ಹಬ್ಬದ ಮೂಲಕ ಆಗಬೇಕಾದ ಕೆಲಸ ಎರಡು. ಬಾಳೆಕಾಯಿ ಹಿಟ್ಟು ತಯಾರಿಯ ತರಬೇತಿ ಮೊದಲನೆಯದು. ಎರಡನೆಯದು ಇದರ ಬಳಕೆಯ ಸಾಧ್ಯತೆಯ ದಿಗ್ದರ್ಶನ, ಪೌಷ್ಟಿಕಾಂಶಗಳ ಬಗ್ಗೆ ಸವಿವರ ತಿಳಿವಳಿಕೆ.
ವ್ಯಂಗ್ಯಚಿತ್ರ: ಎಸ್ಸಾರ್, ಪುತ್ತೂರು
ಬಾಳೆಕಾಯಿ ಹಿಟ್ಟು, ಬನಾನಾ ಫ್ಲೋರ್ ಇಂದು ನಿನ್ನೆಯದಲ್ಲ. ಶತಮಾನಗಳಿಂದ ಅಜ್ಜಿ, ಅಮ್ಮಂದಿರು ಮನೆಮನೆಗಳಲ್ಲಿ ಇದನ್ನು ತಯಾರಿಸುತ್ತಿದ್ದಾರೆ. ಶಿಶು ಆಹಾರವಾಗಿ ತಿನ್ನಿಸುತ್ತಾ ಬಂದಿದ್ದಾರೆ. ಇದು ತುಂಬ ಪೌಷ್ಟಿಕವೂ ಹೌದು.
ಪಂಜಾಬಿನಿಂದ ಬರುವ ಗೋಧಿ ಎಷ್ಟು ವಿಷಾಂಶ ಹೊತ್ತು ತರುತ್ತದೋ ಗೊತ್ತಿಲ್ಲ. ಬಾಳೆಕಾಯಿ ಹುಡಿ (ಬಾಕಾಹು) ತಯಾರಿಸುವುದು ಕಷ್ಟದ ಕೆಲಸವಲ್ಲ. ಹೊಸದಾಗಿ ಯಂತ್ರ, ಸಲಕರಣೆಯೋ ಒಳಸುರಿಯೋ ಖರೀದಿಸಿ ತರಬೇಕಿಲ್ಲ. ಮಳೆಗಾಲದಲ್ಲಿ ಮಾತ್ರ ಡ್ರೈಯರ್ ಬೇಕು. ಬಾಕಾಹು ತಯಾರಿ ಎಲ್ಲ ಕೃಷಿಕರ ಮನೆ ಚಟುವಟಿಕೆ ಆಗಬೇಕು. ಅಡುಗೆ ಮನೆಗಳಲ್ಲಿ ಸದಾ ಇದರ ತುಂಬಿದ ಡಬ್ಬಿ ಇರಬೇಕು.
ಬಾಕಾಹು ಮೈದಾಕ್ಕೆ, ಗೋಧಿ ಹುಡಿಗೆ ಪರ್ಯಾಯ ಆಗಬಹುದು. ಕನಿಷ್ಠ ಗೋಧಿಹುಡಿಗೆ ಪೂರಕವಾದರೂ ಆಗಬಹುದು. ಮಾರಾಟ, ಉದ್ದಿಮೆಯ ಮಾತು ಆಮೇಲಿನದು. ಈ ಬಹೂಪಯೋಗಿ ಆರೋಗ್ಯಪೂರಕ ಹಿಟ್ಟಿನ ಗುಣಗಳು, ತಯಾರಿ ಮತ್ತು ಬಳಕೆಯ ರೀತಿ ವ್ಯಾಪಕವಾಗಿ ಪ್ರಚಾರವಾಗಬೇಕು. ಗ್ರಾಮೀಣ ಪ್ರದೇಶದಲ್ಲೂ ಬಳಕೆ ಹೆಚ್ಚಾಗಬೇಕು. ಹಾಗಾದರೆ ಭವಿಷ್ಯದಲ್ಲಿ ಬಾಳೆ ಬೆಳೆಯುವವರು ಮಾರುಕಟ್ಟೆ ಕುಸಿತದಿಂದ ಈಗಿನಷ್ಟು ಕಂಗಾಲು ಆಗಬೇಕಿಲ್ಲ.
ಈ ಪ್ರಚಾರಸತ್ರವನ್ನು ರೈತರು, ರೈತಪರ, ಕೃಷಿಪ್ರೀತಿಯ ಸಂಘಟನೆಗಳೇ ಕೈಗೆತ್ತಿಕೊಳ್ಳಬೇಕಿದೆ. ಬೇರೆ ಯಾರೋ ಈ ಕೆಲಸ ಮಾಡುತ್ತಾರೆ ಎಂದು ಮಂಡಿಗೆ ತಿನ್ನುತ್ತಾ ಕುಳಿತರೆ ನಾವು ಶತಮೂರ್ಖರು. ಲಾಭಕೋರ ಕಂಪೆನಿಗಳ ಜಾಲ ಎಲ್ಲೆಡೆ ವ್ಯಾಪಿಸುವ ಮೊದಲೇ ನಾವು ಎಚ್ಚರವಾಗಬೇಡವೇ?
ಈ ನಿಟ್ಟಿನಲ್ಲಿ ಫಲಿತಾಂಶ ನಿರ್ದೇಶಿತವಾಗಬಲ್ಲ ಒಂದು ಕಾರ್ಯಕ್ರಮ 'ಬಾಕಾಹು ಹಬ್ಬ'. ಸ್ಥಳೀಯ ಸಹಕಾರಿ ಸಂಘ, ನಬಾರ್ಡ್ ಅಥವಾ ಕೃಷಿಕ ಸಂಘಟನೆಗಳ ಸಹಕಾರದೊಂದಿಗೆ ಇದನ್ನು ರೈತರೇ ಸಂಘಟಿಸಬಹುದು. ಬಾಳೆಕಾಯಿಯ ಮಾರುಕಟ್ಟೆ ಕುಸಿದ ಈ ಸಂದರ್ಭಕ್ಕಿಂತ ಬೇರೆ ಸೂಕ್ತ ಕಾಲ ಇದಕ್ಕೆ ಸಿಗದು.
ಎರಡು ದಿನದ ಹಬ್ಬ ಉತ್ತಮ. ಆಗಬೇಕಾದ ಕೆಲಸ ಎರಡು. ಪ್ರಾತ್ಯಕ್ಷಿಕೆಯ ಮೂಲಕ ಹಿಟ್ಟು ತಯಾರಿಯ ತರಬೇತಿ ಮೊದಲನೆಯದು. ಎರಡನೆಯದು ಇದರ ಬಳಕೆಯ ಸಾಧ್ಯತೆಯ ದಿಗ್ದರ್ಶನ, ಪೌಷ್ಟಿಕಾಂಶಗಳ ಬಗ್ಗೆ ಸವಿವರ ತಿಳಿವಳಿಕೆ.
ಆಸಕ್ತ ಗೃಹಿಣಿಯರಿಗಾಗಿ ಬಾಕಾಹು ತಯಾರಿಯ ತರಬೇತಿಯನ್ನು ಹತ್ತು ದಿನ ಮೊದಲೇ ಮಾಡಿದರೆ ಉತ್ತಮ. ಅವರವರೇ ತಯಾರಿಸಿದ ಹಿಟ್ಟಿನಿಂದ ತಿನಸು ತಯಾರಿಯ ಸ್ಪರ್ಧೆ ಏರ್ಪಡಿಸಬೇಕು. ಇದರಲ್ಲಿ ಸಿಹಿ ತಿಂಡಿ, ಕರಿದ ತಿಂಡಿ, ಉಪಾಹಾರಕ್ಕೆ ಸಲ್ಲಬಹುದಾದದ್ದು, ಮಾರುಕಟ್ಟೆ ಸಾಧ್ಯತೆ ಇರುವಂಥದ್ದು, ಕ್ಯಾಟರಿಂಗಿನವರನ್ನು ಸೆಳೆಯಬಹುದಾದದ್ದು, ಶಿಶು ಆಹಾರ- ಹೀಗೆ ಬೇರೆಬೇರೆ ವಿಭಾಗಗಳನ್ನು ಮಾಡಿಕೊಳ್ಳಬಹುದು.
