ಹೌದು ವರ್ತಮಾನದಲ್ಲಿ ಐವತ್ತರಿಂದ ಎಪ್ಪತ್ತು ವರ್ಷ ಪ್ರಾಯದವರು ಒಂದು ವಿಶಿಷ್ಟವಾದ ಅನುಭವವನ್ನು ಪಡೆದಂಥವರು. ಯಾಕೆಂದರೆ ಇವರು ತಮ್ಮ ಬಾಲ್ಯದಲ್ಲಿದ್ದಂತಹ ಬಡತನ, ವಿದ್ಯಾಭ್ಯಾಸದ ಕಷ್ಟ, ಸೌಕರ್ಯಗಳ ಕೊರತೆ, ಇವತ್ತಿನ ಯಾವುದೇ ನಾಗರಿಕತೆ ಎನಿಸಿದಂತಹ ವ್ಯವಸ್ಥೆಯ ಅಲಭ್ಯತೆ ಹೀಗೆ ಅನೇಕ ವಿಷಯಗಳಿಗೆ ಸಾಕ್ಷಿ ಈ ವಯೋಮಾನದವರು. ಹಿಂದೆ ಕಾಯ ಬಲದಿಂದಲೇ ಹೆಚ್ಚಿನ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಯಂತ್ರಗಳ ಉಪಯೋಗ ಇಲ್ಲವೆಂದೇ ಹೇಳುವಷ್ಟು ವಿರಳ. ನಡೆದುಕೊಂಡೇ ಹತ್ತಾರು ಮೈಲುಗಳನ್ನು ಕ್ರಮಿಸುತ್ತಿದ್ದೆವು. ಜತೆಗೆ ಸುಸ್ತಾದರೂ ಸಹಿಸುವಷ್ಟು ಸಾಮಾನು ಸರಂಜಾಮುಗಳೊಡನೆ. ನಡೆಯುವಾಗಲೂ ಅನುಭವಗಳ ಮೂಟೆಗಳೇ ನಮ್ಮ ಬೆನ್ನೇರುತ್ತಿದ್ದವು. ಅಲ್ಲಲ್ಲಿ ಗದ್ದೆ ಕೆಲಸ, ಉಳುಮೆ, ಕೆಸರು, ಸಂದಿ, ಪಾರ್ದನಗಳು, ಅಡಿಕೆ ತೋಟದ ಸಾಲು ಮರಗಳು, ಗದ್ದೆ ಹುಣಿಯ ಮೇಲಿನ ತೆಂಗಿನ ಮರದ ಸಾಲುಗಳು, ಭತ್ತದ ನಾಟಿ ಇತ್ಯಾದಿ ಮೈ ಮನ ಮುದಗೊಳುವ ಚಿತ್ರಣಗಳೇ. ವಾಹ್ ಅದೆಷ್ಟು ಸುಂದರ. ನಡಿಗೆಯೂ ಒಂದು ಅನುಭವವೇ.
ಸ್ವಾನುಭವವನ್ನೇ ಹೇಳಬೇಕಾದರೆ ನಾವು ಅಳಂಬದಲ್ಲಿರುವಾಗ ಯಾವುದೇ ಮನೆಬಳಕೆಯ ವಸ್ತುಗಳು ಬೇಕಾದರೂ ನಾಲ್ಕು ಕಿ.ಮೀ. ನಡೆಯಲೇಬೇಕು. ಆದ್ದರಿಂದ ನಮಗೆ ಅಂಗಡಿಗಳಿಗೆ ಹೋಗುವಾಗಲೂ ಅಂಗಡಿಯಿಂದ ಬರುವಾಗಲೂ ತಲೆಹೊರೆಯೆಂಬುದು ಅನಿವಾರ್ಯ. ವ್ಯತ್ಯಾಸವಿಷ್ಟೆ ತೂಕ ಇಪ್ಪತ್ತು ಕೆ.ಜಿ.ಯೋ ನಲ್ವತ್ತು ಕೆ.