ಈಗ ರೆಡಿ, ಬಾಳೆಹಣ್ಣಿನ ಹುಡಿ

Upayuktha
0


ಮಹೇಶ್ ಹೆಗಡೆ - 94491 93602

ಇದರದೇ ಚಾಕಲೇಟಿಗೆ ಶಿರಸಿ ಬಾಕಾಹು ಪಾಕ ಸ್ಪರ್ಧೆಯ ಸಿಹಿತಿಂಡಿ ವಿಭಾಗದಲ್ಲಿ ಪ್ರಥಮ ಬಹುಮಾನ

ಪೋಷಕಾಂಶ ಪೂರೈಕೆಗೆ; ಮಾಲ್ಟ್, ಮಿಲ್ಕ್ ಶೇಕ್ ಮತ್ತು ನೇರ ಸೇವನೆಗೂ ಇದು ಸೂಕ್ತ.


ಬಾಳೆಕಾಯಿ ಹುಡಿ- ಬಾಕಾಹು- ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕನ್ನಡದಲ್ಲಿ ಜನಪ್ರಿಯವಾಗುತ್ತಿದೆ. ಈ ನಡುವೆ ಬಾಳೆಹಣ್ಣಿನ ಹುಡಿ ಇದೆಯಾ? ಸಾಧ್ಯ ಇದೆಯಾ ಎಂಬ ಪ್ರಶ್ನೆ ಕೇಳಿಬರುತ್ತಿದೆ.


ಈ ಪ್ರಶ್ನೆಗೆ ಉತ್ತರ ಕೊಟ್ಟವರು ಶಿರಸಿಯ ಇಬ್ಬರು ಕೃಷಿಕರು. ಮಹೇಶ ಹೆಗಡೆ ಮುಕ್ರಮನೆ ಮತ್ತು ದಿವಾಕರ ಭಟ್ ನೀರಗಾನ್. ಇವರಿಬ್ಬರೂ ಸೇರಿ ವರ್ಷಗಳ ಹಿಂದೆ ಬಾಳೆಹಣ್ಣಿನ ಹುಡಿ ಮಾಡಿ ಸ್ವಲ್ಪ ಬಳಕೆಯನ್ನೂ ಮಾಡಿದ್ದರು. ಇದಕ್ಕೆ ಪ್ರೇರಣೆ ಬಾಲಚಂದ್ರ ಹೆಗಡೆ ಸಾಯಿಮನೆ. ಚೀನಾ ಪ್ರವಾಸ ಮುಗಿಸಿ ಬಂದ ಸಾಯಿಮನೆಯವರು ಹಳ್ಳಿಯ ಬೇರೆಬೇರೆ ಮನೆಯವರು ಬೇರೆಬೇರೆ ಮೌಲ್ಯವರ್ಧಿತ ಉತ್ಪ್ಪನ್ನ ಮಾಡಿ ಅದನ್ನು ಒಟ್ಟಿಗೆ ಮಾರ್ಕೆಟ್ ಮಾಡುವ ಕನಸನ್ನು ಹೊಂದಿದ್ದರು. ಅದರ ಪ್ರಕಾರ ನಡೆದದ್ದು ಈ ಪ್ರಯೋಗ.


ಇದು ಸರಿಯಾಗಿ ಕಳಿತ ಹಣ್ಣಿನ ಹುಡಿಯಲ್ಲ. ಬಾಳೆಕಾಯಿಯ ಹಸಿರು ಬಣ್ಣ ಹಳದಿಗೆ ತಿರುಗುತ್ತದಲ್ಲಾ, ಆ ಘಟ್ಟದಲ್ಲಿ ಅದನ್ನು ಉಕ ಜಿಲ್ಲೆಯಲ್ಲಿ 'ಹಂಪು' ಎಂದು ಕರೆಯುತ್ತಾರೆ. ಆಗ ಅದು ನಸು ಸಿಹಿ ರುಚಿ ಹೊಂದಿರುತ್ತದೆ. ದಿವಾಕರ- ಮಹೇಶ್ ಇದನ್ನು ತಯಾರಿಸಿದ್ದು ಮಿಟ್ಗ ಬಾಳೆಯಿಂದ.


