|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಾವು ಅತಿ ಸುರಕ್ಷಿತವೆಂದು ತಿಳಿದುಕೊಂಡ ಇಂಡಕ್ಷನ್ ಕುಕ್ ಟಾಪ್ ಎಷ್ಟು ಸುರಕ್ಷಿತ?

ನಾವು ಅತಿ ಸುರಕ್ಷಿತವೆಂದು ತಿಳಿದುಕೊಂಡ ಇಂಡಕ್ಷನ್ ಕುಕ್ ಟಾಪ್ ಎಷ್ಟು ಸುರಕ್ಷಿತ?


ಇಂಡಕ್ಷನ್ ಕುಕ್ ಟಾಪ್‌ನ ಒಳಭಾಗ


ಸ್ನೇಹಿತರೇ, ಕೆಲವು ವರ್ಷ ಮೊದಲು ಇಂಡಕ್ಷನ್ ಕುಕ್ ಟಾಪ್ ಎಂಬ ಒಂದು ಉಪಕರಣ ನಮ್ಮ ಅಡುಗೆ ಮನೆಯನ್ನೂ ಪ್ರವೇಶಿಸಿತ್ತು. ಆ ಸಮಯದಲ್ಲಿ ಅದರ ಬಗ್ಗೆ ಕಂಗ್ಲೀಷ್ ನಲ್ಲಿ ಒಂದು ಲೇಖನ ವಾಟ್ಸ್ ಆಪ್ ಗ್ರೂಪ್ ಒಂದರಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಹಾಕಿದ್ದೆ. ಅದು ಎಷ್ಟು ಜನಗಳಿಗೆ ಅಂದು ಅರ್ಥವಾಗಿತ್ತೋ ತಿಳಿಯದು. ಕನ್ನಡವನ್ನು ಇಂಗ್ಲೀಷ್ ಅಕ್ಷರಗಳಲ್ಲಿ ಬರೆದಾಗ ಅದನ್ನು ಓದಿ ಅರ್ಥ ಮಾಡಿಕೊಳ್ಳೋದು ಒಂದು ಹಿಂಸೆಯೆ. ಆದರೆ ಆಗ ನನಗೆ ಇಲ್ಲಿ ಕನ್ನಡ ಬರೆಯಲು ಗೊತ್ತಿರಲಿಲ್ಲ. ಈಗ ತಕ್ಕ ಮಟ್ಟಿಗೆ ಇಲ್ಲಿ ಕನ್ನಡದಲ್ಲಿ ಬರೆಯಲು ಕಲಿತಿದ್ದೇನೆ. ಆದ್ದರಿಂದ ಆ ಲೇಖನವನ್ನು ಪುನರಪಿ ಹಾಕೋಣ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಯಾರಿಗಾದರೂ ಪ್ರಯೋಜನವಾಗ ಬಹುದೆಂಬ ಭಾವನೆಯೇ ಈ ನಿರ್ಧಾರಕ್ಕೆ ಕಾರಣ. ನಾನು ಈ ಲೇಖನ ಬರೆದು ಏಳೆಂಟು ವರ್ಷಗಳು ಆಗಿರಬಹುದು. ಈಗ ಆಧುನಿಕ ಉಪಕರಣದಲ್ಲಿ ಇನ್ನಷ್ಟು ಉತ್ತಮ ವ್ಯವಸ್ಥೆ ಇರಬಹುದು. ಅದನ್ನು ತಿಳಿದು ಲೇಖನವನ್ನು ವ್ಯತ್ಯಾಸ ಮಾಡಲು ನಾನು ಹೊರಟಿಲ್ಲ. ಮುಂದೆ ಓದಿ...


ಆಧುನಿಕ ಅಡುಗೆ ಮನೆಯಲ್ಲಿ ಇತ್ತೀಚೆಗೆ ಬಿರುಗಾಳಿ ಎಬ್ಬಿಸಿದ ಉಪಕರಣಗಳಲ್ಲಿ ಇಂಡಕ್ಷನ್ ಕುಕ್ಕರ್ ಅಥವಾ ಇಂಡಕ್ಷನ್ ಕುಕ್ ಟಾಪ್ ಅಲ್ಲವಾದರೆ ಇಂಡಕ್ಷನ್ ಹೀಟರ್ ಎಂಬ ಉಪಕರಣಕ್ಕೆ ಪ್ರಥಮ ಪ್ರಾಶಸ್ತ್ಯ. ಕಾರಣ ಅಡುಗೆ ಮಾಡುವ ಉಪಕರಣಗಳಲ್ಲಿ ಇದರಷ್ಟು ಸುರಕ್ಷಿತ ಬೇರಿಲ್ಲ. ಹಾಗೆಂದು ಇದು ಅತಿ ಸುರಕ್ಷಿತವೇ? ಸಂಪೂರ್ಣ ಸುರಕ್ಷಿತ ಎನ್ನಲು ಬಾರದ ಒಂದು ಉಪಕರಣ ಇದು ಕೂಡಾ. ಆದರೂ ಅತಿ ಕಡಿಮೆ ಅಪಾಯ ತಂದೊಡ್ಡ ಬಲ್ಲ ಉಪಕರಣ ಇದೆಂಬುದರಲ್ಲಿ ಸಂದೇಹವಿಲ್ಲ. ಮೊದಲು ಈ ಉಪಕರಣ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಂಡರೆ ಮುಂದಿನ ಲೇಖನವನ್ನು ಅರ್ಥ ಮಾಡಿಕೊಳ್ಳಲು ಸುಲಭವಾಗ ಬಹುದು ಅನ್ನಿಸುತ್ತದೆ. 


