ಇಂದು ಆಕೆಯ ಬರ್ತಡೇ. ಆಕೆಯ ಟ್ರಾಜಿಕ್ ಬದುಕಿನಿಂದ ಬೇಕಾದಷ್ಟು ಸಂದೇಶಗಳನ್ನು ನಾವು ಪಡೆಯಲು ಸಾಧ್ಯ ಇದೆ. ಹಿಂದಿ ಸಿನೆಮಾ ರಂಗವನ್ನು 33 ವರ್ಷಗಳಷ್ಟು ಕಾಲ ಅನಭಿಷಿಕ್ತ ರಾಣಿಯಾಗಿ ಆಳಿದ, 92 ಸೂಪರ್ ಹಿಟ್ ಹಿಂದೀ ಸಿನೆಮಾಗಳನ್ನು ಸಾಲು ಸಾಲಾಗಿ ಬಾಲಿವುಡ್ಡಿಗೆ ನೀಡಿದ, ದಾಖಲೆಯ ಹನ್ನೆರಡು ಬಾರಿ ಫಿಲ್ಮಫೇರ್ ಪ್ರಶಸ್ತಿಗೆ ಅರ್ಹವಾಗಿ ನಾಮಕರಣಗೊಂಡ, ನಿರಂತರ ನಾಲ್ಕು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದ, ಭಾರತದಿಂದ ಮೊದಲ ಬಾರಿಗೆ ಆಸ್ಕರ್ ಪ್ರಶಸ್ತಿಗೆ ನಾಮಕರಣ ಆದ ಸಿನೆಮಾದಲ್ಲಿ ಅಭಿನಯಿಸಿದ, ಭಾರತೀಯ ಸಿನಿಮಾದ ಪ್ರೇಕ್ಷಕರಿಂದ 'ಟ್ರಾಜಿಡಿ ಕ್ವೀನ್' ಎಂದು ಕರೆಸಿಕೊಂಡಿದ್ದ ಮೀನಾ ಕುಮಾರಿಯ ಬದುಕು ದುರಂತವಾಯಿತು. ಏಕೆ? ಇದು ಉತ್ತರ ಸಿಗದ ಪ್ರಶ್ನೆ. ಯಾಕೆಂದರೆ ಉತ್ತರ ಕೊಡಬೇಕಾದ ಆಕೆ ಇಂದು ನಮ್ಮೊಂದಿಗೆ ಇಲ್ಲ!
1972ರಲ್ಲಿ ಅವಳ ಕೊನೆಯ ಸಿನೆಮಾ "ಪಾಕೀಜಾ" ವನ್ನು ಮುಂಬೈಯ 'ಮರಾಠಾ ಮಂದಿರ' ಥಿಯೇಟರಲ್ಲಿ ಕುಳಿತು ನೋಡಿದಾಗ ನನಗೆ 6 ವರ್ಷ! ನನಗೆ ಏನೇನೂ ಅರ್ಥವಾಗದ ವಯಸ್ಸು. ಆದರೆ ಆಕೆಯ ಅಭಿನಯ ಸಾಮರ್ಥ್ಯಗಳು, ಕೊಂಚ ಅತೀ ಎನ್ನಿಸುವ ಭಾವುಕತೆ, ನೃತ್ಯಗಳು ಎಲ್ಲವೂ ಅದ್ಭುತವೆ ಆಗಿದ್ದವು! ಅದಾಗಿ ಕೆಲವೇ ದಿನಗಳ ಒಳಗೆ 'ಮೀನಾ ಕುಮಾರಿ ಇನ್ನಿಲ್ಲ!' ಎಂಬ ಸಾರಾಂಶದ ಶೀರ್ಷಿಕೆಯನ್ನು ಪತ್ರಿಕೆಯಲ್ಲಿ ಓದಿದಾಗ ನನಗೆ ಅರಿವಿಲ್ಲದಂತೆ ಕಣ್ಣೀರು ಗಲ್ಲವನ್ನು ತೋಯಿಸಿತ್ತು! ಆಗ ಆಕೆಗೆ ಕೇವಲ 38 ವರ್ಷ!
