ಮಂಗಳೂರು: ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಹಾಗೂ ರಾಜ್ಯದ ಅತೀ ಶ್ರೀಮಂತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಮಳೆಗಾಲದಲ್ಲಿ ಸೋರಲಾರಂಭಿಸಿ ಹದಿಮೂರು ವರ್ಷಗಳೇ ಕಳೆದಿವೆ. ಇನ್ನೂ ದುರಸ್ತಿಯ ಭಾಗ್ಯ ಬಂದಿಲ್ಲ.
ಕ್ಷೇತ್ರದ ದೇವರ ಗರ್ಭಗುಡಿಯ ಸುತ್ತುಪೌಳಿಯ ಮೇಲ್ಛಾವಣಿ ಸಂಪೂರ್ಣ ಶಿಥಿಲಗೊಂಡಿದೆ. ಇದನ್ನು ಸಂಪೂರ್ಣ ದುರಸ್ತಿಗೊಳಿಸಬೇಕೆಂದು ಕ್ಷೇತ್ರದ ಹಿಂದಿನ ಹಾಗೂ ಇಂದಿನ ವ್ಯವಸ್ಥಾಪನಾ ಮಂಡಳಿ ವತಿಯಿಂದ ಮುಜರಾಯಿ ಇಲಾಖೆಗೆ ಎರಡೆರಡು ಬಾರಿ ಕ್ರಿಯಾ ಯೋಜನೆಯನ್ನು ಕಳುಹಿಸಲಾಗಿದೆ.
ಆದರೆ ಮುಜರಾಯಿ ಇಲಾಖೆ ಮಾತ್ರ ಇತ್ತ ಗಮನವನ್ನೇ ಹರಿಸಿಲ್ಲ. ರಾಜ್ಯದ ಶ್ರೀಮಂತ ದೇವಸ್ಥಾನದ ಈ ದುರವಸ್ಥೆಗೆ ಕಾರಣವಾದ ವ್ಯವಸ್ಥೆಗಳ ವಿರುದ್ಧ ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೋಟ್ಯಂತರ ಭಕ್ತರ ಆರಾಧ್ಯಮೂರ್ತಿ ಕುಕ್ಕೆ ಸುಬ್ರಹ್ಮಣ್ಯನಿಗೆ ಮಳೆಯಲ್ಲಿ ನೆನೆಯಬೇಕಾದ ಸ್ಥಿತಿ ಬಂದಿದೆ. ತನ್ನನ್ನು ನಂಬಿ ಬಂದ ಭಕ್ತರಿಗೆ ಮಳೆ-ಗಾಳಿ, ಸಿಡಿಲು-ಗುಡುಗೆಂಬ ಸಂಕಷ್ಟಗಳಿಂದ ದೂರ ಮಾಡುತ್ತಿರುವ ಸುಬ್ರಹ್ಮಣ್ಯನೇ ಮಳೆಯಲ್ಲಿ ತೋಯುತ್ತಿದ್ದಾನೆ.
ರಾಜ್ಯದ ಅತ್ಯಂತ ಹೆಚ್ಚಿನ ಆದಾಯದ ದೇವಸ್ಥಾನಗಳಲ್ಲಿ ಮೊದಲ ಸ್ಥಾನವನ್ನು ನಿರಂತರ ಕಾಯ್ದುಕೊಂಡಿರುವ ಸುಬ್ರಹ್ಮಣ್ಯದಲ್ಲೇ ಈ ದುಸ್ಥಿತಿ ಎಂದಾದರೆ ಮುಜರಾಯಿ ಇಲಾಖೆಯ
ಅಧೀನದಲ್ಲಿರುವ ರಾಜ್ಯದ ಇತರ ದೇವಸ್ಥಾನಗಳ ಸ್ಥಿತಿ ಹೇಗಿರಬಹುದು ಎಂದು ಊಹಿಸಿಕೊಳ್ಳಬಹುದು.
ಕ್ಷೇತ್ರದ ಗರ್ಭಗುಡಿ ಸುತ್ತುಪೌಳಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸುಬ್ರಹ್ಮಣ್ಯ ಸ್ವಾಮಿಯ ಗರ್ಭಗುಡಿಯ ಪಕ್ಕದಲ್ಲೇ ಇರುವ ಈ ಸುತ್ತುಪೌಳಿಯಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೂ ನಡೆಯುತ್ತವೆ.
ಈ ಸುತ್ತುಪೌಳಿ ಮೇಲ್ಫಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಕಳೆದ 13 ವರ್ಷಗಳಿಂದ ಗರ್ಭಗುಡಿಯ ಸುತ್ತುಪೌಳಿಯು ಮಳೆಯಿಂದ ಸೋರುತ್ತಿದೆ. ಪ್ಲಾಸ್ಟಿಕ್ ಹೊದಿಕೆಯಲ್ಲೇ ಮಳೆಗಾಲವನ್ನು ಕಳೆಯಲಾಗುತ್ತಿದೆ. ಈ ಬಾರಿ ಮತ್ತೆ ಪ್ಲಾಸ್ಟಿಕ್ ಹೊದಿಕೆಯೇ ಬೇಕಿದೆ.
ದೇವಸ್ಥಾನದ ವ್ಯವಸ್ಥಾಪನಾ ಮಂಡಳಿಯಿಂದ ಎರಡೆರಡು ಬಾರಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸಂಬಂಧಪಟ್ಟ ಮುಜರಾಯಿ ಇಲಾಖೆಗೆ ಕಳುಹಿಸಿದೆ. ಆದರೆ ಅಧಿಕಾರವಿರುವವರ ಅನಾಸಕ್ತಿ ಇದೀಗ ಈ ಕ್ಷೇತ್ರ ದುರಾವಸ್ಥೆಯ ಸ್ಥಿತಿಗೆ ತಲುಪುವಂತೆ ಮಾಡಿದೆ ಎನ್ನುವ ಆಕ್ರೋಶವೂ ವ್ಯಕ್ತವಾಗುತ್ತಿದೆ.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