ಸದ್ದು ಮಾಡುತ್ತಿರುವ 'ಬಾಕಾಹು': ಬಾಳೆ ಬೆಳೆದವರ 'ಬಾಳು ಬಂಗಾರ'ವಾಗಲು ಹೊಸ ದಾರಿ

Upayuktha
0

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಉರಿತಾಗಿ ಹೊಸ ಹೊಸ ವಿಚಾರಗಳನ್ನು ಕಲೆಹಾಕಿ ನಮ್ಮೂರಿನ ಕೃಷಿಕರಲ್ಲೂ ಪ್ರಚಾರ ಮಾಡುತ್ತಿರುವ ಮತ್ತು ಹೊಸ ಹೊಸ ಪ್ರಯೋಗಗಳಿಗೆ ಪ್ರೇರಣೆ ನೀಡುತ್ತಿರುವವರು ಹಿರಿಯ ಕೃಷಿ ಪತ್ರಕರ್ತ ಶ್ರೀಪಡ್ರೆ ಅವರು. ಕಳೆದ ಕೆಲವು ವರ್ಷಗಳಿಂದ ಹಸಿನ ಕಾಯಿಯ/ ಹಣ್ಣಿನ ಮೌಲ್ಯವರ್ಧನೆ ಮತ್ತು ನಾನಾ ಉತ್ಪನ್ನಗಳ ತಯಾರಿಯ ಬಗ್ಗೆ ಕೃಷಿಕರಲ್ಲಿ, ಕೃಷಿ ಉತ್ಪನ್ನಗಳನ್ನೇ ಅವಲಂಬಿಸಿ ನಡೆಯುತ್ತಿರುವ ಗೃಹೋದ್ಯಮಗಳಲ್ಲಿ ಬಹುದೊಡ್ಡ ಮಟ್ಟದ ಜಾಗೃತಿ ಮೂಡಿಸಿದವರು ಅವರು. ಇದೀಗ ಬಾಳೆಕಾಯಿಯ ಹುಡಿ ತಯಾರಿಸುವ ಮತ್ತು ಅದರಿಂದ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸುವ ಸಾಧ್ಯತೆಗಳ ಬಗ್ಗೆ ಅಪಾರ ಪ್ರಯೋಗಶೀಲತೆಗಳಿಗೆ ಅವರು ಪ್ರೇರಣೆ ನೀಡುತ್ತಿದ್ದಾರೆ.


ಉತ್ತರ ಕನ್ನಡದ ಶಿರಸಿಯ ಊರುತೋಟದ ಸುಬ್ರಾಯ ಹೆಗಡೆ ಅವರು ಕರಾವಳಿ ಭಾಗದಲ್ಲಿ ಬಾಳೆ ಕಾಯಿ ಹುಡಿ ಮತ್ತು ಅದರಿಂದ ನಾನಾ ತಿನಿಸುಗಳನ್ನು ತಯಾರಿಸುವ ಪ್ರಯೋಗಗಳನ್ನು ಮಾಡಿದವರಲ್ಲಿ ಮೊದಲಿಗರು. ಶಿರಸಿಯ ವಸುಂಧರಾ ಹೆಗಡೆ ಅವರೂ ದೊಡ್ಡ ಮಟ್ಟದಲ್ಲೇ ಬಾಳೆಕಾಯಿ ಹುಡಿ ತಯಾರಿಸುವ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಇದೇ ಮಾದರಿಯಲ್ಲಿ ತುಮಕೂರಿನ ಪ್ರಯೋಗಶೀಲ ಗೃಹಿಣಿ ನಯನಾ ಆನಂದ್‌ ಕೂಡ ಬಾಳೆಕಾಯಿಯ ಹುಡಿ ತಯಾರಿಸುವ ಪ್ರಯೋಗಕ್ಕೆ ಕೈಹಾಕಿ ಯಶಸ್ವಿಯಾಗಿದ್ದಾರೆ. ಬಾಳೆಕಾಯಿ ಪುಡಿಗೆ ಮಾರುಕಟ್ಟೆ ಸೃಷ್ಟಿ ಮಾಡುವುದು ಬಹಳ ಕಷ್ಟವೇನೂ ಅಲ್ಲ.


