ಹಲವು ರಾಜ್ಯಪಾಲರ ನೇಮಕ, ವರ್ಗಾವಣೆ; ಕರ್ನಾಟಕಕ್ಕೆ ತಾವರ್‌ಚಂದ್ ಗೆಹ್ಲೋಟ್

Upayuktha
0


ಹೊಸದಿಲ್ಲಿ: ಕೇಂದ್ರ ಸಚಿವ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರಾಗಿ ನೇಮಕ ಮಾಡಲಾಗಿದೆ. ಇದೇ ವೇಳೆಗೆ ಮಧ್ಯಪ್ರದೇಶದ ರಾಜ್ಯಪಾಲರಾಗಿ ಮಂಗುಭಾಯಿ ಛಗನ್‌ಭಾಯಿ ಪಟೇಲ್ ಅವರನ್ನು ಮಧ್ಯಪ್ರದೇಶದ ರಾಜ್ಯಪಾಲರಾಗಿ ನಿಯುಕ್ತಿಗೊಳಿಸಲಾಗಿದೆ ಎಂದು ರಾಷ್ಟ್ರಪತಿ ಭವನದ ಪ್ರಕಟನೆ ತಿಳಿಸಿದೆ.


ಗೆಹ್ಲೋಟ್ (73) ಅವರು ಕೇಂದ್ರ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ಸಚಿವರಾಗಿದ್ದು, ಪ್ರಮುಖ ದಲಿತ ನಾಯಕರಾಗಿದ್ದಾರೆ.


ರಾಜ್ಯಸಭೆಯ ಸಭಾನಾಯಕರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ್ದಾರೆ. ಸಂಸದೀಯ ಸಮಿತಿಯೊಂದರ ಸದಸ್ಯರಾಗಿ ಮತ್ತು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿಯೂ ಅವರು ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟ ವಿಸ್ತರಣೆಯ ಕುರಿತು ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿರುವುದರ ನಡುವೆಯೇ ಅವರನ್ನು ಕರ್ನಾಟಕದ ರಾಜ್ಯಪಾಲರಾಗಿ ನೇಮಿಸಿರುವುದು ಈ ಚರ್ಚೆಗೆ ಪುಷ್ಟಿ ನೀಡಿದೆ.


ಕೆಲವು ಸಚಿವರ ಖಾತೆಗಳ ಬದಲಾವಣೆ ಹಾಗೂ ಕೆಲವು ಮಂದಿ ಹೊಸ ರಾಜ್ಯಪಾಲರ ನೇಮಕದ ಪ್ರಸ್ತಾವಗಳಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಂಕಿತ ಹಾಕಿದ್ದಾರೆ.


ಹರಿಬಾಬು ಕಂಭಂಪಟ್ಟಿ ಮತ್ತು ರಾಜೇಂದ್ರ ವಿಶ್ವನಾಥ್‌ ಅರಳೇಕರ್ ಅವರನ್ನು ಕ್ರಮವಾಗಿ ಮಿಜೋರಾಂ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಿಸಲಾಗಿದೆ. ಇದುವರೆಗೆ ಹಿಮಾಚಲ ರಾಜ್ಯಪಾಲರಾಗಿದ್ದ ಪಿ.ಎಸ್‌. ಶ್ರೀಧರನ್ ಪಿಳ್ಳೆ ಅವರನ್ನು ಗೋವಾಗೆ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ.  


ಈ ವರೆಗೆ ಮಿಜೋರಾಂ ರಾಜ್ಯಪಾಲರಾಗಿದ್ದ ಬಂಡಾರು ದತ್ತಾತ್ರೇಯ ಅವರನ್ನು ಹರ್ಯಾಣಕ್ಕೆ ವರ್ಗಾಯಿಸಲಾಗಿದೆ. ಹರ್ಯಾಣದ ರಾಜ್ಯಪಾಲರಾಗಿದ್ದ ಸತ್ಯದೇವ್ ನಾರಾಯಣ ಆರ್ಯ ಅವರನ್ನು ತ್ರಿಪುರಾಗೆ ವರ್ಗಾಯಿಸಲಾಗಿದೆ. ತ್ರಿಪುರಾ ರಾಜ್ಯಪಾಲರಾಗಿದ್ದ ರಮೇಶ್ ಬೈಸ್ ಅವರನ್ನು ಜಾರ್ಖಂಡ್ ರಾಜ್ಯಪಾಲರಾಗಿ ವರ್ಗಾವಣೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top