ಪುತ್ತೂರು: ಯೋಗವೆಂಬ ಜ್ಯೋತಿ ಒಮ್ಮೆ ಬೆಳಗಿದರೆ ಮತ್ತೆಂದೂ ಮಂಕಾಗದು. ಒಂದಲ್ಲ, ಹಲವಾರು ರೀತಿಯಲ್ಲಿ ನಮ್ಮ ದೇಹದೊಂದಿಗೆ ಅಂತರಂಗವನ್ನೂ ಶುದ್ಧಗೊಳಿಸುವ ಏಕೈಕ ಮಾರ್ಗವೇ ಯೋಗಾಭ್ಯಾಸ. ಸಹಿಸಲಾಗದ್ದನ್ನು ಗುಣಪಡಿಸಲೂ, ಗುಣವಾಗದ್ದನ್ನು ಸಹಿಸಲೂ ಯೋಗವು ಕಲಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾಲಯದ 'ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ' ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿನಿ ಆಗಿರುವ ವಿವೇಕಾನಂದ ಪದವಿ ಕಾಲೇಜಿನ (ಬಿಎಸ್ಸಿ- ಬಿ ಝಡ್ ಸಿ ವಿಭಾಗದ) ಹಿರಿಯ ವಿದ್ಯಾರ್ಥಿನಿ ಪ್ರಿಯಾಂಕ ಪಿ.ಎಸ್. ಭಟ್ ಹೇಳಿದರು.
ಅವರು ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗ, ನೇಚರ್ ಕ್ಲಬ್, ಪ್ರಾಣಿಶಾಸ್ತ್ರ ಹಾಗೂ ಐಕ್ಯೂಎಸಿ ಘಟಕದ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚಣೆಯ ಅಂಗವಾಗಿ ನಡೆದ 'ಯೋಗಾಭ್ಯಾಸದ ಪ್ರಾಮುಖ್ಯತೆ' ಎಂಬ ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಅವರು ಕೆಲವೇ ನಿಮಿಷಗಳ ಯೋಗಾಭ್ಯಾಸದಿಂದ ಎಷ್ಟು ಪ್ರಭಾವವಿದೆ ಎಂದು ತಿಳಿಸಿದರು. ಧ್ಯಾನ ಮತ್ತು ಉಸಿರಾಟದ ಸಂಯೋಜನೆಯು ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಯಮಿತ ಯೋಗಾಭ್ಯಾಸವು ಮಾನಸಿಕ ಸ್ಪಷ್ಟತೆ ಮತ್ತು ಶಾಂತತೆಯನ್ನು ಉಂಟುಮಾಡುವುದಲ್ಲದೆ ಒತ್ತಡವನ್ನು ನಿವಾರಿಸಿ ಏಕಾಗ್ರತೆಯನ್ನು ತೀಕ್ಷ್ಣಗೊಳಿಸುತ್ತದೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಾಂಶುಪಾಲ ವಿಷ್ಣು ಗಣಪತಿ ಭಟ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ತೃತೀಯ ಬಿ ಝಡ್ ಸಿ ವಿದ್ಯಾರ್ಥಿನಿಯರಾದ ಶಿಲ್ಪಾ. ಬಿ ಸ್ವಾಗತಿಸಿ, ಸಾಯಿ ರೂಪ ಪ್ರಾರ್ಥಿಸಿದರು. ದ್ವಿತೀಯ ಬಿ ಝಡ್ ಸಿ ವಿದ್ಯಾರ್ಥಿನಿ ಪ್ರತೀಕ್ಷಾ ವಂದಿಸಿದರು. ತೃತೀಯ ಬಿ ಝಡ್ ಸಿ ವಿದ್ಯಾರ್ಥಿನಿ ಶಿವಾನಿ ನಿರೂಪಿಸಿದರು. ಗೂಗಲ್ ಮೀಟ್ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 90ಕ್ಕೂ ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