ಬಾಳೆಹಣ್ಣಿನಿಂದ ಹಲ್ವ ತಯಾರಿಸುವ ಬಗ್ಗೆ ಎಲ್ಲರಿಗೂ ಗೊತ್ತು. ಅದರ ಸವಿಯನ್ನು ಸವಿಯದವರೂ ಇರಲಿಕ್ಕಿಲ್ಲ. ಆದರೆ ಅದು ಬಹಳ ದಿನ ಬಾಳಿಕೆ ಬರುವಂಥದ್ದಲ್ಲ, ಜತೆಗೆ ಸಿಹಿ ತಿನಿಸು ಆಗಿರುವುದರಿಂದ ಹೆಚ್ಚು ತಿನ್ನಲು ಆಗುವಂಥದ್ದೂ ಅಲ್ಲ. ಆದರೆ ಬಾಳೆಕಾಯಿಯನ್ನೇ ಒಣಗಿಸಿ ಪುಡಿಮಾಡಿ, ಕಾಪಿಟ್ಟುಕೊಂಡು ಬೇಕಾದಂತೆ ಅಡುಗೆಯಲ್ಲಿ ಬಳಸುವ ವಿಧಾನ ಮಾತ್ರ ಇತ್ತೀಚೆಗೆ ಹೆಚ್ಚಾಗಿ ಚಾಲ್ತಿಗೆ ಬರುತ್ತಿದೆ. ಇದರ ಬಗ್ಗೆ ಬಹಳಷ್ಟು ಕೃಷಿಕರಿಗೆ ಮತ್ತು ಗೃಹೋದ್ಯಮಿಗಳಿಗೆ ಮಾಹಿತಿ ಇಲ್ಲ. ಇದು ಹೆಚ್ಚು ಹೆಚ್ಚು ಪ್ರಚಾರ ಪಡೆದಷ್ಟೂ ಬಾಳೆಕಾಯಿ ಪುಡಿ ತಯಾರಿಕೆ ಒಂದು ದೊಡ್ಡ ಮಟ್ಟದ ಉದ್ಯಮವಾಗಿ ಬೆಳೆಯುವ ಎಲ್ಲ ಅವಕಾಶಗಳೂ ಇವೆ. ಉದ್ಯಮವಾಗಿ ಬೆಳೆಯುವುದೆಂದರೆ ಅಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಹಣಕಾಸಿನ ಓಡಾಟ ತಾನಾಗಿಯೇ ಶುರುವಾಗುತ್ತದೆ. ಆ ಮೂಲಕ ಆರ್ಥಿಕ ಅಭಿವೃದ್ಧಿಯ ಚಕ್ರಕ್ಕೆ ವೇಗ ನೀಡಲು ಸಾಧ್ಯ.


ಆಹಾರ ತಜ್ಞರ ಪ್ರಕಾರ, ಬಾಳೆಕಾಯಿಯ ಹಿಟ್ಟು ಆರೋಗ್ಯಕ್ಕೆ ಬಹಳ  ಒಳ್ಳೆಯದು. ಯಾವುದೇ ರಾಸಾಯನಿಕ ವಸ್ತುಗಳನ್ನು ಬಳಸದೆ ಇದನ್ನು ತಯಾರಿಸಲಾಗುತ್ತದೆ. ಹಸಿರು ಬಾಳೆಕಾಯಿಗಳ ಸಿಪ್ಪೆ ಸುಲಿದು ತೆಳ್ಳಗೆ ಸ್ಲೈಸ್‌ ಮಾಡಿ ಒಣಗಿಸಿ ನುಣ್ಣಗೆ ಪುಡಿ ಮಾಡಿ ಇಡಲಾಗುತ್ತದೆ. ಈ ಹಿಟ್ಟಿನಲ್ಲಿ ಸಕ್ಕರೆ ಅಂಶ ಇರುವುದಿಲ್ಲ.


ಗೋಧಿ, ಮೈದಾ ಹಿಟ್ಟಿಗೆ ಪರ್ಯಾಯ:

ಮೈದಾ ಮತ್ತು ಗೋಧಿ ಹಿಟ್ಟುಗಳು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಕೆಲವರು ಈ ಹಿಟ್ಟುಗಳ ಆಹಾರ ಸೇವನೆ ಮಾಡಲು ಹಿಂಜರಿಯುತ್ತಾರೆ. ಅಂಥವರಿಗೆ ಬಾಳೆಕಾಯಿ ಹಿಟ್ಟಿನಿಂದ ಮಾಡಿದ ತಿನಿಸು ಉತ್ತಮ. ಈ ಹಿಟ್ಟಿನಲ್ಲಿ ಸ್ಟಾರ್ಚ್‌ ಪ್ರಮಾಣ ತುಂಬಾ ಇದೆ. ಇದಕ್ಕೆ ಅಗತ್ಯವಿರುವಷ್ಟು ನೀರು ಹಾಕಿ ನಾದಿ ಕಣಕ ಮಾಡಿ ಬ್ರೆಡ್‌, ಪಾಸ್ತಾ, ಕೇಕ್‌ ಇತ್ಯಾದಿಗಳನ್ನು ಮಾಡಬಹುದು.


