ಶ್ರೀ ವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ ಕೃತಿ ಬಿಡುಗಡೆ
ಬೆಂಗಳೂರು: ಮನಸ್ಸು ಒಂದೇ ಕಡೆ ಸ್ಥಿರವಾದರೆ ಅದೇ ಧ್ಯಾನ, ಅದು ಮೋಕ್ಷಕ್ಕೆ ಮಾರ್ಗ; ಮನಸ್ಸು ಚರವಾದರೆ ಅದು ಸಂಸಾರವಾಗುತ್ತದೆ. ಮನಸ್ಸು ಚಂಚಲ; ಅದು ಅದರ ಸ್ವಭಾವ. ಆ ಸ್ವಭಾವಕ್ಕೆ ಹೊಂದಿಕೊಂಡೇ ತತ್ವಕ್ಕೆ ಬದ್ಧವಾಗಿರುವಂತೆ ಮಾಡುವುದು ವಿಷ್ಣುಸಹಸ್ರನಾಮದ ಮಹತಿಯಾಗಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ಹೇಳಿದರು.
ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ 'ಶ್ರೀ ವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ' ಪುಸ್ತಕ ಲೋಕಾರ್ಪಣೆಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದ ಶ್ರೀಗಳು, ವಿಷ್ಣುಸಹಸ್ರನಾಮಕ್ಕೆ ಶಂಕರಾಚಾರ್ಯರೇ ಮೊದಲಾದವರು ವ್ಯಾಖ್ಯೆ ಬರೆದಿದ್ದಾರೆ. ಆದರೆ ಇಂದಿನ ಕಾಲಮಾನಕ್ಕೆ ಅರ್ಥವಾಗುವಂತೆ ಮತ್ತೆ ವಿವರಿಸುವ ಅವಶ್ಯಕತೆ ಇದೆ. ಅದೇ ಪ್ರಯತ್ನ ಈ ಕೃತಿಯಲ್ಲಿ ಕಂಡುಬರುತ್ತದೆ. ವಿಷ್ಣುವಿನ ಆಳ ಅಗಲಗಳನ್ನು ಅಳೆದು ಮುಗಿಸಲಾಗದು. ಹಾಗೆಯೇ ಎಷ್ಟು ವ್ಯಾಖ್ಯಾನ ಮಾಡಿದರೂ, ಮತ್ತೆ ಮತ್ತೆ ಹೊಸ ಅರ್ಥಾನುಭವಗಳನ್ನು ನೀಡುವ ವಿಶೇಷತೆ ವಿಷ್ಣುಸಹಸ್ರನಾಮಕ್ಕೆ ಇದೆ ಎಂದು ಅಭಿಪ್ರಾಯಪಟ್ಟರು.
ಹಸುವನ್ನು ಬಿಟ್ಟರೆ ಅದು ಕೈಯಿಗೆ ಸಿಗುವುದಿಲ್ಲ. ಹಾಗಾಗಿ ಉದ್ದದ ಹಗ್ಗವನ್ನು ಕಟ್ಟಿ ಮೇಯಲು ಅವಕಾಶ ಮಾಡಿಕೊಡುವ ಪದ್ಧತಿ ಇದೆ. ವಿಷ್ಣುಸಹಸ್ರನಾಮವೂ ಕೂಡ ಹೀಗೆಯೇ; ಮನಸ್ಸಿನ ಸ್ವಭಾವಕ್ಕೆ ಅನುಗುಣವಾಗಿ ಒಂದುಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ವಿಷ್ಣುಸಹಸ್ರನಾಮದಲ್ಲಿ ಅವಕಾಶವಿದೆ. ಆದರೆ ಆ ಎಲ್ಲ ವಿಚಾರವೂ ವಿಷ್ಣುತತ್ವಕ್ಕೆ ಕಟ್ಟಲ್ಪಟ್ಟಿರುತ್ತದೆ ಎಂದು ವಿವರಿಸಿದರು.
ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ತಜ್ಞ, ಚಿಂತಕ ಡಾ.ಗುರುರಾಜ ಕರ್ಜಗಿಯವರು ಮಾತನಾಡಿ, ಪ್ರಶ್ನೆಗಳಿಂದಲೇ ಉತ್ತಮೋತ್ತಮ ವಿಚಾರಗಳು ಪ್ರಪಂಚಕ್ಕೆ ಪ್ರಾಪ್ತವಾಗುತ್ತದೆ. ರಾಮಾಯಣ, ವಿಷ್ಣುಸಹಸ್ರನಾಮ, ಭಗವದ್ಗೀತೆ ಮುಂತಾದ ಎಲ್ಲವೂ ಪ್ರಶ್ನೆಯ ಕಾರಣದಿಂದಾಗಿಯೇ ಜಗತ್ತಿಗೆ ಪ್ರಾಪ್ತವಾಗಿದೆ ಎಂದರು.
ನಮ್ಮ ಹೆಸರುಗಳು ಚಂದಕ್ಕಾಗಿ ಇಟ್ಟಿರುವುದಾಗಿದೆ. ಆದರೆ ದೇವರ ಹೆಸರು ಗುಣವಾಚಕವಾಗಿವೆ. ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ ಗುಣವಾಚಕವಾದ ಸಾವಿರ ಹೆಸರುಗಳಿದ್ದು, ಒಂದೊಂದು ಹೆಸರಿಗೂ ನೂರು ವ್ಯಾಖ್ಯಾನ ಮಾಡಬಹುದಾದಷ್ಟು ಶಕ್ತಿಯನ್ನು ಅದು ಹೊಂದಿದೆ. ಹಾಗೆಯೇ ಅರ್ಥದಷ್ಟೇ ಭಕ್ತಿ-ಭಾವವೂ ಮುಖ್ಯವಾಗಿದ್ದು, ಭಾವದಿಂದ ಸ್ತೋತ್ರಗಳನ್ನು ಹೇಳುವ ಮೂಲಕ ಜೀವನ ಸಾರ್ಥಕ್ಯವಾಗಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಕೃತಿಕರ್ತೃ ವೇದಮೂರ್ತಿ ವಿಷ್ಣು ಡೋಂಗ್ರೆ ಮಾತನಾಡಿ, ಇಂದಿನ ಕಾಲಕ್ಕೆ ಅರ್ಥವಾಗುವಂತೆ ವಿಷ್ಣುಸಹಸ್ರನಾಮಕ್ಕೆ ಅರ್ಥವನ್ನು ಬರೆದಿದ್ದು, ಈ ಪುಸ್ತಕದಿಂದ ಬರುವ ಸಂಪೂರ್ಣ ಹಣವನ್ನು ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಸಮರ್ಪಿಸುತ್ತಿದ್ದೇನೆ ಎಂದರು.
ಇದಕ್ಕೂ ಮೊದಲು, ಶ್ರೀಭಾರತೀ ಪ್ರಕಾಶನದಿಂದ ಪ್ರಕಾಶಿತವಾದ 'ಶ್ರೀ ವಿಷ್ಣು ಸಹಸ್ರನಾಮ ವಿಷ್ಣುವ್ಯಾಖ್ಯಾ' ಪುಸ್ತಕವನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆ ಮಾಡಿದರು. ಪುಸ್ತಕಕ್ಕೆ ಸಹಕಾರ ನೀಡಿದ ಮೋಹನ ಭಾಸ್ಕರ ಹೆಗಡೆ, ವಿದ್ಯಾ ಹಾಗೂ ಗೋಪಾಲಕೃಷ್ಣ ಹೆಗಡೆ, ಕೆಕ್ಕಾರು ರಾಮಚಂದ್ರ ಭಟ್, ಜಗದೀಶ್ ಪೈ, ಗಜಾನನ ಹೆಗಡೆ, ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.