಲ್ಲಿ ಶಿಲ್ಪಕಲೆಯ ಬೆಡಗುಇದೆ. ಮೂರ್ತಿಗಳು, ಕಲ್ಲಿನ- ಲೋಹಗಳ ವಿಶಿಷ್ಟ ಕಲಾಕೃತಿಗಳು- ಕುಸುರಿ ಕೆಲಸದ ಮಣೆ ಮಂಚಗಳಿವೆ, ದೈವಗಳ ಭಂಡಾರದಲ್ಲಿ ಅಪೂರ್ವ- ಪವಿತ್ರ ವಸ್ತುಗಳಿರುತ್ತವೆ. ಇವೆಲ್ಲದರ ಪ್ರದರ್ಶನಾವಕಾಶ ಒದಗಬೇಕು. ವಾರ್ಷಿಕ ಉತ್ಸವ ಸಂದರ್ಭಗಳಲ್ಲಿ ಇದು ಸಾಧ್ಯ.


ಪ್ರಾಚೀನ ಚರ್ಚ್, ಮಸೀದಿಗಳು ಉಭಯ ಜಿಲ್ಲೆಗಳಲ್ಲಿವೆ. ಇಲ್ಲಿ ನಡೆಯುವ ಉರೂಸ್, ಚರ್ಚ್ ನ ವಾರ್ಷಿಕ ಹಬ್ಬಗಳು ಹಾಗೂ ವಿಶಿಷ್ಟ ಆಚರಣೆಗಳು ಪ್ರವಾಸಿಗೆ ಆಕರ್ಷಣೀಯವಾಗಬಹುದು. ಪುರಾತನ ಚರ್ಚ್, ಮಸೀದಿಗಳ ಐತಿಹಾಸಿಕ ಮಹತ್ವ, ರಚನಾ ಶೈಲಿಗಳು ಮಹತ್ವಪೂರ್ಣವಾದುವೇ.


|ಐತಿಹಾಸಿಕ ಸ್ಥಳಗಳು|

ಚರಿತ್ರೆಗೆ ಸಾಕ್ಷಿಯಾಗಿ ಉಳಿದಿರುವ ಅರಮನೆಗಳು, ಕೋಟೆಗಳ ಅವಶೇಷಗಳು, ಅಪೂರ್ವ ದಾರುಶಿಲ್ಪಗಳಿರುವ ಪ್ರಾಚೀನ ಮಠ ಮತ್ತು ಗುತ್ತಿನಮನೆಗಳು, ಚೌಕಿಮನೆಗಳು, ಜಾನಪದ ವೀರರು ಹುಟ್ಟಿದ ಸ್ಥಳ- ನಡೆದಾಡಿದ ಪರಿಸರ- ಸಾಧಕ ವಿದ್ಯೆಕಲಿತ ಐಗಳಮಠ- ಗರಡಿಗಳು, ಪಾರ್ದನ- ಜಾನಪದಗಳಿಗೆ ಸಂಬಂಧಿಸಿದ ಸ್ಥಳಗಳು, ಇತಿಹಾಸ, ಸಂಸ್ಕೃತಿ ಪ್ರೀತಿಯ ಪ್ರವಾಸಿಗಳ ಗಮನ ಸೆಳೆಯದಿದ್ದೀತೆ?


|ಆಚರಣೆ - ಆರಾಧನೆ - ಕ್ರೀಡೆ|

ಪ್ರಖ್ಯಾತ ದೈವಸ್ಥಾನಗಳ ವಿಶಿಷ್ಟ ಕೋಲ- ನೇಮ- ಮೆಚ್ಚಿ- ಗೆಂಡ, ನಾಗಮಂಡಲ- ಡಕ್ಕೆಬಲಿ- ಪಾಣರಾಟಗಳು ನಡೆಯುವಲ್ಲಿಗೆ ಆಸಕ್ತ ಯಾತ್ರಿಗಳನ್ನು ಕರೆದೊಯ್ದು ತೋರಿಸುವ ಅವಕಾಶವಿದೆ.


ದೇವಾಲಯಗಳ ವಾರ್ಷಿಕ ಜಾತ್ರೆ, ಕೋಲ- ನೇಮದ ಬಳಿಕ‌ ವರ್ಷಂಪ್ರತಿ ವಾಡಿಕೆಯಂತೆ ನಡೆಯುವ ಸಾಂಪ್ರದಾಯಿಕ ಕೋಳಿ ಅಂಕ, ಕಂಬಳಗಳನ್ನೂ ಪ್ರವಾಸಿಗಳಿಗೆ ತೋರಿಸುವ ಸಾಧ್ಯತೆ ಇದೆ. ತೆಂಗಿನಕಾಯಿ ಕಟ್ಟುವ, ಬೇಟೆಯಾಡುವ (ಕೆಡ್ಡಸ ಬೋಂಟೆ) ಮುಂತಾದ ಜಾನಪದ ಕ್ರೀಡೆಗಳನ್ನೂ ಏರ್ಪಡಿಸಿ ಪ್ರದರ್ಶಿಸಬಹುದು. 


|ವಾದನ- ನರ್ತನ ವೈಭವ |

ವಾದನ- ನರ್ತನಗಳು ಸಂತೋಷ, ಸಂಭ್ರಮದ ಸಂಕೇತಗಳಾಗಿ, ದೈವ- ದೇವರ ಸೇವೆಯ ಪ್ರಧಾನ ಅಂಗವಾಗಿ ರೂಢಿಯಲ್ಲಿವೆ. ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೈಭವವನ್ನು ಒದಗಿಸಲು ವಾದನ- ನರ್ತನ ಪ್ರಮುಖವಾದುದು.