ತೂಕ ಇಳಿಕೆಗೆ ಸಹಕಾರಿ:

ಬಾಳೆಕಾಯಿಯ ಹಿಟ್ಟಿನಲ್ಲಿ ಕ್ಯಾಲೊರಿ ಅತ್ಯಂತ ಕಡಿಮೆಯಿದೆ ಹಾಗೂ ಪೊಟಾಷಿಯಂ, ಕಬ್ಬಿಣ, ಕ್ಯಾಲ್ಷಿಯಂ, ವಿಟಮಿನ್‌ ಎ ಮತ್ತು ಸಿಗಳು ಅಧಿಕ ಪ್ರಮಾಣದಲ್ಲಿವೆ. ಸಸ್ಯಾಹಾರ ಮತ್ತು ಗ್ಲುಟೆನ್‌ ರಹಿತ ಆಹಾರಗಳನ್ನು ಪ್ರಿಫರ್‌ ಮಾಡುವವರಿಗೆ ಬಾಳೆಕಾಯಿ ಹಿಟ್ಟಿನ ಖಾದ್ಯಗಳು ಉತ್ತಮ ಆಯ್ಕೆ ಆಗಿದೆ. ಇದರಲ್ಲಿರುವ ಅಧಿಕ ನಾರಿನಂಶ ಜೀರ್ಣ ಕ್ರಿಯೆಯನ್ನು ಸರಾಗಗೊಳಿಸುತ್ತದೆ ಹಾಗೂ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿಡುತ್ತದೆ. ದೇಹ ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಈ ಹಿಟ್ಟಿನಿಂದ ಮಾಡಿದ ಆಹಾರಗಳು ಉತ್ತಮ.


ತಯಾರಿ ಹೇಗೆ?

ಮಾರುಕಟ್ಟೆಯ ವ್ಯಾಪಾರಿಗಳು 'ಸೆಕೆಂಡ್' ಎಂದು ಅರ್ಧವೇ ಬೆಲೆ ಕೊಟ್ಟು ಕಳಿಸುವ ಬಾಳೆಕಾಯಿಯಿಂದಲೂ ಉತ್ತಮ ಬಾಕಾಹು (ಬಾಳೆಕಾಯಿ ಹುಡಿ (ಪುಡಿ/ ಹಿಟ್ಟು) ಸಾಧ್ಯ. ಉತ್ತರ ಕನ್ನಡದ ಕೃಷಿಕರ ಮನೆಗಳಲ್ಲಿ ಕನಿಷ್ಠ 1500 ಡ್ರೈಯರುಗಳಿವೆ. ಮಿಕ್ಸಿ ಇಲ್ಲದ ಮನೆಯೇ ಇಲ್ಲ. ಬಾಕಾಹು ತಯಾರಿಗೆ ಬೇರೇನೂ ಬೇಡ. ಒಂದಿಷ್ಟು ಉತ್ಸಾಹ- ಶ್ರಮಶೀಲತೆ ಬೇಕು. ಅದು ನಿಮ್ಮಲ್ಲಿದೆಯೇ?


ನಾವು ಬೆಳೆಯುವ ಯಾವುದೇ ಬಾಳೆಕಾಯಿಯಿಂದ 'ಬಾಕಾಹು'  ಮಾಡಬಹುದು. ಮೊದಲು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ. ಬಾಳೆಕಾಯಿ ಸುಲಿದ ಕೂಡಲೇ ಅದು ಆಕ್ಸಿಡೈಸ್ ಆಗತೊಡಗಿ ಬಣ್ಣ ತುಸು ಕಪ್ಪಾಗುತ್ತದೆ.