ಆಕೆಯ ಮೊದಲ ಹೆಸರು ಮಹಜಾಬೀನ್ ಬಾನೂ. ತಂದೆಯ ಹೆಸರು 'ಆಲಿ ಬಕ್ಷ' ರಂಗಕಲಾವಿದ. ತಾಯಿ 'ಕಾಮಿನಿ' ರಾಷ್ಟ್ರಕವಿ ರವೀಂದ್ರನಾಥ್ ಠಾಗೋರ್ ಅವರ ವಂಶದವಳು. ಅಪ್ಪ ಮತ್ತು ಅಮ್ಮನದು ಅಂತರ್ಜಾತೀಯ ಪ್ರೇಮ ವಿವಾಹ ಆದ ಕಾರಣ ಎರಡೂ ಕುಟುಂಬಗಳ ಕಡೆಯಿಂದ ಸಪೋರ್ಟ್ ಇರಲಿಲ್ಲ. ಮನೆಯಲ್ಲಿ ತೀರಾ ಬಡತನದ ಕಾರಣ ಅವಳು ತನ್ನ ಐದನೇ ವರ್ಷಕ್ಕೆ ಸಿನೆಮಾದಲ್ಲಿ ಬಾಲ ನಟಿ ಆಗಿ ಅಭಿನಯ ಮಾಡಿದರು.
ಆಕೆ ಮಹಾಪ್ರತಿಭಾವಂತೆ. ಕವಿ, ಗಾಯಕಿ, ನೃತ್ಯಪಟು ಎಲ್ಲವೂ ಆಗಿದ್ದಳು. ಎಲ್ಲ ಕಲೆಯನ್ನು ಯಾವುದೇ ಗುರುವಿನ ನೆರವು ಇಲ್ಲದೆ ಕಲಿತವಳು. ಒಬ್ಬಳು ಅದ್ಭುತ ಪ್ರತಿಭೆಯ, ಪರಿಪೂರ್ಣ ನಟಿ. ಅವಳಿಗೆ ಅಳುವುದಕ್ಕೆ ಗ್ಲಿಸರಿನ್ ಬೇಕಾಗಿರಲಿಲ್ಲ. ಭಾವಪೂರ್ಣವಾದ ಆಳ ಕಣ್ಣುಗಳು, ಆರ್ದ್ರವಾದ ಧ್ವನಿ, ನಡುಗುವ ತುಟಿಗಳು, ಉದ್ದವಾದ ತೋಳುಗಳು, ನೃತ್ಯಕ್ಕೆ ಹೇಳಿ ಮಾಡಿಸಿದ ತೆಳು ಬಳ್ಳಿಯ ಹಾಗಿದ್ದ ಮೈಕಟ್ಟು, ಗುಂಗುರು ಕೂದಲು ಆಕೆಯನ್ನು ಮಹಾ ತಾರೆಯಾಗಿ ಮಾಡಿದವು.
ಆರಂಭದ ಕೆಲವು ದಿನಗಳಲ್ಲಿ ಹಿನ್ನೆಲೆ ಗಾಯಕಿ ಆಗಿ ಗುರುತಿಸಿಕೊಂಡ ಮೀನಾ ಕುಮಾರಿ ಮುಂದೆ "ಬೈಜು ಬಾವ್ರಾ" ಸಿನಿಮಾದ ಮೂಲಕ ಇಡೀ ಫಿಲ್ಮಿ ಜಗತ್ತಿಗೆ ಪರಿಚಯ ಆದಳು. ಆಗ ಅವಳಿಗೆ ಕೇವಲ 13 ವರ್ಷ! ನಂತರ ಸಾಲು ಸಾಲಾಗಿ ಸೂಪರ್ ಹಿಟ್ ಚಿತ್ರಗಳು.
ಮೇರೆ ಅಪ್ನೆ, ಆರತಿ, ಪರಿಣೀತಾ, ಸಾಹಿಬ್ ಬೀಬಿ ಔರ್ ಗುಲಾಮ್, ದಿಲ್ ಏಕ್ ಮಂದಿರ್, ದಿಲ್ ಆಪ್ನಾ ಪ್ರೀತ್ ಪರಾಯಾ, ಕಾಜಲ್, ದೋ ಬಿಘಾ ಜಮೀನ್, ಫೂಲ್ ಔರ್ ಪತ್ತರ್, ಚಾಂದ್, ಚಾಂದನಿ ಚೌಕ್, ಇಲ್ಜಾಮ್, ಆಜಾದ್, ಶಾರದಾ, ಬಂದಿಶ್, ಏಕ್ ಹೀ ರಾಸ್ತಾ, ಮೇಮ್ ಸಾಬ್, ನಯಾ ಅಂದಾಜ್ ಎಲ್ಲವೂ ಕ್ಲಾಸಿಕ್ ಸಿನೆಮಾಗಳು.
ಯಾವ ಸಿನಿಮಾವು ಕೂಡ ಬಾಕ್ಸ್ ಆಫೀಸಲ್ಲಿ ಸೋತು ಹೋದ ಉದಾಹರಣೆ ಇಲ್ಲ!
