ಡಾ. ಸುಧೀಂದ್ರ ಹಾಲ್ದೊಡ್ಡೇರಿ: ವಿನೀತ ಸ್ವಭಾವದ ನವನೀತ

Upayuktha
1

 



ಇಂದು ಅವರಿಗೆ ಪುಸ್ತಕ ಪ್ರಾಧಿಕಾರದ ಪ್ರಶಸ್ತಿ ಘೋಷಣೆಯಾಯಿತು! ಇಂದೇ ಅವರ ಮರಣವಾರ್ತೆಯೂ ಪ್ರಕಟ. ಅಭಿನಂದಿಸಬೇಕೆಂದು ಹೊರಟವರಿಗೆ ಅವರು ಇನ್ನಿಲ್ಲವೆಂಬ ದಾರುಣ ವಾರ್ತೆ. ಎಂತಹ ವಿಪರ್ಯಾಸ! 


ಎದೆ ಭಾರವಾಗಿದೆ. ಕಣ್ಣು ಕಂಬನಿಯ ಕುಳಿಯಾಗಿದೆ. ಸುಧೀಂದ್ರ ಹಾಲ್ದೊಡ್ಡೇರಿ ಒಳ್ಳೆಯ ಲೇಖಕರಷ್ಟೇ ಅಲ್ಲ; ಸಹೃದಯಿ. ಉದಾರಿ.  ಕರುಣಾಮಯಿ. ನಿಗರ್ವಿ. ಓರ್ವ ವಿಜ್ಞಾನಿ, ವಿಜ್ಞಾನ ಬರೆಹಗಾರ, ಅಂಕಣಕಾರ. ಮಿಗಿಲಾಗಿ ವಿನೀತ ಸ್ವಭಾವದ ನವನೀತ. ಡಿಆರ್‌ಡಿಒನಲ್ಲಿ ವಿಜ್ಞಾನಿಯಾಗಿ ಸಾಧನೆಯ ಹಾದಿಯಲ್ಲಿ ದಾಪುಗಾಲಿಟ್ಟವರು. ಎಚ್‌ಎಎಲ್‌ನಲ್ಲಿ ಹಿರಿಯ ಅಧಿಕಾರಿಯಾಗಿ ಆ ಕಾರ್ಖಾನೆಯ ಅಭಿವೃದ್ಧಿಯ ಪಥವನ್ನು ಕಾದುಕೊಂಡವರು. ಸುಮಾರು ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ವಿಜ್ಞಾನದ ಹೊಸ ಹೊಸ ಸಂಶೋಧನೆಗಳನ್ನೂ, ಸಂವೇದನೆಗಳನ್ನೂ ಕಬ್ಬಿಣದ ಕಡಲೆಯಾಗದಂತೆ ಲಲಿತವಹ ಕನ್ನಡದಲ್ಲಿ ನಿರೂಪಿಸುತ್ತಿದ್ದ ಅಂಕಣಕಾರ.


ರೇಖಾಚಿತ್ರ: ಶ್ರೀ ಮನೋಹರ ಆಚಾರ್ಯ, MAZ Foundation ಮುಖ್ಯಸ್ಥರು


ಕನ್ನಡವನ್ನು ತಮ್ಮ ನುಡಿಯಿಂದ ಮತ್ತು ನಡೆಯಿಂದ ಶ್ರೀಮಂತಗೊಳಿಸಿದವರು ಅವರು. ಸುಧೀಂದ್ರ ವಾಗ್ಮಿಯಲ್ಲ. ಆದರೆ ಮಾತಿಗೆ ನಿಂತರೆ ಮೃದು ವಚನಗಳಿಂದ, ಖಚಿತವಾದ ನಿಲುವಿನಿಂದ ಎದೆಗೇ ಕನ್ನ ಹಾಕುತ್ತಿದ್ದರು. ಅವರ ನಿಯಂತ್ರಿತ ಧ್ವನಿ ಕನ್ನಡಿಗರಿಗಷ್ಟೇ ಅಲ್ಲ,. ಮೈಕಿಗೂ ಪ್ರಿಯ ಎನಿಸುವ ಹಾಗಿತ್ತು. ಮೊದಲ ಭೇಟಿಯಲ್ಲೇ ನಮ್ಮ ಅತ್ಯಾಪ್ತರಲ್ಲಿ ಇವರೂ ಒಬ್ಬರೆಂಬ ಭಾವ ಆವರಿಸುತ್ತಿತ್ತು. ಅಂತಹ ಮೋಡಿ ಅವರದು.  ಶಾಂತ ಚಿತ್ತ. ವ್ಯವಧಾನ ಅವರ ವ್ಯಕ್ತಿತ್ವದ ಭಾಗ.  ಯಾವುದನ್ನೂ ಬೇಡಿ ಪಡೆದವರಲ್ಲ. ಯಾವುದಕ್ಕೂ ಆಸೆ ಪಟ್ಟವರಲ್ಲ. ಯಾರಿಗೂ ಡೊಗ್ಗು ಸಲಾಮು ಹೊಡೆಯದ ಸ್ವಾಭಿಮಾನಿ. ಆದರೆ ಅಹಂಕಾರಿಯಲ್ಲ.  


ಏಕಿಷ್ಟು ಆತುರ ಗೆಳೆಯ ಎಂದು ಕೇಳುವಂತಾಗಿದೆ. ಈ ಸಾವು ನ್ಯಾಯವೇ ಎಂದು ಬಿಕ್ಕುವಂತಾಗಿದೆ.  ಸಂಯಮ ಸ್ವಭಾವದ ಅವರ ಅಗಲಿಕೆಗೆ ಮನಸ್ಸು ಸಿದ್ಧವಾಗಿರಲಿಲ್ಲ. ಕಳೆದ ವಾರ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಇಂದೋ, ನಾಳೆಯೋ  ಮರಣವಾರ್ತೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ ಎಂಬ ಮಾತು ಕಳವಳಕ್ಕೆ ದೂಡಿತ್ತು; ಕರಳನ್ನು ಹಿಂಡಿತ್ತು. ಆ ವಿಷಮ ಗಳಿಗೆ ಬಂದೇಬಿಟ್ಟಿತು. 


ಮಗಳು ಲೇಖಕಿ ಮೇಘಾ ಸುಧೀಂದ್ರ ಮತ್ತು ಶ್ರೀಮತಿ ಸುಧೀಂದ್ರ ಅವರಿಗೆ ಅಗಲಿಕೆಯ ವೇದನೆ ಸಹಿಸುವ ಶಕ್ತಿಯನ್ನು ಕಾಲ ನೀಡಲಿ.

- ಕೆ. ರಾಜಕುಮಾರ್


Key words: Sudhindra Haldodderi, DRDO, ಸುಧೀಂದ್ರ ಹಾಲ್ದೊಡ್ಡೇರಿ, ಡಿಆರ್‌ಡಿಓ, ನುಡಿನಮನ,

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

1 Comments
  1. ಶ್ರೀಯುತರ ನಿಧನದ ಸಂದರ್ಭದಲ್ಲಿ ಅವರನ್ನು ನೆನೆಯುವ ಒಂದು ಆಪ್ತ ಬರಹ. ಕಡಿಮೆ ಶಬ್ದಗಳಲ್ಲಿ ಹೆಚ್ಚು ಹೇಳುತ್ತದೆ. ಧನ್ಯವಾದಗಳು ಸರ್

    ReplyDelete
Post a Comment
Maruti Suzuki Festival of Colours
Maruti Suzuki Festival of Colours
To Top