ವೆರುಕಸ್ ಕಾರ್ಸಿನೋಮಾ: ನಶ್ಯ ಸೇದುವವರಲ್ಲಿ ಕಾಣಿಸಿಕೊಳ್ಳುವ ಬಾಯಿಯ ಕ್ಯಾನ್ಸರ್

Upayuktha
0


 

ಇದೊಂದು ಬಾಯಿಯೊಳಗೆ ಹೆಚ್ಚಾಗಿ ಕಾಣಿಸಿಕೊಳ್ಳುವ ವಿಶೇಷವಾದ ಬಾಯಿಯ ಕ್ಯಾನ್ಸರ್ ಆಗಿದ್ದು, ಎಲ್ಲಾ ಕ್ಯಾನ್ಸರ್‌ಗಳಂತೆ ಬಹಳ ಅಪಾಯಕಾರಿಗಾಗಿ ವರ್ತಿಸುವುದಿಲ್ಲ. ನೋಡಲು ಬಹಳ ವಿಕಾರವಾಗಿ, ಅಸಹ್ಯವಾಗಿ ಕಾಣುವ ಈ ಕ್ಯಾನ್ಸರ್ ತನ್ನ ವರ್ತನೆಯಲ್ಲಿ ಅಷ್ಟೊಂದು ಭೀಕರವಾಗಿ ವರ್ತಿಸುವುದಿಲ್ಲ. ಇತರ ಬಾಯಿಯ ಕ್ಯಾನ್ಸರ್‍ಗಳಿಗಿಂತ ವಿಭಿನ್ನವಾಗಿ ವರ್ತಿಸುವ ಮತ್ತು ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುವ ಗುಣವನ್ನು ಈ ವೆರುಕಸ್ ಕಾರ್ಸಿನೋಮ ಹೊಂದಿರುತ್ತದೆ. ಹೆಚ್ಚಾಗಿ ತಂಬಾಕು ಸೇವಿಸುವವರಲ್ಲಿ ಮತ್ತು ನಶ್ಯವನ್ನು ಸೇದುವವರಲ್ಲಿ ಕಾಣಿಸಿಕೊಳ್ಳುವ ಕಾರಣದಿಂದ ನಶ್ಯ ಸೇದುಗರ ಕ್ಯಾನ್ಸರ್ (ಸ್ನಿಫ್ ಡಿಪ್ಪರ್ಸ್ ಕ್ಯಾನ್ಸರ್) ಎಂದೂ ಅನ್ವರ್ಥ ನಾಮವನ್ನು ಪಡೆದಿದೆ.


ರೋಗದ ಲಕ್ಷಣಗಳು ಏನು?

1. ಸಾಮಾನ್ಯವಾಗಿ 60 ವಯಸ್ಸಿನವರಿಗಿಂತ ಮೇಲ್ಪಟ್ಟವರಲ್ಲಿ ಹೆಚ್ಚು ಕಾಣಿಸುತ್ತದೆ.

2. ಪುರುಷರಲ್ಲಿ ಜಾಸ್ತಿ ಕಂಡುಬರುತ್ತದೆ.

3. ವಸಡು, ಕೆನ್ನೆಯ ಒಳಭಾಗ, ದವಡೆಯ ಮೇಲ್ಭಾಗ, ನಾಲಗೆಯ ಕೆಳಭಾಗ ಮತ್ತು ಬಾಯಿಯ ಮೇಲಂಗಳದಲ್ಲಿ ಹೆಚ್ಚು ಕಾಣಿಸುತ್ತದೆ. ನಾಲಗೆಯಲ್ಲಿ ಕಂಡುಬರುವುದು ಬಹಳ ಅಪರೂಪ. ಜನನಾಂಗ, ವೃಷಣ, ಅನ್ನನಾಳ, ದ್ವನಿನಾಳಗಳಲ್ಲಿಯೂ ಕಂಡು ಬರುವ ಸಾಧ್ಯತೆ ಇದೆ.