ಇದನ್ನು ತಡೆಯಲು ಮೊದಲೇ ಒಂದು ಲೀಟರ್ ನೀರಿಗೆ ಕಾಲು ಲೀಟರ್ ಅನ್ನ ಬೇಯಿಸಿ ಬಸಿದ ತೆಳಿ (ಗಂಜಿಯ ನೀರು) ಮತ್ತು ಹದಿನೈದು ಗ್ರಾಮ್ ಉಪ್ಪು ಕದಡಿ ಇಟ್ಟುಕೊಳ್ಳಿ. ಈ ದ್ರಾವಣದಲ್ಲಿ ಸಿಪ್ಪೆ ಸುಲಿದ ಕೂಡಲೇ ಬಾಳೆಕಾಯಿಯನ್ನು ಮುಳುಗಿಸಿ. ಗಂಜಿ ನೀರು ಇಲ್ಲವಾದಲ್ಲಿ ನೀರಿಗೆ ಸ್ವಲ್ಪ ಮಜ್ಜಿಗೆ  ಸೇರಿಸಿಯೂ ಪ್ರಯೋಗ ಮಾಡಬಹುದು. ಸಿಪ್ಪೆ ತೆಗೆಯದೆಯೂ ಹುಡಿ ಮಾಡಬಹುದು.


ದ್ರಾವಣದಿಂದ ತೆಗೆದ ಬಾಳೆಕಾಯಿಯನ್ನು ಸ್ಲೈಸರ್ ಬಳಸಿ ಚಿಪ್ಸಿನಂತಹ ತುಂಡು (ತಾಳಿ) ಮಾಡಿಕೊಳ್ಳಿ. ಡ್ರೈಯರಿನಲ್ಲಿ ಒಣಗಿಸಿ. ಬೇಸಿಗೆಯಲ್ಲಾದರೆ ಬಿಸಿಲು ಸ್ನಾನವೂ ಸೈ. ಒಂದೇ ದಿನದಲ್ಲಿ ಒಣಗುತ್ತದೆ. ಸರಿಯಾಗಿ ಒಣಗಿ ಆರಿದ ನಂತರ ಮಿಕ್ಸಿ ಬಳಸಿ ಹುಡಿ ಮಾಡಿ. 


ಒಣಗಿದ ಚಿಪ್ಸನ್ನು ಹಾಗೆಯೇ ಚೆನ್ನಾಗಿ ಗಾಳಿ ಆಡದಂತೆ ಪ್ಯಾಕ್ ಮಾಡಿಟ್ಟು ಬೇಕಾದಾಗ ಹುಡಿ ಮಾಡಿದರೂ ಓಕೆ. ಕನಿಷ್ಠ ಆರು ತಿಂಗಳ ಬಾಳಿಕೆಗೆ ಅಡ್ಡಿಯಿಲ್ಲ.  


ಉಕದ ಎಲ್ಲ ಮನೆಗಳ ಅಡುಗೆ ಕೋಣೆಯಲ್ಲಿ ಒಂದು 'ಬಾಕಾಹು' ಡಬ್ಬಿ ಸೇರಿಕೊಳ್ಳಲಿ. ಇದರಿಂದ ಪೋಷಕಾಂಶಭರಿತ ವೈವಿಧ್ಯಮಯ ಡಜನುಗಟ್ಟಲೆ ಉಪಾಹಾರ, ಸಿಹಿತಿಂಡಿ ಸಾಧ್ಯ. ನಿಮ್ಮ ಮನೆಯದೇ ಕಲಬೆರಕೆ- ವಿಷಾಂಶರಹಿತ ಬಾಳೆಕಾಯಿ. ನಿಮ್ಮದೇ 'ಕಂಪೆನಿ'ಯ ಬಾಕಾಹು! ಒಂದಷ್ಟು ಹೆಚ್ಚು ಉತ್ಪಾದಿಸಿದರೆ ಸ್ಥಳೀಯವಾಗಿ ಮಾರಲೂಬಹುದು.


