ಪುಸ್ತಕ ವಿಮರ್ಶೆ: ಡಾ. ಪಿ. ಅನಂತಕೃಷ್ಣ ಭಟ್ ಅವರ ಕನ್ನಡ ಮತ್ತು ಇಂಗ್ಲಿಷ್ ಕೃತಿ ಭಾರತ ಸಂವಿಧಾನ

Upayuktha
0




ಕಳೆದ ಐವತ್ತು ವರ್ಷಗಳಿಂದ ರಾಜ್ಯಶಾಸ್ತ್ರ ಮತ್ತು ರಾಜ್ಯಾಂಗ / ಕಾನೂನು ವಿಷಯಗಳ ಬಗ್ಗೆ ಬರೆಯುತ್ತ ಬಂದಿರುವ, ಮಂಗಳೂರಿನ ಕೆನರಾ ಕಾಲೇಜಿನ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕರಾಗಿರುವ ಡಾ. ಪಿ. ಅನಂತಕೃಷ್ಣ ಭಟ್ ಅವರ ಇತ್ತೀಚಿನ ಕೃತಿ 'ಭಾರತ ಸಂವಿಧಾನ' ಮತ್ತು ಅದರ ಇಂಗ್ಲಿಷ್ ಆವೃತ್ತಿ 'Indian Constitution'.


ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಬರೆದ ಕೃತಿಯಾದರೂ ಸಂವಿಧಾನದ ಆಶಯ ಮತ್ತು ಮುಖ್ಯ ಅಂಶಗಳನ್ನು ತಿಳಿದುಕೊಳ್ಳಲು ಆಸಕ್ತರಾದ ಸಾಮಾನ್ಯ ಓದುಗರಿಗೂ ಇದು ಅತ್ಯುಪಯುಕ್ತವಾಗಿದೆ.


ನಮ್ಮೆಲ್ಲರ ರಾಷ್ಟ್ರೀಯ ಸಾಮೂಹಿಕ ಬದುಕಿನೊಂದಿಗೆ ವ್ಯಕ್ತಿಗತ ಹಕ್ಕು-ಕರ್ತವ್ಯಗಳ ಹಂದರವನ್ನು ಹೆಣೆದು ಜನಸಮುದಾಯ ಮತ್ತು ಸರಕಾರಗಳ ಮಧ್ಯೆ ಸೇತುವೆ ನಿರ್ಮಿಸಿದ ನಮ್ಮ ರಾಜ್ಯಾಂಗ ಘಟನೆ ಅತ್ಯಪೂರ್ವವಾದದ್ದು. ನಮ್ಮ ವಿಶಾಲ ರಾಷ್ಟ್ರದ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಅಧಿಕಾರ-ಕರ್ತವ್ಯಗಳ ಪರಿಧಿಯನ್ನು; ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗದ ನಿಖರ ರೇಖಾ ವಿನ್ಯಾಸವನ್ನು ಪಡಿಮೂಡಿಸಿದ ಮೂಲಭೂತ ದಾಖಲೆ ನಮ್ಮ ಸಂವಿಧಾನ.


ಸಂವಿಧಾನ ರಚನಾ ಸಭೆಯು ಡಾ. ಬಾಬು ರಾಜೇಂದ್ರಪ್ರಸಾದರ ಅಧ್ಯಕ್ಷತೆಯಲ್ಲಿ ಮತ್ತು ಕರಡು ಸಮಿತಿಯು (draft committee) ಡಾ. ಬಿ. ಆರ್. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸುಮಾರು 298 ಸದಸ್ಯರ ಉಪಸ್ಥಿತಿಯಲ್ಲಿ 2 ವರ್ಷ, 11 ತಿಂಗಳು, 18 ದಿನಗಳ ನಿರಂತರ ಪರಿಶ್ರಮದಿಂದ ರೂಪುಗೊಂಡ ಅಮೋಘ ದಾಖಲೆ ಹೊಂದಿದೆ. ಕರ್ನಾಟಕದಿಂದ ಕೆ. ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಸಿದ್ಧವೀರಪ್ಪ, ಎಸ್. ನಿಜಲಿಂಗಪ್ಪ, ಟಿ. ಚೆನ್ನಯ್ಯ, ಟಿ. ಸಿದ್ದಲಿಂಗಯ್ಯ, ಎಸ್. ವಿ. ಕೃಷ್ಣಮೂರ್ತಿ ರಾವ್ ಮೊದಲಾದವರಿದ್ದರು. ಅದೇ ರೀತಿ ಅಂದಿನ ಮದ್ರಾಸ್ ಸಂಸ್ಥಾನದ ಭಾಗವಾದ ದ. ಕ. ಜಿಲ್ಲೆಯಿಂದ ಬೆನಗಲ್ ನರಸಿಂಹ ರಾವ್, ಯು. ಶ್ರೀನಿವಾಸ ಮಲ್ಯ, ಎಚ್. ವಿ. ಕಾಮತ್, ಬೆನಗಲ್ ಶಿವರಾವ್ ಹಾಗೂ ಜೆರೋಮ್ ಡಿ'ಸೋಜಾ ಅವರಿದ್ದರು. ಜಿಲ್ಲೆಯೊಂದರಿಂದ ತಜ್ಞರಾದ ಐದು ಮಂದಿ ಆ ಸಮಿತಿಯಲ್ಲಿ ಸದಸ್ಯರಾಗಿದ್ದುದು ಕೂಡ ಒಂದು ದಾಖಲೆಯೇ ಸರಿ!