ಜಿ.ಯೋ ಎಂದು. ಆದರೂ ನಮಗೆ ಜೀವನದಲ್ಲಿ ಜಿಗುಪ್ಸೆ ಎಂಬುದು ಇರಲಿಲ್ಲ. ತಲೆಹೊರೆ ಇರಲಿ ಬರಿಗೈ ಇರಲಿ ನಡೆಯುವ ಪ್ರಕ್ರಿಯೆ ಅನಿವಾರ್ಯ ಎಂದು ಮನಸ್ಸು ಒಪ್ಪಿಕೊಂಡಿದ್ದರಿಂದ ವ್ಯವಹಾರಗಳು ಅದರದ್ದೇ ಆದಂಥ ವೇಗದಲ್ಲಿ ಗೊಂದಲಗಳಿಲ್ಲೆದೆ ನಡೆಯುತ್ತಿದ್ದವು. ತಲೆ ಹೊರೆ ಎನ್ನುವುದು ನಮಗೆ ಆಗ ಸಹಜವಾದ ಕ್ರಿಯೆ. ಗೊಬ್ಬರ ಹೊರುವುದು, ಮಣ್ಣು ಹೊರುವುದು, ಸೌದೆ ಸೊಪ್ಪು ಹುಲ್ಲು ಹೊರುವುದು ಅಡಿಕೆ ತೆಂಗಿನಕಾಯಿ ಹೊರುವುದು ಇವೇ ಮುಂತಾದ ಹತ್ತು ಹಲವು ಕೆಲಸಗಳನ್ನು ಇಡೀ ದಿವಸ ಮಾಡಿದರೂ ಸೋತುಹೋಗದು ಮಾತ್ರವಲ್ಲ ನಾಳೆ ಎಂಬ ಕಲ್ಪನೆಗೆ ಜೀವ ತುಂಬತ್ತಿದ್ದುದೂ ಈ ಕಾಯಕವೇ ಆಗಿತ್ತು. ವಾಹನಗಳಾಗಲಿ, ದೂರವಾಣಿಗಳಾಗಲಿ, ಕೊನೇಪಕ್ಷ ಸೈಕಲ್ ಕೂಡ ಅಪರೂಪವಾಗಿದ್ದಂಥ ಆ ಕಾಲ. ಇವತ್ತು ಕಲ್ಪನೆಗೂ ಕಷ್ಟ. ಭಾರಿ ಶ್ರೀಮಂತರ ಮನೆಗಳಲ್ಲಿ ಎತ್ತಿನ ಗಾಡಿ ಇದ್ದರೆ ಅದೇ ವಿಶೇಷ. ರೇಡಿಯೋ ಅಂತು ದೂರದ ಮಾತು.
ನೆಂಟರ ಮನೆಗೆ ಹೋದರೆ ಹತ್ತು ಹದಿನೈದು ದಿನ ಇದ್ದು ಬರುವುದು ವಾಡಿಕೆ. ಸಂಬಂಧಿಕರ ಮನೆಗಳಿಗೆ ಹೋಗಿ ಬರುವುದು ಕೂಡ ಆಗಿನ ಒಂದು ಮನೋರಂಜನೆಯೇ. ಮನೋರಂಜನೆ ಎನ್ನುವಾಗ ಆಗಲೂ ಹಲವಾರು ಮಾಧ್ಯಮಗಳಿದ್ದವು. ಬಯಲಾಟಗಳು, ನಾಟಕಗಳು, ಹರಿಕಥೆಗಳು, ಭಜನೆಗಳು, ಜಾತ್ರೆ ರಥೋತ್ಸವಗಳು, ಸಣ್ಣ ಸಣ್ಣ ಸೈಕಲ್ ಸರ್ಕಸ್ ಗಳು, ಕಂಬಳಗಳು, ಅಪರೂಪಕ್ಕೆ ಸಿನೆಮಾಗಳು, ಕಬಡ್ಡಿ, ಕೊಕ್ಕೋ, ಲಗೋರಿ, ಕುಟ್ಟಿದೊಣ್ಣೆ ಇತ್ಯಾದಿ ಇತ್ಯಾದಿ.