ಬಾಳೆ ಬೆಳೆದು ನಷ್ಟವಾಯಿತು ಎನ್ನುವ ಕೃಷಿಕರಿಗೆ ಇದೊಂದು ಹೊಸ ಆದಾಯದ ಮೂಲವಾಗಬಹುದು. ಎಲ್ಲ ಗೊನೆಗಳು ಒಟ್ಟಿಗೇ ಬೆಳೆದು ಹಣ್ಣಾಗಿ ಮಾರುಕಟ್ಟೆಯಲ್ಲಿ ವ್ಯಾಪಾರಿಗಳ ಬಿಗಿ ಹಿಡಿತದಲ್ಲಿ ಸಿಲುಕಿ ನಷ್ಟ ಅನುಭವಿಸುವ ಬೆಳೆಗಾರರಿಗೆ ಇದೊಂದು ಸ್ವಲ್ಪ ಹೆಚ್ಚುವರಿ ಶ್ರಮದ ಕೆಲಸವಾದರೂ, ನಷ್ಟದ ಬದಲು ಲಾಭವನ್ನೇ ಮಾಡಿಕೊಳ್ಳಬಹುದಾದ ಹೊಸ ಅವಕಾಶ.


ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅಭಿಯಾನದ ಸ್ವರೂಪದಲ್ಲಿ ನಡೆಯುತ್ತಿರುವ 'ಬಾಕಾಹು' ಪ್ರಯೋಗಗಳು ದಕ್ಷಿಣ ಕನ್ನಡ-ಕಾಸರಗೋಡು ಜಿಲ್ಲೆಗಳಲ್ಲಿ ಅಷ್ಟೇ ಅಲ್ಲ, ಬಾಳೆ ಬೆಳೆಯುವ ಎಲ್ಲ ನಮ್ಮೂರು, ನಿಮ್ಮೂರುಗಳಲ್ಲಿ ಇದು ಹಬ್ಬಬೇಕಿದೆ. ಬಾಳೆಕಾಯಿ ಕೃಷಿಕರ ಬದುಕಿನಲ್ಲಿ 'ಹಬ್ಬ'ದಂತಹ ದಿನಗಳು ಬರಬೇಕಿವೆ.


ಹೊಸ ಕೃಷಿಕೋತ್ಪನ್ನ ಬಾಳೆಕಾಯಿ ಹುಡಿ ರೆಡಿ

ಶಿರಸಿಯ ವಸುಂಧರಾ ಹೆಗಡೆ ಅವರು ಕರ್ನಾಟಕದ ಮನೆ- ಬೇಕರಿಗಳ ಬಳಕೆದಾರರಿಗಾಗಿ ಒಂದು ಹೊಸ ಉತ್ಪನ್ನ ತಯಾರಿಸಿದ್ದಾರೆ- ಬಾಳೆಕಾಯಿ‌ ಹುಡಿ. ಇದುವರೆಗೆ ಮನೆ ಮನೆಗಳಲ್ಲಿ ತಿನಿಸು ತಯಾರಿಕೆಗಷ್ಟೇ ಸೀಮಿತವಾಗಿದ್ದ ಬಾಳೆಕಾಯಿ ಹುಡಿಯ ಪ್ರಯೋಗದಲ್ಲಿ ಅವರು ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.  ಇದಕ್ಕೆ ಕಚ್ಚಾ ವಸ್ತು ಇವರದೇ ಮತ್ತು ನೆರೆಕರೆಯ ತೋಟಗಳದ ಬಾಳೆಕಾಯಿ. ಬಾಳೆಕಾಯಿಯಲ್ಲಿ ಮೆಗ್ನೀಶಿಯಂ, ಕ್ಯಾಲ್ಸಿಯಂ, ವಿಟಮಿನ್ನುಗಳು, ಕಬ್ಬಿಣ, ರಂಜಕ ಮತ್ತಿತರ ಸಾಕಷ್ಟು ಪೋಷಕಾಂಶಗಳಿವೆ. ಇದರಿಂದ ರೊಟ್ಟಿ, ದೋಸೆ, ತಾಳಿಪಿಟ್, ಕಡುಬು, ಚಕ್ಕುಲಿ, ಉಂಡೆ, ಮಂಚೂರಿ, ಸೂಪ್ ಮಾಡಬಹುದು.


ನಿಮ್ಮ ಅಡುಗೆ ಮನೆಯಲ್ಲಿ ಬಾಳೆಕಾಯಿ ಹುಡಿಯ ಒಂದು ಡಬ್ಬ ಖಾಯಂ ಇರಲಿ, ಮನೆಮಂದಿಗೆ ಬೇಕಾದಾಗ ಈ ಕಲಬೆರಕೆ, ವಿಷಾಂಶ ಇಲ್ಲದ ಸತ್ವಭರಿತ ಹುಡಿಯಿಂದ ಬೇಕಾದ ಪಾಕ ಮಾಡಿಕೊಳ್ಳಬಹುದು.  ಶಿರಸಿಯ ಮನೆಮನೆಗಳಲ್ಲಿ ಈಗ ಬಾಳೆಕಾಯಿ ಹುಡಿಯ ವಿವಿಧ ಪ್ರಯೋಗಗಳು ನಡೆಯುತ್ತಿವೆ.