ಕುಕ್ಕಿಂಗ್ ಗ್ಯಾಸ್‌ನಲ್ಲಿ ಅಡಿಗೆ ಮಾಡುವುದಕ್ಕಿಂತಲೂ ತ್ವರಿತವಾಗಿ ಇದರಲ್ಲಿ ಅಡಿಗೆ ಮಾಡಲು ಬರುತ್ತದೆ; ಮಾತ್ರವಲ್ಲ ಸಂಪೂರ್ಣ ಸುರಕ್ಷಿತ ಎಂಬ ಭಾವನೆಯೇ ಈ ಇಂಡಕ್ಷನ್ ಕುಕ್ ಟಾಪ್ ನ ಜನಪ್ರಿಯತೆಗೆ ಕಾರಣ ಎಂಬುದರಲ್ಲಿ ಸಂದೇಹವಿಲ್ಲ. ಇದು ಪಾತ್ರೆಯನ್ನು ಸೀದಾ ಬಿಸಿ ಮಾಡಿ ಅಡುಗೆಗೆ ಸಹಕರಿಸುತ್ತದೆ. ಇದರಿಂದಾಗಿ ಹಾಳಾಗಿ ಹೋಗುವ ಉಷ್ಣತೆ ತುಂಬಾ ಕಡಿಮೆ. ಆದುದರಿಂದಲೇ ನಿಮ್ಮ ಅಡುಗೆ ತುಂಬಾ ಬೇಗ ಆಗುತ್ತದೆ. ಆದರೆ ನೀವು ಅಡುಗೆಗೆ ಉಪಯೋಗಿಸುವ ಪಾತ್ರೆಗಳು ಫೆರೋ ಮ್ಯಾಗ್ನೆಟಿಕ್ ಲೋಹದಿಂದ ತಯಾರಿಸಿದ್ದಾಗಿರಬೇಕು. ಎಂದರೆ ಅಯಸ್ಕಾಂತ ಆಕರ್ಷಣೀಯ ಗುಣ ಹೊಂದಿದ ಲೋಹದಿಂದ ತಯಾರಿಸಿದ ಪಾತ್ರೆಗಳನ್ನು ಮಾತ್ರ ಈ ಉಪಕರಣಕ್ಕೆ ಬಿಸಿ ಮಾಡಲು ಸಾಧ್ಯವಷ್ಟೆ. (ನೀವು ಅಯಸ್ಕಾಂತವನ್ನು ಪಾತ್ರೆಗೆ ಹಿಡಿದು ಆ ಪಾತ್ರೆ ನಿಮ್ಮ ಉಪಕರಣಕ್ಕೆ ಯೋಗ್ಯವೇ ಎಂದು ಪರೀಕ್ಷಿಸಬಹುದು) ಯಾಕೆ ಹೀಗೆ ಎಂದು ತಿಳಿಯೋಣ.


