ಧರ್ಮ ಅರ್ಥ ಕಾಮ ಮೋಕ್ಷ
ಎಂಬ ನಾಲ್ಕು ಪರುಷಾರ್ಥವ
ಹಿಂದು ಧರ್ಮ ಅಂದಿನಿಂದ
ನಂಬಿಕೊಂಡಿದೆ.
ಜೀವಿಗಳಲಿ ಶ್ರೇಷ್ಠವೆಂದು
ತನ್ನತಾನೆ ಅರಿತುಕೊಂಡ
ಮನುಜ ಮಾತ್ರ ಇದರ ಮರ್ಮ
ಅರಿಯಬೇಕಿದೆ.
ಯಾವ ಮನುಜ ತಾನು ಬದುಕಿ
ಅನ್ಯ ಜೀವಿಗಳನು ನಿತ್ಯ
ತನ್ನಂತೆಯೆ ಪ್ರೀತಿಸುತ್ತ
ಬಾಳುತಿರುವನೊ
ಅಂಥ ನಡೆಯೆ ಲೋಕದೊಳಗೆ
ಶಾಂತಿ ನಶಿಸದಂತೆ ಮಾಡಿ
ದಯೆಯೆ ಧರ್ಮ ಮೂಲವೆಂದು
ಸಾರಿ ಹೇಳಿದೆ.
ಯಾರು ಸತ್ಯ ಮಾರ್ಗದಿಂದ
ಧನವ ಬಹಳ ಗಳಿಸಿಕೊಂಡು
ಬದುಕು ವ್ಯರ್ಥವಾಗದಂತೆ
ನೋಡಿಕೊಂಬನೊ
ಅಂಥ ಅರ್ಥ ಧರ್ಮವೆಂದು
ಧರ್ಮಕಾಗಿ ಅರ್ಥವೆಂದು
ಬದುಕಿಗರ್ಥ ಕಂಡರಾದ
ರದುವೆ ಅರ್ಥವು
ನಾಲ್ಕು ಬಗೆಯ ಪರುಷಾರ್ಥದಿ
ಅಂದಿನಿಂದ ಎಂದೆಂದಿಗು
ಕಾಮವೊಂದೆ ಎಲ್ಲದಕೂ
ಶ್ರೇಷ್ಠವಾಗಿದೆ
ಕಾಮವಿರದೆ ಧರ್ಮವಿಲ್ಲ
ಕಾಮವಿರದೆ ಅರ್ಥವಿಲ್ಲ
ಕಾಮವಿರದೆ ಮೋಕ್ಷ ಕೂಡ
ಪ್ರಾಪ್ತಿಯಾಗದು.
ಧರ್ಮಕಾಗಿ ಅರ್ಥ ಬೇಕು
ಅರ್ಥಕಾಗಿ ಕಾಮಬೇಕು
ಕಾಮವೆಂಬ ಇಚ್ಛೆಯಿಂದ
ಮೋಕ್ಷ ಸಿದ್ಧಿಯು
ಅಂತೆ ಇರುವ ಪುರುಷಾರ್ಥವ
ಯಾರು ತಿಳಿದು ಪಾಲಿಸುವನೊ
ಆತ ಜಗದ ನಿಯಮ ತಿಳಿದ
ಜ್ಞಾನವಂತನು.
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