4. ಬಹಳ ನಿಧಾನವಾಗಿ ಬೆಳೆಯುತ್ತದೆ ಮತ್ತು ದೊಡ್ಡದಾದ ಜಾಗವನ್ನು ಅವರಿಸಿಕೊಂಡು ಗಡ್ಡೆಯ ರೂಪದಲ್ಲಿ ಹೊರಭಾಗಕ್ಕೆ ಚಾಚಿಕೊಂಡು ಬೆಳೆಯುತ್ತದೆ. ಸಾಮಾನ್ಯವಾಗಿ ಬಿಳಿಯಾದ ದೊಡ್ಡ ಕಲೆಗಳ ನಡುವೆ ಈ ಬೆಳವಣಿಗೆ ಕಂಡುಬರುತ್ತದೆ.

5. ಸುತ್ತಲಿನ ಎಲುಬು ಮತ್ತು ಕಾರ್ಟಲೇಜ್‍ಗಳಿಗೆ ಬಹಳ ಬೇಗ ಅವರಿಸಿಕೊಳ್ಳುತ್ತದೆ. ಗಡ್ಡೆಯ ಕೆಳಭಾಗದ, ಎಲುಬಿನ ಹೊರಭಾಗದ ಪೆರಿಯೋಸ್ಟಿಯಮ್ ಪದರಕ್ಕೆ ಬೇಗನೆ ಹರಡಿಕೊಂಡು ಎಲುಬನ್ನು ನಾಶ ಪಡಿಸುತ್ತದೆ.

6. ಕುತ್ತಿಗೆಯಲ್ಲಿನ ಲಿಂಪ್ ಗ್ರಂಥಿಗಳು ದೊಡ್ಡದಾಗುತ್ತದೆ. ಈ ಗ್ರಂಥಿಗಳು ಮುಟ್ಟುವಾಗ ನೋವುಂಟು ಮಾಡುತ್ತದೆ.

7. ಗಡ್ಡೆಯ ನಡುವೆ ಪದರಗಳ ಅಥವಾ ಹಾಳೆಗಳ ನಡುವೆ ಕಣಿವೆಯೂ ಇರುತ್ತದೆ.

8. ಮಾತನಾಡಲು ಕಷ್ಟವಾಗುತ್ತದೆ ಮತ್ತು ಆಹಾರ ಸೇವಿಸಲು ಕಷ್ಟವಾಗುತ್ತದೆ.


ಇತರ ಬಾಯಿ ಕ್ಯಾನ್ಸರ್‍ಗಿಂತ ಹೇಗೆ ಬಿನ್ನವಾಗಿರುತ್ತದೆ?

1. ಬಾಯಿ ಕ್ಯಾನ್ಸರ್ ಬಹಳ ಬೇಗನೆ ‘ಮೆಟಾಸ್ಟಾಸಿಸ್’ ಎಂಬ ಪ್ರಕ್ರಿಯೆ ಮುಖಾಂತರ ದೂರದ ಅಂಗಗಳಿಗೆ ರಕ್ತನಾಳದ ಮುಖಾಂತರ ಅಥವಾ ಲಿಂಫ್ ದ್ರವದ ಮುಖಾಂತರ ಹರಡುತ್ತದೆ. ಆದರೆ ವೆರುಕಸ್ ಕಾರ್ಸಿನೋಮಾ ದೂರದ ಅಂಗಾಂಶಗಳಿಗೆ ಹರಡುವುದೇ ಇಲ್ಲ.

2. ವೆರುಕಸ್ ಕಾರ್ಸಿನೋಮ 50-60ರ ಹರೆಯದಲ್ಲಿ ಬರುತ್ತದೆ. ಆದರೆ ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್‍ಗಳು 30-40ರ ವಯಸ್ಸಿನಲ್ಲಿಯೇ ಈಗೀಗ ಕಾಣಿಸಿಕೊಳ್ಳುತ್ತದೆ.

