ಸಂಸಾರ ಚಕ್ರದ ಕೇಂದ್ರ ಬಿಂದು ಯಾರು...?

Upayuktha
0


 

ಜ್ಞಾನಿಗಳಾದವರೆಲ್ಲ ಸಂಸಾರವೆಂಬುದು ಬಂಧನ, ಅದರಿಂದ ಮುಕ್ತಿ ಪಡೆವುದೇ ಜೀವನದ ಗುರಿಯಾಗಬೇಕು, ಸಂಸಾರ ಮುಕ್ತನಾದವನೇ ಸಾಧಕನಾದಾನು. ಎಂಬಂಥ ಸಂದೇಶವುಳ್ಳಂಥ ಹಲವಾರು ಕಥೆಗಳನ್ನು, ಕವನಗಳನ್ನು, ಭಜನೆಗಳನ್ನು, ವಚನಗಳನ್ನು, ಗಾದೆಗಳನ್ನು, ಸುಭಾಷಿತಗಳನ್ನು ಬರೆದು ರಾಶಿ ಹಾಕಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯವೋ ಆ ಜ್ಞಾನಿಗಳಿಗೇ ಗೊತ್ತು. (ಇವರೆಲ್ಲರೂ ಸಂಸಾರ ಬಂಧನದೊಳಗಿಂದಲೇ ಈ ಪ್ರಪಂಚಕ್ಕೆ  ಬಂದವರು ಎನ್ನುವುದೂ ಅಷ್ಟೇ ಸತ್ಯ) ಅಷ್ಟು ಎತ್ತರಕ್ಕೆ ಹೋದಾಗ ನಮ್ಮಂಥವರಿಗೂ ಗೊತ್ತಾಗಬಹುದೋ ಏನೊ. ಅದರ ಹೊರತಾಗಿ ಸಾಮಾನ್ಯ ದೃಷ್ಟಿಯಿಂದ ನೋಡಿದರೆ ಇದರ ದೃಷ್ಟಿಕೋನವೇ ಬದಲಾಗುವುದರಲ್ಲಿ ಸಂದೇಹವಿಲ್ಲ.


ಸಂಸಾರವೆಂದರೆ ಬಂಧನ ಎಂಬುದು ಖಂಡಿತ ಸತ್ಯ. ಆದರೆ ಇದು ಪ್ರೀತಿಯ ಬಂಧನವಾದಾಗ ಗಂಡ, ಹೆಂಡತಿ, ಮಕ್ಕಳು ಮತ್ತು ಅದಕ್ಕೆ ಹತ್ತಿರದ ಸಂಬಂಧಗಳು ಹಿತವಾಗುತ್ತವೆ. ಮತ್ತು ಅದೊಂದು ಸುಂದರ ಸಂಸಾರ ಚಕ್ರವಾಗುತ್ತದೆ. ಅಂಥ ಚಕ್ರಕ್ಕೆ ಒಂದು ಕೇಂದ್ರ ಬಿಂದು, ಒಂದು ಪರಿಧಿ ಇರುತ್ತದೆ ಅಥವಾ ಇರಲೇಬೇಕು.


