ಬಡಗುತಿಟ್ಟಿನ ಪ್ರಥಮ ಮಹಿಳಾ ಭಾಗವತರು ಯಕ್ಷಮಾಣಿಕ್ಯ ಕು.ಚಿಂತನಾ ಹೆಗಡೆ ಮಾಳಕೋಡು

Upayuktha
0

 


ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಯ ಗಂಡು ಮೆಟ್ಟಿದ ಕಲೆ ಯಕ್ಷಗಾನ. ನಮ್ಮ ಈ ಗಂಡು ಕಲೆಯಲ್ಲಿ ಅನೇಕ ಮಹಿಳಾ ಕಲಾವಿದರು ಕಾಣಲು ಸಿಗುತ್ತಾರೆ. ಇಂತಹ ಒಂದು ಶ್ರೇಷ್ಠವಾದ ಗಂಡು ಕಲೆಯಲ್ಲಿ ಮಿಂಚುತ್ತಿರುವ ಮಹಿಳಾ ಭಾಗವತೆ ಯಕ್ಷಮಾಣಿಕ್ಯ ಕು.ಚಿಂತನಾ ಹೆಗಡೆ ಮಾಳಕೋಡು.


ಹೊನ್ನಾವರ ತಾಲ್ಲೂಕು ಕೆಳಗಿನ ಇಡುಗುಂಜಿಯ ಮಾಳಕೋಡಿನ ಶ್ರೀಮತಿ ಪಲ್ಲವಿ ಹೆಗಡೆ ಹಾಗೂ ಶ್ರೀಯುತ ಉದಯ ಹೆಗಡೆ ಇವರ ಪ್ರೀತಿಯ ಮಗಳಾಗಿ ದಿನಾಂಕ 30.04.2005 ರಂದು ಇವರ ಜನನ. 10ನೇ ತರಗತಿಯಲ್ಲಿ ವ್ಯಾಸಂಗ. ತಂದೆ ಶ್ರೀಯುತ ಉದಯ ಹೆಗಡೆ ಯಕ್ಷಗಾನ ರಂಗದ ಹಿರಿಯ ಕಲಾವಿದರು, ಹಾಗಾಗಿ ಯಕ್ಷಗಾನ ಕ್ಷೇತ್ರದಲ್ಲಿ ಒಲವು ಮೂಡಿತು ಎಂದು ಕು.ಚಿಂತನಾ ಹೆಗಡೆ ಮಾಳಕೋಡು ಅವರು ಹೇಳುತ್ತಾರೆ.


ತಂದೆ ಶ್ರೀಯುತ ಉದಯ ಹೆಗಡೆ ಮಾಳಕೋಡು ಇವರ ಯಕ್ಷಗಾನ ಗುರುಗಳು. ಮೂರು ವರ್ಷಗಳಿಂದ ಇವರದೇ ಸಂಸ್ಥೆಯಾದ "ಯಕ್ಷ ಪಲ್ಲವಿ" ಮೇಳದಲ್ಲಿ ಭಾಗವತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಬಡಗಿನ ಬಯಲಾಟ ಹಾಗೂ ಡೇರೆ ಮೇಳಗಳಲ್ಲಿ ಅತಿಥಿಯಾಗಿ ಕೆಲವು ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಕಳೆದ 4 ವರ್ಷಗಳಿಂದ ಯಕ್ಷಗಾನ ಕಲಿಕೆ ಜೊತೆಗೆ ರಂಗದಲ್ಲಿ ಭಾಗವತೆಯಾಗಿ ಸೇವೆ ಸಲ್ಲಿಸಿದ ಅನುಭವ ಇದೆ ಎಂದು ಹೇಳುತ್ತಾರೆ ಕು.ಚಿಂತನಾ ಹೆಗಡೆ ಮಾಳಕೋಡು.


