ಬಾಕಾಹು ಆಂದೋಲನ: ಕನ್ನಾಡ ಕೇವೀಕೆ ಮಿತ್ರರೇ, ಸ್ವಲ್ಪ ಕಿವಿ, ಸ್ವಲ್ಪ ಮನಸ್ಸು- ಇತ್ತ ಕೊಡಿ

Upayuktha
0

ವಾರದಲ್ಲಿ ಹಾಳಾಗುವ ಬಾಳೆಕಾಯಿಗೆ ಹುಡಿಯ ಅವತಾರ ಕೊಡಿ. ಥಟ್ಟನೆ ಅದರ ಆಯಸ್ಸು ಆರು ತಿಂಗಳಿಗೇರಿ ಬಿಡುತ್ತದೆ.


ಮೂರು ದಿನದ ಲಘುಶ್ರಮದಲ್ಲಿ ಬಾಳೆಕಾಯಿಯ ಮೌಲ್ಯವರ್ಧನೆ. ಮಾತ್ರವಲ್ಲ ಮಾನವರ್ಧನೆಯೂ ಕೂಡಾ!


ಅನಂತರ ಅದು ಬಹೂಪಯೋಗಿ ಹಿಟ್ಟು. ಅಂದರೆ ಗರಿಷ್ಠ ಬಳಕೆದಾರರ ಹೊಟ್ಟೆ ಸೇರಬಹುದಾದ ಕಚ್ಚಾ ವಸ್ತು!


ನಾನು ಕೃಷಿಕ. ಬಾಳೆಕಾಯಿ/ ಹಣ್ಣುಗಳಿಂದ ಮಾಡಿದ ದೋಸೆ, ಹಲ್ವ, ಪಾಯಸ, ಜ್ಯಾಮ್- ಇನ್ನೇನೇನೋ ತಿಂದಿದ್ದೇನೆ. ಆದರೆ ಬಾಳೆಕಾಯಿ ಹುಡಿ (ಬಾಕಾಹು) ಯಿಂದ (ಫ್ಲೋರ್ ರೂಟ್) ತಿಂಡಿ ತಿಂದದ್ದು ಕಳೆದ ವಾರ, 65ನೇ ವಯಸ್ಸಿನಲ್ಲಿ! ಎಂಥಾ ವಿಪರ್ಯಾಸ ನೋಡ್ರೀ!

ಬಾಕಾಹುವಿನ ವಿಚಾರ ವೈರಲ್ ಆಗುತ್ತಿದ್ದಂತೆಯೇ ಚುರುಕಾದ ಒಂದು ಕೃಷಿ ವಿಜ್ಞಾನ ಕೇಂದ್ರ ದಾವಣಗೆರೆಯದು. ಐಸಿಎಆರ್ - ತರಳಬಾಳು ಕೇವೀಕೆ. ಮಳೆಗಾಲ ಅಲ್ವೇ. ಈ ಕೇಂದ್ರದಲ್ಲಿ ಡ್ರೈಯರ್ ಇಲ್ಲ. ಗೃಹ ವಿಜ್ಞಾನ ವಿಶೇಷಜ್ಞೆಯೂ ಇಲ್ಲ. ಆದರಿವರು ಕೈಕಟ್ಟಿ ಕೂರಲಿಲ್ಲ.


ಮಣ್ಣು ವಿಜ್ಞಾನಿಯೇ ಮುಂದೆ ನಿಂತರು. ಸಿಬಂದಿಗೆ ಸೂಚನೆ ಕೊಟ್ಟು ಲಭ್ಯವಿದ್ದ ಬಿಸಿಲು, ರಾತ್ರಿ ಓವೆನಿನ ಆಶ್ರಯ ಕೊಟ್ಟು ಬಾಕಾಹು ಮಾಡಿಯೇಬಿಟ್ಟರು. ಬೇರೆಬೇರೆ ಪಾಕ - ಮಿರ್ಚಿ ಬಜ್ಜಿ, ಆಲೂ ಪರೋಟ, ತಾಲಿಪ್ಪಿಟ್ಟು- ಇತ್ಯಾದಿ ಮಾಡಿದರು. ಎಲ್ಲರಿಗೂ ಮೆಚ್ಚುಗೆಯಾಯ್ತು.