ಸಂಸಾರ ಎಂದೊಡನೆ ಅಲ್ಲೊಂದು ಹೆಣ್ಣು ಇರಲೇಬೇಕು. ಹಾಗೂ ಆ ಹೆಣ್ಣು ಗೃಹಿಣಿಯಾಗಿರಬೇಕು. ಬೇರೆಲ್ಲ ಸದಸ್ಯರು ಆ ಗೃಹಿಣಿಯೆಂಬ ಕೇಂದ್ರ ಬಿಂದುವಿನ ಸುತ್ತ ವ್ಯಾಪಿಸಿರುವಂಥ ಗಂಡ, ಮಕ್ಕಳು, ಮೊಮ್ಮಕ್ಕಳೆಂಬ ಸಂಬಂಧಗಳು. ಹೇಗೆ ಚಕ್ರಕ್ಕೊಂದು  ಕೇಂದ್ರಬಿಂದು ಇರುತ್ತದೆ ಹಾಗೂ ಪರಿಧಿ ಇರುತ್ತದೆಯೋ ಅದೇರೀತಿ ಸಂಸಾರಚಕ್ರಕ್ಕೂ ಪರಿಧಿ ಇರುತ್ತದೆ ಹಾಗೂ ಕೇಂದ್ರಬಿಂದುವೂ ಇರುತ್ತದೆ. ಆ ಕೇಂದ್ರಬಿಂದುವೇ ಗೃಹಿಣಿಯಾದ ಮನೆಯ ಯಜಮಾನಿ. ಕುಟುಂಬದ ಸದಸ್ಯರು ಯಾವಾಗ ತಮ್ಮತಮ್ಮ ಕರ್ತವ್ಯಕ್ಕೆ ವಿಮುಖರಾಗಿ ಸೋಮಾರಿಗಳಾಗತೊಡಗುತ್ತಾರೋ, ಅಂದರೆ ಕೇಂದ್ರ ಬಿಂದುವಿನೆಡೆಗೆ ಸೆಳೆಯಲ್ಪಡುತ್ತಾರೋ ಆವಾಗ ಈ ಗೃಹಿಣಿಯೆಂಬುವವಳು ಅವರವರ ಕಾರ್ಯವ್ಯಾಪ್ತಿಯನ್ನು ನೆನಪಿಸಿ ಪುನಃ ಸಂಸಾರ ಚಕ್ರದ ಪರಿಧಿಯೆಡೆಗೆ ತಳ್ಳುವವಳಾಗುತ್ತಾಳೆ.

 


ಅದೇರೀತಿ ಯಾರು ತಮ್ಮತಮ್ಮ ಪರಿಧಿಯನ್ನು ಮೀರಿ ಬೆಳೆಯುತ್ತಾರೋ ಅಥವಾ ಅತಿಕ್ರಮಿಸುತ್ತಾರೋ ಆಗ ಅಂಥವರನ್ನು ಪರಿಧಿಯೊಳಗೆ ಸೆಳೆದುಕೊಳ್ಳುವವಳೂ ಕೇಂದ್ರಬಿಂದುವಾದ ಗೃಹಿಣಿಯೇ ಆಗಿರುತ್ತಾಳೆ. ಒಂದು ಸಂಸಾರಚಕ್ರದಲ್ಲಿ ಗೃಹಿಣಿಯೆಂಬುವವಳು ಇಡೀ ಚಕ್ರವನ್ನೇ ವ್ಯಾಪಿಸಿರುತ್ತಾಳೆ. ಕೇಂದ್ರ ಬಿಂದುವೂ ಅವಳೆ, ಪರಿಧಿಯೂ ಅವಳೆ, ನಡುವಿನ ಅವಕಾಶವೂ ಅವಳೆ. ಇಂತಿರುವ ಸಂಸಾರನೌಕೆಯ ನಾವಿಕನಂತಿರುವ ಗೃಹಿಣಿಯು ಸಂಸಾರಚಕ್ರಕ್ಕೆ ಆಧಾರವಾಗಿದ್ದಾಗ ಜೀವನ ರಥವು ಯಾವುದೇ ಅಡೆತಡೆ ಇಲ್ಲದೆ ನಡೆಯುತ್ತದೆ. ಯಾವಾಗ ಈ ವ್ಯವಸ್ಥೆಗೆ ಅಪಾಯವಾಯಿತೋ ಆಗ ಅಂಥ ಚಕ್ರವು ಸಮತೋಲನವನ್ನು ಕಳಕೊಂಡಂತೆಯೇ ಹಾಗೂ ಗುರಿ ತಪ್ಪಿದಂತೆಯೇ. 