ತಾಮ್ರದ ಸರಿಗೆಯಿಂದ ಮಾಡಲ್ಪಟ್ಟ ಒಂದು ಸುರುಳಿ (ಕಾಯಿಲ್) ನಾವು ಪಾತ್ರೆ ಇಡುವ ಪ್ಲೇಟಿನ ಅಡಿಭಾಗದಲ್ಲಿ‌ ಇಡಲ್ಪಟ್ಟಿದೆ. ಈ ಸುರುಳಿಯ ಮೂಲಕ ವಿದ್ಯುತ್ ಹರಿದಾಗ ಅದು ಒಂದು ಅತಿ ಹೆಚ್ಚಿನ ಆವರ್ತನಕ್ರಿಯೆ (ಹೈ ಫ್ರೀಕ್ವೆನ್ಸಿ ಎಲೆಕ್ಟ್ರೋ ಮ್ಯಾಗ್ನೆಟಿಕ್ ಫೀಲ್ಡ್) ಹೊಂದಿದ ವಿದ್ಯುತ್ ಕಾಂತೀಯ ಕ್ಷೇತ್ರವನ್ನು ಸೃಷ್ಟಿಸುತ್ತದೆ. ಈ ವಿದ್ಯುತ್ ಕಾಂತೀಯ ಕ್ಷೇತ್ರ ನೀವು ಇಟ್ಟ ಪಾತ್ರೆಯೊಳಗೆ ಎಲೆಕ್ಟ್ರೋನ್ ಗಳನ್ನು ಉಂಟು ಮಾಡಿ ಅದರ ಮೂಲಕ ಅಲ್ಲಿಯೇ ಚಿಕ್ಕ ಚಿಕ್ಕ ವಿದ್ಯುತ್ ಪ್ರವಾಹ ಉಂಟಾಗುವಂತೆ ಮಾಡುತ್ತದೆ. ಈ ಪ್ರಕ್ರಿಯೆಯನ್ನು "ಎಡ್ಡೀ ಕರೆಂಟ್" ಎನ್ನುತ್ತಾರೆ.


ಹೀಗೆ ಉಂಟಾದ ವಿದ್ಯುತ್ ಪಾತ್ರೆಯನ್ನೂ ಅದರೊಂದಿಗೆ ಅದರೊಳಗಿರುವ ಅಡಿಗೆ ವಸ್ತುವನ್ನೂ ಬಿಸಿ ಮಾಡುತ್ತದೆ. ಒಮ್ಮೆ ನೀವು ಆ ಉಪಕರಣದ ಮೇಲಿನಿಂದ ಪಾತ್ರೆಯನ್ನು ತೆಗೆದರೆ ಅದು ಬಿಸಿ ಮಾಡುವ ಪ್ರಕ್ರಿಯೆಯನ್ನು ನಿಲ್ಲಿಸಿ ಬಿಡುತ್ತದೆ. ಈಗ ನಿಮ್ಮ ಪಾತ್ರೆ ಹೇಗೆ ಬಿಸಿಯಾಗುತ್ತದೆ ಎಂಬುದು ಸೂಕ್ಷ್ಮವಾಗಿ ನಿಮಗೆ ತಿಳಿದಿರಬಹುದೆಂದು ಭಾವಿಸುತ್ತೇನೆ. ಒಂದು ಸೆನ್ಸರ್ ಮೂಲಕ ಈ ಬಿಸಿಯಾಗುವ ಪ್ರಕ್ರಿಯೆಯನ್ನು ನಿಯಂತ್ರಣಕ್ಕೆ ಒಳ ಪಡಿಸಿದಾಗ ನಿಮ್ಮ ಇಂಡಕ್ಷನ್ ಕುಕ್ ಟಾಪ್ ತಯಾರು. ಸಾಧಾರಣ ನಿಮ್ಮ ಇಂಡಕ್ಷನ್ ಟಾಪ್ ಕೆಲಸ ಮಾಡುವ ವಿಧಾನ ತಿಳಿಸಿದ್ದೇನೆ. ಇದರಿಂದ ಹೆಚ್ಚು ಸಾಮಾನ್ಯ ಜ್ಞಾನಕ್ಕೆ ಅವಶ್ಯವಿಲ್ಲ ಎಂದು ಭಾವಿಸುತ್ತೇನೆ.


ಈ ಇಂಡಕ್ಷನ್ ಕುಕ್ ಟಾಪ್ ಎಷ್ಟು ಸುರಕ್ಷಿತ? ಎಂಬುದರ ಬಗ್ಗೂ ತಿಳಿದು ಕೊಳ್ಳೋಣ. ಈ ಇಂಡಕ್ಷನ್ ಕುಕ್ ಟಾಪ್ ಕೂಡ ಮೈಕ್ರೋ ವೇವ್ ನಂತೆ ಸ್ವಲ್ಪ ಮಟ್ಟಿಗಿನ ರೇಡಿಯೋ ವಿಕಿರಣವನ್ನು ಹೊರ ಬಿಡುತ್ತದೆ. ಆದರೆ ಇದು ಅಲ್ಪ ಮಟ್ಟದ್ದಾದುದರಿಂದ ಬೇಗನೇ ವಾತಾವರಣದಲ್ಲಿ ವಿಲೀನವಾಗಿ ಬಿಡುತ್ತದೆ. ಆದರೂ ಈ ಇಂಡಕ್ಷನ್ ಕುಕ್ ಟಾಪ್ ನಲ್ಲಿ ಅಡಿಗೆ ಮಾಡುವವರು ಸಾಧ್ಯ ಇದ್ದಷ್ಟು ಆ ಉಪಕರಣದಿಂದ ದೂರ ಇರುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ.