ಸಕಾಲದಲ್ಲಿ ಬಾಕಾಹು ತಯಾರಿ ಆಗದಿದ್ದರೆ, ಹೊರಗಿನಿಂದ ತರಿಸಿ ಒದಗಿಸಬಹುದು. ಮುಂಚಿತವಾಗಿ ಹೆಸರು ನೊಂದಾಯಿಸಿ, ಹಬ್ಬದ ದಿನ ಸ್ಪರ್ಧಿಗಳು ಹೊಸ ಪಾಕಗಳನ್ನು ಮಾಡಿ ತರಬೇಕು. ಆಯಾಯಾ ಪಾಕವಿಧಾನಗಳನ್ನೂ ಅವರು ಬರೆದು ತರಬೇಕು. ಇವರ ತಯಾರಿಗಳನ್ನು ಊರವರು ಆರಾಮವಾಗಿ ನೋಡುವಷ್ಟು ಸ್ಥಳಾವಕಾಶ ಏರ್ಪಡಿಸಬೇಕು.
ಊರ ಮಹಿಳೆಯರನ್ನು ಹಬ್ಬದಲ್ಲಿ ಬಾಳೆಕಾಯಿ ಹಿಟ್ಟಿನ (ಮುಖ್ಯವಾಗಿ) ಮತ್ತು ಬಾಳೆಕಾಯಿ- ಹಣ್ಣಿನ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ಪ್ರೇರೇಪಿಸಬೇಕು. ಅದು ಬರೇ ಚಿಪ್ಸ್ ಮಾರಾಟ ಆಗಬಾರದು. ವೈವಿಧ್ಯಕ್ಕೆ ಒತ್ತು ಬೇಕು. ಪ್ರದರ್ಶನ- ಮಾರಾಟಕ್ಕಾಗಿ ಒಂದಷ್ಟು ಉತ್ಪನ್ನಗಳನ್ನು ದೂರದಿಂದ ತರಿಸಿಕೊಳ್ಳುವುದೂ ಒಳ್ಳೆಯದೇ. ಆದರೆ ಸ್ಥಳೀಯ ತಯಾರಿಗಳಿಗೆ ಆದ್ಯತೆ ಕೊಡಬೇಕು. ಮಾರಾಟಕ್ಕಿಡುವ ಉತ್ಪನ್ನಗಳಲ್ಲಿ ಎಣ್ಣೆ ತಿಂಡಿ, ಆಗಾಗ ತಿನ್ನಬೇಕಾದ ತಯಾರಿಗಳು ಮಾತ್ರವಲ್ಲ. ದೀರ್ಘ ತಾಳಿಕೆ ಇದ್ದು, ಮಾರಾಟಾವಕಾಶ ಇರುವವುಗಳ ಕಡೆಗೂ ಹೆಚ್ಚು ಗಮನ ಬೇಕು. ತಾಳಿಕೆಯ ದೃಷ್ಟಿಯಿಂದಲೇ ಎರಡು ವಿಭಾಗ ಮಾಡಬಹುದು.
ಅರಿವು ಮೂಡಿಸುವ ಹಬ್ಬ ಕೇವಲ ತತ್ಕಾಲಕ್ಕೆ ನಾಲಿಗೆ- ಹೊಟ್ಟೆಗಳನ್ನು ತೃಪ್ತಿ ಪಡಿಸಿದರೆ ಸಾಲದು. ಮನೆಮನೆಗಳಲ್ಲಿ ಇದರ ಬಳಕೆ- ಇಂಟರ್ನಲ್ ಕನ್ಸಂಪ್ಶನಿಗೆ- ಪ್ರೇರಣೆ ಕೊಡಬೇಕು. ಈ ದಾರಿಯಲ್ಲಿರುವ ಸವಾಲುಗಳು, ಸಂಶೋಧನೆಯ ಒತ್ತು ಯಾವ ಬಗ್ಗೆ ಇರಬೇಕು, ಈ ಆಂದೋಳನವನ್ನು ಹೇಗೆ ಮುನ್ನಡೆಸಬೇಕು ಎನ್ನುವ ಬಗ್ಗೆ ವಿಚಾರಮಂಥನ ಅತ್ಯವಶ್ಯ. ಭಾಷಣ, ಪೀಪೀಟಿ ಪ್ರದರ್ಶನ ನಡೆಯಲಿ- ಆದರೆ ಅನುಭವಿಗಳದು ಇರಲಿ. ಬರೇ ಗೂಗಲ್ ಮಾವನ ಎರವಲು ಸರಕು ತರುವವರಿಗೆ ಮಣೆ ಹಾಕದಿರುವುದು ಕೃಷಿಕರ ಕೆಲಸ!