ಇತ್ತೀಚಿನ ಬೆಳವಣಿಗೆ ಎಂದರೆ ಕೊರೋನ ಸಮಯದಲ್ಲಿ ವಿಧಿಸಿದ ಲಾಕ್ಡೌನ್ ಎಂಬ ವ್ಯವಸ್ಥೆ. ಈ ಲಾಕ್ಡೌನ್ ವೇಳೆಯಲ್ಲಿ ಎಲ್ಲ ವ್ಯವಹಾರಗಳಂತೆ ವಾಹನಗಳ ಓಡಾಟವೂ ಕಡಿಮೆಯೇ ಅಥವಾ ಸ್ಥಗಿತವಾಗಿಯೇ ಇರುತ್ತದೆ. ಆದರೂ ಅನಿವಾರ್ಯ ಸ್ಥಿತಿಯಲ್ಲಿ ನಾವು ವಾಹನಗಳನ್ನು ಚಲಾಯಿಸುವ ಸಂದರ್ಭ ಬರುತ್ತದೆ. ಖಾಲಿ ಇರುವ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಬಹಳ ಸುಲಭವೆಂದು ಅಂದುಕೊಳ್ಳಬಹುದು. ಆದರೆ ಬಹಳ ಅಗಲವಾಗಿರುವಂಥ ರಾಜರಸ್ತೆಗಳಲ್ಲಿ ಒಂದೇ ವಾಹನ ಚಲಾಯಿಸುವಾಗ ನಮ್ಮ ವ್ಯಾಪ್ತಿ ಮೀರಿ ವಾಹನ ಹೋಗುವುದು ಕೆಲವರಿಗಾದರೂ ಅನುಭವಕ್ಕೆ ಬಾರದಿರಲಿಕ್ಕಿಲ್ಲ.


ರಸ್ತೆಗಳಲ್ಲಿ ಒಂದೋ ಬಿಳಿಯ ಪಟ್ಟಿಗಳು ಇರಬೇಕು ಅಥವಾ ಎದುರಿಂದ ಬರುವ ವಾಹನಗಳಿರಬೇಕು ಹಾಗಿದ್ದಾಗ ನಮ್ಮ ದಾರಿ, ಗುರಿ ಸರಿಯಾಗುತ್ತದೆ. ಅದಿಲ್ಲ ದಿಕ್ಕು ತಪ್ಪುವುದಂತು ಖಂಡಿತ. ಹೇಗೆ ಅಗಲವಾಗಿರುವಂಥ ಸಮುದ್ರದಲ್ಲೋ ಆಕಾಶ ಮಾರ್ಗದಲ್ಲೋ ದಿಕ್ಸೂಚಿ ಇಲ್ಲದೆ ಪ್ರಯಾಣ ಅಸಾಧ್ಯವೋ ಅದೇ ನ್ಯಾಯ ಭೂಮಾರ್ಗಕ್ಕೂ ಅನ್ವಯಿಸುತ್ತದೆ. ಹಾಗೂ ಅದೇ ನಿಯಮ ಸಂಸಾರಚಕ್ರಕ್ಕೂ ಅನ್ವಯಿಸುತ್ತದೆ. ದಾರಿ ತಪ್ಪದಂತೆ, ಅಥವಾ ಎಡ ಬಲ ಮೀರದಂತೆ ಚುಕ್ಕಾಣಿ ಇರುವುದೇ ಗೃಹಿಣಿಯಲ್ಲಿ. ನಮ್ಮ ದೈನಂದಿನ ವ್ಯವಹಾರದಲ್ಲೂ ನಮಗೆ ಇದರ ಅರಿವಾಗುತ್ತದೆ. ಹೇಗೆಂದರೆ ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿ ಉಳ್ಳಂಥ, ದೆಶಪ್ರೇಮ ಇದ್ದಂಥ ವಿರೋಧ ಪಕ್ಷವಿದ್ದಾಗ ಮಾತ್ರ ದೇಶಾಭಿವೃದ್ಧಿ ಆಗುತ್ತದೆ.


