ಪುತ್ತೂರು ರಮೇಶ್ ಭಟ್ ಅವರು 23.07.1964 ರಂದು ಶ್ರೀಮತಿ ಸರಸ್ವತಿ ಹಾಗೂ ದಿ. ಗೋಪಾಲಕೃಷ್ಣ ಭಟ್ ಇವರ ಮಗನಾಗಿ ಜನನ. ಪಿ.ಯು.ಸಿ ವರೆಗೆ ಇವರ ವಿದ್ಯಾಭ್ಯಾಸ.
ಚಿಕ್ಕವನಾಗಿದ್ದಾಗ ಧರ್ಮಸ್ಥಳ ಸಮೀಪ ನಿಡ್ಲೆಯಲ್ಲಿ ನನ್ನ ಅಜ್ಜನ ಮನೆಯಲ್ಲಿ ಇದ್ದುಕೊಂಡು ಶಾಲೆಗೆ ಹೋಗುತ್ತಿದ್ದೆ. ನನ್ನ ಸೋದರ ಮಾವ ಕೆ.ಭೀಮ ಭಟ್ ಶಾಲಾ ಶಿಕ್ಷಕರಾಗಿದ್ದರು ಹಾಗೂ ತಾಳಮದ್ದಳೆ ಅರ್ಥಧಾರಿಯಾಗಿದ್ದರು. ನಿಡ್ಲೆಯ ವೆಂಕಟರಮಣ ಕಲಾಸಂಘ ಎಂಬ ಕಲಾ ಬಳಗದ ಮೂಲಕ ಪ್ರತೀ ತಿಂಗಳು ಒಬ್ಬೊಬರ ಮನೆಯಲ್ಲಿ ತಾಳಮದ್ದಳೆ, ಇಡೀ ರಾತ್ರಿ ನಡೆಯುತ್ತಿತ್ತು. ಮಾವ ನನ್ನನ್ನು ಅವರೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ ಭಾಗವತರಾಗಿದ್ದ ಹಿರ್ತಡ್ಕ ಶ್ರೀಪತಿ ಪಟೇಲರ ಪದ್ಯ, ಮಾವನ ಅರ್ಥಗಾರಿಕೆ ಕೇಳುತ್ತಾ ಕೇಳುತ್ತಾ ಯಕ್ಷಗಾನವೆಂಬ ವಿಸ್ಮಯ ನನ್ನೂಳಗೆ ಕರಗಿ ಸೇರಿದ್ದು ಆಗ ನನಗೆ ಗೊತ್ತಾಗಿರಲಿಲ್ಲ ಅವರಂತೆ ವೇದಿಕೆಯಲ್ಲಿ ಕುಳಿತುಕೊಳ್ಳಬೇಕೆಂಬ ಆಸೆ ಮೊಳಕೆಯೊಡೆದಿತ್ತು ಎಂದು ರಮೇಶ್ ಭಟ್ ಪುತ್ತೂರು ಅವರು ಹೇಳುತ್ತಾರೆ.
ತಾಳಮದ್ದಳೆಗಳಲ್ಲಿ ಭಾಗವತರ ಹತ್ತಿರವೇ ಕುಳಿತು, ಕೇಳಿ ಕೇಳಿಯೇ ನನಗೆ ಕೆಲವು ರಾಗಗಳು ತಾಳಗಳು ಮನದಟ್ಟಾಗಿದ್ದವು. ಪಟ್ರಮೆ, ನಿಡ್ಲೆಯಲ್ಲಿ ನಡೆಯುವ ತಿಂಗಳ ಕೂಟಗಳಲ್ಲಿ ಒಂದೆರಡು ಪದ್ಯಗಳನ್ನು ಹೇಳುವ ಅವಕಾಶವನ್ನು ಭಾಗವತರು ನನಗೆ ಒದಗಿಸಿಕೊಡುತ್ತಿದ್ದರು. ಪಟ್ರಮೆಯಲ್ಲಿ ವೆಂಕಟರಮಣ ಶಬರಾಯರು, ಶಾಲಾ ಗುರುಗಳಾದ ರಘುರಾಮ ರಾವ್, ಯೋಗೀಶ ರಾವ್ ಮೊದಲಾದವರು ನನಗೆ ನಿರಂತರ ಪ್ರೋತ್ಸಾಹ ಕೊಡುತ್ತಿದ್ದರು. ಒಮ್ಮೆ ಶಾಲಾ ವಾರ್ಷಿಕೋತ್ಸವದ ಯಕ್ಷಗಾನದಲ್ಲಿ ನನ್ನದೇ ಭಾಗವತಿಕೆ, ಹೇಗೆ ಹಾಡಿದ್ದೆನೋ ಈಗ ನೆನಪಿಸಿಕೊಂಡರೆ ವಿಸ್ಮಯವೆನಿಸುತ್ತದೆ.