ಬೇಸಿಗೆಯ ರೀತಿ ಒಂದಾದರೆ ಮಳೆಗಾಲದಲ್ಲಿ ಇನ್ನೊಂದು. ಶಾಲೆಗೆ ಹೋಗಲು ಯಾರ್ಯಾರ ಮನೆಗಳಲ್ಲಿದ್ದು ಹೋಗತ್ತಿದ್ದವರೆ ಅಧಿಕ. ಯಾಕೆಂದರೆ ಪ್ರತಿ ಹಳ್ಳಿಗಳಲ್ಲಿ ಈಗಿನಂತೆ ಶಾಲೆಗಳಿಲ್ಲದಿರುವುದರಿಂದ ಹಾಗೂ ಅಲ್ಲಲ್ಲಿ ಇರುವ ನದಿ ತೋಡುಗಳಿಗೆ ಸೇತುವೆಗಳಿಲ್ಲದ್ದರಿಂದ ಹಲವರ ವಿದ್ಯಾಭ್ಯಾಸ ಮೊಟಕಾದರೆ ಅದೃಷ್ಟವಿದ್ದವರಿಗೆ ಶಾಲೆ ಕಾಲೇಜು ಎನ್ನುವ ಪರಿಸ್ಥಿತಿ. ಇನ್ನು ಶಾಲೆಯಾದರೊ ಅದು ಇನ್ನೊಂದು ರೀತಿ. ಮಳೆಗೆ ಛತ್ರಿಯ ಬದಲಿಗೆ ಕೊರಂಬು, ಹೆಗಲಿಗೆ ವಸ್ತ್ರದ ಚೀಲ, ಕೈಯಲ್ಲಿ ಬುತ್ತಿ, ಸಮವಸ್ತ್ರವಿಲ್ಲದ ಬಟ್ಟೆ ಬರೆ, ಬುತ್ತಿಯೂ ಇಲ್ಲದೆ ಹಸಿವಿನಲ್ಲಿರುವ ಮಕ್ಕಳು, ಹಸಿವಿನಿಂದಾಗಿ ದುರ್ಬಲತೆಯಿಂದ ಆಟೋಟಗಳನ್ನೂ ಕಳಕೊಳ್ಳುವ ವಿದ್ಯಾರ್ಥಿಗಳು, ಇದೆಲ್ಲವೂ ಆಗಿನ ಕಾಲಕ್ಕೆ ಸಹಜತೆಯೇ ಎನಿಸಿತ್ತು.
ಅದೇ ರೀತಿ ಹೆಚ್ಚಿನ ಎಲ್ಲ ಮನೆಗಳೂ ಅಡಿಕೆ ಸೋಗೆ ಅಥವಾ ಮುಳಿಯ ಹುಲ್ಲಿನ ಮಾಡುಗಳಿಂದಲೇ ಇರುತ್ತಿದ್ದವು. ಅವೆಲ್ಲವೂ ಛಾವಣಿ ಮಾಡುವವನ ಕೈ ಚಳಕವನ್ನವಲಂಬಿಸಿರುತ್ತಿದ್ದುದರಿಂದ ಹೆಚ್ಚಿನ ಮಾಡುಗಳು ಸೋರದೇ ಇರುತ್ತಿರಲಿಲ್ಲ. ಸಾಧಾರಣ ಪ್ರತಿಯೊಂದು ಮನೆಯಲ್ಲೂ ಸೋರುವಲ್ಲಿ ಇಡುವ ಪಾತ್ರೆ ಮತ್ತು ಸೊಳ್ಳೆಗಳ ನಿವಾರಣೆಗೆ ಅಡಿಕೆ ಸಿಪ್ಪೆಯನ್ನು ಬಳಸಿ ಹೊಗೆ ತಯಾರು ಮಾಡುವ ಮಡಕೆ ಇದ್ದೇ ಇರುತ್ತಿತ್ತು. ಹೆಂಚಿನ ಮನೆಗಳು ಸಿರಿತನದ ಪ್ರತೀಕವಾಗಿದ್ದವು. ತಾರಸಿ ಮನೆಗಳಂತು ಇಲ್ಲವೇ ಇಲ್ಲವೆನ್ನಬಹುದು. ಆದರೂ ಅಲ್ಲೊಂದು ಸುಖವಿತ್ತು ಎನ್ನುವುದೇ ವಿಶೇಷ.
