ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆರಂಭವಾಗಿ ರಾಜ್ಯದ ಹಲವು ಜಿಲ್ಲೆಗಳಿಗೆ ವೇಗವಾಗಿ ವ್ಯಾಪಿಸಿದ 'ಬಾಕಾಹು' (ಬಾಳೆಕಾಯಿ ಹುಡಿ) ಆಂದೋಲನಕ್ಕೆ ಕೇರಳದ ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪಿ. ಮುರಳೀಧರನ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಬಾಕಾಹು' ಆಂದೋಲನದ ರೂವಾರಿ ಮತ್ತು ಪ್ರೇರಣಾ ಶಕ್ತಿಯಾಗಿರುವ ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಅವರನ್ನು ಅಭಿನಂದಿಸಿ ಅವರು ಸಂದೇಶ ಕಳುಹಿಸಿದ್ದಾರೆ.
ಅವರ ಸಂದೇಶದ ಪೂರ್ಣಪಾಠ ಇಂತಿದೆ:
"ಬಾಕಾಹು ಆಂದೋಳನದ ವೇಗ ಮತ್ತು ಅಮಿತೋತ್ಸಾಹಕ್ಕೆ ಅಭಿನಂದನೆಗಳು”
"ಪ್ರೀತಿಯ ಕನ್ನಡಿಗ ಸ್ನೇಹಿತರೇ,
ನೀವು ಬಾಳೆಯ ಮೌಲ್ಯವರ್ಧನೆಯಲ್ಲಿ ಮೌನ ಕ್ರಾಂತಿ ನಡೆಸುತ್ತಿರುವುದನ್ನು ಕೇಳಿ, ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರದ ನಮಗೆ ತುಂಬ ಖುಷಿಯಾಗಿದೆ.ಈ ಆಂದೋಳನವನ್ನು ಮುನ್ನಡೆಸುತ್ತಿರುವ ವೇಗ ಮತ್ತು ಅಮಿತೋತ್ಸಾಹ ರೋಮಾಂಚಕ.
ಈ ವಿಚಾರದಲ್ಲಿ ನಾವು ಅಡಿಕೆ ಪತ್ರಿಕೆ ಸಂಪಾದಕ ಶ್ರೀ ಪಡ್ರೇಜಿ ಅವರಿಗೆ ನಮ್ಮ ಕೃತಜ್ಞತೆ ಮತ್ತು ಮೆಚ್ಚುಗೆಯನ್ನು ಸಲ್ಲಿಸಬಯಸುತ್ತೇವೆ. ಇವರು ನಮ್ಮ ಮತ್ತು ನಿಮ್ಮ ನಡುವೆ ಮಹತ್ವದ ಕೊಂಡಿಯಾಗಿದ್ದಾರೆ. ನಮ್ಮಗಳ ಸಂಬಂಧ ವರ್ಷಗಳ ಹಳೆಯದು. ಹಲಸು ಅಭಿವೃದ್ಧಿಯ ಬಗ್ಗೆ ಇದೇ ಥರದ ಆಂದೋಳನ ಸುರುಮಾಡಿದ ಕಾಲದಿಂದ ಬೆಳೆದು ಬಂದದ್ದು. ಆ ಆಂದೋಳನವೂ ಕೂಡಾ ದಕ್ಷಿಣದ ರಾಜ್ಯಗಳಲ್ಲೆಲ್ಲಾ ಗಣನೀಯ ಕೊಡುಗೆ ಕೊಟ್ಟಿದೆ.
ಈ ಲಾಕ್ ಡೌನ್ ಮತ್ತು ಕೋವಿಡ್ ಮಹಾಮಾರಿಯ ಕಾರಣದಿಂದ ರೈತರ ಉತ್ಪನ್ನಕ್ಕೆ ಬೆಲೆ ಸಿಗದಾಗ ನೀವು ಈ ಆಂದೋಳನವನ್ನು ಸಾಮುದಾಯಿಕ ಹುರುಪಿನಿಂದ ಮುನ್ನಡೆಸುತ್ತಿರುವುದಕ್ಕೆ ನಿಮಗೆ ನಮ್ಮ ಅಭಿನಂದನೆ ಸಲ್ಲಬೇಕು. ಬಾಳೆಕಾಯಿ ಹುಡಿಯಿಂದ ನೀವು ತಯಾರಿಸುತ್ತಿರುವ ವೈವಿಧ್ಯಮಯ ಹೊಸ ಪಾಕಗಳು ಅಚ್ಚರಿದಾಯಕ. ಮುಂದೆ ನೀವು ಈ ವಿಚಾರದಲ್ಲಿ ನಡೆಸುವ ಎಲ್ಲಾ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಕಾಯುತ್ತೇವೆ.
- ಡಾ. ಪಿ. ಮುರಳೀಧರನ್,
ಮುಖ್ಯಸ್ಥರು, ಆಲೆಪ್ಪಿ ಕೃಷಿ ವಿಜ್ಞಾನ ಕೇಂದ್ರ, ಕೇರಳ
Key words: Banana Flour, Banana Powder, Bakahu, ಬಾಕಾಹು, ಬಾಳೆಕಾಯಿ ಹುಡಿ, ಬಾಕಾಹು ಅಭಿಯಾನ, ಕೃಷಿ ವಿಜ್ಞಾನ ಕೇಂದ್ರ
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