ಪಿಯುಸಿ ವಿದ್ಯಾಭ್ಯಾಸದ ಬಳಿಕ ಬೆಂಗಳೂರಿನಲ್ಲಿ ಹಗಲು ಕೆಲಸ ಮಾಡಿ ಸಂಧ್ಯಾ ಕಾಲೇಜಿನಲ್ಲಿ ಡಿಗ್ರಿ ಪೂರೈಸಿದೆ. ಯಕ್ಷಗಾನದ ಪರಿಸರ ದೂರವೇ ಇದ್ದರೂ ಕಲೆ ನನ್ನನ್ನು ಬಿಡಲಿಲ್ಲ. ಮುಂದೆ ಪುತ್ತೂರಿಗೆ ಬಂದೆ. ಭಾಗವತಿಕೆಯನ್ನು ಕಲಿಯಬೇಕು ಎಂಬ ಆಸೆ ಹುಟ್ಟಿತು. ಹಾಗೆಂದು ಗುರು ಮುಖೇನ ಕಲಿಯುವ ಸದವಕಾಶ ನನಗೆ ದೊರೆತದ್ದು ನನ್ನ ಮಗಳು ಜನಿಸಿದ ಬಳಿಕ. ಗುರುಗಳಾದ ಮೋಹನ್ ಬೈಪಾಡಿತ್ತಾಯರ ಬಳಿ ಭಾಗವತಿಕೆಯ ಪಾಠ ನನಗಾಯಿತು. ಮುಂದೆ ಹಿರಿಯರಾದ ಪದ್ಯಾಣ ಗಣಪತಿ ಭಟ್, ಕುರಿಯ ಗಣಪತಿ ಶಾಸ್ತ್ರಿಗಳು, ಬಲಿಪ ನಾರಾಯಣ ಭಾಗವತರು ನನಗೆ ಪ್ರಸಂಗದ ನಡೆಯನ್ನು ಕಲಿಸಿಕೊಟ್ಟಿದ್ದಾರೆ.
ಸುಮಾರು 30 ವರ್ಷ ಯಕ್ಷಗಾನ ರಂಗದಲ್ಲಿ ಅನುಭವ ಇರುವ ಇವರು, ಹವ್ಯಾಸಿ ಕಲಾವಿದನಾಗಿದ್ದಾಗ ಕರ್ನಾಟಕ ಮೇಳಕ್ಕೆ ರಜೆಗೆ ಭಾಗವಹಿಸುತ್ತಿದ್ದರು. ನಂತರ ಎಡನೀರು ಹಾಗೂ ಪ್ರಸ್ತುತ ಕಟೀಲು ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ. ಯಕ್ಷಗಾನ ರಂಗದ ಎಲ್ಲಾ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು."ಖರಹರಪ್ರಿಯ" ಇವರ ನೆಚ್ಚಿನ ರಾಗ. ನೆಚ್ಚಿನ ಚೆಂಡೆ ಮದ್ದಳೆ ವಾದಕರ ಬಗ್ಗೆ ಕೇಳಿದಾಗ ಇವರು ಹೇಳುವುದು ಒಬ್ಬೊಬ್ಬರೂ ಒಂದೊಂದು ಕಾರಣಕ್ಕೆ ಇಷ್ಟ ಎಂದು ಹೇಳುತ್ತಾರೆ. ಯಕ್ಷಗಾನ ರಂಗದಲ್ಲಿ ಇರುವ ಎಲ್ಲಾ ಭಾಗವತರು ನೆಚ್ಚಿನ ಭಾಗವತರು ಎಂದು ರಮೇಶ್ ಭಟ್ ಹೇಳುತ್ತಾರೆ. ಓದು, ಸಂಗೀತ ಆಲಿಸುವಿಕೆ ಇವರ ಹವ್ಯಾಸಗಳು.