ಕರ್ನಾಟಕದ ಕೇವೀಕೆಯ ಸಕಲ ಮಿತ್ರರಿಗೆ ಒಂದು ಸಲಹೆ 

ನಿಮ್ಮಲ್ಲಿ ಹೆಚ್ಚಿನ ಎಡೆಗಳಲ್ಲೂ ಡ್ರೈಯರ್ ಇದೆ. ಇಲ್ಲವಾದರೆ ಹತ್ತಿರದ ರೈತರ ಡ್ರೈಯರ್ ಆಶ್ರಯಿಸಿ ಬಾಕಾಹುವಿನ ಪ್ರಾಯೋಗಿಕ ಉತ್ಪಾದನೆ ಮಾಡಿ. ನಿಮ್ಮ ವಿಜ್ಞಾನಿಗಳಿಂದ ಹಿಡಿದು, ತಳ ಮಟ್ಟದ ಸಿಬಂದಿ, ಚಾಲಕರು- ಎಲ್ಲರೂ ಅರ್ಧರ್ಧ ಕಿಲೋ ಮನೆಗೆ ಒಯ್ಯಿರಿ. ಪರಸ್ಪರ ವಾಟ್ಸಪ್ ಮಾಡಿ ಬೇರೆಬೇರೆ ಪಾಕ ತಯರಿಸಿ. ಅನುಭವ, ಗುಣಾವಗುಣ ಹಂಚಿಕೊಳ್ಳಿ. 


ಊರಿಗೆ ಪಾಠ ಹೇಳಬೇಕಾದ ನೀವು ಮೊದಲು 'ಫಸ್ಟ್ ಹ್ಯಾಂಡ್' ಅನುಭವ ಮಾಡಿಕೊಳ್ಳಿ. ಆಗ ನೀವು 'ಮಾಡಿ ಹೇಳುವ' ಅಪೂರ್ವ ವಿಜ್ಞಾನಿಗಳಾಗುತ್ತೀರಿ. ಕೃಷಿಕರ ಮೆಚ್ಚುಗೆಗೆ ಪಾತ್ರರಾಗುತ್ತೀರಿ. 


ಈಗ ಮೂರು ಮುಖ್ಯ ವಿಚಾರಗಳಿಗೆ ಆದ್ಯತೆ ಕೊಡಬೇಕಿದೆ.

• ಅತಿ ಸುಲಭವಾದ ಮನೆಮಟ್ಟದ ಬಾಕಾಹು ತಯಾರಿಯ ತರಬೇತಿ.

• ಬಾಕಾಹುವಿನಿಂದ ಮಾಡಬಹುದಾದ ಪುಷ್ಟಿಕರ ಆಹಾರವೈವಿಧ್ಯದ ಪ್ರಚಾರ

• ಬಾಕಾಹುವಿನ ಪೋಷಕಾಂಶಗಳ ವಿವರ ಮತ್ತು ಬಳಕೆಯಲ್ಲಿ ಗಮನಿಸಬೇಕಾದ ಸೂಕ್ಷ್ಮಗಳು.


ತಡವೇಕೆ?  

ಕನ್ನಾಡ ಎಲ್ಲಾ ಕೇವೀಕೆಯ ಮಂದಿಯೂ ಬಾಳೆಕಾಯಿ ಮತ್ತದರ ತಿಂಡಿ ತಿಂದ ಸ್ವಾನುಭವಿಗಳಾಗಿ. ಏಕೆಂದರೆ ತುಂಬ ಕೃಷಿಕಸ್ನೇಹಿಯಾಗಬಲ್ಲ ಬಾಕಾಹು ವಿದ್ಯೆಗೆ ಆಂದೋಳನದ ರೂಪ ಕೊಡಬೇಕಾದವರು ನೀವು.

-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು


Key Words: Banana Flour, Banana Powder, Bakahu Campaign, KVK, ಬಾಕಾಹು ಆಂದೋಲನ, ಬಾಕಾಹು ಅಭಿಯಾನ, ಕೆವಿಕೆ, ಕೃಷಿ ವಿಜ್ಞಾನ ಕೇಂದ್ರ, ಬಾಳೆಕಾಯಿ ಹುಡಿ,


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top