ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಜನತೆಗೆ ಆಯುರ್ವೇದ, ಯೋಗ, ನ್ಯಾಚರೋಪತಿ, ಫಿಸಿಯೋಥೆರಪಿ, ಮತ್ತು ಡಯಟ್ ಕೌನ್ಸಿಲಿಂಗ್, ಚಿಕಿತ್ಸೆಯನ್ನು ಒಂದೇ ಸೂರಿನಡಿಯಲ್ಲಿ ನೀಡಲು ಆರಂಭಿಸಿರುವ ಚಿಕಿತ್ಸಾಲಯ “ತಪೋವನ”.
ಪ್ರಾಕೃತಿಕ ಸೌಂದರ್ಯದ ತಂಪಾದ ಪರಿಸರದ ನಡುವೆ ಪುರಾತನ ಶೈಲಿಯನ್ನು ನೆನಪಿಸುವ ಹಳೆಯ ಮಾದರಿಯ ಮನೆಯಲ್ಲಿ ಈ ನೂತನ ಚಿಕಿತ್ಸಾಲಯ ಪ್ರಾರಂಭಗೊಳ್ಳಲಿದೆ.
ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಹೋಟೆಲ್ ವುಡ್‍ಲ್ಯಾಂಡ್ಸ್‌ನ ಮುಂಭಾಗದಲ್ಲಿ "ತಪೋವನ" ತಲೆ ಎತ್ತಿದೆ.
ಮನುಷ್ಯ ಇಂದಿನ ನಾಗಾಲೋಟದ, ಜಂಜಾಟದ ಬದುಕಿನಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಯುರ್ವೇದ, ಯೋಗ, ಪ್ರಾಣಾಯಾಮ, ನ್ಯಾಚುರೋಪತಿ, ಚಿಕಿತ್ಸೆಗಳ ಅವಶ್ಯಕತೆ ಬಹಳ ಇದೆ. ಇವುಗಳ ಜೊತೆಗೆ ಆಹಾರ ಸೇವನೆಯಲ್ಲಿ ಪಥ್ಯಕ್ರಮ ಕೈಗೊಳ್ಳಲು ಅನುಭವಿ ವೈದ್ಯರ ಸಲಹೆ ಅವಶ್ಯಕ.
ಇಲ್ಲಿ ಇವೆಲ್ಲದಕ್ಕೂ ತಜ್ಞ ವೈದ್ಯರ ಸಲಹೆ ಸೂಚನೆ ಚಿಕಿತ್ಸೆ ಸಿಗಲಿದೆ.
ಪ್ರಥಮ ಬಾರಿಗೆ ಮಾನಸಿಕ ಒತ್ತಡ ಮೌಲ್ಯಮಾಪನ ಮಾಡುವ HRV ಪರೀಕ್ಷಾ ಯಂತ್ರದ ಮೂಲಕ ಅತಿಯಾದ ಒತ್ತಡ ನಿರ್ವಹಣೆಗೆ (Stress management) ಚಿಕಿತ್ಸೆ ನೀಡಲಾಗುತ್ತದೆ. HRV ಪರೀಕ್ಷಾ ಯಂತ್ರ ಲಭ್ಯವಿರುವ ತಪೋವನ ಚಿಕಿತ್ಸಾ ಸಂಸ್ಥೆ ಭಾರತದ ಎರಡನೇಯ ಕೇಂದ್ರವಾಗಿದೆ.
ಅಭ್ಯಂಗ, ಶಿರೋಧಾರ, ಪಂಚಕರ್ಮ, ಕಟಿಬಸ್ತಿ, ಜಾನುಬಸ್ತಿ, ನೇತ್ರತರ್ಪಣ ಮುಂತಾದ ಚಿಕಿತ್ಸೆಗಳೂ ಇಲ್ಲಿ ಲಭ್ಯವಿದೆ. ಉತ್ತಮ ಸೇವಾ ಮನೋಭಾವದ ಸುಮಾರು 8 ಮಂದಿ ನುರಿತ ತಜ್ನ ವೈದ್ಯರ ತಂಡ ಇಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಕೈಗೆಟಕುವ ಬೆಲೆಯಲ್ಲಿ ಉತ್ತಮ ಸೇವೆ ನೀಡಲಿದೆ.
ಮುಖ್ಯವಾಗಿ ಕರುಳಿನತೊಂದರೆ, ಸೋರಿಯಾಸಿಸ್, ಸಂಧಿವಾತ, ಸ್ಲಿಪ್ ಡಿಸ್ಕ್, ಸ್ತ್ರೀರೋಗ, ಸೈನ್‍ಟಿಸ್, ಪಾಶ್ರ್ವವಾಯು, ಮೈಗ್ರೇನ್, ಬೆನ್ನುನೋವು, ಮಂಡಿನೋವು, ಸಂಧಿನೋವು, ರಕ್ತದೊತ್ತಡ, ತಲೆನೋವು, ಶ್ವಾಸಕೋಶ ತೊಂದರೆ ಮುಂತಾದ ಖಾಯಿಲೆಗಳಿಗೆ ಇಲ್ಲಿ ಉತ್ತಮ ಚಿಕಿತ್ಸೆ ದೊರೆಯಲಿದೆ. ಒತ್ತಡ ನಿರ್ವಹಣೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಚಿಕಿತ್ಸೆ ದೊರೆಯಲಿದೆ.
