ಸಂಪರ್ಕ: ರಘುರಾಜ - +91 94498 33583
ನಿಮಗಿದು ಗೊತ್ತೇ?
ಕಳೆದ ಎಂಟು ವರ್ಷಗಳಿಂದ ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರ ತನ್ನ ಆವರಣದಲ್ಲಿ ಸಾವಯವ ಸಂತೆ ನಡೆಸುತ್ತಾ ಬಂದಿದೆ. ಸಂತೆಯ ದಿನ: ಶನಿವಾರ, ಸಮಯ 11 ರಿಂದ 5.30.
ಆರೆಂಟು ಕೃಷಿಕರು ಅಕ್ಕಿ, ಹಣ್ಣು, ದಿನನಿತ್ಯದ ಅಗತ್ಯಕ್ಕೆ ಬೇಕಾದ ಮೌಲ್ಯವರ್ಧಿತ ಉತ್ಪನ್ನಗಳನ್ನು ಇಲ್ಲಿಗೆ ಮಾರಾಟಕ್ಕೆ ತರುತ್ತಾರೆ. ಹತ್ತಿರಹತ್ತಿರ ಇನ್ನೂರು ಭತ್ತದ ತಳಿ ಸಂಗ್ರಹ ಇರುವ ಕುಂಬಳೂರು ಗ್ರಾಮದ ಆಂಜನೇಯರ ಅಕ್ಕಿಯ ಮಳಿಗೆ ವಿಶಿಷ್ಟ. ಇವರೇ ಅಭಿವೃದ್ಧಿ ಪಡಿಸಿದ ದೊಡ್ಡ ಭತ್ತ, ಸಿಂಧೂರ ಮಧುಸಾಲೆ, ಅಂದನೂರು ಸಣ್ಣ ಅಲ್ಲದೆ ಒಟ್ಟು ಹತ್ತರಷ್ಟು ದೇಸೀ ತಳಿಯ ಅಕ್ಕಿ, ಅವಗಳದೇ ಮಂಡಕ್ಕಿ, ಅವಲಕ್ಕಿ ಇವರಲ್ಲಿರುತ್ತದೆ.
ದಾವಣಗೆರೆಯವರೇ ಆದ ಬಸವರಾಜ ಮರದ ಗಾಣದ ಅಪ್ಪಟ ಕುಸುಬೆ ಎಣ್ಣೆ, ಕೊಬ್ಬರಿ ಎಣ್ಣೆ, ನೆಲಗಡಲೆ ಎಣ್ಣೆ ಮಾರುತ್ತಾರೆ. ಯುವಕ ವಿವೇಕರ ಬಳಿ ಮಾಲ್ಟುಗಳು, ಶಕ್ತಿದಾಯಕ ಆಹಾರ- ಹೀಗೆ 30 - 40 ಥರದ ’ರೆಡಿ ಫುಡ್’ ಇರುತ್ತದೆ.
ಇದಲ್ಲದೆ ಪಪಾಯ, ಮಾವು ಮೊದಲಾದ ಹಣ್ಣುಗಳು, ತರಕಾರಿಗಳನ್ನು ತರುವ ಕೃಷಿಕರು ಇದ್ದಾರೆ. "ನಾವು ಈ ಮಂದಿಯನ್ನು ಹತ್ತಿರದಿಂದ ಗಮನಿಸಿ ಅದು ಅಪ್ಪಟ ಸಾವಯವ ಎಂದು ಖಚಿತಪಡಿಸಿಕೊಳ್ಳುತ್ತೇವೆ" ಎನ್ನುತ್ತಾರೆ ’ಸಾವಯವ ಸಂತೆ’ಯ ಸಮನ್ವಯಕಾರ ವಿಸ್ತರಣಾ ವಿಜ್ಞಾನಿ ರಘುರಾಜ. ಆಸಕ್ತ ಕೃಷಿಕ- ಗ್ರಾಹಕರು ಇವರ ಬಳಿ ಮಾತಾಡಬಹುದು.
"ದಾವಣಗೆರೆ ಮತ್ತು ಸುತ್ತಲಿನ ಆರೋಗ್ಯಕರ ಆಹಾರ ಬೇಕೆನ್ನುವವ ಗ್ರಾಹಕರಿಗೂ, ಒಳ್ಳೆಯ ಆಹಾರದ ಒಳಸುರಿ ಉತ್ಪಾದಿಸುವವರಿಗೂ ಅನುಕೂಲ ಆಗಬೇಕೆಂದು ಈ ಚಟುವಟಿಕೆ ನಡೆಸುತ್ತಿದ್ದೇವೆ. ಆದರೆ ನಮ್ಮ ನಿರೀಕ್ಷೆಯಷ್ಟು ಇದರ ಬಳಕೆ ಆಗುತ್ತಿಲ್ಲ ಅನಿಸುತ್ತಿದೆ" ಎನ್ನುತ್ತಾರೆ ಕೇವೀಕೆ ಮುಖ್ಯಸ್ಥ ಡಾ. ಟಿ.ಎನ್. ದೇವರಾಜ್.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು