ಪೇಜಾವರ ಶ್ರೀ 34ನೇ ಚಾತುರ್ಮಾಸ್ಯ ವಿಶೇಷ: ವಿಶ್ವಹಿಂದು ಪರಿಷತ್ ಸಂಯೋಜನೆ
ಬೆಂಗಳೂರು: ಶುಕ್ರವಾರದಂದು ಬೆಂಗಳೂರಿನ ರಾಮಕೃಷ್ಣ ಮಠ ಬಡಾವಣೆಯ ಗವಿಪುರ ಗುಟ್ಟಳ್ಳಿ ಕೆಜಿ ನಗರ ಇಲ್ಲಿನ ದಲಿತ ಬಂಧುಗಳ ಬಡಾವಣೆಯಲ್ಲಿ ಹಬ್ಬದ ವಾತಾವರಣ. ತಳಿರು ತೋರಣಗಳಿಂದ ಅಲಂಕರಿಸಲ್ಪಟ್ಟ ಬೀದಿಗಳು, ಕೃಷ್ಣ ವೇಷ ತೊಟ್ಟ ಹತ್ತಾರು ಪುಟಾಣಿಗಳು, ವಾದ್ಯಮೇಳ ಹಾದಿಯುದ್ದಕ್ಕೂ ಹೂವಿನ ಎರಚಿದ ಹೂವಿನ ಎಸಳುಗಳು ಇವೆಲ್ಲವೂ ತಮ್ಮ ಬಡಾವಣೆಯಲ್ಲಿ ಹೆಜ್ಜೆ ಹಾಕುತ್ತಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹಾಗೂ ಬೆಂಗಳೂರು ರಾಮಕೃಷ್ಣಾಶ್ರಮದ ಪ್ರಮುಖರಾದ ಧರ್ಮರತಾನಂದ ಜೀ ಮತ್ತು ವೀರೇಶಾನಂದ ಜೀ ಸ್ವಾಮೀಜಿಯವರುಗಳನ್ನು ಆಮಂತ್ರಿಸಲು ಬಡಾವಣೆಯ ನಿವಾಸಿಗಳು ಶ್ರದ್ಧೆಯಿಂದ ಮಾಡಿಕೊಂಡ ವ್ಯವಸ್ಥೆ.
ಸಾಯಂಕಾಲ ಆಗಮಿಸಿದ ಸ್ವಾಮೀಜಿಯವರನ್ನು ಭಕ್ತಿಯಿಂದ ಸ್ವಾಗತಿಸಿದ ಬಡಾವಣೆಯ ನಿವಾಸಿಗಳು ಅಲ್ಲಿನ ಚಂಡಿಕಾದುರ್ಗೆಯ ಮಂದಿರಕ್ಕೆ ಬರಮಾಡಿಕೊಂಡರು. ಮಾತೆಯರು ಸ್ವಾಮೀಜಿಯವರುಗಳ ಪಾದ ತೊಳೆದು ಹೂಮಳೆಗರೆದು ಸ್ವಾಗತಿಸಿದರು. ಅರ್ಚಕರು ದೇವಿಗೆ ಮಂಗಲಾರತಿ ಬೆಳಗಿದರು. ನಂತರ ಧರ್ಮಸಭೆ ನಡೆಯಿತು. ಸಾಮೂಹಿಕ ರಾಮನಾಮ ಕೃಷಾಷ್ಟಕ ಭಜನೆ ನಡೆಯಿತು. ವಿಶ್ವಹಿಂದು ಪರಿಷತ್ ಕಾರ್ಯಕ್ರಮ ಸಂಯೋಜಿಸಿತ್ತು. ವಿಹಿಂಪ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್, ವಿಹಿಂಪ ಅಖಿಲ ಭಾರತ ಸಹಪ್ರಧಾನ ಕಾರ್ಯದರ್ಶಿ, ವಿಹಿಂಪ ರಾಜ್ಯಾಧ್ಯಕ್ಷೆ, ಹಿರಿಯ ವೈದ್ಯೆ ಡಾ ವಿಜಯಲಕ್ಷ್ಮೀ ದೇಶಮಾನೆ, ಪ್ರಮುಖರಾದ ವಿಹಿಂಪ ಅ ಭಾ ಸಹ ಪ್ರಧಾನ ಕಾರ್ಯದರ್ಶಿ ಸ್ಥಾಣು ಮಾಲಯನ್, ಸುಬ್ರಹ್ಮಣ್ಯಮ್, ಮೊದಲಾದವರು ಉಪಸ್ಥಿತರಿದ್ದರು.
ತಮಿಳು ಬಂಧುಗಳೇ ಹೆಚ್ಚಾಗಿರುವ ಬಡಾವಣೆಯಾಗಿರುವುದರಿಂದ ಪೇಜಾವರ ಶ್ರೀಗಳು ತಮಿಳು ಭಾಷೆಯಲ್ಲೂ ಆಶೀರ್ವಚನ ನೀಡಿ ನಿವಾಸಿಗಳ ಮೆಚ್ಚುಗೆ ಪಡೆದರು.
ಪೇಜಾವರ ಮಠದ ವತಿಯಿಂದ ಬಡಾವಣೆಯ ದಲಿತ ಬಂಧುಗಳಿಗೆ ಕೃಷ್ಣಾಷ್ಟಮೀ ಪ್ರಸಾದ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಪೇಜಾವರ ಶ್ರೀಗಳು ಮತ್ತು ಮಾದಾರ ಚನ್ನಯ್ಯ ಸ್ವಾಮೀಜಿಯವರು ರಾಮಕೃಷ್ಣಾಶ್ರಮಕ್ಕೆ ಭೇಟಿ ನೀಡಿದರು. ಮಠದ ಅಧ್ಯಕ್ಷರಾದ ನಿತ್ಯಸ್ಥಾನಾನಂದಜೀ ಸ್ವಾಮೀಜಿ ಬರಮಾಡಿಕೊಂಡು ಗೌರವ ಅರ್ಪಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