ಭೃಗುಲಾಂಛನ, ಕಂಸ ವಧೆ, ಚಂದ್ರಾವಳಿ ವಿಲಾಸ, ದಕ್ಷ ಯಜ್ಞ, ಸುದರ್ಶನ ವಿಜಯ, ವೃಷಸೇನ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಮಾಲಕಂಸ ರಾಗ, ಭೀಮಪಲಾಸ ರಾಗ, ಮೋಹನ ರಾಗ, ಕಲ್ಯಾಣಿ ರಾಗ, ಕಲಾವತಿ ರಾಗ, ಜೋಗ ರಾಗ ಇವರ ಮೆಚ್ಚಿನ ರಾಗಗಳು.

ಯಕ್ಷಗಾನ ರಂಗದಲ್ಲಿ ಮೊದಲು ವೇಷವನ್ನು ಮಾಡಿದ್ದೇನೆ ಆದರೆ ಇವಾಗ ಆಸಕ್ತಿ ಇಲ್ಲ ಎಂದು ಹೇಳುತ್ತಾರೆ.

ಯಕ್ಷರಂಗದ ಧ್ರುವ ತಾರೆ ಶ್ರೀಯುತ ದಿ.ಕಾಳಿಂಗ ನಾವಡ,ಹೇರಂಜಾಲು ಗೋಪಾಲ್ ಗಾಣಿಗ, ನಗರ ಸುಬ್ರಹ್ಮಣ್ಯ ಆಚಾರ್ಯ,ರಾಘವೇಂದ್ರ ಮಯ್ಯ ಹಾಲಾಡಿ, ರಾಘವೇಂದ್ರ ಆಚಾರ್ಯ ಜನ್ಸಾಲೆ ಇವರ ನೆಚ್ಚಿನ ಭಾಗವತರು.


ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ "ಕಲಾಶ್ರೀ" ಪ್ರಶಸ್ತಿ,ದಕ್ಷಿಣ ಕನ್ನಡದ ಸಿದ್ದಾಪುರದಲ್ಲಿ ನಡೆದ ಯಕ್ಷನುಡಿಸಿರಿ ಬಳಗದವರಿಂದ ಸನ್ಮಾನ, ಯಕ್ಷಗಾನ ಮಹಾನ್ ಪ್ರೇಮಿ ನಾವಡರ ಆಪ್ತರಾದ ಶ್ರೀ ಕುಶಲ್ ಶೆಟ್ಟಿ ಅವರು ಕಂಚಿನ ತಾಳವನ್ನು ನೀಡಿ "ಯಕ್ಷ ಮಾಣಿಕ್ಯ" ಎಂದು ಬಿರುದು ನೀಡಿ ಸನ್ಮಾನ ಮಾಡಿದ್ದಾರೆ ಹಾಗೂ ಹಲವಾರು ಸಂಘ ಸಂಸ್ಥೆಗಳು ಇವರ ಪ್ರತಿಭೆಯನ್ನು ನೋಡಿ ಸನ್ಮಾನವನ್ನು ಮಾಡಿದ್ದಾರೆ.


ಯಕ್ಷರಂಗದಲ್ಲಿ ಭಾಗವತಿಕೆಯ ಅಭ್ಯಾಸದ ಜೊತೆಯಲ್ಲಿ ಬಡಗಿನ ಯಕ್ಷ ಸಂಪ್ರದಾಯವನ್ನು ಉಳಿಸಿ ಯಕ್ಷ ಪ್ರೇಕ್ಷಕರ ಮನ ಗೆಲ್ಲುವ ಅತ್ಯುತ್ತಮ ಮಹಿಳಾ ಭಾಗವತೆ ಆಗಬೇಕೆಂಬ ಆಸೆ ಇದೆ ಎಂದು ಹೇಳುತ್ತಾರೆ ಯಕ್ಷಮಾಣಿಕ್ಯ ಕು.ಚಿಂತನಾ ಹೆಗಡೆ ಮಾಳಕೋಡು.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top