ಕ್ಷಕಿರಣ: ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಕಳಕಳಿ

Upayuktha
0


ಬದಲಾದ ಪರಿಸ್ಥಿತಿಯಲ್ಲಿ ಮನುಷ್ಯನ ಅನ್ವೇಷಣೆಯ ಸಹಕಾರದಿಂದ ಆಧುನಿಕ ತಂತ್ರಜ್ಞಾನದ ಮೂಲಕ ಇಡೀ ಜಗತ್ತನ್ನು ಒಂದು ಹಳ್ಳಿಯ ಮೂಲೆಯಲ್ಲಿ ಬದುಕುತ್ತಿರುವ ವ್ಯಕ್ತಿಯೂ ಅರಿಯಲು ಸಾಧ್ಯವಾಗಿದೆ.


ಈ ಸೌಲಭ್ಯದಲ್ಲಿ ದೃಶ್ಯ ಮಾಧ್ಯಮವು ಜಗತ್ತಿನ ಆಗುಹೋಗುಗಳನ್ನು ನೇರವಾಗಿ ಸಮಾಜದ ಸಾಮಾನ್ಯ ಜನರ ಮುಂದೆ ತೆರೆದಿಡುವ ಒಂದು ಪ್ರಮುಖವಾದ ಅಂಗ. ಮಾಧ್ಯಮಗಳು ಸಮಾಜದಲ್ಲಿ ನಡೆಯುವ ಸರಿ-ತಪ್ಪು, ಸತ್ಯ- ಮಿಥ್ಯ ಪಾರದರ್ಶಕವಾಗಿ ಜನರ ಮುಂದಿಟ್ಟು, ಸರಿಯಾದದ್ದನ್ನು ಪ್ರಶಂಸಿಸಿ ತಪ್ಪಾಗಿದ್ದಲ್ಲಿ ಕಿವಿ ಹಿಂಡಿ ಸರಿಯಾದ ಹಾದಿಗೆ ಮರಳಿಸುವ ಕಾರ್ಯ ಮಾಡುವುದರಲ್ಲಿ ಮಹತ್ತರ ಪಾತ್ರವಹಿಸುವುದು ಹಾಗೂ ಜನರ ಮತ್ತು ಆಳುವ ಸರ್ಕಾರಗಳ ನಡುವೆ ಕೊಂಡಿಯಾಗಿರುವ ಒಂದು ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ವ್ಯವಸ್ಥೆ.  


ಪ್ರಸ್ತುತ ಸಂದರ್ಭದಲ್ಲಿ ನಮ್ಮ ಮಾಧ್ಯಮಗಳು ಈ ಕೆಲಸವನ್ನು ಎಷ್ಟು ಪ್ರಾಮಾಣಿಕತೆಯಿಂದ ಮಾಡುತ್ತಿವೆ ಎನ್ನುವ ಚಿಂತನೆ ಸಾಮಾನ್ಯರಾದ ನಮ್ಮಲ್ಲಿ ಕಾಡುತ್ತಿದೆ ಏಕೆಂದರೆ ಇಂದಿನ ಮಾಧ್ಯಮ ಸಂಸ್ಥೆಗಳಿಗೆ ಸಮಾಜದ ಸ್ವಾಸ್ಥ್ಯ ಕಾಪಾಡುವುದರಲ್ಲಿ ಇರುವ ಆಸಕ್ತಿಗಿಂತ ಟಿಆರ್‌ಪಿ ಗಳಿಸಿಕೊಳ್ಳುವುದರಲ್ಲಿ ಇರುವ ಹಪಾಹಪಿ ಎದ್ದು ಕಾಣುತ್ತದೆ. ಟಿಆರ್‌ಪಿ ಎಂದರೆ ಒಂದು ನಿರ್ದಿಷ್ಟ ಅವಧಿಯಲ್ಲಿ ಎಲ್ಲ ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಹೆಚ್ಚು ವೀಕ್ಷಕರು ಯಾವ ಮಾಧ್ಯಮದ ಕಾರ್ಯಕ್ರಮ ನೋಡುತ್ತಾರೆ ಎನ್ನುವುದರ ಮೂಲಕ ನಿರ್ಧಾರ ಆಗುತ್ತದೆ. ಹಾಗೆಯೇ ಟಿಆರ್‌ಪಿ ಜಾಸ್ತಿಯಾದಷ್ಟು ಉತ್ಪಾದನಾ ವಲಯದ ಸಂಸ್ಥೆಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಸಹಕಾರಿಯಾಗುವ ಜಾಹಿರಾತುಗಳನ್ನೂ ನೀಡಲು ಈ ಮಾಧ್ಯಮಗಳಿಗೆ ಅತಿ ಹೆಚ್ಚು ಹಣ ನೀಡಲು ಮುಂದೆ ಬರುವವು. ಹಾಗಾಗಿ ಮಾಧ್ಯಮಗಳು ಈ ವ್ಯವಹಾರದ ಗುರಿಯನ್ನು ಗಮನದಲ್ಲಿ ಇಟ್ಟುಕೊಂಡು ಸಾಗುತ್ತಿರುವ ಭರದಲ್ಲಿ ಮೂಲ ಉದ್ದೇಶವನ್ನು ಮರೆಯುತ್ತಿವೆ ಎಂಬ ಭಾವನೆ ವೀಕ್ಷಕರಿಗೆ ಮೂಡುತ್ತಿದೆ.  