ಸಂವಿಧಾನದ ಪೀಠಿಕೆ ಅಥವಾ ಪ್ರಸ್ತಾವನೆ, ಭಾರತ ಒಕ್ಕೂಟ, ಪೌರತ್ವ, ಸ್ವಾತಂತ್ರ್ಯದ ಹಕ್ಕು, ಮೂಲಭೂತ ಕರ್ತವ್ಯಗಳು, ವಿಧಾನಸಭೆ, ಮೇಲ್ಮನೆ, ಕೇಂದ್ರ-ರಾಜ್ಯಗಳ ಸಂಬಂಧ, ಪಂಚಾಯತ್'ರಾಜ್ ವ್ಯವಸ್ಥೆ ಮುಂತಾದ ಮೂವತ್ತಾರು ಪ್ರಮುಖ ವಿಷಯಗಳನ್ನು ಕೃತಿ ಪರಿಚಯಿಸುತ್ತದೆ. ಸರಳವಾದ ಭಾಷೆ ಮತ್ತು ಗೊಂದಲವಿಲ್ಲದ ನೇರ ನಿರೂಪಣೆಯಿಂದ ಕೃತಿ ಅಚ್ಚುಕಟ್ಟಾಗಿ ಓದಿಸಿಕೊಂಡು ಹೋಗುತ್ತದೆ.


ನಮ್ಮ ಸಂವಿಧಾನವನ್ನು ಸರಿಯಾಗಿ ತಿಳಿದುಕೊಂಡರೆ ಇವತ್ತಿನ ರಾಜಕೀಯ, ಸಾಮಾಜಿಕ ಮತ್ತು ಆಡಳಿತಾತ್ಮಕವಾದ ಅನೇಕ ಗೊಂದಲಗಳು ನಿವಾರಣೆ ಆದಾವು. ಸಂವಿಧಾನದ ಕುರಿತಾದ ಪ್ರಾಥಮಿಕ ತಿಳಿವಳಿಕೆ ಶಿಕ್ಷಣವಂತರಾದ ಮತ್ತು ಪ್ರಾಜ್ಞರಾದ ಪ್ರಜೆಗಳಿಗೆ ಇರಲೇಬೇಕು. ಈ ಕೃತಿ ನಮ್ಮ ಸಂವಿಧಾನದ ಬಗ್ಗೆ ಅಂತಹ ಮಾಹಿತಿಯನ್ನು ಸ್ಪಷ್ಟವಾಗಿ ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಒದಗಿಸಿ ಕೊಡುತ್ತದೆ.  


ಲೇಖಕರಾದ ಡಾ. ಪಿ. ಅನಂತಕೃಷ್ಣ ಭಟ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರವಲ್ಲ ಸಾಮಾಜಿಕ ಕ್ಷೇತ್ರದಲ್ಲೂ ಕಾರ್ಯನಿರತರಾದವರು. 1980ರಲ್ಲಿ ಆರಂಭಗೊಂಡು 2002ರಲ್ಲಿ ರಾಜ್ಯಪ್ರಶಸ್ತಿ ಪಡೆದ ಮಂಗಳೂರು ಸಮೀಪದ ಬಾಲಸಂರಕ್ಷಣ ಕೇಂದ್ರ ಅನಾಥಾಶ್ರಮದ ಸ್ಥಾಪಕ ಸಂಚಾಲಕರಾಗಿ, ಕೊಣಾಜೆ ಬಳಿ ಪಜೀರಿನಲ್ಲಿ 2000ನೇ ಇಸವಿಯಲ್ಲಿ ಆರಂಭಗೊಂಡ ಗೋವನಿತಾಶ್ರಯ ಟ್ರಸ್ಟ್'ನ ಸ್ಥಾಪಕ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುತ್ತಾರೆ. 2016ರಲ್ಲಿ ಮೇಘಾಲಯದ 'ಸರಸ್ವತಿ ಎಜುಕೇಷನ್ ಅಂಡ್ ವೆಲ್'ಫೇರ್ ಟ್ರಸ್ಟ್' ನ ಸ್ಥಾಪಕ ಅಧ್ಯಕ್ಷರಾಗಿ ಶಿಕ್ಷಣ ಸಂಸ್ಥೆಯನ್ನು ಶುಭಾರಂಭಗೊಳಿಸಿದ್ದಾರೆ.


ಪತ್ರಿಕೆ, ಆಕಾಶವಾಣಿ ಮುಂತಾದ ಸಮೂಹ ಮಾಧ್ಯಮಗಳ ಮೂಲಕವೂ ನಿರಂತರವಾಗಿ ರಾಜಕೀಯ ಶಾಸ್ತ್ರ ಮತ್ತು ರಾಜ್ಯಾಂಗ ವ್ಯವಸ್ಥೆ ಕುರಿತು ತಿಳಿವಳಿಕೆ ಮೂಡಿಸುತ್ತ ಬಂದಿದ್ದಾರೆ.

-ಡಾ. ವಸಂತಕುಮಾರ ಪೆರ್ಲ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top