ಅನುಭವದ ನುಡಿ: ಮಲೆನಾಡು ಗಿಡ್ಡ- ಗುಣಗಳು ದೊಡ್ಡ

Upayuktha
0


 

ಅನಂತನ ಚತುರ್ದಶಿಯ ಮರುದಿನ ನಮ್ಮ ಮನೆಯ ಮಲೆನಾಡು ಗಿಡ್ಡ ಹಸು 9ನೇ ಕರುವಿಗೆ ಜನ್ಮ ನೀಡಿತು. ಈ ಹಸುವನ್ನು ತರುವಾಗ ಇದಕ್ಕೆ ನಾಲ್ಕು ಕರು ಆಗಿತ್ತು. ಅನಂತನ ಚತುರ್ದಶಿಯ ಹಿಂದುಮುಂದಿನಲಿ ಪ್ರತಿವರ್ಷ ಕರು ಹಾಕುವುದು ಆ ದನದ ಪದ್ಧತಿ. ನನಗೆ ಆಶ್ಚರ್ಯ ಆಗಿದ್ದು ಒಂಭತ್ತು ಕರುವಾದರೂ ಮೊದಲ ಕರುವಿನ ದನದಂತೆಯೇ ಲವಲವಿಕೆಯಲ್ಲಿ ಇದೆ. ದನವನ್ನು ಕರುವನ್ನು ನೋಡನೋಡುತ್ತಿದ್ದಂತೆಯೇ ನನ್ನ ಮನಸ್ಸು 40 ವರ್ಷದ ಹೈನುಗಾರಿಕೆಯ ಅನುಭವವನ್ನು ವಿಶ್ಲೇಷಣೆಗೆ ಒಳಪಡಿಸಿತು. ಏ ಒನ್ ಹಾಲು ಕನಿಷ್ಠ, (ಹಾಲಾಹಲಕ್ಕೆ ಸಮ). ಏ ಟು ಹಾಲು ಶ್ರೇಷ್ಠ. ಅಮೃತ ಸಮಾನ ಎಂಬ ಮಾತುಗಳು ಕಣ್ಣೆದುರು ಧುತ್ತೆಂದು ಬಂದು ನಿಂತಿತು. 40 ವರ್ಷಗಳಲ್ಲಿ 35 ವರ್ಷ ಜರ್ಸಿ, ಹೆಚ್ ಎಫ್ ಗಳನ್ನು ಸಾಕಿದ ಅನುಭವ ಮತ್ತು ಈಗಿನ ಐದು ವರ್ಷಗಳ ಮಲೆನಾಡು ಗಿಡ್ಡ ಅನುಭವದ ಒಂದು ಸಣ್ಣ ವಿಶ್ಲೇಷಣೆ ಮಾತ್ರ.


ಮಿಶ್ರತಳಿ ಹಸುಗಳಲ್ಲಿ ಹೆಚ್ಚಿನವಕ್ಕೆ ಕರು ಹಾಕಿದ ಮೇಲೆ ಕಸ ಬೀಳುವುದು ಸಮಸ್ಯೆಯಾಗುತ್ತದೆ. ಇದಕ್ಕೆ ಔಷಧೋಪಚಾರ ಮಾಡಿದರೆ ಜನ ಹುಷಾರಾಗಬಹುದು ಆದರೂ ಹತ್ತಿಪ್ಪತ್ತು ದಿನ ದುರ್ನಾತದೊಂದಿಗೆ ಪಳಯುಳಿಕೆಗಳು ಹೊರಬರುತ್ತಿರುತ್ತದೆ. ಹುಟ್ಟಿದ ಕರುಗಳಿಗೆ (50%) ನಾಲ್ಕೈದು ದಿನದಲ್ಲಿ ಗಂಟುನೋವು ಬಂದು ಕೀವಾಗಿ ಔಷಧೋಪಚಾರದ ಮೂಲಕ ಗುಣಪಡಿಸಬೇಕಾಗುತ್ತದೆ. ಐದು ವರ್ಷದಲ್ಲಿ 25 ಕರುಗಳು ಹುಟ್ಟಿ, ಒಂದೇ ಒಂದು ದನಗಳಿಗಾಗಲಿ ಕರುಗಳಿಗೆ ಆಗಲಿ ಈ ಸಮಸ್ಯೆ ಆಗಿಲ್ಲ.


ಮಿಶ್ರ ತಳಿಗಳಲ್ಲಿ ನಾಲ್ಕು ಕರು ಆದರೆ ಮುದಿತನದ ಪಟ್ಟವನ್ನು ಕಟ್ಟಿ ಬಿಡುತ್ತಾರೆ. ಆಮೇಲೆ ಒಂದೆರಡು ಕರು ಹಾಕಿದರೆ ಪುಣ್ಯ.

ಮಿಶ್ರತಳಿ ಹಸುಗಳಲ್ಲಿ ನನಗಾದ ಸಮಸ್ಯೆಗಳ ಸಣ್ಣದೊಂದು ಪಟ್ಟಿಯನ್ನು ಮುಂದಿಡುತ್ತೇನೆ.

