"ಇನ್ನು ನಮ್ಮನೇಲಿ ಒಂದು ಬಾಕಾಹು ಡಬ್ಬಿ ಖಾಯಂ"
- ಜಯಲಕ್ಷ್ಮಿ ಗಣಪತಿ ಹೆಗಡೆ ತುಂಬೆಮನೆ, ಶಿರಸಿ
"ದಿನಾಲೂ ಚಪಾತಿ ಮಾಡುತ್ತೇವೆ. ಸಿರಿಧಾನ್ಯ ಕೊಂಡುತಂದು, ಗಿರಣಿಗೆ ಕೊಟ್ಟು ಮಾಡಿಸೋದಿತ್ತು. ಈಗ ಪೇಟೆಗೆ ಹೋಗುವುದೂ ರಿಸ್ಕು. ಇದೇ ಕಾಲಕ್ಕೆ ಆತ್ಮನಿರ್ಭರ ಬಾಕಾಹು (ಬಾಳೆಕಾಯಿ ಹುಡಿ/ ಹಿಟ್ಟು) ಬೆಳಕಿಗೆ ಬಂದಿದೆ. ಬೇಕೆಂದಾಗ ಮಾಡಿಕೊಳ್ಳುವೆ. ಇಷ್ಟರಲ್ಲೇ ಎರಡು ಬಾರಿ ತಯಾರಿಸಿದ್ದೇನೆ."
ಅರ್ಧ ಭಾಗ ಬಾಕಾಹು ಸೇರಿಸಿದ ಚಪಾತಿ ಉಬ್ಬಿ ಬರುತ್ತದೆ. ತುಂಬ ಮೃದು ಆಗುತ್ತದೆ. ಒಳ್ಳೆ ಪರಿಮಳವೂ. ರಾತ್ರಿ ಮಾಡಿದ್ದು ಮಿಕ್ಕುಳಿದರೆ ಮರುದಿನ ಮಧ್ಯಾಹ್ನಕ್ಕೂ ಓಕೆ. ಸ್ವಲ್ಪ ಬಣ್ಣ ಕಂದು ಬರುತ್ತದೆ ಎಂದು ಮಾತ್ರ.
ಹೇಗೂ ವಾರ, ಹದಿನೈದು ದಿನಕ್ಕೊಮ್ಮೆ ನಮ್ಮಲ್ಲಿ ಬಾಳೆಗೊನೆ ಕಡಿಯುತ್ತಾರೆ. ಅದರಲ್ಲಿ ಎರಡು- ಮೂರು ಗೊನೆ ನೋಡಲು ಪೀಚಲು ಆಗಿರುವವು, ಸೆಕೆಂಡ್ಸ್ ಆಗುವಂಥ ಇವನ್ನು ಇನ್ನು ಪೇಟೆಗೆ ಒಯ್ಯುವುದೇ ಇಲ್ಲ. ಅವು ಎರಡು ದಿನದಲ್ಲಿ ನನ್ನ ಬಾಕಾಹು ಡಬ್ಬಕ್ಕೆ ಹುಡಿಯಾಗಿ ಸೇರುತ್ತವೆ.
ನಮ್ಮಲ್ಲಿ ಖಾಯಂ ಬಾಳೆಗೊನೆ ಸಿಗುತ್ತದೆ. ಡ್ರೈಯರೂ ಇದೆ. ಮತ್ತೆ ಅಂಗಡಿಯ ಹಿಟ್ಟುಗಳ ಅವಲಂಬನೆ ಕಡಿಮೆ ಮಾಡಬಾರದೇಕೆ? ಡ್ರೈಯರಿನಲ್ಲಿ 55 ಡಿಗ್ರಿ ಇಟ್ಟರೆ 24 ಗಂಟೆಯಲ್ಲಿ ಬಾಳೆಕಾಯಿ ತಾಳಿ (ಚಿಪ್ಸ್) ಒಣಗಿ ಸಿಗುತ್ತದೆ. ಸ್ವಲ್ಪ ಸಿಪ್ಪೆಯ ಭಾಗ ಉಳಿಸಿದರೇನೇ ಬಾಳೆಕಾಯಿಯ ಆ ಆಕರ್ಷಕ ಪರಿಮಳ ಸರಿಯಾಗಿ ಸಿಗುತ್ತದೆ. ನಮ್ಮ ಮನೆಯಲ್ಲೆಲ್ಲರಿಗೂ ಇದು ಇಷ್ಟ. ಈಗ ಬಾಕಾಹು ಹುಡಿಮಿಶ್ರಿತ ಚಪಾತಿಯೂ ಹಾಗೆಯೇ ಎಲ್ಲರಿಗೂ ಖುಷಿ.
"ಮನೆಯಲ್ಲೇ ಬಾಕಾಹು ಮಾಡಲು ಸಾಧ್ಯ ಎಂಬ ಸುದ್ದಿ ಸ್ಫೋಟವಾದ ಮೂರನೇ ದಿನಕ್ಕೇ ಹುಡಿ ತಯಾರಿಸಿ ಈ ಡಬ್ಬ ಇಲ್ಲಿಟ್ಟಿದ್ದೇನೆ. ಬಾಳೆಕಾಯಿ ಇಷ್ಟು ಈಸಿಯಾಗಿ ಒಣಗುತ್ತದೆ. ಇಷ್ಟು ಸಣ್ಣ ಶ್ರಮದಲ್ಲಿ ಹುಡಿ ಮಾಡಿ ಬಳಸಲು ಸಾಧ್ಯ ಎಂದು ಅದೇಕೆ ನಮಗಾರಿಗೂ ಈ ಹಿಂದೆ ಹೊಳೆದಿಲ್ಲ?" ಜಯಲಕ್ಷ್ಮಿಯವರ ಮಾತಿನಲ್ಲಿ ಸಂತಸದ ಜತೆಜತೆ ಪಶ್ಚಾತ್ತಾಪವೂ ಇಣುಕುತ್ತದೆ.
-ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
Key Words: Banana Powder, Banana Flour, Bakahu, ಬಾಕಾಹು ಆಂದೋಲನ, ಬಾಕಾಹು ಅಭಿಯಾನ, ಬಾಳೆಕಾಯಿ ಹುಡಿ,
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