ಇನ್ನು ಪೇಸ್ ಮೇಕರ್ ಎಂಬ ಉಪಕರಣ ತಮ್ಮ ಶರೀರದೊಳಗೆ ಅಡಗಿಸಿಟ್ಟುಕೊಂಡವರು ಈ ಉಪಕರಣದ ಸಮೀಪಕ್ಕೆ ಹೋಗದೆ ಇರುವುದು ಉತ್ತಮ. ಈ ಬಗ್ಗೆ ಇದನ್ನು ನಿಮ್ಮ ಶರೀರಕ್ಕೆ ಅಳವಡಿಸಿದ ಡಾಕ್ಟರ್ ರನ್ನು ಸಂಪರ್ಕಿಸಿ ವಿವರ ಪಡೆದುಕೊಳ್ಳಿ.


ಇನ್ನೊಂದು ಅಪಾಯದ ಸಾಧ್ಯತೆ ಇರುವುದು ನಿಮ್ಮ ಉಪಕರಣ ಹಳತಾದಾಗ ನೀವು ಅಡುಗೆ ಮಾಡುವ ಸಮಯದಲ್ಲಿ ಉಪಯೋಗಿಸುವ ಸೌಟು. ನೀವು ಅಯಸ್ಕಾಂತ ಆಕರ್ಷಿಸುವ ಲೋಹದಿಂದ ಮಾಡಿದ ಸೌಟು ಉಪಯೋಗಿಸುವುದಿದ್ದರೆ ಹಳತಾದ ನಿಮ್ಮ ಉಪಕರಣ ವಿದ್ಯುತ್ ನಲ್ಲಿ ಏರಿಳಿತ ಬಂದಾಗ ಅದಕ್ಕೆ ಸರಿಯಾಗಿ ಸ್ಪಂದಿಸಲು ಸಾಧ್ಯವಾಗದೆ ನಿಮಗೆ ವಿದ್ಯುತ್ ಆಘಾತ ಉಂಟು ಮಾಡಬಹುದು. ಆದ್ದರಿಂದ ಸುರಕ್ಷತೆಗಾಗಿ ಅಯಸ್ಕಾಂತ ಆಕರ್ಷಿಸುವ ಲೋಹದಿಂದ ಮಾಡಿದ ಸೌಟನ್ನು ಉಪಯೋಗಿಸದೇ ಇರುವುದೇ ಉತ್ತಮ.


ಇನ್ನೊಂದು ತೊಂದರೆ ಬರ ಬಹುದಾದ ಸ್ಥಳ ಈ ಉಪಕರಣದ ಮೇಲ್ಬದಿ. ಈ ಮೇಲ್ಬದಿ ಗ್ಲಾಸ್ ಸಿರಾಮಿಕ್ಸ್ ನಿಂದ ಮಾಡಲ್ಪಟ್ಟಿದೆ. ಇದು ಇತರ ಗ್ಲಾಸಿನಿಂದ ವಿಭಿನ್ನವಾದುದು. ಇದು ಸಿರಾಮಿಕ್ಸ್ ಕೂಡ ಅಲ್ಲ. ಇದನ್ನು ಪ್ರಥಮವಾಗಿ ಮಿಸ್ಸೈಲ್ ಗಳ ತುದಿ ಭಾಗದಲ್ಲಿ‌ ಉಪಯೋಗಿಸುತ್ತಿದ್ದರಂತೆ. ಇದರ ಗುಣಗಳು ಏನೆಂದರೆ ಅತಿ ಹೆಚ್ಚಿನ ವಿದ್ಯುತ್ ಪ್ರತಿರೋಧ (ಹೈ ಎಲೆಕ್ಟ್ರಿಕಲ್‌ ರೆಸಿಸ್ಟಿವಿಟಿ). ಇನ್ನೊಂದು ಅತಿ ಹೆಚ್ವಿನ ಯಾಂತ್ರಿಕ ಶಕ್ತಿ ಅಂದರೆ ಪಕ್ಕನೇ ಒಡೆದು ಹೋಗದ ಗುಣ. ಇದಲ್ಲದೆ ಬಿಸಿಯಾದಾಗ ಅತಿ ಕಡಿಮೆ ಹಿಗ್ಗುವಿಕೆಯನ್ನು ಹೊಂದಿದೆ. ಈ ಎಲ್ಲಾ ಗುಣಗಳನ್ನು ಹೊಂದಿದ ಈ ಗ್ಲಾಸ್ ಸಿರಾಮಿಕ್ಸಿನಿಂದ ಅಪಾಯ ಬರುವ ಸಂಭವ ಅತಿ ಕಡಿಮೆ.