3. ಬಾಯಿ ಕ್ಯಾನ್ಸರಿಗೆ ಸರ್ಜರಿ ಮತ್ತು ರೇಡಿಯೋಥೆರಫಿ ಅತೀ ಅವಶ್ಯಕ. ಅದರೆ ವೆರುಕಸ್ ಕಾರ್ಸಿನೋಮಾ ಖಾಯಿಲೆಗೆ ಬರೀ ಸರ್ಜರಿ ಸಾಕಾಗುತ್ತದೆ. ರೇಡಿಯೋಥÉರಫಿಯ ಮತ್ತು ಕಿಮೋಥೆರಫಿ ಅಗತ್ಯವೂ ಇರುವುದಿಲ್ಲ.

4. ನೂರರಲ್ಲಿ 99 ಮಂದಿ ವೆರುಕಸ್ ಕಾರ್ಸಿನೋಮಾ ರೋಗಿಗಳು, ಸರ್ಜರಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಾರೆ ಮತ್ತು ಉತ್ತಮ ಫಲಿತಾಂಶ ಪಡೆಯುತ್ತಾರೆ. ಆದರೆ ಬಾಯಿ ಕ್ಯಾನ್ಸರ್ ರೋಗಿಗಳ ಸ್ಪಂದನೆ, ಕ್ಯಾನ್ಸರ್ ಎಲ್ಲಿ ಹುಟ್ಟಿದೆ, ಎಷ್ಟು ದೊಡ್ಡದಾಗಿದೆ ಮತ್ತು ಯಾವಾಗ ಚಿಕಿತ್ಸೆ ನೀಡಿದೆ ಎಂಬುದರ ಮೇಲೆ ಅವಲಂಬಿತವಾಗಿದೆ.

5. ವೆರುಕಸ್ ಕಾರ್ಸಿನೋಮ ಎಷ್ಟೇ ದೊಡ್ಡದಾಗಿ ಬೆಳೆದರೂ ಯಾವುದೇ ತೊಂದರೆಯಾಗದು. ಆದರೆ ಬಾಯಿಯ ಕ್ಯಾನ್ಸರ್‍ನ ಗಾತ್ರ. ಜಾಸ್ತಿಯಾದಷ್ಟೂ ಋಣಾತ್ಮಕ ಫಲಿತಾಂಶವನ್ನು ನೀಡುತ್ತದೆ.


ಪತ್ತೆ ಹಚ್ಚುವುದು ಹೇಗೆ?

ಬಯಾಪ್ಸಿ ಪರೀಕ್ಷೆ ಮುಖಾಂತರ ನುರಿತ ರೋಗ ಪರೀಕ್ಷಕ ವೈದ್ಯರು ಪತ್ತೆ ಹಚ್ಚುತ್ತಾರೆ. ರೋಗ ಪೀಡಿತ ಮಾಂಸದ ಜೊತೆಗೆ ಪಕ್ಕದ ಸಹಜ ಬಾಯಿಯ ಭಾಗವನ್ನೂ ಬಯಾಪ್ಸಿ ಸಮಯದಲ್ಲಿ ಸೇರಿಸಿ ತೆಗೆಯಲಾಗುತ್ತದೆ. ಬರೀ ಸರ್ಜರಿಯ ಮುಖಾಂತರ ಚಿಕಿತ್ಸೆ ನೀಡುವ ಕಾರಣದಿಂದ ಸಂಶಯವಿದ್ದಲ್ಲಿ ಎರಡನೇ ಬಾರಿ ಬಯಾಪ್ಸಿ ಮಾಡುವುವಲ್ಲಿ ತಪ್ಪೇನಿಲ್ಲ. ರೋಗದ ಲಕ್ಷಣಗಳು, ರೋಗದ ಚರಿತ್ರೆ ಮತ್ತು ಬಯಾಪ್ಸಿ ಫಲಿತಾಂಶ ತಾಳೆ ಹಾಕಿ ರೊಗ ನಿರ್ಣಯ ಮಾಡಲಾಗುತ್ತದೆ.  