"ಈ ಪ್ರಯೋಗ ಮಾಡಿದ್ದು ಮೂರು ವರ್ಷ ಹಿಂದೆ. ಎರಡು- ಮೂರು ಬ್ಯಾಚುಗಳಲ್ಲಿ ಇದನ್ನು ಮಾಡಿದ್ದೆವು. ಇದರಿಂದಲೇ ಚಾಕೊಲೇಟ್ ಮತ್ತು ಮಾಲ್ಟ್ ಮಾಡಿದ್ದೆವು. ಆ ಕಾಲದಲ್ಲಿ ಮನೆಗೆ ಬಂದವರಿಗೆಲ್ಲಾ ಇದರ ಸ್ಯಾಂಪಲ್ ಕೊಟ್ಟಿದ್ದೆವು. ಎಲ್ಲರೂ ಮೆಚ್ಚಿಕೊಂಡಿದ್ದರು' ಎಂದು ನೆನೆಯುತ್ತಾರೆ ಮಹೇಶ್ ಹೆಗಡೆ.


ಬಳಸಿ ನೋಡಿದ ಕುಸುಮಾ ಹೆಗಡೆ ಸಾಯಿಮನೆ ಹೇಳುತ್ತಾರೆ, "ಮಾಲ್ಟ್ ಅಥವಾ ಮಿಲ್ಕ್ ಶೇಕ್ ಮಾಡಲು ಇದು ತುಂಬ ಸೂಕ್ತ. ಒಂದು ಲೋಟಕ್ಕೆ ಒಂದು ಚಮಚೆ ಪುಡಿ ಸೇರಿಸಿದರೂ ಸಾಕು. ಹೆಚ್ಚು ದಪ್ಪ ಬೇಕಿದ್ದವರು ಹೆಚ್ಚು ಸೇರಿಸಬಹುದು. ಆಡೆಡ್ ಶುಗರ್ ಇಷ್ಟವಿಲ್ಲದವರು ಹಾಗೆಯೇ ಕುಡಿಯಬಹುದು, ನಸು ಸಿಹಿ ಇರುತ್ತೆ.''


ದೇಹಕ್ಕೆ ಪೋಷಕಾಂಶ ಪೂರೈಸಲೆಂದೇ ಬಾದಾಮನ್ನು ಪುಡಿ ಮಾಡಿ ನಿಯತವಾಗಿ ಸೇವಿಸುವುದಿದೆ. ಅದರ ಜತೆ ಬಾಳೆಹಣ್ಣಿನ ಹುಡಿಯನ್ನೂ ಮಿಶ್ರ ಮಾಡಿಕೊಳ್ಳಬಹುದು. ಮಕ್ಕಳಿಗೂ ಕೊಡಬಹುದು.


ಬೆಲೆ ಕಿಲೋಗೆ ರೂ. 500 ಪ್ಲಸ್ ಶಿಪ್ಪಿಂಗ್ ಶುಲ್ಕ. ಒಳ್ಳೆಯ ಪ್ರತಿಕ್ರಿಯೆ, ಆದೇಶ ಇದ್ದರೆ ತಾವಿದನ್ನು ಮತ್ತೆ ತಯಾರಿಸಿ ಪೂರೈಸಬಲ್ಲೆವು. ಅದೇಶ ಬಂದ ಮೇಲೆ ತಯಾರಿ ಎನ್ನುತ್ತಾರೆ.


-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: ಬಾಕಾಹು, ಬಾಳೆಕಾಯಿ ಹುಡಿ, ಬಾಳೆ ಹಣ್ಣಿನ ಹುಡಿ, ಬಾಕಾಹು ಆಂದೋಲನ, Banana Flour, Banana Powder, Banana Recipe, 


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top