ಆದರೂ ಹೇಗೆ ಅಪಾಯ ಬರಲು ಸಾಧ್ಯ ಎಂದು ನೋಡೋಣ.

ಒಂದು ಅತಿ ಕಳಪೆ ಗ್ಲಾಸ್ (ಇಲ್ಲಿಂದ ಗ್ಲಾಸ್ ಸಿರಾಮಿಕ್ಸ್ ಗೆ ಗ್ಲಾಸ್ ಎಂದೇ ಬರೆಯುತ್ತೇನೆ) ಉಪಯೋಗಿಸಿದಾಗ. ತಕ್ಕುದಾದ ದಪ್ಪದ ಗ್ಲಾಸ್ ಉಪಯೋಗಿಸದಾಗ ಎಂದರೆ ಇಂಡಕ್ಷನ್ ಕುಕ್ ಟಾಪ್ ತಯಾರಿಸುವ ಕಂಪೆನಿಗಳು ಕಳಪೆ ಮಟ್ಟದ ಗ್ಲಾಸ್ ಉಪಯೋಗಿಸಿದರೆ ತೊಂದರೆ ಬರಬಹುದು.


ಸಾಮಾನ್ಯವಾಗಿ ಪ್ರತಿಷ್ಟಿತ ಕಂಪೆನಿಗಳು ಕಳಪೆ ಮಾಲು ಉಪಯೋಗಿಸುವುದಿಲ್ಲ. ಆದರೆ ಕೆಲವು ಸಣ್ಣ ಪುಟ್ಟ ಕಂಪೆನಿಗಳು ಬೆಲೆಯಲ್ಲಿ ಕಡಿತ ಮಾಡಲು ಈ ರೀತಿ ಕಳಪೆ ಗ್ಲಾಸನ್ನು ಹಾಕುತ್ತಾರೆ. ಆಗ ಏನಾಗುತ್ತದೆಂದರೆ ಕುಕ್ಕರಿನ ಮೇಲಿಟ್ಟ ಪಾತ್ರೆ ಬಿಸಿಯಾದಾಗ ಅದರ ಬಿಸಿಯನ್ನು ತಾಳುವ ಶಕ್ತಿ ಇಲ್ಲದೆ ಈ ಗ್ಲಾಸ್ ಒಡೆಯ ಬಹುದು. ಅಥವಾ ಅದರ ಹಿಗ್ಗುವಿಕೆಯ ಪ್ರಮಾಣ ಜಾಸ್ತಿಯಾಗಿ ಈ ಗ್ಲಾಸುಗಳಲ್ಲಿ ಸೆರೆ ಬರಬಹುದು. (ಕ್ರ್ಯಾಕ್ಸ್). ಪರಿಣಾಮ ಯಾವಾಗಲೋ‌ ಒಮ್ಮೆ ಇದು ಒಡೆದು ಹೋಗಿ ಅಪಾಯ ತರಬಹುದು.

ಇನ್ನು ಈ ಕುಕ್ಕರಿನ ಮೇಲ್ಬಾಗದಲ್ಲಿ ಇಡ ಬಹುದಾದ ಅಳತೆಗಿಂತ ದೊಡ್ಡ ಅಳತೆಯ ಪಾತ್ರೆಗಳನ್ನು‌ ಇಟ್ಟಾಗ ಅದರ ಭಾರ ತಾಳಲಾರದೆಯೂ ಈ ಗ್ಲಾಸಿನಲ್ಲಿ ಸೆರೆ ಬರಬಹುದು ಕೊನೆಗೆ ಒಡೆದೇ ಹೋಗಬಹುದು.


ಎಲ್ಲಾ ಸರಿ ಇದ್ಧೂ ಉತ್ತಮ ಕಂಪೆನಿಯ ಕುಕ್ ಟಾಪ್ ಗಳಲ್ಲಿ ಕೂಡಾ ಈ ಗ್ಲಾಸ್ ಹೇಗೆ ಒಡೆಯುವ ಸಾಧ್ಯತೆ ಇದೆ ಎಂದು ನೋಡೋಣ.


