ರಾಷ್ಟ್ರೀಯತೆ ಎಂಬ ಭವ್ಯವಾದ ಪರಿಕಲ್ಪನೆ

Upayuktha
0


"ರಾಷ್ಟ್ರ ಭಕ್ತಿಯು ಕೇವಲ ಭಾವನಾತ್ಮಕವಾಗಿರದೆ ಅಥವಾ ಮಾತೃಭೂಮಿಯ ಉತ್ಕಟ ಪ್ರೀತಿಯ ಭಾವನೆಯಾಗಿರದೆ, ನಮ್ಮ ದೇಶದ ಜನ ಸಮೂಹಕ್ಕೆ ಸೇವೆ ಮಾಡಲು ಉತ್ಕಟ ಮನೋಭಾವವಾಗಿರಬೇಕು. ಭಾರತೀಯರು ನಮ್ಮ ಸಹೋದರರು, ನಮ್ಮ ಪ್ರಾಣ. ಭಾರತೀಯ ಸಮಾಜ ನಮ್ಮ ಬಾಲ್ಯದ ತೊಟ್ಟಿಲು, ತಾರುಣ್ಯದ ನಂದನವನ,ವೃದ್ದಾಪ್ಯದ ವಾರಾಣಸಿ", ಎಂದು ಜನರ ಮನಸ್ಸಿನಲ್ಲಿ ರಾಷ್ಟ್ರೀಯತೆಯ ಭವ್ಯವಾದ ಪರಿಕಲ್ಪನೆಯನ್ನು ಜಾಗೃತಗೊಳಿಸಿದವರು ಸ್ವಾಮಿ ವಿವೇಕಾನಂದರು.


ಪುಣ್ಯ ಋಷಿಗಳ, ಮಹಾಮುನಿಗಳ ಪಾದದೂಳಿ ಸೋಂಕಿದ ಪವಿತ್ರ ಭೂಮಿ ನಮ್ಮ ಭಾರತ. ಇಲ್ಲಿ ತತ್ವಜ್ಞಾನ ಇತರೆ ದೇಶಗಳಿಗಿಂತ ಮೊದಲೇ ಉದಿಸಿದೆ. ನಮ್ಮ ಪುಣ್ಯಭೂಮಿ ಧರ್ಮ ಮತ್ತು ತತ್ವಗಳ ತವರುಮನೆ. ಹಲವಾರು ಶತಮಾನಗಳ ಸಂಘರ್ಷ, ನೂರಾರು ಆಕ್ರಮಣಗಳು, ಆಚಾರ, ವ್ಯವಹಾರದಲ್ಲಾದ ಸಾವಿರಾರು ಬದಲಾವಣೆಗಳನ್ನು ಎದುರಿಸಿ ನಿಂತ ಭರತಖಂಡ ಇದು. ಪ್ರತಿಯೊಂದು ರಾಷ್ಟ್ರವೂ ತನ್ನದೇ ಆದ ಜೀವನ ಮೌಲ್ಯಗಳ ತಳಹದಿಯನ್ನು ಹೊಂದಿರುತ್ತದೆ. ರಾಷ್ಟ್ರನಿರ್ಮಾಣದ ಕಟ್ಟಡ ಶಾಶ್ವತವಾಗಿರಲು ಆ ಬುನಾದಿಯ ಮೇಲೆ ಆಗಬೇಕಾಗುತ್ತದೆ. ಗ್ರೀಸ್, ರೋಮ್ ಮುಂತಾದ ದೇಶಗಳು ಹುಟ್ಟುವುದಕ್ಕೆ ಮುಂಚೆಯೇ, ಆಧುನಿಕ ಯೂರೋಪಿನ ಪೂರ್ವಜರು ಕಾಡುಮೇಡುಗಳಲ್ಲಿ ವಾಸಿಸುತ್ತಿದ್ದ ಕಾಲಕ್ಕೆ ಮೊದಲೇ ಭಾರತವು ಕಾರ್ಯೋನ್ಮುಖವಾಗಿತ್ತು. ಪ್ರತಿಯೊಂದು ದೇಶಕ್ಕೂ ತನ್ನದೇ ರೀತಿಯಿದೆ, ತನ್ನದೇ ಆದ ವ್ಯಕ್ತಿತ್ವವಿದೆ. ಇಂತಹ ಪುಣ್ಯಭೂಮಿಯಲ್ಲಿ ರಾಷ್ಟ್ರ ಜೀವನದ ತಳಪಾಯ ಹಾಗೂ ಬೆನ್ನೆಲುಬು ಮತ್ತು ಜೀವನದ ಕೇಂದ್ರ, ಧರ್ಮವಲ್ಲದೆ ಬೇರೆ ಅಲ್ಲ.