ಜಾನಪದ ನಾಗಸ್ವರ, ಕೊಳಲು ಸಹಿತ ಬಾಯಿಯಿಂದ ಊದಿ ನುಡಿಸುವ ವಾದ್ಯಗಳು, ಸಮ್ಮೇಳ, ತಾಸ್ ಮಾರ್, ದುಡಿ ತೆಂಬರೆ, ಡಕ್ಕೆ, ದಿಡ್ಂಬು, ನಗರಿ, ದೋಲು ಮತ್ತು ಬ್ಯಾಂಡ್ ಸೆಟ್ ಮುಂತಾದ ಸಾಂಪ್ರದಾಯಿಕ ಜಾನಪದ ಚರ್ಮವಾದ್ಯಗಳು ನಮ್ಮ ಆಚರಣೆಗಳಲ್ಲಿದ್ದು ಆಕರ್ಷಣೀಯವಾಗಿವೆ, ಇವು ಪ್ರವಾಸಿಗರ ಮುಂದೆ ಪ್ರದರ್ಶಿಸುವಂತಹದ್ದು.



ಕರಾವಳಿಯ ಗಂಡುಕಲೆ ಯಕ್ಷಗಾನದ ವರ್ಣ- ವಾದನ- ನರ್ತನ- ಸಾಹಿತ್ಯ ವೈಭವ, ಭೂತಾರಾಧನೆಯ ರಮ್ಯಾದ್ಭುತ ಸೊಗಸು, ನಂಬಿಕೆ ಆಧರಿಸಿದ ಉಪಾಸನಾ ಪದ್ಧತಿ, ನಾಗಮಂಡಲ- ಡಕ್ಕೆ ಬಲಿಗಳಲ್ಲಿರುವ ನಾಟ್ಯ, ವಾದನ ಮತ್ತು ಬಣ್ಣ ಹೀಗೆ ಬಣ್ಣದ ಬಣ್ಣನೆಗೆ ಬದಲಿಲ್ಲದ ಗಮನ ಸೆಳೆಯುವ ಆರಾಧನಾ‌ರಂಗಕಲೆಗಳು, ರಂಗಕಲೆಗಳು ನಮ್ಮಲ್ಲಿವೆ.


ಆಹಾರದ ವಿವಿಧತೆ ನಮ್ಮಲಿವೆ, ಅವುಗಳು ಅದರದ್ದೆ ಆದ ರುಚಿಯಿಂದ ವಿಶೇಷ ಖ್ಯಾತಿಯನ್ನು ಪಡೆದಿವೆ. ಕಡಲಿನಿಂದ ದೊರೆಯುವ ಫ್ರೆಶ್, ಶುದ್ದ ಮೀನು ಕರಾವಳಿಯ ವಿಶೇಷ. ಈ ಆಹಾರ ವೈವಿಧ್ಯವನ್ನು ಪ್ರವಾಸಿಗಳನ್ನು ಕರೆದೊಯ್ಯುವಲ್ಲಿ ಸುಲಭ ಲಭ್ಯವಾಗುವಂತೆ ಒದಗಿಸಬಹುದು. 


|ಕರಾವಳಿಯ ಉತ್ಪನ್ನಗಳು|

ನಮ್ಮ ಕರಾವಳಿ ಸೀಮೆಯ ಉತ್ಪನ್ನಗಳನ್ನು ಈ‌ ಸಂದರ್ಭಗಳಲ್ಲಿ ಪ್ರದರ್ಶಿಸಿ ವ್ಯವಹಾರವನ್ನು ನಡೆಸುವ ಸಾಧ್ಯತೆಗಳಿವೆ. ಕೈಮಗ್ಗದ ಬಟ್ಟೆಗಳು, ಜಾನಪದ ಸೊಗಸುಳ್ಳ ಚಿನ್ನ- ಬೆಳ್ಳಿಯ ಆಭರಣಗಳು, ದೈವ ದೇವರ ಮುಖ, ಮೂರ್ತಿ, ಆಭರಣಗಳು, ಪಂಚಲೋಹ- ಕಂಚಿನ ಮೂರ್ತಿಗಳು, ಪಾತ್ರೆಗಳು ಕಬ್ಬಿಣದ ಚೂರಿ, ಕತ್ತಿ, ಕೊಡಲಿ, ಬೀಗಗಳು ಮತ್ತು ಮರದ ನಿತ್ಯೋಪಯೋಗಿ ವಸ್ತಗಳಾದ ಸಂಬಾರದ ಮರಿಗೆ, ಸೇರು, ಪಾವು, ಕಳಸೆ, ಕಡೆಗೋಲು, ಮಣೆ, ಮೆಟ್ಟುಕತ್ತಿ, ಹೆರೆಮಣೆ ಹಾಗೂ ಕರಾವಳಿಯ ಸೊಗಡಿನ ಪೀಠೋಪಕರಣಗಳನ್ನು ಪ್ರದರ್ಶಿಸಿ ಪ್ರವಾಸಿಗಳು ಖರೀದಿಸುವಂತೆ ಮಾಡ ಬಹುದು.  