ನೀವು ದಿನಾ ಈ ಗ್ಲಾಸಿನ ಮೇಲ್ಭಾಗವನ್ನು ಮೃದುವಾದ ಬಟ್ಟೆಯಿಂದ ಒರಸಿ ಶುಚಿಯಾಗಿರಿಸಬೇಕು. ಇಲ್ಲವಾದಲ್ಲಿ ಯಾವುದೋ ಗಟ್ಟಿ ವಸ್ತು ಹೊಯಿಗೆ ಅಥವಾ ಅಂತಹಾ ವಸ್ತು ಅದರ ಮೇಲೆ ಕುಳಿತು ನೀವು ಅಡಿಗೆ ಪಾತ್ರೆ ಅದರ ಮೇಲೆ ಇಟ್ಟಾಗ ಪಾತ್ರೆಯೊಂದಿಗೆ ಬಿಸಿಯಾದ ಆ ವಸ್ತು ನಿಮ್ಮ ಗ್ಲಾಸಿನ ಮೇಲೆ ಗೀರನ್ನು ಉಂಟು ಮಾಡ ಬಹುದು. ಅದು ಕೊನೆಗೆ ಗ್ಲಾಸಿನಲ್ಲಿ ಓಡೆಯುವಿಕೆಯನ್ನು ಉಂಟು ಮಾಡಬಹುದು. ಇದಲ್ಲದೆ ನೀವು ಪ್ರತೀ ಸಲ ಪಾತ್ರೆಯನ್ನು ಕುಕ್ ಟಾಪ್ ನ ಮೇಲಿಡುವಾಗ ಅದರ ತಳವನ್ನು ಚೆನ್ನಾಗಿ ಉಜ್ಜಿ ಇಡದಿದ್ದಲ್ಲಿ ಇದೇ ಹೊಯಿಗೆಯಂತಹ ವಸ್ತು ಅದೇ ಪರಿಣಾಮ ಬೀರಬಹುದು. ಇನ್ನು ಯಾವಗಲಾದರೂ ನಿಮ್ಮ ಕುಕ್ ಟಾಪ್ ಕೆಳಗೆ ಬಿದ್ದಿದ್ದರೆ ಆ ಸಮಯದಲ್ಲಿ ಗ್ಲಾಸಿನ ಮೇಲೆ ಅತಿ ಚಿಕ್ಕ ಗೀರು ಬಿದ್ಧು ಅದು ಕೊನೆಗೆ ನಿಮ್ಮ ಗ್ಲಾಸ್ ಒಡೆಯುವಂತೆ ಮಾಡಬಹುದು. ಆದ್ದರಿಂದ ಆಗಾಗ ನಿಮ್ಮ ಕುಕ್ಕರ್ ಟಾಪ್ ನ ಮೇಲ್ಭಾಗದಲ್ಲಿ ಗೀರು ಸೆರೆಗಳು ಇವೆಯೇ ಎಂದು ಪರೀಕ್ಷಿಸಿ.


ಸಾಮಾನ್ಯವಾಗಿ ಬರಬಹುದಾದ ಅಪಾಯಗಳು ಇಂಡಕ್ಷನ್ ಕುಕ್ ಟಾಪ್ ನಲ್ಲಿ ಇವುಗಳು ಮಾತ್ರ. ಇದು ಅಪರೂಪದ ಅಪಾಯಗಳಾದರೂ ದಿನಾ ಜಾಗ್ರತೆ ವಹಿಸಬೇಕಾದುದು ನಮ್ಮ ಕರ್ತವ್ಯ.


ಇದಲ್ಲದೆ ಎಲೆಕ್ಟ್ರಿಕಲ್ ಕೋರ್ಡ್ ನ್ನು ಆಗಾಗ ಗಮನಿಸುತ್ತಿರಬೇಕು. ಅದು ಕೂಡಾ ಅಪಾಯ ಒಡ್ಡುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಕುಕ್ಕರ್ ಉಪಯೋಗಿಸುವಾಗ ಅದರ ಒಳಗಿನಿಂದ ಅಲ್ಲಿರುವ ಫ್ಯಾನ್ ತಿರುಗುವ ಸದ್ಧು ಕೇಳಿ ಬರುತ್ತಿರುತ್ತದೆ. ಆ ಸದ್ಧು ಸಾಮಾನ್ಯಕ್ಕಿಂತ ಹೆಚ್ಚು ಬಂದರೆ ಅದನ್ನು ಪರೀಕ್ಷಿಸಬೇಕು. ಅದೇ ರೀತಿ ಕುಕ್ ಟೋಪ್ ನಲ್ಲಿ ಗಾಳಿ ಆಡಲು ಮಾಡಿದ ತೂತುಗಳು (ಏರ್ ಡಕ್ಟ್) ಮುಚ್ಚಿ ಹೋಗಿದೆಯೋ ಎಂದು ಪರೀಕ್ಷಿಸುತ್ತಿರ ಬೇಕು. ಈ ತೂತುಗಳು ಮುಚ್ಚಿ ಹೋಗಿದ್ದಲ್ಲಿ ಕುಕ್ಕರಿನ ಒಳ ಭಾಗದಲ್ಲಿ ಬಿಸಿ ಏರಿ ಕೋಯಿಲ್ ಸುಟ್ಟು ಹೋಗುವ ಸಾಧ್ಯತೆ ಇದೆ. ಅಥವಾ ಅತಿ ಬಿಸಿ ಇನ್ನೇನೋ ಅಪಾಯ ತಂದು ಕುಕ್ ಟೋಪ್ ನ ಮೇಲ್ಭಾಗ ಓಡೆದು ಹೋಗುವ ಸಾಧ್ಯತೆಯೂ ಇದೆ.