2019ರಲ್ಲಿ ಬೈಲೂರು ಶ್ರೀ ಮಹಿಷಮರ್ದಿನಿ ಯಕ್ಷಗಾನ ಮಂಡಳಿ (ರಿ) ಮಂಡಳಿಯು "ದಿ.ಶ್ರೀ ಸುಬ್ಬಣ್ಣ ಭಟ್ ಬೈಲೂರು" ಇವರ ಸಂಸ್ಮರಣಾ ಅಂಗವಾಗಿ "ವಿದ್ವಾನ್ ಶ್ರೀ ಸರ್ವೋತ್ತಮ ತಂತ್ರಿ ಕೋರಂಗ್ರಪಾಡಿ" ಇವರ ಸವಿನೆನಪಿಗಾಗಿ "ಯಕ್ಷ ಸರ್ವೋತ್ತಮ-2019" ಪ್ರಶಸ್ತಿ ಶ್ರೀಯುತ ರಮೇಶ್ ಭಟ್ ಪುತ್ತೂರು ಇವರಿಗೆ ಸಿಕ್ಕಿರುತ್ತದೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- ಸ್ಥಿತಿ ಗತಿ ಹೇಳುವಷ್ಟು ನಾನು ಪ್ರಬುದ್ಧನಲ್ಲ. ಈಗ ಯಕ್ಷಗಾನವು ಮೊದಲಿಗಿಂತಲೂ ಹೆಚ್ಚು ಮಾಧ್ಯಮದ ಮೂಲಕ ಜನಪ್ರಿಯವಾಗುತ್ತಿದೆ.
ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- ಸಂವಹನ ಮಾಧ್ಯಮದ ಮೂಲಕ ಕಲಾವಿದರ ಪ್ರೇಕ್ಷಕರ ಮದ್ಯೆ ಮಾತುಕತೆ ಮಾಡಲು ಸಾಧ್ಯವಾಗುವ ಕಾರಣ ರಾಗ, ಕಥೆ, ಪಾತ್ರ ಇತ್ಯಾದಿಗಳ ಬಗ್ಗೆ ವಿಮರ್ಶೆ ಜಾಸ್ತಿ.
ಯಕ್ಷಗಾನ ರಂಗದ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:- ಹೇಳುವಂತಹ ಯೋಜನೆಗಳೇನೂ ಇಲ್ಲ. ಸಾಧ್ಯವಾಗುವಷ್ಟು ಸಮಯ ಭಾಗವತಿಕೆ ಮುಂದುವರಿಸುವುದು ಎಂದು ರಮೇಶ್ ಭಟ್ ಅವರು ಹೇಳುತ್ತಾರೆ.
30.03.1988 ರಂದು ಜಯಗೌರಿ ಅವರನ್ನು ವಿವಾಹವಾದ ಶ್ರೀಯುತ ರಮೇಶ್ ಭಟ್ ಪುತ್ತೂರು ಇಬ್ಬರು ಮಕ್ಕಳಾದ ರಜನಿ ಮತ್ತು ಶ್ರೀಹರಿ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
Photos By:- Harish Ujire & Naveena Krishna Bhat
- ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
91 8971275651
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