ಅದೇರೀತಿ ಮನೆಯ ಯಜಮಾನನಾದವನು ಮಾಡುವಂಥ ಯಾವುದೇ ಕ್ರಿಯೆಗೂ ಮೂದಲನೆಯದಾಗಿ ವಿರೋಧ ವ್ಯಕ್ತ ಪಡಿಸುವವಳೇ ಜವಾಬ್ದಾರಿಯುತ ಗೃಹಿಣಿ. ಹಾಗೆಂದು ಮನೆಯ ಏಳಿಗೆಯನ್ನು ಆಕೆ ಬಯಸಲಾರಳೆಂದಲ್ಲ. ಮಾಡುವ ವ್ಯವಹಾರವು ವರ್ತಮಾನಕ್ಕೆ ಅಥವಾ ಭವಿಷ್ಯಕ್ಕೆ ಸೂಕ್ತವೋ ಅಲ್ಲವೋ ಎಂಬ ಮಂಥನ ನಡೆಸಿ ಸೂಕ್ತವೆಂದಾಗ ಮಾತ್ರ ಒಪ್ಪಿಗೆ ಕೊಡುವಂಥವಳಾದ್ದರಿಂದ ಆಕೆ ಮೊದಲು ವಿರೋಧ ವ್ಯಕ್ತ ಪಡಿಸಿದರೂ ಅದು ಉದ್ಧಾರಕ್ಕೇ ಆಗಿರುತ್ತದೆ. ಆದ್ದರಿಂದ ಅಲ್ಲಿ ಕೂಡ ಸಂಸಾರ ಚಕ್ರಕ್ಕೆ ಆಕೆಯ ಸ್ಪರ್ಶ ಅನಿವಾರ್ಯ. ನಮ್ಮಲ್ಲಿ ಹಣ ಎಷ್ಟೂ ಇರಬಹುದು ಅಥವ ಮಾಡುವ ಖರ್ಚನ್ನು ಯಾರೂ ಪ್ರಶ್ನಿಸದಿರಬಹುದು ಆದರೂ ಗೃಹಿಣಿಯೆಂಬುವವಳು ಮನೆಯಲ್ಲಿದ್ದಾಗ ದುಂದು ವೆಚ್ಚ ಮಾಡಲು ಮನಸ್ಸು ಹಿಂದೇಟು ಹಾಕುವುದು.


ಆದ್ದರಿಂದ ನನಗನಿಸುತ್ತದೆ ಯಾವುದೇ ವ್ಯಕ್ತಿಯ ಶ್ರೇಯಸ್ಸಿಗೆ ಸಂಸಾರದಿಂದ ಪಲಾಯನವಾಗುವುದು ಖಂಡಿತ ಸನ್ಮಾರ್ಗವಲ್ಲ. ಬದಲಾಗಿ ಹೆಂಡತಿ ಮಕ್ಕಳೊಂದಿಗೆ, ಹಿರಿಯರೊಂದಿಗೆ, ನೆರೆಕರೆಯವರೊಂದಿಗೆ ಅಂತೆಯೇ ಸಮಾಜದೊಂದಿಗೆ ಸಹಬಾಳ್ವೆ ನಡೆಸಿ ಕೃಷ್ಣ ಹೇಳಿದಂತೆ 'ಪದ್ಮಪತ್ರ ಮಿವಾಂಭಸಾ' ಎನ್ನವಂತಿರುವುದೇ ನಿಜವಾದ ಮುಕ್ತಿಮಾರ್ಗ. ಈ ದೃಷ್ಟಿಯಿಂದ ನೋಡಿದರೂ ಶ್ರೀಕೃಷ್ಣನೇ ಶ್ರೇಷ್ಠನಾಗುತ್ತಾನೆ. ಅವನು ಯಾವಾಗಲೂ ಸಂಸಾರದಿಂದ ವಿಮುಖನಾಗಬೇಕೆಂದು ಹೇಳಿಲ್ಲ. ಸಂಸಾರದೊಳಗಿದ್ದೇ ಮುಕ್ತನಾಗಬಹುದೆಂದು ಬದುಕಿ ಬಾಳಿ ತೋರಿಸಿದ್ದಾನೆ. ಗೃಹಿಣಿ ಗೃಹಮುಚ್ಯತೇ... ಆಹಾ ಎಷ್ಟೊಂದು ಅರ್ಥಪೂರ್ಣ ನಮೋನ್ನಮಃ

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top