ಅಲುಮಿನಿಯಂ ಫೊಯಿಲನ್ನು ಯಾವ ಕಾರಣಕ್ಕೂ ಈ ಕುಕ್ ಟಾಪ್‌ನ ಮೇಲಿಟ್ಟು ಸ್ವಿಚ್ ಹಾಕಬೇಡಿ. ಅಲ್ಯುಮಿನಿಯಂ ಫೊಯಿಲ್ ಬಿಸಿಯಾಗಿ ಕರಗಿ ನಿಮ್ಮ ಗ್ಲಾಸನ್ನು ಒಡೆದು ಹಾಕಬಹುದು.


ಉತ್ತಮ ಕಂಪೆನಿಯ ಕುಕ್ ಟೋಪ್ ಮಾತ್ರ ಪಡಕೊಳ್ಳಿ. ಅದರಲ್ಲಿ ಇರುವ ವ್ಯವಸ್ಥೆಗಳ ಬಗ್ಗೆ ಸರಿಯಾಗಿ ತಿಳಿದೇ ಉಪಯೋಗಿಸಿ. ಇತ್ತೀಚೆಗಿನ ಕುಕ್ಕರ್‌ಗಳಲ್ಲಿ ಹಲವೂ ಅಪಾಯ ನಿರೋಧಕ ವ್ಯವಸ್ಥೆಗಳನ್ನು ಅಳವಡಿಸಿರುತ್ತಾರೆ. ಆದ್ದರಿಂದ ನೀವು ಪಡಕೊಳ್ಳುವ ಉಪಕರಣದಲ್ಲಿ ಯಾವೆಲ್ಲಾ ವ್ಯವಸ್ಥೆಗಳಿವೆ? ಅದರಲ್ಲಿ ನೀವು ಮಾಡಬೇಕಾದ ಕೆಲಸಗಳಿವೆಯೇ? ಅಥವಾ ಎಲ್ಲಾ ಸ್ವಯಂಚಾಲಿತವೇ ಎಂಬ ಸಂಪೂರ್ಣ ವಿವರ ತಿಳಿದು ಕೊಳ್ಳಿ.

ಒಂದೇ ಸಲ ಎರಡು ಗಂಟೆಗೂ ಹೆಚ್ಚು ಕಾಲ ಈ ಉಪಕರಣವನ್ನು ಉಪಯೋಗಿಸಬೇಡಿ.


ನಾನು ಸೆಪ್ಟೆಂಬರ್ ನಾಲ್ಕರಂದು ಇಂಡಕ್ಷನ್ ಕುಕ್ ಟೋಪ್ ಬಗ್ಗೆ ಹಾಕಿದ ಲೇಖನದಲ್ಲಿ ಮುಖ್ಯ ವಿಷಯವೊಂದು ಹೇಳಲು ಬಿಟ್ಟು ಹೋಗಿದೆ ಎಂದು ನನ್ನ ಸೊಸೆ ತೋರಿಸಿ ಕೊಟ್ಟಳು. ಅದು ಪ್ರಾಮುಖ್ಯ ವಿಷಯವಾದ ಕಾರಣ ಅದನ್ನು ವಿವರವಾಗಿ ಕೊಡುತ್ತೇನೆ.

ಇಂಡಕ್ಷನ್ ಕುಕ್ ಟೋಪ್ ನ್ನು ಸ್ವಿಚ್  ಆಫ್‌ ಮಾಡುವ ಸಂದರ್ಭದಲ್ಲಿ ನೆನಪಿಡ ಬೇಕಾದ ವಿಷಯಗಳು.