1) ಗಬ್ಬ ಕಟ್ಟದೇ ಇರುವುದು.

2) ಕಸ ಬೀಳದೇ ಇರುವುದು.

3) ಕರು ಹಾಕುವಲ್ಲಿ ಅನೇಕ ಸಮಸ್ಯೆಗಳು.

4) ಕೆಚ್ಚಲು ನೋವು. (ಗಂಟೆಗಳ ಲೆಕ್ಕದಲ್ಲಿ ಉದಾಸೀನ ಮಾಡಿದರೂ ದನದ ಒಂದೊಂದು ಮೊಲೆಯನ್ನು ಕಳಕೊಳ್ಳಬೇಕಾಗುತ್ತದೆ)

5) ನಾನಾ ಬಗೆಯ ಜ್ವರಗಳು. (ಥೈಲೇರಿಯ,ಶೀತಜ್ವರ, ಉಣುಂಗು ಜ್ವರ, ಕಾಲುಬಾಯಿ ಜ್ವರ, ಚಪ್ಪೆ ರೋಗ, ಹೊಟ್ಟೆ ಉಬ್ಬರ, ಭೇದಿ, ಕಾಲು ಗೊರಸುಗಳ ಸೆರೆಯಲ್ಲಿ ಹುಳುವಾಗುವುದು ಇತ್ಯಾದಿ) ಈ ಕಾಯಿಲೆಗಳಿಂದ ಆಗಿ ಅನೇಕ ದನಗಳನ್ನು ಕಳಕೊಂಡಿರುತ್ತೇನೆ.

6) ಕರುಗಳಿಗೆ ಬರುವ ಬಿಳಿ ಭೇದಿ 


ಅನೇಕ ಕಾಯಿಲೆಗಳಿಗೆ ಔಷದೋಪಚಾರಕ್ಕಾಗಿ ನಾನು ಕೂಡ ಇಂಜೆಕ್ಷನ್ ಕೊಡುವುದನ್ನು ಕಲಿತೆ. ಡ್ರಿಪ್ಪು ಹಾಕುವುದನ್ನು ಕಲಿತೆ. ಕುತ್ತಿಗೆಯ ರಕ್ತನಾಳವನ್ನು ಹುಡುಕಿ ಐ.ವಿ.ಇಂಜೆಕ್ಷನ್ ಕೊಡುವುದನ್ನು ಕಲಿತೆ. ಹಟ್ಟಿಯಲ್ಲಿ ಸಣ್ಣದೊಂದು ದವಾಖಾನೆಯನ್ನು ಇರಿಸಿದ್ದೆ.


ಯಾವಾಗ ಮಲೆನಾಡು ಗಿಡ್ಡ ಗಳು ನನ್ನ ಹಟ್ಟಿಗೆ ಬಂದುವೋ ನನಗೆ ಇಂಜೆಕ್ಷನ್ ಕೊಡುವುದು ಮರೆತೆ ಹೋಗಿದೆ. ಔಷಧಿಗಳ ಹೆಸರುಗಳು ಮರೆತುಹೋಗಿದೆ. ನನ್ನ ದವಾಖಾನೆಯಲ್ಲಿ ಇದ್ದ ಔಷಧಿಗಳು ಅವಧಿ ಮುಗಿದು ಮರದ ಬುಡ ಸೇರಿದೆ.


ನನಗೆ ಕಂಡದ್ದು ಬಾಹ್ಯ ಔಷಧೋಪಚಾರಗಳಿಲ್ಲದೆ ಯಾವುದಕ್ಕೆ ಬದುಕಲು ಸಾಧ್ಯವಿಲ್ಲವೋ, ಯಾವುದು ಹುಟ್ಟಿನಿಂದ ಕಾಯಿಲೆಗಳನ್ನು ಆಹ್ವಾನಿಸಿಕೊಂಡು ಬೆಳೆಯುತ್ತವೆಯೋ, ಅಂತಹ ದನಗಳ ಹಾಲು ಹಾಲಾಹಲ ವಾಗದೆ ಇದ್ದೀತೆ. ಕಾಯಿಲೆಗಳಿರುವ ಅಪ್ಪ-ಅಮ್ಮನ ಮಕ್ಕಳಿಗೆ ಹುಟ್ಟುತ್ತಲೇ ಆನುವಂಶಿಕವಾಗಿ ಕಾಯಿಲೆಗಳು ಹೇಗೆ ಬರುತ್ತವೆಯೋ ಹಾಗೆಯೇ ಕಾಯಿಲೆಗಳಿಂದೊಡಗೂಡಿದ ದನದ ಹಾಲು ಕುಡಿದರೆ ಮನುಷ್ಯನಿಗೆ ಆರೋಗ್ಯ ಸಿದ್ದಿಸೀತೇ?

-ಎ. ಪಿ. ಸದಾಶಿವ 



(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top