ಸಾಹೀಬ್ ಬೀಬಿ ಔರ್ ಗುಲಾಮ್ ಭಾರತದಿಂದ ಆಸ್ಕರ್ ಪ್ರಶಸ್ತಿಗೆ ನಾಮಕರಣ ಆದ ಮೊದಲ ಸಿನೆಮಾ! ದೋ ಬೀಘಾ ಜಮೀನ್ ಎಂಬ ಕ್ಲಾಸಿಕ್ ಸಿನೆಮಾ ಅಂತಾರಾಷ್ಟ್ರೀಯ ಫಿಲ್ಮ್ ಉತ್ಸವಕ್ಕೆ ಆಯ್ಕೆ ಆಗಿತ್ತು! ಬೈಜೂ ಬಾವ್ರಾ ಸಿನೆಮಾಕ್ಕೆ ಫಿಲ್ಮ್ ಫೇರ್ ಸಂಸ್ಥೆಯ ಚೊಚ್ಚಲ ಪ್ರಶಸ್ತಿಯ ಕಿರೀಟ ಆಕೆಯ ನಟನೆಗೆ ದೊರೆತಿತ್ತು! 1963ರ ಫಿಲ್ಮ್ ಫೇರ್ 'ಅತ್ಯುತ್ತಮ ನಟಿ' ಪ್ರಶಸ್ತಿಗೆ ಆಕೆಯದ್ದೆ ಮೂರು ಚಿತ್ರಗಳು ಸ್ಪರ್ಧೆಯಲ್ಲಿ ಇದ್ದವು! ಫೂಲ್ ಔರ್ ಪತ್ತರ್ ಹತ್ತಾರು ಸಿನೆಮಾ ಮಂದಿರದಲ್ಲಿ ಗೋಲ್ಡನ್ ಜುಬಿಲಿಯನ್ನು ಆಚರಣೆ ಮಾಡಿತ್ತು! ಆಕೆಯ ಹದಿನೆಂಟು ಸಿನೆಮಾಗಳು ಆ ಕಾಲಕ್ಕೆ ಸಿಲ್ವರ್ ಜ್ಯುಬಿಲಿ ಸೆಲೆಬ್ರೇಟ್ ಮಾಡಿದ್ದವು!
ಆಗಿನ ಮಹಾನ್ ನಟರಾದ ದೇವ್ ಆನಂದ್, ರಾಜ ಕಪೂರ್, ದಿಲೀಪ್ ಕುಮಾರ್, ರಾಜಕುಮಾರ್, ಅಶೋಕ್ ಕುಮಾರ್, ಸುನೀಲ್ ದತ್ತ, ಗುರುದತ್ತ, ಧರ್ಮೇಂದ್ರ, ಶಮ್ಮಿ ಕಪೂರ್ ಇವರೆಲ್ಲರೂ ಆಕೆಯ ಜೊತೆ ಅಭಿನಯಿಸಲು ತುದೀಗಾಲಿನಲ್ಲಿ ನಿಂತಿದ್ದರು. ದೊಡ್ಡ ದೊಡ್ಡ ನಿರ್ಮಾಪಕರು ಅವಳ ಡೇಟ್ಸನ್ನು ಹೊಂದಾಣಿಕೆ ಮಾಡಲು ವರ್ಷಗಟ್ಟಲೆ ಕಾಯಲು ಸಿದ್ಧರಾಗಿದ್ದರು!
She was the most celebrated and iconic actress of Hindi films during those years!
ಅಂತಹ ಮೀನಾ ಕುಮಾರಿ ತನ್ನ ಜೀವನದಲ್ಲಿ ಒಂದು ತಪ್ಪು ಮಾಡಿದಳು. ಕಮಲ್ ಆಮ್ರೋಹಿ ಎಂಬ ಪ್ರಸಿದ್ಧ ಸಿನೆಮಾ ನಿರ್ದೇಶಕನನ್ನು ಪ್ರೀತಿಸಿ ಮದುವೆ ಆದಳು. ಆಗ ಅವನಿಗೆ 34 ವರ್ಷವಾಗಿತ್ತು ಮತ್ತು ಮೊದಲೇ ಮದುವೆ ಆಗಿ ಮೂರು ಮಕ್ಕಳು ಇದ್ದರು. ಅವಳಿಗೆ ಕೇವಲ 18 ವರ್ಷ! ಅವರು ತಮ್ಮ ಮದುವೆಯನ್ನು ರಹಸ್ಯವಾಗಿ ಇಟ್ಟರು. ಆದರೆ ಒಂದು ದಿನ ಅವಳ ಅಪ್ಪನಿಗೆ ವಿಷಯ ಗೊತ್ತಾದಾಗ ಮನೆಯಲ್ಲಿ ದೊಡ್ಡ ಕುರುಕ್ಷೇತ್ರವೆ ನಡೆದು ಹೋಯಿತು! ಅವನ ಚಿತ್ರಗಳಲ್ಲಿ ನಟಿಸುವುದು ಬೇಡ, ಡೈವೋರ್ಸ್ ಕೊಡು ಎಂದು ಅಪ್ಪ ಹೇಳಿದಾಗ ಅವಳು ಒಪ್ಪಲಿಲ್ಲ. ಅಪ್ಪ ಅವಳನ್ನು ಮನೆಯಿಂದ ಹೊರ ಹಾಕಿದರು!