1) ಕುಕ್ ಟೋಪ್ ನಲ್ಲಿ ಸ್ವಿಚ್ ಓಫ್ ಮಾಡಿ ಅದರ ಒಳಗಿನಿಂದ ಫೇನ್ ತಿರುಗುವ ಸದ್ಧು ನಿಲ್ಲುವುದಕ್ಕೆ ಮೊದಲು ಪವರ್ ಸಪ್ಲೈ ಸ್ವಿಚ್ ಆಫ್ ಮಾಡ ಬೇಡಿ. ಬಿಸಿಯಾದ ಕಾಯಿಲ್‌ ಅನ್ನು ತಣಿಸುವ ಉದ್ದೇಶದಿಂದ ಆ ಫ್ಯಾನ್ ತಿರುಗುತ್ತಿರುತ್ತದೆ. ನೀವು ಸೀದಾ ಸ್ವಿಚ್ ಬೋರ್ಡಿನ ಸ್ವಿಚ್ ಆಫ್‌ ಮಾಡಿದಲ್ಲಿ ಆ ಕಾಯಿಲ್‌ ತಣಿಯದೆ ಕುಕ್ ಟೋಪ್ ನ ಒಳಗಡೆ ಬಿಸಿ ಏರಿ ಮೇಲಿನ ಗ್ಲಾಸ್ ಒಡೆಯ ಬಹುದು ಅಥವಾ ಕಾಯಿಲ್ ಸುಟ್ಟು ಹೋಗಬಹುದು. ಎರಡೂ ಆಗಲೂ ಸಾಧ್ಯವಿದೆ. ನಾನು ಯಾವಾಗಲೂ ಮೇಲಿನ ಸ್ವಿಚ್ಚೇ ಆಫ್‌ ಮಾಡೋದು ಏನೂ ತೊಂದರೆಯಾಗೋದಿಲ್ಲ ಎಂದು ತಿಳಿದುಕೊಳ್ಳಬೇಡಿ. ಒಂದು ದಿನ ಇದು ಅಪಾಯ ತಂದೊಡ್ಡ ಬಹುದು.

2) ನೀವು ಕುಕ್ ಟೋಪಿನ ಮೇಲಿರುವ ಪಾತ್ರೆ ತೆಗೆದ ಮೇಲೆ ಒಂದಷ್ಟು ಸಮಯದ ನಂತರ ತನ್ನಿಂದ ತಾನೇ ಸ್ವಿಚ್ ಓಪ್ ಆಗುವ ವ್ಯವಸ್ಥೆ ಇರುವ ಕುಕ್ ಟೋಪ್ ಗಳಲ್ಲಿ ಪಾತ್ರೆ ತೆಗೆದು ಅದನ್ನು ಅದರ ಪಾಡಿಗೆ ಬಿಡಿ. ನಿಮ್ಮ ಅವಶ್ಯಗಳೆಲ್ಲಾ ಮುಗಿದ ಮೇಲೆಯೇ ಮೇಲಿನ ಸ್ವಿಚ್ ಆಫ್ ಮಾಡಿ.

3) ತುಂಬಾ ಬಿಸಿಯಾಗುವಂತೆ ಇಟ್ಟಿದ್ದರೆ ಪಾತ್ರೆ ತೆಗೆಯುವುದಕ್ಕೆ ಮೊದಲು ಅದನ್ನು ಕಡಿಮೆಗೆ ತಂದು ಪಾತ್ರೆ ತೆಗೆಯುವುದು ಉತ್ತಮ.

ಯಾವ ಸಂದರ್ಭದಲ್ಲಿಯಾದರೂ ಒಳಗಿನ ಫೇನ್ ತಿರುಗುವುದು ನಿಲ್ಲದೆ ಪವರ್ ಸ್ವಿಚ್ (ಸ್ವಿಚ್ ಬೋರ್ಡಿನಲ್ಲಿರುವ ಸ್ವಿಚ್) ಆಫ್‌ ಮಾಡಬೇಡಿ; ಇದು ಅಪಾಯವನ್ನು ತರಬಹುದು

-ಎಡನಾಡು ಕೃಷ್ಣ ಮೋಹನ ಭಟ್ಟ



1 Comments

  1. ಅತ್ಯಂತ ಉಪಯುಕ್ತ ಮಾಹಿತಿ ಹಾಗೂ ಮಾರ್ಗದರ್ಶನ ಈ ಬರಹದ ಮೂಲಕ ಹರಿದು ಬಂದಿದೆ.ಮಾನ್ಯ ಎಡ್ನಾಡು ಭಟ್ (ಕೃಷ್ಣಮೋಹನ ಭಟ್ ಎಡ್ನಾಡು ) ವಿದ್ಯುತ್ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದವರು.ಇತರ ವಿದ್ಯುತ್ಉ ಪಕರಣಗಳ ಬಳಕೆಯ ಬಗ್ಗೆ ಕೂಡಾ ಇವರಿಂದ ಮಾಹಿತಿ ಮತ್ತು ಮಾರ್ಗದರ್ಶನ ಹರಿದು ಬರಲಿ ಎಂಬ ಆಶಯ ನನ್ನದು.ಬರಹಗಾರ ಎಡ್ನಾಡು ಅಣ್ಣ ಮತ್ತು ಅವರ ಬರಹ ಬಿತ್ತರಿಸಿದ ಉಪಯುಕ್ತ ನ್ಯೂಸ್ ಇವರಿಗೆ ನನ್ನ ಹೃದಯಾಂತರಾಳದ ನಮನಗಳು.

    ReplyDelete

Post a Comment

Post a Comment

Previous Post Next Post