ಹದಿಹರೆಯದ ಹೆಣ್ಣುಮಕ್ಕಳಿಗೆ ಆಗಾಗ್ಗೆ ವೈದ್ಯಕೀಯ ತಪಾಸಣೆಯ ಅಗತ್ಯವಿದೆಯೇ ಎನ್ನುವ ಪ್ರಶ್ನೆಗೆ ಖ್ಯಾತ ಸ್ತ್ರೀರೋಗ ತಜ್ಞೆ ಡಾ. ಹೇಮಾ ದಿವಾಕರ್ ಅವರು ಏನು ಹೇಳುತ್ತಾರೆ ನೋಡೋಣ ಬನ್ನಿ.
12ರಿಂದ 18 ವರ್ಷ ವಯಸ್ಸಿನೊಳಗಿನ ಮಕ್ಕಳು ಹದಿಹರೆಯದವರು ಅಥವಾ ಕೌಮಾರ್ಯ ಅವಸ್ಥೆಯವರಾಗಿರುತ್ತಾರೆ. ಅವರಲ್ಲಿ ದೈಹಿಕ ಬೆಳವಣಿಗೆಗಳು ಬೇಗನೇ ಆಗುತ್ತಿರುತ್ತವೆ. ಆದರೆ ಮಾನಸಿಕ ಬೆಳವಣಿಗೆಗಳು (ಪ್ರೌಢತೆ) ಅದಕ್ಕೆ ತಕ್ಕಂತೆ ಆಗಿರುವುದಿಲ್ಲ. ಈ ಹಂತದಲ್ಲಿ ಅವರಿಗೆ ದೈಹಿಕ ಬೆಳವಣಿಗೆಗಳ ಬಗ್ಗೆ ಕುತೂಹಲ, ಆಸಕ್ತಿ ಹೆಚ್ಚಿರುತ್ತದೆ. ಆದರೆ ಯಾಕಾಗಿ ತಮ್ಮಲ್ಲಿ ಇಂತಹ ಬದಲಾವಣೆಗಳು ಆಗುತ್ತಿವೆ ಎಂಬುದರ ಬಗ್ಗೆ ಸರಿಯಾದ ಜ್ಞಾನ ಇರುವುದಿಲ್ಲ. ಅದಕ್ಕಾಗಿ ಅವರಿಗೆ ಸರಿಯಾದ ತಿಳುವಳಿಕೆ ನೀಡಿ, ಭವಿಷ್ಯದಲ್ಲಿ ಆರೋಗ್ಯಯುತ ಲೈಂಗಿಕತೆ ಹಾಗೂ ಪರಿಪೂರ್ಣವಾದ ಜೀವನ ನಡೆಸಲು ತಜ್ಞ ವೈದ್ಯರ ಸಲಹೆ ಅಗತ್ಯವಿದೆ ಎನ್ನುತ್ತಾರೆ ಡಾ. ಹೇಮಾ.
ಸಾಮಾನ್ಯವಾಗಿ ಪೋಷಕರನ್ನು ವಿಚಾರಿಸಿದರೆ ತಮ್ಮ ಹೆಣ್ಣುಮಕ್ಕಳಿಗೆ (14-15 ವರ್ಷದ ಮಕ್ಕಳನ್ನು ಹೊಂದಿದವರು) ವೈದ್ಯಕೀಯ ರಪಾಸಣೆ ಮಾಡಿಸಿಕೊಂಡಿದ್ದೀರಾ, ಲಸಿಕೆಗಳನ್ನು ಕೊಡಿಸಿದ್ದೀರಾ ಎಂದು ಕೇಳಿದರೆ ಚಿಕ್ಕ ಮಗುವಾಗಿದ್ದಾಗಲೇ ಲಸಿಕೆಗಳನ್ನು ಕೊಡಿಸಿದ್ದೇವೆ. ಈಗ ಎಲ್ಲ ಲಸಿಕೆಗಳೂ ಮುಗಿದಿವೆ ಎನ್ನುವ ಉತ್ತರ ನೀಡುವವರೇ ಹೆಚ್ಚು.