ಅಲ್ಲೊಂದು ಇಲ್ಲೊಂದು ಸಮಾಜಕ್ಕೆ ಒಳಿತುಮಾಡುವ ಕಾರ್ಯ ಮತ್ತು ಸುದ್ದಿಗಳು ಬಿಟ್ಟರೆ ಬಹುತೇಕ ಮಾಧ್ಯಮಗಳು ದಿನದ 24 ಗಂಟೆಗಳು ಬಿತ್ತರಿಸಿದ ಸುದ್ದಿಗಳನ್ನೆ ಮತ್ತೆ ಮತ್ತೆ ತೋರಿಸಿ ಜನರ ನೆಮ್ಮದಿಯನ್ನು ಕಸಿದುಕೊಳ್ಳುತ್ತಿದೆ. ನಮ್ಮ ಮಾಧ್ಯಮವೆ ಮೊದಲು ಸುದ್ದಿ ನೀಡಬೇಕು ಎಂಬ ಭರದಲ್ಲಿ ಸತ್ಯ ಸತ್ಯ ಸತ್ಯಗಳನ್ನು ಪರಾಮರ್ಶೆ ಮಾಡದೆ ಬಿತ್ತರವಾಗುತ್ತಿರುವ ಸುದ್ದಿಗಳನ್ನು ಜನರು ಇಂದು ನೋಡುವ ಪರಿಸ್ಥಿತಿ ಬಂದಿದೆ. ಯಾವ ವಿಷಯವನ್ನು ಸಮಾಜದ ಮುಂದೆ ಇಡಬೇಕು ಯಾವುದು ಇಡಬಾರದು ಎನ್ನುವ ಕನಿಷ್ಟ ಚಿಂತನೆಯು ನಡೆಸದೆ ಸುದ್ದಿ ಹಾಕುವ ಮಾಧ್ಯಮಗಳಿಗೆ ಜನರು ಹಾಕುತ್ತಿರುವ ಛೀಮಾರಿಯನ್ನು ನೋಡಿಯು ನೋಡದೆ ಕುರುಡಾಗಿ ವರ್ತಿಸುತ್ತಿದ್ದಾರೆ.


ಸಾಮಾನ್ಯ ಜನರ ಸಮಸ್ಯೆಗಳ ಸುದ್ದಿಗಳು ಹಾಗೆ ಬಂದು ಹೀಗೆ ಹೋದರೆ, ಖ್ಯಾತ ನಾಮರ ವೈಯಕ್ತಿಕ ವಿಷಯಗಳು ದಿನವಿಡೀ ಈ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಇಂತಹ ಸುದ್ದಿಗಳಿಂದ ಸಮಾಜದ ಯಾವ ಸ್ಥರದ ಜನರಿಗೆ ಉಪಯೋಗ ಆಗುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಸಮಾಜದಲ್ಲಿ ದಿನ ಬೆಳಗಾದರೆ ಸಾವಿರಾರು ಸಾವು ನೋವು ವಂಚನೆಗಳು ಆಗುತ್ತಿವೆ, ಕೆಲಸವಿಲ್ಲ, ಹಣವೂ ಇಲ್ಲ; ಜನರು ಬದುಕುವುದಕ್ಕೂ ಕಷ್ಟವಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಯಾವುದೋ ವ್ಯಕ್ತಿ ಸಮಾಜದಲ್ಲಿ ಜನಪ್ರಿಯತೆ ಹೊಂದಿರುವರು ಎನ್ನುವ ಕಾರಣಕ್ಕೆ ಅವರ ವೈಯಕ್ತಿಕ ಸಮಸ್ಯೆಗಳನ್ನು ಇಡೀ ರಾಜ್ಯದ ಮತ್ತು ಸಮಾಜದ ಸಮಸ್ಯೆ ಎಂಬ ರೀತಿಯಲ್ಲಿ ಈ ಮಾಧ್ಯಮಗಳು ಸುದ್ದಿ ಬಿತ್ತರಿಸುವುದನ್ನು ನೋಡಿದರೆ ನಿಜವಾದ ಪತ್ರಿಕೋದ್ಯಮದ ಬಗ್ಗೆ ಸಂಶಯ ಸಹಜವಾಗಿಯೇ ಬರುವುದು. ಈ ಸುದ್ದಿಗಳು ನೀಡುವ ಸಂದೇಶವಾದರೂ ಏನು? ಒಂದು ವಿಚಾರದ ಬಗ್ಗೆ ಹತ್ತಾರು ಜನರ ಬಳಿ ಪ್ರತಿಕ್ರಿಯೆ ಕೇಳಿ ಹೇಳಿಕೆ ಕೊಟ್ಟವರ ನಡುವೆ ವೈಮನಸ್ಸು ತಂದಿಟ್ಟು ತಮಾಷೆ ನೋಡುವ ಕೆಲಸವನ್ನೂ ಮಾಧ್ಯಮಗಳು ಮಾಡುತ್ತಿವೆ ಎಂಬ ಮಾತು ಕೇಳಿ ಬರುತ್ತಿವೆ.


ಹೀಗೆ ಮುಂದುವರಿದರೆ ಜನ ಸಾಮಾನ್ಯರ ತಾಳ್ಮೆಯ ಕಟ್ಟೆಯೊಡೆದು ಮುಂದೊಂದು ದಿನ ಮಾಧ್ಯಮಗಳ ವಿರುದ್ಧವಾಗಿ ಪ್ರತಿಭಟಿಸುವ ದಿನಗಳು ಬರುವುದಕ್ಕೆ ಹೆಚ್ಚು ದಿನಗಳು ಬೇಕಾಗಿಲ್ಲ. ಇನ್ನೂ ಮುಂದಾದರೂ ಮಾಧ್ಯಮಗಳು ಸುದ್ದಿ ಬಿತ್ತರಿಸುವ ಮುನ್ನ ತುಸು ಯೋಚಿಸಲಿ ಎಂಬುದು ನಮ್ಮೆಲ್ಲರ ಆಶಯ.


-ಪ್ರದೀಪ ಶೆಟ್ಟಿ, ಬೇಳೂರು

Key Words: News Channels, Credibility, Credibility Crisis, ಸುದ್ದಿ ವಾಹಿನಿಗಳು, ವಿಶ್ವಾಸಾರ್ಹತೆ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top