ನಾನು ಒಂದನೇ ತರಗತಿಗೆ ಬೆಳ್ತಂಗಡಿ ಸೋದರತ್ತೆ ಮನೆಯಲ್ಲಿ ಶಾಲೆಗೆ ಹೋಗಲಿಕ್ಕಿದ್ದೆ. ಆಗ ವಾಹನಗಳು ಎಷ್ಟು ಅಪರೂಪವೆಂದರೆ ಗುರುವಾಯನಕೆರೆ ದಾಟಿ ಬಂದೊಡನೆ ಒಂದು ಏರು ಮಾರ್ಗವಿದೆ ಅಲ್ಲಿ ಬರುವ ಬಸ್ಸಿನ ಶಬ್ದ ಬೆಳ್ತಂಗಡಿಯಲ್ಲಿರುವ ನಮಗೆ ಕೇಳಿಸುತ್ತಿತ್ತು. ಇವತ್ತು ಇದನ್ನು ಯಾರಾದರು ನಂಬಲು ಸಾಧ್ಯವೇ? ಹಾಗಿದ್ದ ಮೇಲೆ ಈಗಿನಂತೆ ಟ್ರಾಫಿಕ್ ಜಾಮ್ ಎನ್ನುವಂಥ ಕಲ್ಪನೆ ಕೂಡ ಆ ದಿನಗಳಲ್ಲಿ ಬರಲು ಸಾಧ್ಯವೇ? ಪರಿಸರ ಮಾಲಿನ್ಯವೆಂಬುದಿಲ್ಲ, ತ್ಯಾಜ್ಯಗಳ ವೀಲೆವಾರಿ ಅಥವಾ ಸಂಗ್ರಹದ ಸಮಸ್ಯೆಗಳಿರಲಿಲ್ಲ, ನಾನಾ ತರಹದ ಖಾಯಿಲೆ ಅತಿಯಾದ ಆಸ್ಪತ್ರೆ ಖರ್ಚು ಇರಲೇ ಇಲ್ಲ. ಬಂದರೂ ಸಣ್ಣ ಸಣ್ಣ ಶೀತ ಜ್ವರ ಕೆಮ್ಮು ಮುಂತಾದವು. ಅದೆಲ್ಲ ಕಷಾಯದಲ್ಲೋ ಅಥವಾ ಸ್ಥಳೀಯ ವೈದ್ಯರಿಂದಲೋ ಕಡಿಮೆಯಾಗುತ್ತಿತ್ತು. ಬಹಳ ದೊಡ್ಡ ಖಾಯಿಲೆಗಳಾದರೆ ಆಯುಷ್ಯವಿರುವಲ್ಲಿವರೆಗೆ ಬದುಕು ಲಕ್ಷಗಳ ವೆಚ್ಚವಿಲ್ಲದೆ.
ಇನ್ನು ಶಾಲೆಗಳಲ್ಲಿ ಓದು ಬರಹದ ಜತೆಗೆ ಬದುಕಿಗೆ ಬೇಕಾದ ನೀತಿ ಪಾಠಗಳನ್ನೂ ಕಲಿಸಿಕೊಡುವ ವ್ಯವಸ್ಥೆ ಇತ್ತು ಮಾತ್ರವಲ್ಲ ಮನೆ ಮನೆಗಳಲ್ಲೂ ನೀತಿ ನಿಯಮ ಧರ್ಮ ಇದರ ಬಗ್ಗೆ ಹಿರಿಯರಿಂದ ನೋಡಿ ತಿಳಿದುಕೊಳ್ಳುವಂಥ ಆದರ್ಶವೂ ಇತ್ತು. ಆದ್ದರಿಂದ ಮಕ್ಕಳು ವಿದ್ಯಾಭ್ಯಾಸದ ಜತೆಗೆ ಬದುಕಿಗೆ ಬೇಕಾದ ಮಾನವೀಯತೆಗಳನ್ನೂ ಕಲಿಯುತ್ತಿದ್ದರು. ಎಲ್ಲರ ಮನೆಗಳಲ್ಲೂ ಸಾಯಂಕಾಲ ದೇವರ ಸ್ತೋತ್ರಗಳನ್ನು, ಭಜನೆಗಳನ್ನು ಕಡ್ಡಾಯವಾಗಿ ಹೇಳಲೇಬೇಕಿತ್ತು. ಯಾವಾಗ ಆಂಗ್ಲ ಮಾಧ್ಯಮವೆಂಬ ಶಿಕ್ಷಣ ಪದ್ಧತಿ ಜಾರಿಗೆ ಬಂತೋ ಆವಾಗಲೇ ಸರಕಾರಿ ಶಾಲೆಗಳು ಮೂಲೆ ಪಾಲಾಗಲಾರಂಭಿಸಿದವು. ಜತೆಗೆ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಸಮಯ ಬೇಕಾಗಿರುವುದರಿಂದ ಸಾಯಂಕಾಲದ ಸಾತ್ವಿಕ ಚಿಂತನೆಗಳೂ ಮಾಯವಾದವು. ಸರಿಯೋ ತಪ್ಪೊ ಪರಿಣಾಮ ಮಾತ್ರ ಇವತ್ತಿನ ವರ್ತಮಾನ. ಆವತ್ತು ಬಡತನವಿತ್ತು, ಅವಕಾಶಗಳು ಇರಲೇ ಇಲ್ಲವೆನ್ನುವಷ್ಟು ಕಡಿಮೆ ಇತ್ತು. ಇವತ್ತು ಅದ್ಯಾವುದೂ ಸಮಸ್ಯೆಯೇ ಅಲ್ಲ. ಆದಾಯ ಮೂಲಗಳೂ ಸಾವಿರಾರು, ವೆಚ್ಚ ಮಾಡಲು ದಾರಿಗಳೂ ಸಾವಿರಾರು. ಅಂದು ನಾವು ತಿಂಗಳೊಂದರಲ್ಲಿ ದುಡಿಯುವಂಥದ್ದನ್ನು ಇಂದು ಕೇವಲ ಗಂಟೆಗಳಲ್ಲೇ ದುಡಿಯುತ್ತಾರೆ ಮಕ್ಕಳು.
ನಾನು ಬಡತನವಿರುವ ಆ ದಿನಗಳಲ್ಲಿ ದಿನ ಒಂದಕ್ಕೆ ಐದು ರೂಪಾಯಿಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ತಿಂಗಳಿಗೆ ಮೂವತ್ತು ದಿನ ಕೆಲಸ ಮಾಡಿದರೂ ನೂರ ಐವತ್ತಕ್ಕಿಂತ ಹೆಚ್ಚು ಸಿಗುತ್ತಿರಲಿಲ್ಲ. ಆದರೆ ಇಂದು ಅದೇ ನಾನು ದಿನ ಒಂದಕ್ಕೆ ಅಂದಿನ ಮುನ್ನೂರು ಪಟ್ಟು ಅಂದರೆ ಒಂದುವರೆ ಸಾವಿರ ರೂಪಾಯಿಯಷ್ಟು ದುಡಿಯಬಹುದು. ಒಬ್ಬನೇ ವ್ಯಕ್ತಿ ಆತನ ಜೀವಿತಾವಧಿಯಲ್ಲಿ ಸೀಮಿತ ವಿದ್ಯೆಯೊಡನೆ ಇಷ್ಟೊಂದು ಬದಲಾವಣೆಗೆ ಸಾಕ್ಷಿಯಾಗಿ ಸ್ಪಂದಿಸುತ್ತಿರಬೇಕಾದರೆ ಆತ ಐವತ್ತರಿಂದ ಎಪ್ಪತ್ತರೊಳಗಿನ ವಯೋಮಾನದವನಾಗಿರಬೇಕು. ಯಾವಾಗ ಆದಾಯ ಮೂಲಗಳು ಹೆಚ್ಚಾಗತೊಡಗಿದವೋ ಆವಾಗ ಖರ್ಚಿನ ದಾರಿಗಳೂ ಸಹಜವಾಗಿ ಹೆಚ್ಚಾಗಲೇ ಬೇಕು. ಇಲ್ಲದಿದ್ದರೆ ಕ್ರೋಢೀಕರಣವಾಗಿ ಅಪಾಯವೇ ಆಗುವದು.