ಪ್ರಕೃತಿ ಜನ್ಯ ಮೂಲವಸ್ತುಗಳಿಂದ ಸಿದ್ಧಗೊಳಿಸುವ ಹೆಡಿಗೆ, ಗೆರಸೆ, ಬುಟ್ಟಿ, ಹುರಿಹಗ್ಗ, ನಾರಿನಹಗ್ಗ, ಬೀಳಿನ ಸಣ್ಣ ಹೆಡಿಗೆ ಮುಂತಾದುವುಗಳನ್ನು ಪ್ರವಾಸಿಗರು ನೆರೆಯುವ ಕಡಲಕಿನಾರೆಯಲ್ಲಿ, ಜಾತ್ರೆಗಳಲ್ಲಿ, ಕೋಲ- ನೇಮಗಳಲ್ಲಿ ಸುಲಭವಾಗಿ ಲಭಿಸುವಂತೆ ಮಾಡಬಹುದು. ಗುಡಿ ಕೈಗಾರಿಕೆಯನ್ನು ಪ್ರೋತ್ಸಾಹಿಸುವಂತಾಗುವುದಿಲ್ಲವೇ?.


| ಸಾಂಸ್ಕೃತಿಕ ಭವ್ಯತೆ |

ಹೀಗೆ ವಿವಿಧ ಲಭ್ಯ ಆಕರಗಳನ್ನು ಬಳಸಿಕೊಂಡು ಪ್ರವಾಸಿಗಳನ್ನು ಆಕರ್ಷಿಸಬಹುದು. ನಮ್ಮದೆನ್ನುವ  ಸಾಂಸ್ಕೃತಿಕ ಭವ್ಯತೆ ನಮ್ಮಲ್ಲಿವೆ. ಅವುಗಳನ್ನು ಪ್ರದರ್ಶಿಸಬೇಕು, ವಿವರಿಸಬೇಕು, ಯಾತ್ರಿಗಳನ್ನು ಸೆಳೆಯುವ ಕೆಲಸವಾಗಬೇಕು.


[ಉಭಯ ಜಿಲ್ಲೆಗಳಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ದೇಶದಲ್ಲಿ ಮಾದರಿ. ಇಂತಹವುಗಳ ಕುರಿತು ಅಧ್ಯಯನ ಅವಕಾಶವಿದೆ. ಈ ನೆವನವೂ ಪ್ರವಾಸೋದ್ಯಮವಾಗಬಹುದು. ಬ್ಯಾಂಕಿಂಗ್ ಸಹಿತ ಹಲವು ಉದ್ಯಮಗಳು ಬೆಳೆದು ನಿಂತಿವೆ.]


ಇಂತಹ ಪ್ರದರ್ಶನಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ನೋವಾಗಬಾರದು. ಇತಿಹಾಸವನ್ನು ತಿರುಚಬಾರದು. ಈ ಧಾರ್ಮಿಕ, ಐತಿಹಾಸಿಕ, ಜಾನಪದ ಸಂಪತ್ತನ್ನು ಗೌರವದಿಂದ ನಮ್ಮ ಪೂರ್ವಸೂರಿಗಳ ಸಾಂಸ್ಕೃತಿಕ ಕೊಡುಗೆ ಎಂದು ಪ್ರವಾಸಿಯ ಮುಂದೆ ಪ್ರದರ್ಶಿಸಬೇಕು. 


ವರ್ಣ, ವರ್ಗ ತಾರತಮ್ಯ ಪರಿಗಣಿಸದೆ ಪ್ರಶಸ್ತವಾದುದನ್ನು ಸ್ವೀಕರಿಸುವ, ಪ್ರಚುರಪಡಿಸುವ, ಅಳವಡಿಸಿಕೊಳ್ಳುವ ವಿಶಾಲಮನೋಭಾವ ಅಗತ್ಯವಿದೆ. ಪ್ರವಾಸೋದ್ಯಮ ವಿಶಾಲವಾಗಿ ಹರಡಿಕೊಳ್ಳಬೇಕಿದೆ. 

- ಕೆ. ಎಲ್. ಕುಂಡಂತಾಯ.


0 Comments

Post a Comment

Post a Comment (0)

Previous Post Next Post