ಆದರೆ ಹದಿಹರೆಯದ ಹುಡುಗಿಯರು ಆ ಹಂತವನ್ನು ದಾಟಿ 20-25 ವಯಸ್ಸಿಗೆ ಮೇಲ್ಪಟ್ಟು ಮದುವೆಯ ಹಂತಕ್ಕೆ ಬರುವ ವರೆಗೂ ಸ್ತ್ರೀರೋಗ ತಜ್ಞರ ಬಳಿಗೆ ಹೋಗಬೇಕು ಎಂದು ಪೋಷಕರೇ ಮಾರ್ಗದರ್ಶನ ಮಾಡಬೇಕು ಎನ್ನುತ್ತಾರೆ ಡಾ. ಹೇಮಾ.
ನಮ್ಮ ಯುವಪೀಳಿಗೆ (ಯುವಕರು ಮತ್ತು ಯವತಿಯರು) ಹೆಚ್ಚಿನವರೂ ಸ್ಥೂಲಕಾಯದ ಸಮಸ್ಯೆ ಹೊಂದಿರುತ್ತಾರೆ. ಹೀಗಾಗಿ ಅವರಿಗೆ ಆರೋಗ್ಯಕರ ಜೀವನಶೈಲಿಯ ಮತ್ತು ಪೌಷ್ಟಿಕ ಆಹಾರದ ಬಗ್ಗೆ ಸಲಹೆ ಅಗತ್ಯವಿರುತ್ತದೆ. ಹದಿಹರೆಯದ ಹುಡುಗಿಯರಲ್ಲಿ ಮುಟ್ಪಿನ ಸಮಸ್ಯೆಗಳು ಮತ್ತು ಪಿಸಿಓಎಸ್ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅವುಗಳನ್ನು ಆರಂಭಿಕ ಹಂತದಲ್ಲೇ ಸೂಕ್ತ ವಿಧಾನದೊಂದಿಗೆ ಸರಿಪಡಿಸಿಕೊಳ್ಳಬೇಕು. ಇದಕ್ಕಾಗಿ ತಜ್ಞ ವೈದ್ಯರ ಸಲಹೆ ಅಗತ್ಯವಿರುತ್ತದೆ.
ಇನ್ನು ಲಸಿಕೆಗಳ ವಿಚಾರಕ್ಕೆ ಬಂದರೆ, ರುಬೆಲ್ಲಾ ಲಸಿಕೆ ಹಾಕಿಸಿಕೊಂಡ ನಂತರವೂ ಎಚ್‌ಪಿವಿ ಲಸಿಕೆ ನೀಡಬೇಕಾಗುತ್ತದೆ. ಇದು ಗರ್ಭಕಂಠದ ಕ್ಯಾನ್ಸರ್‌ನ ಅಪಾಯದಿಂದ ರಕ್ಷಣೆ ನೀಡುತ್ತದೆ. ಪೋಲಿಯೋ ಲಿಸಕೆಯಷ್ಟೇ ಇದೂ ಸಹ ಅತ್ಯಂತ ಮುಖ್ಯ ಮತ್ತು ಅಗತ್ಯವಾಗಿದೆ.
ದೇಶದಲ್ಲೀಗ ವಿವಾಹಪೂರ್ವ ಲೈಂಗಿಕತೆ ಎನ್ನುವುದು ಸಾಮಾನ್ಯವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಪೋಷಕರು ತಮ್ಮ ಮಗಳಿಗೆ ಸುರಕ್ಷಿತ ಲೈಂಗಿಕತೆ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಗರ್ಭನಿರೋಧಕಗಳ ಬಳಕೆ ಎಲ್ಲಕ್ಕಿಂತ ಕೊನೆಯ ಅಸ್ತ್ರವಾಗಿರುತ್ತದೆ. ಗರ್ಣನಿರೋಧಕಗಳ ಬಳಕೆಯ ಬಗ್ಗೆಯೂ ಸರಿಯಾದ ಮಾಹಿತಿ ಮತ್ತು ಜ್ಞಾನವನ್ನು ಹೊಂದಲು ಸ್ತ್ರೀರೋಗ ತಜ್ಞರ ಸಹಾಯ ಅಗತ್ಯವಿದೆ ಎಂದು ಡಾ ಹೇಮಾ ಹೇಳುತ್ತಾರೆ.