ಹೇಗೆ ಅಣೆಕಟ್ಟುಗಳಲ್ಲಿ ಧಾರಣ ಶಕ್ತಿಗಿಂತ ಹೆಚ್ಚಿನ ನೀರು ಸಂಗ್ರಹವಾದರೆ ಅಣೆಕಟ್ಟಿಗೆ ಅಪಾಯವಿದೆಯೋ ಹಾಗೆ. ವರುಷಕ್ಕೊಂದು ಬಟ್ಟೆಬರೆ ಖರೀದಿಸುವುದೇ ಕಷ್ಟವಾಗಿದ್ದ ಆ ಕಾಲಕ್ಕೆ ತಿಂಗಳಿಗೆ ಹತ್ತಾರು ಬಟ್ಟೆಬರೆಗಳನ್ನು ಅಥವಾ ಇನ್ನೂ ಹೆಚ್ಚು ಖರೀದಿಸುವ ಶಕ್ತಿ ಬಂದಂಥ ಈ ಕಾಲವನ್ನು ಸಮೀಕರಣಗೊಳಿಸುವುದೂ ಕಷ್ಟವೇ. ಒಂದು ಜತೆ ಚಪ್ಪಲಿ. ಅದು ಹರಿದ ಮೇಲೆ ರಿಪೇರಿ. ಇನ್ನು ರಿಪೇರಿಯೂ ಆಗದೆಂದ ಮೇಲೆ ಎಸೆಯುವುದು. ನಂತರ ಸ್ವಲ್ಪ ಸಮಯ ಬರಿಕಾಲಿನ ನಡೆ. ಮತ್ಯಾವಾಗಲೋ ಹೊಸ ಚಪ್ಪಲಿ ಖರೀದಿ. ಆ ದಿನ ಚಪ್ಪಲಿಯ ತೊಡುಗೆಯೇ ಒಂದು ಸಂಭ್ರಮ. ಕೊಳೆಯಾದರೆ, ಮಣ್ಣಾದರೆ ತೊಳೆದು ಒಣಗಿಸಿಡುವ ಪರಿ. ಚಪ್ಪಲಿ ಹಾಳಾಗಬಾರದೆಂದು ತೋಟಕ್ಕಾಗಲಿ, ಸೊಪ್ಪಿನ ಗುಡ್ಡೆಗಾಗಲಿ ಬರೆಕಾಲಿನ ಸವಾರಿ. ಇದರ ಖುಷಿ ಇಂದು ಹತ್ತಾರು ಜತೆ ಚಪ್ಪಲಿ ಇರುವಾಗ ಸಾಧ್ಯವೇ?
ಆವಾಗಿನ ಖರೀದಿಗಳು ಅನಿವಾರ್ಯತೆಗಷ್ಟೇ ಇದ್ದರೆ ಇಂದಿನ ಖರೀದಿಗಳು ಅನಿವಾರ್ಯತೆಗಿಂತ ಜಾಸ್ತಿ ಖಯಾಲಿಗಳೇ ಎನಿಸುವುದು ನನ್ನಂಥವರಿಗೆ. ಹಾಗೆಂದು ನಾನು ಕೂಡ ಅಂಥ ಖಯಾಲಿಯವನೇ. ಕೈಯಲ್ಲಿ ದುಡ್ಡಿದ್ದರೆ ಎಲ್ಲವೂ ಬೇಕೆನ್ನುವವನೇ. ಯಾಕೆಂದರೆ ನಾವು ಕಾಲದಿಂದ ಕಾಲಕ್ಕೆ ಹೊಂದಾಣಿಕೆಯೊಡನೆ ಬಾಳಬೇಕು. ಅದು ಬಿಟ್ಟು ನಮ್ಮ ಕಾಲದಲ್ಲಿ ಹಾಗಿತ್ತು ಹೀಗಿತ್ತು ಎಂದು ತಟಸ್ಥರಾದರೆ ನಮ್ಮ ಬದುಕಿನ ಬಂಡಿ ಹಿಂದೆ ಬೀಳುತ್ತದೆ ಅಥವಾ ನಿಂತೂ ಬಿಡಬಹುದು.
ಆದಾಯ ಎನ್ನುವಾಗ ನಿಯತ್ತು ಎನ್ನುವುದೂ ಅದರೊಡನೆ ಇರಬೇಕು. ಆಗಲೇ ಅದಕ್ಕೆ ಬೆಲೆ. ಕಾಯಕ್ಕೆ ಸಂಬಂಧ ಪಟ್ಟದ್ದೊ ಬುದ್ಧಿಗೆ ಸಂಬಂಧ ಪಟ್ಟದ್ದೊ ಅಂತು ಪರೋಪಕಾರದ ಜತೆ ನಿಸ್ವಾರ್ಥತೆ ಸೇರಿಕೊಂಡಾಗ ಮಾತ್ರ ಆದಾಯದ ಮೂಲ ಶುದ್ಧವಾಗಿರುತ್ತದೆ. ಅನ್ಯ ಮಾರ್ಗದಿಂದ ಬಂದ ಯಾವ ಆದಾಯವೇ ಇರಲಿ ಅದು ತ್ಯಾಜ್ಯವೇ. ಅಂಥ ತ್ಯಾಜ್ಯವೇ ಹೆಚ್ಚಾಗಿ ಇಂದು ಪರಿಸರ, ವ್ಯವಹಾರ ಹದಗೆಡುತ್ತದೆ. ಅಂದು ವಾಮ ಮಾರ್ಗಗಳೂ ಇರಲಿಲ್ಲ ಇದ್ದರೂ ಬಹಳ ಕಡಿಮೆ. ಆದ್ದರಿಂದ ತ್ಯಾಜ್ಯವೂ ಕಡಿಮೆ. ಹಾಗೆಯೇ ಆಹಾರಗಳೂ ಬಹಳ ಶುದ್ಧವಾಗಿದ್ದವು. ತರಕಾರಿಗಳಾಗಲಿ ಹಣ್ಣು ಹಂಪಲಾಗಲಿ ಅದಕ್ಕೆ ಅದರದ್ದೇ ಆದ ರುಚಿ ಇರುತ್ತಿತ್ತು ಹಾಗೂ ಸತ್ವವೂ ಇರುತ್ತಿತ್ತು. ಇಂದು ಅದ್ಯಾವ ರುಚಿಯೂ ಇಲ್ಲ ಸತ್ವವೂ ಇಲ್ಲ. ಬದಲಾಗಿ ಕ್ರಿಮಿನಾಶಕದ ಅತಿಯಾದ ಬಳಕೆಯಿಂದ ತಿಂದದ್ದೆಲ್ಲವೂ ವಿಷವಾಗಿ ಪರಿಣಮಿಸಿ ಅನಾರೋಗ್ಯದ ಫಲವನ್ನು ಪಡೆಯುವುದು ನಿತ್ಯ ಸತ್ಯ. ಮತ್ತದೇ ವರ್ತುಲ.. ಆಸ್ಪತ್ರೆ, ವೈದ್ಯರ ಭೇಟಿ, ಲಕ್ಷಾಂತರ ಹಣ ವ್ಯಯ, ಕಾಲ ವ್ಯಯ.. ಆರೋಗ್ಯ ಸುಧಾರಿಸಿ ಮನೆಗೆ ಬಂದರೆ ಪುನಃ ವಿಷಾಹಾರ ಸೇವನೆ ಬಾರದಿದ್ದರೆ ಪರಲೋಕ ಸಂಚಾರದ ವೇದನೆ. ಹಿಂದೆ ಸಾವಿರಾರು ವರ್ಷಗಳಿಂದ ಆದಂಥ ಬದಲಾವಣೆಗಳು ಇತ್ತೀಚಿನ ಐವತ್ತು ವರ್ಷಗಳಲ್ಲಿ ಆಗಿವೆ ಎಂದರೆ ನಮ್ಮಂಥವರು ಅದೆಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವುದು ಗಂಭೀರ ಪ್ರಶ್ನೆಯೇ ತಾನೆ.
ಪರಿವರ್ತನವಿದು ಈ ಜಗದ ನಿಜ ನಿಯಮವು
ಎಂದಿಗೂ ಇರಲೆಮಗೆ ಇಂಥ ಸತ್ಯದ ಅರಿವು
ಹೊಂದಿ ಬಾಳುವ ಮನಸು ಇರುವುದಾದರೆ ಎಮಗೆ
ಸುಖ ಶಾಂತಿ ನೆಮ್ಮದಿಯು ಅನುಕ್ಷಣವು ಅನುದಿನವು
**********
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ
Key Words: Changing Life, Barefoot walking, Changing time, A look back with changing time, ಕಾಲದ ನಡಿಗೆ, ಬದಲಾದ ಬದುಕು,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