ಗಂಡ ಕಮಲ್ ಆಮ್ರೊಹಿ ಮೊದಲು ಪ್ರೀತಿಯ ನಾಟಕ ಮಾಡಿದ. ನಂತರ ಅವನ ಇಗೋ ಮತ್ತು ದುರಹಂಕಾರಗಳು ಮಾತಾಡಲು ತೊಡಗಿದವು. ಅವಳ ಮೇಲೆ ನೂರಾರು ಶರ್ತಗಳನ್ನು ಹೊರಿಸಲಾಯಿತು. ಅವನೊಬ್ಬ ಸಂಶಯದ ಪಿಶಾಚಿ. ಅವಳ ಮೇಲೆ ಬೇರೆಯವರಿಂದ ಪತ್ತೇದಾರಿಕೆಯನ್ನು ಮಾಡಿಸಲಾಯಿತು. ಸಾರ್ವಜನಿಕ ವೇದಿಕೆಗಳಲ್ಲಿ ತೇಜೋವಧೆ ನಡೆಯಿತು. ದೈಹಿಕ ಹಿಂಸೆ ಕೂಡ ನಡೆಯಿತು.
ತಾನು ತುಂಬಾ ಪ್ರೀತಿ ಮಾಡಿದ ಗಂಡ ಈ ರೀತಿ ಹಿಂಸೆ ಕೊಡಲು ತೊಡಗಿದಾಗ ಮೀನಾ ಕುಮಾರಿ ಬದುಕಲ್ಲಿ ಭರವಸೆಯನ್ನು ಕಳೆದುಕೊಂಡಳು. ಕುಡಿತ ಮತ್ತು ನಿದ್ದೆ ಮಾತ್ರೆ ಅಭ್ಯಾಸ ಆಯಿತು. ಕ್ರಾನಿಕ್ ಇನ್ಸೋಮ್ನಿಯಾ ಎಂಬ ಕಾಯಿಲೆ ಕೇವಲ 38ನೆಯ ವಯಸ್ಸಿಗೆ ಅವಳ ಉಸಿರನ್ನು ನಿಲ್ಲಿಸಿಬಿಟ್ಟಿತು! ಹೀಗೆ ಮೀನಾ ಕುಮಾರಿ ಎಂಬ ಮಹಾನ್ ತಾರೆಯ ಅಂತ್ಯವು ಅವಳ ದುರಂತ ಸಿನೆಮಾದ ಹಾಗೆ ಕಣ್ಣೀರ ಕಥೆಯಾಗಿ ಹೋಯಿತು.
ಮೀನಾ ಕುಮಾರಿಯ ಸಮಾಧಿಯ ಮೇಲೆ ಕೆತ್ತಲ್ಪಟ್ಟ ಎರಡೇ ಎರಡು ವಾಕ್ಯಗಳು ನಮ್ಮ ಹೃದಯವನ್ನು ಕರಗಿಸಿ ಬಿಡುತ್ತವೆ.
"ಅವಳು ತನ್ನ ಜೀವನವನ್ನು ಮುರಿದ ಪಿಟೀಲು, ಅಪೂರ್ಣ ಹಾಡು ಮತ್ತು ಒಡೆದ ಹೃದಯದೊಂದಿಗೆ ಮುಗಿಸಿದಳು! ಆದರೆ ಒಂದೇ ಒಂದು ವಿಷಾದವೂ ಇಲ್ಲ!" ಅವಳಿಗೆ ಒಂದು ಹನಿ ಕಣ್ಣೀರನ್ನು ಸುರಿಸಿ ಶ್ರದ್ಧಾಂಜಲಿ ಕೊಡೋಣ ಅಲ್ಲವೇ?
-ರಾಜೇಂದ್ರ ಭಟ್ ಕೆ.
ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