ಚಿಕಿತ್ಸೆ ಹೇಗೆ?

ವೆರುಕಸ್ ಕಾರ್ಸಿನೋಮಾ ಸರ್ಜರಿಗೆ ಸೂಕ್ತವಾಗಿ ಸ್ಪಂದಿಸುವ ಕ್ಯಾನ್ಸರ್ ಆಗಿರುತ್ತದೆ. ಎಷ್ಟೇ ದೊಡ್ಡದಾಗಿ ಬೆಳೆದರೂ ಸುತ್ತಲಿನ ಸಹಜ ಭಾಗವನ್ನು ಸೇರಿಸಿ ಸಂಪೂರ್ಣವಾಗಿ ರೋಗ ಪೀಡಿತ ಭಾಗವನ್ನು ನಿರ್ಮೂಲನ ಮಾಡಲಾಗುತ್ತದೆ. ಒಮ್ಮೆ ಸರ್ಜರಿ ಮಾಡಿದ ಭಾಗದಲ್ಲಿ ಮಗದೊಮ್ಮೆ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ. ಕೆಲವೊಮ್ಮೆ ಈ ವೆರುಕಸ್ ಕಾರ್ಸಿನೋಮಾದ ಗಡ್ಡೆಯು, ತೀವ್ರತರವಾದ ಬಾಯಿ ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ. ಪ್ರತಿ 6 ತಿಂಗಳಿಗೊಮ್ಮೆ ವೈದ್ಯರ ಭೇಟಿ ಅತೀ ಅಗತ್ಯ. ಆದರೆ ಬಾಯಿ ಕ್ಯಾನ್ಸರ್‍ಗೆ ಮಾಡುವ, ಕುತ್ತಿಗೆಯ ಭಾಗದಲ್ಲಿನ ಲಿಂಪ್ ಗ್ರಂಥಿಗಳನ್ನು ತೆಗೆಯುವ ಸರ್ಜರಿ, ಈ ವೆರುಕಸ್ ಕಾರ್ಸಿನೋಮಾ ರೋಗಕ್ಕೆ ಅಗತ್ಯವಿರುವುದಿಲ್ಲ. ನೋಡಲು, ವಿಕಾರವಾಗಿ, ಭೀಕರವಾಗಿ ಕಂಡರೂ ತನ್ನ ವರ್ತನೆಯಲ್ಲಿ ಬಹಳ ಮೃದು ಧೋರಣೆ ಹೊಂದಿರುವ ಈ ವೆರುಕಸ್ ಕಾರ್ಸಿನೋಮಾ, ತೀವ್ರತರ ಬಾಯಿ ಕ್ಯಾನ್ಸರಿಗಿಂತ ಸಾವಿರಪಟ್ಟು ಉತ್ತಮ ಎಂಬ ಮಾತನ್ನು ಎಲ್ಲಿ ವೈದ್ಯರೂ ಒಮ್ಮತದಿಂದ ಒಪ್ಪುತ್ತಾರೆ. ತಂಬಾಕು ಉತ್ಪನ್ನಗಳನ್ನು ಬಹಿಷ್ಕರಿಸಿ ಈ ವೆರುಕಸ್ ಕಾರ್ಸಿನೋಮಾ ಎಂಬ ರೋಗ ಬಾರದಂತೆ ತಡೆಗಟ್ಟುವುದರಲ್ಲಿಯೇ ಜಾಣತನ ಅಡಗಿದೆ.


- ಡಾ|| ಮುರಲೀ ಮೋಹನ್ ಚೂಂತಾರು 

ಸುರಕ್ಷಾದಂತ ಚಿಕಿತ್ಸಾಲಯ

ಮೊಬೈಲ್: 98475135787


Key Words: Verrucous Carcinoma, Health, Oral cancer, ಆರೋಗ್ಯ, ಬಾಯಿಯ ಆರೋಗ್ಯ,


(ಉಪಯುಕ್ತ ನ್ಯೂಸ್)





‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top