ಡಾಕ್ಟರ್ ಹರ್ಷ ಹೆಬ್ಬಾರ್‍ರವರು ಮಾತನಾಡುತ್ತಾ ಆಯುರ್ವೇದ ಚಿಕಿತ್ಸೆಯ ಮೂಲ ಉದ್ದೇಶ ಕ್ರಮಬದ್ದ ಆಹಾರ ಮತ್ತು ವಿಹಾರದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ರೋಗ ಬರದಂತೆ ತಡೆಯುವುದು. ಬಂದರೆ ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವುದು.
ಆಯುರ್ವೇದ, ನ್ಯಾಚರೋಪತಿ ಚಿಕಿತ್ಸಾ ಪದ್ಧತಿಯನ್ನು ಇನ್ನಷ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಭಾರತೀಯರಿಂದ ಆಗಬೇಕಾಗಿದೆ ಎಂದರು.
ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ಬಂದ ಫಲಿತಾಂಶದ ದಾಖಲೀಕರಣ ಮಾಡಿ ಸಂಶೋಧನೆಗೆ ಒತ್ತು ನೀಡುವ ಮೂಲಕ ಸಾರ್ವಜನಿಕರಿಗೆ ಆಯುರ್ವೇದದ ಮಹತ್ವವನ್ನು ತಿಳಿಸಿಕೊಡಬೇಕು ಎಂದು ತಿಳಿಸಿದರು.
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸ ಮತ್ತು ಯೋಗಾಸನಗಳು ಅತ್ಯುತ್ತಮವಾಗಿವೆ. ಯೋಗವು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ನಮ್ಮ ಮೂಳೆ ಸ್ನಾಯುಗಳು ಚುರುಕುಗೊಳಿಸಲು ಯೋಗ ಸಹಕಾರಿ. ಯೋಗಭ್ಯಾಸದ ನಿರಂತರತೆಯು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಎಂದರು.
ಸಾವಿರಾರು ವರ್ಷದ ಇತಿಹಾಸವಿರುವ ಯೋಗಾಭ್ಯಾಸ ಇಂದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚಿನ ಪ್ರಸಿದ್ಧಿಯನ್ನು ಪಡೆದಿದೆ. ನಗರದ ಯುವ ಜನತೆ ಇಲ್ಲಿ ಯೋಗದ ಪ್ರಯೋಜನ ಪಡೆಯುವುದರೊಂದಿಗೆ ಇಲ್ಲಿ ವಿವಿಧ ರೀತಿಯ ಚಿಕಿತ್ಸೆಗಳನ್ನು ಪ್ಯಾಕೇಜ್‍ಗಳ ಮೂಲಕ ಪಡೆಯಬಹುದಾಗಿದೆ. ವೆಲ್‍ನೆಸ್ ಸದಸ್ಯತ್ವ ಪ್ಯಾಕೇಜ್, ಸ್ಟ್ರೆಸ್ ಮ್ಯಾನೇಜ್‍ಮೆಂಟ್ ಸದಸ್ಯತ್ವ ಪ್ಯಾಕೇಜ್, ರಿಜ್ಯುವಿನೇಶನ್ ಪ್ಯಾಕೇಜ್, ತೂಕ ನಿರ್ವಹಣೆ ಸದಸ್ಯತ್ವ ಪ್ಯಾಕೇಜ್‍ಗಳನ್ನು ಪಡೆದುಕೊಂಡು ಉತ್ತಮ ಚಿಕಿತ್ಸಾ ಕ್ರಮಗಳ ಪ್ರಯೋಜನ ಪಡೆಯಬಹುದು ಎಂದು ಪ್ರವರ್ತಕರಾದ ಡಾಕ್ಟರ್ ದೇವಿಕೃಪಾ ರೈ ವಿವರಿಸಿದರು.
ತಪೋವನ ಹೆಲ್ತ್ ಮತ್ತು ವೆಲ್‍ನೆಸ್ ಸೆಂಟರ್ ಸಂಸ್ಥೆಯನ್ನು ಸೋಮವಾರ ಬೆಳಿಗ್ಗೆ 9.30 ಗಂಟೆಗೆ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲು, ಮೀನುಗಾರಿಕಾ ಮತ್ತು ಬಂದರು ಸಚಿವ ಎಸ್.ಅಂಗಾರ, ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಉದ್ಘಾಟಿಸಲಿದ್ದಾರೆ.