ರಾಷ್ಟ್ರಧ್ವಜಗಳು, ರಾಷ್ಟ್ರಗೀತೆಗಳು ಮತ್ತು ರಾಷ್ಟ್ರ ಪರಿಚಯದ ಇತರ ಚಿನ್ಹೆಗಳನ್ನು ಧಾರ್ಮಿಕವಾದ ಪವಿತ್ರ ಚಿನ್ಹೆಗಳೆಂದೇ ಭಾವಿಸಲಾಗುತ್ತದೆ. ರಾಷ್ಟ್ರೀಯತೆಯು ಅಭಿವೃದ್ಧಿಗೊಳ್ಳುವುದಕ್ಕಿಂತ ಮೊದಲು ಜನರು ಅವರ ರಾಷ್ಟ್ರಕ್ಕಿಂತ ಹೆಚ್ಚಾಗಿ ಒಂದು ನಗರದತ್ತ ಅಥವಾ ಒಬ್ಬ ನಿರ್ದಿಷ್ಟ ನಾಯಕನಿಗೆ ನಿಷ್ಠಾವಂತರಾಗಿರುತ್ತಿದ್ದರು. ಫ್ರೆಂಚ್ ಕ್ರಾಂತಿ, ಅಮೆರಿಕಾದ ಕ್ರಾಂತಿ ಹಾಗೂ ವಿಶ್ವಯುದ್ಧಗಳ ಪ್ರಭಾವವಾಗಿ ರಾಷ್ಟ್ರೀಯತೆ ಇತಿಹಾಸದ ಒಂದು ಪ್ರಮುಖ ರಾಜಕೀಯ ಹಾಗೂ ಸಾಮಾಜಿಕ ಶಕ್ತಿಯಾಗಿ ಬೆಳೆದಿದೆ.


ಫ್ರೆಂಚ್ ಇತಿಹಾಸಕಾರ ಅರ್ನಸ್ಟ್ ರೆನನ್ 1882 ರ "ವಾಟ್ ಈಸ್ ಎ ನೇಷನ್?" ಎಂಬ ಅವರ ಉಪನ್ಯಾಸಗಳ ಪುಸ್ತಕದಲ್ಲಿ "ಒಟ್ಟಿಗೆ ಕೂಡಿ ಬಾಳನ್ನು ಮುಂದುವರಿಸುವ ಜನರ ಅಭಿಪ್ರಾಯದ ಪ್ರತಿದಿನದ ಜನಮತ" ಎಂದು ರಾಷ್ಟ್ರವನ್ನು ವ್ಯಾಖ್ಯಾನಿಸಿದ್ದಾರೆ. ನಮ್ಮ ರಾಷ್ಟ್ರದ ಪ್ರಾಣಪಕ್ಷಿ ಧರ್ಮದಲ್ಲಿದೆ.ಏಕೆಂದರೆ ಅದನ್ನು ಯಾರೂ ನಾಶಮಾಡದೆ ಇದ್ದುದರಿಂದ, ಈ ದೇಶಕ್ಕೆ ಎಷ್ಟೇ ವಿಪತ್ತುಗಳು ಬರಸಿಡಿಲಿನಂತೆ ಬಂದೆರಗಿದ್ದರೂ ಅದು ಇನ್ನೂ ಉಳಿದಿರುವುದು.


ಒಬ್ಬ ಭಾರತೀಯ ವಿದ್ವಾಂಸರು ರಾಷ್ಟ್ರದ ಕುರಿತಂತೆ ಕೇಳುತ್ತಾರೆ: "ರಾಷ್ಟ್ರ ಪ್ರಾಣವನ್ನು ಧರ್ಮದಲ್ಲಿ ಇಡುವ ಅವಶ್ಯಕತೆಯೇನು? ಉಳಿದ ದೇಶಗಳಂತೆ ಅದನ್ನು ಸಾಮಾಜಿಕ ಮತ್ತು ರಾಜಕೀಯದ ಸ್ವಾತಂತ್ರ್ಯ ದಲ್ಲಿ ಏತಕ್ಕೆ ಇಡಬಾರದು?" ಎಂದು. ಈ ಪ್ರಶ್ನೆಗೆ ಸ್ವಾಮಿ ವಿವೇಕಾನಂದರ ಉತ್ತರವೇನು ಗೊತ್ತೇ? 