*********

ವಸುಂಧರಾ ಹೆಗಡೆ ಅವರು ಬಾಳೆಕಾಯಿ ಹುಡಿ ತಯಾರಿಸಿ ಬೇಡಿಕೆ ಇಟ್ಟವರಿಗೆ ಮಾರಾಟವನ್ನೂ ಮಾಡುತ್ತಿದ್ದಾರೆ. ಅವರು ತಯಾರಿಸುವ ಬಾಳೆಕಾಯಿ ಹುಡಿ ಕೆ.ಜಿಗೆ 200 ರೂ.ಗಳಂತೆ ಮಾರಾಟವಾಗುತ್ತಿದೆ. (ಶಿಪ್ಪಿಂಗ್ ಚಾರ್ಜು ಪ್ರತ್ಯೇಕ). 

ಒಣಗಿಸಿದ ಬಾಳೆಕಾಯಿ ಸ್ಲೈಸ್ ಕೂಡಾ ಅವರಲ್ಲಿ ಲಭ್ಯವಿದೆ. ಅದನ್ನು ಬೇಕಾದಾಗ ಮಿಕ್ಸಿಗೆ ಹಾಕಿ ಪುಡಿ ಮಾಡಿಕೊಳ್ಳಬಹುದು. ಆಸಕ್ತರು ಅವರನ್ನು ಈ ಮೊಬೈಲ್ ಸಂಖ್ಯೆಗಳಲ್ಲಿ ಸಂಪರ್ಕಿಸಬಹುದು.

Contact WhatsApp - 99009 27988; For calls : 78991 61434

*******

ಬಹೂಪಯೋಗಿ, ಒಳ್ಳೆ ಪೌಷ್ಟಿಕಾಂಶ ಗುಣ ಇರುವ ಅಪ್ಪಟ ವಿಷರಹಿತ ಹಳ್ಳಿ ಉತ್ಪನ್ನ ಬಾಕಾಹು ಮನೆ ಮನೆಗಳಲ್ಲಿ ಡಬ್ಬಗಳಲ್ಲಿ ತುಂಬಿಕೊಳ್ಳಲಿ, ಚಿಕ್ಕಚಿಕ್ಕ ಪೇಟೆಪಟ್ಟಣಗಳಲ್ಲೂ ಸಿಗುವಂತಾಗಲಿ.


ಉತ್ತರ ಕನ್ನಡ ಜಿಲ್ಲೆಯಲ್ಲೇ ಬಹುಶಃ ಪ್ರಪ್ರಥಮ ಬಾರಿಗೆ ಸದಸ್ಯರ ಉಪಯೋಗಕ್ಕಾಗಿ ’ಜಾಬ್ ವರ್ಕ್’ ಮಾಡಲು ಡ್ರೈಯರ್ ಸ್ಥಾಪಿಸಿದ್ದು ಭೈರುಂಬೆಯ ಹೆಸರಾಂತ ಹುಳಗೋಳ ಗ್ರೂಪ್ ಗ್ರಾಮಗಳ ಸಹಕಾರಿ ಸಂಘ.


ಈಗ ಸಂಘದಿಂದ ಸಾಲ ಪಡೆದು ಐವರು ಸದಸ್ಯರು ಕರೆಂಟಿನ ಡ್ರೈಯರು ಸ್ಥಾಪಿಸಲು ಹೊರಟಿದ್ದಾರೆ. ತಟ್ಟೀಸರ ಸೊಸೈಟಿಯಲ್ಲೂ ಈ ಸೇವೆ ಇದೆ. ಇನ್ನೂ ಕೆಲವು ಸೊಸೈಟಿಗಳಲ್ಲಿ ಇದ್ದರೂ ಇರಬಹುದು.  