ಒಂದು ವಿಷಯ ಸಂಘಟಕರು ನೆನಪಿಡಬೇಕು. ತಿನ್ನಲು ಸಿಕ್ಕರೆ, ಆಕರ್ಷಕ ಮಳಿಗೆ, ಪ್ರದರ್ಶನ ಇದ್ದರೆ, ನಮ್ಮ ಬಹುತೇಕ ಪ್ರೇಕ್ಷಕ ಕೃಷಿಕರು ವಿಚಾರ ಸಂಕಿರಣದತ್ತ ಸುಳಿಯುವುದಿಲ್ಲ. ಈ ಸವಾಲನ್ನು ಗೆಲ್ಲುವ ಬಗೆ ಹೇಗೆ? ಊರವರು ಈ ಬಗ್ಗೆ ಪ್ರತ್ಯೇಕ ಉಪಾಯ ಬೇಕು.
ನಿಮ್ಮೂರಿನಲ್ಲಿ ಕೃಷಿಪ್ರೀತಿಯ 'ಯೂ ಟ್ಯೂಬ್' ವಿಡಿಯೋ ನಿರ್ಮಾಪಕ ತರುಣರಿದ್ದರೆ ಅವರನ್ನು ಮುಂಚಿತವಾಗಿ ಭೇಟಿಯಾಗಿ ಸಹಕಾರ ಕೋರಬಹುದು. ಬಾಕಾಹು ಹಬ್ಬದಲ್ಲಿ ಏನೇನು ಇರುತ್ತೆ ಎಂಬುದರ ಝಲಕ್ ಹೊತ್ತ ಕಿರು ವಿಡಿಯೋಗಳನ್ನು ತಿಂಗಳ ಹಿಂದಿನಿಂದಲೇ ಬಿತ್ತರಿಸಬಹುದು. ಬಹುಮಾನ ಪಡೆದ ಪಾಕಗಳನ್ನು ಪುನಃ ತಯಾರಿಸಿ ಅದರ ವಿಡಿಯೋಗಳನ್ನೂ ಸಾಮಾಜಿಕ ಮಾಧ್ಯಮಗಳಿಗೆ ಏರಿಸಬಹುದು. ಮುಖ್ಯವಾಹಿನಿ ಮಾಧ್ಯಮಗಳು ಆಸಕ್ತಿ ತೆಗೆದುಕೊಳ್ಳುವಂತೆ ಪ್ರೇರೇಪಿಸಬಹುದು.
ಒಟ್ಟಿನಲ್ಲಿ ಈ ಥರದ ಹಬ್ಬಗಳು ರೈತ ಸಮುದಾಯಕ್ಕೆ ನಾಲಿಗೆ ರುಚಿ ತೋರಿಸಿಕೊಂಡೇ ಆದಾಯ ವರ್ಧನೆ, ಸಂಕಟಹರಣದ ಮಾರ್ಗಗಳತ್ತ ಬೊಟ್ಟು ಮಾಡಬೇಕು. ಇದು ತುಂಬ ತಾಳ್ಮೆ, ಪೂರ್ವಸಿದ್ಧತೆ, ಟೀಮ್ ವರ್ಕ್ ಮತ್ತು ಜವಾಬ್ದಾರಿಗಳ ಹಂಚಿಕೆ ಬೇಡುವ ಕೆಲಸ.
ಏಕೆ ನಿಮ್ಮ ತಾಲೂಕಲ್ಲಿ ನಿಕಟಭವಿಷದಲ್ಲಿ ಒಂದು ಪ್ರಾಮಾಣಿಕ ಯತ್ನ ಮಾಡಬಾರದು? ಕೋವಿಡ್ ಆತಂಕ ಇದೆ, ನಿಜ. ಆದರೀಗ ಪರಸ್ಪರ ಭೇಟಿ ಆಗದೆಯೂ ಸಮಾಲೋಚನೆ, ಪ್ಲಾನಿಂಗ್ ಸಾಧ್ಯ ತಾನೇ? ಈಗಲೇ ಸನ್ನಾಹಕ್ಕೆ ತೊಡಗಿದರೆ ಮಹಾಮಾರಿಯ ಆತಂಕ ಕುಗ್ಗಿದೊಡನೆಯೇ ಹಬ್ಬ ಆಚರಿಸಬಹುದು. ಏನಂತೀರಾ?
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key words: Banana Flour, Dry Banana Flour, Banana Powder, Bakahu, ಬಾಳೆಕಾಯಿ ಹುಡಿ, ಬಾಕಾಹು ಅಭಿಯಾನ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