"ಹೀಗೆ ಮಾತನಾಡುವುದು ಸುಲಭ. ಆದರೆ ವಾಸ್ತವ ಬೇರೆಯದ್ದೇ ಆಗಿದೆ. ಈ ನದಿಯು ತನ್ನ ಉಗಮ ಸ್ಥಾನವಾದ ಬೆಟ್ಟದಿಂದ ಸಾವಿರಾರು ಮೈಲಿ ಹರಿದು ಬಂದಿದೆ. ಅದನ್ನು ಮತ್ತೊಮ್ಮೆ ಬೆಟ್ಟದ ಮೇಲೆ ಕಳಿಸಲಿಕ್ಕೆ ಆಗುವುದೆ? ಹಾಗೆ ಪ್ರಯತ್ನಿಸಿದರೆ ನೀರು ಇನ್ನೆಲ್ಲೋ ಹರಿದು, ವ್ಯರ್ಥವಾಗಿ, ಕೊನೆಗೆ ನದಿ ಬತ್ತಿಹೋಗುವುದು. ನದಿ ಹೇಗಾದರೂ ಸಮುದ್ರವನ್ನು ಸೇರುವುದು. ಶುಭ್ರ ಸುಂದರ ಸ್ಥಳದಲ್ಲಿ ಅಥವಾ ಮಲಿನವಾದ ಸ್ಥಳದಲ್ಲಿ ಹರಿದೋ ಕೊನೆಗೆ ಕಡಲನ್ನು ಸೇರುವುದು. ಹತ್ತು ಸಾವಿರ ವರ್ಷಗಳ ಕಾಲದ ನಮ್ಮ ರಾಷ್ಟ್ರೀಯ ಜೀವನವು ತಪ್ಪುಹಾದಿಯಲ್ಲಿ ನಡೆದಿದ್ದರೂ ಈಗ ಬೇರಾವ ಉಪಾಯವೂ ಇಲ್ಲ. ನಾವು ಈ ಸಮಯದಲ್ಲಿ ಹೊಸ ಶೀಲವನ್ನು ಸೃಷ್ಟಿಸಲು ಪ್ರಯತ್ನಿಸಿದರೆ ಅದು ಮೃತ್ಯುವಿನಲ್ಲಿ ಪರ್ಯಾವಸಾನವಾಗುವುದು. ಈ ದೇಶದ ಪ್ರಾಣ ಧರ್ಮ, ಭಾಷೆ ಧರ್ಮ, ಭಾವ ಧರ್ಮ: ನಿಮ್ಮ ರಾಜನೀತಿ, ಸಾಮಾಜನೀತಿ, ನಗರ ನಿರ್ಮಲೀಕರಣ, ಪ್ಲೇಗ್ ನಿವಾರಣೆ,ಅನ್ನದಾನ ಹಿಂದಿನಿಂದಲೂ ಹೇಗೆ ಜರುಗುತ್ತಿತ್ತೋ ಹಾಗೆಯೇ ಜರುಗುವುದು. ಅಂದರೆ ಧರ್ಮದ ಮೂಲಕವೇ, ಅನ್ಯಥಾ ಅಲ್ಲ." ಎಂದು ನದಿಯನ್ನು ಉದಾಹರಣೆಯಾಗಿ ತೆಗೆದುಕೊಂಡು ರಾಷ್ಟ್ರೀಯತೆಯ ಕುರಿತಂತೆ ತಮ್ಮ ವಿಚಾರಧಾರೆಗಳನ್ನು ತಿಳಿಸಿದ್ದಾರೆ ಸ್ವಾಮಿ ವಿವೇಕಾನಂದರು.


ಎಷ್ಟೊಂದು ಅದ್ಭುತ ಅಲ್ವಾ ಈ ರಾಷ್ಟ್ರೀಯತೆಯ ಪರಿಕಲ್ಪನೆ? ನಮ್ಮಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸುವಲ್ಲಿ ಇದರ ಪಾತ್ರ ಅತ್ಯಂತ ಮಹತ್ವವಾದದ್ದು. ಜನರಲ್ಲಿ ಒಗ್ಗಟ್ಟು ಮೂಡುವಂತೆ ಮಾಡಿ ದೇಶಸೇವೆಯೆಡೆಗೆ ಪ್ರೇರೇಪಣೆ ನೀಡುವ ಪವಿತ್ರ ಕೆಲಸವನ್ನು ಮಾಡುತ್ತದೆ. ಬನ್ನಿ ಇಂತಹ ಅದ್ಭುತ ಭಾವನೆಯನ್ನು ನಮ್ಮಲ್ಲಿ ಅಳವಡಿಸಿಕೊಂಡು ದೇಶವನ್ನೂ ಪ್ರಗತಿಯತ್ತ ಕೊಂಡೊಯ್ಯೋಣ...


-ವಾಸವಿ ಸಾಗರ

(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top