ತೀರ್ಥಹಳ್ಳಿಯ ಬಳಿಯ ಕೋಟಿಗದ್ದೆಯಲ್ಲಿ  ಕೃಷಿಕರೇ ಹುಟ್ಟುಹಾಕಿದ ’ಸಮ್ಮಿಳನ ಕೃಷಿ ಸಂಸ್ಕರಣ ಸೌಹಾರ್ದ ಸಹಕಾರಿ’ ಸಂಸ್ಥೆ ಇದೆ. ಇದು ಸದಸ್ಯರು ಮತ್ತು ಸದಸ್ಯೇತರರಿಗೆ ಜಾಬ್ ವರ್ಕ್ ಆಧಾರದಲ್ಲಿ ’ಬಾಕಾಹು’ ತಯಾರಿಸಿಕೊಡಬಹುದು. ಈ ಥರದ ಕೇಂದ್ರೀಕೃತ ಸಂಸ್ಕರಣ ವ್ಯವಸ್ಥೆ ಬೇರೆಲ್ಲಾದರೂ ಇದ್ದರೆ ಅಲ್ಲೂ ಈ ಚಟುವಟಿಕೆ ಸುಲಭಸಾಧ್ಯ. 


ಹತ್ತಿರ ಹತ್ತಿರ ಮನೆ ಇರುವವರು ಒಟ್ಟು ಸೇರಿ ಒಂದು ಪುಟ್ಟ ಡ್ರೈಯರ್ ಸ್ಥಾಪಿಸಿ ಹತ್ತಾರು ಉಪಯೋಗ ಪಡೆಯಬಹುದು.


ಹಿಂದೆ ಹಳ್ಳಿಗಳಿಂದ ಇಡಿ ಗೋಧಿ ಒಯ್ದು ಪುಡಿ ಮಾಡಿ ತರಿಸುವ ಕ್ರಮ ಇತ್ತು. ಈಗ ಹಾಗೆಯೇ ಬಾಳೆಕಾಯಿ ಒಯ್ದು ನಿಗದಿತ ಶುಲ್ಕ ಕೊಟ್ಟು ಸೊಸೈಟಿ ಅಥವಾ ಜಾಬ್ ವರ್ಕ್ ಉತ್ಸಾಹಿಗಳ ಮೂಲಕ ಪುಡಿ ಮಾಡಿಸಿಕೊಡುವ ಪದ್ಧತಿ ತಂದರೆ ಉಪಯೋಗವಿದೆ. 


ಈ ಸೇವೆ ಒದಗಿಸುವವರಿಗೆ ಬನಾನಾ ಸ್ಲೈಸರ್ ಬೇಕಾದೀತು. ಮಾರುಕಟ್ಟೆಯಲ್ಲಿ ಅವರವರ ಅಗತ್ಯಕ್ಕೆ ತಕ್ಕುದಾದ ಬನಾನಾ ಸ್ಲೈಸರುಗಳು ಲಭ್ಯ.


ಕೆಲವೇ ಕೆಲವು ಬಾಳೆಗೊನೆ ತಂದ ವ್ಯಕ್ತಿಯ ಪುನಃ ಪುಡಿ ಒಯ್ಯಲು ಬರುವ ತಲೆನೋವನ್ನೂ ಇಂಥಾ ಕೇಂದ್ರಗಳು ತಪ್ಪಿಸಬಹುದು. ಇವರೇ ಆಗಾಗ ಬಾಳೆಕಾಯಿ ಕೊಂಡುಕೊಂಡು ’ಬಾಕಾಹು’ (ಬಾಳೆಕಾಯಿ ಹುಡಿ / ಪುಡಿ/ ಹಿಟ್ಟು) ತಯಾರಿಸಿ ಸದಾ ಸ್ಟಾಕ್ ಇಟ್ಟುಕೊಂಡರೆ ಗ್ರಾಹಕರಿಗೆ ಸಲ್ಲಬೇಕಾದಷ್ಟು ಪುಡಿಯ ಲೆಕ್ಕ ಹಾಕಿ ಶುಲ್ಕ ಪಡೆದು ಒಂದೇ ಟ್ರಿಪ್ಪಿನಲ್ಲಿ ಅವರ ಕೆಲಸ ಪೂರೈಸಬಹುದು.

-ಚಂದ್ರಶೇಖರ ಕುಳಮರ್ವ

Key Words: Banana flour, Banana Powder, Banana Growers, Value addition for banana, ಬಾಳೆಕಾಯಿ ಹುಡಿ, ಬಾಕಾಹು, ಬಾಳೆ ಬೆಳೆಗಾರರು,

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top