ನವರಾತ್ರಿಗೆ ಸ್ವಲ್ಪ ಮೊದಲು ಸ್ನೇಹಿತ ಮಣಿಲ ಮಹಾದೇವ ಶಾಸ್ತ್ರಿಯವರು ಒಂದು ಮೆಸೇಜ್ ಮಾಡಿದ್ದರು.
ಅದರಲ್ಲಿ ಅವರು ನೀವು ಗಜಾನನ ಶರ್ಮ ಅವರು ಬರೆದ ಪುನರ್ವಸು ಕಾದಂಬರಿ ಓದಿದ್ದೀರಾ? ಎಂದು ಕೇಳಿದರು. ಮುಂದುವರಿದು "ಸ್ವಲ್ಪ ಜಾಸ್ತಿ ದುಡ್ಡು ಅನ್ನಿಸಿದರೂ ಆ ಪುಸ್ತಕ ತರಿಸಿದೆ. ನನ್ನಿಂದ ಮೊದಲು ನನ್ನ ಅಮ್ಮ ಓದಲು ತೊಡಗಿದವರು ಈಗ ನನಗೇ ಓದಲು ಕೊಡುತ್ತಿಲ್ಲ" ಅಂದು ಅವರ ಅಮ್ಮ ಪುಸ್ತಕ ಓದುವ ಫೊಟೊ ಕೂಡಾ ಕಳುಹಿಸಿ ಕೊಟ್ಟರು.
80ಕ್ಕೂ ಮೇಲೆ ವಯಸ್ಸಾದ ಅವರ ಅಮ್ಮ ಅಷ್ಟು ಕುತೂಹಲದಿಂದ ಓದುತ್ತಿದ್ದಾರೆಂದ ಮೇಲೆ ಸಹಜವಾಗಿ ಪುಸ್ತಕ ಪ್ರೇಮಿಯಾದ ನನಗೆ ಆ ಪುಸ್ತಕದ ಬಗ್ಗೆ ಕುತೂಹಲ ಸುರುವಾಯಿತು. ಅದನ್ನು ಪಡೆಯುವ ಬಗೆ ಹೇಗೆ ಎಂದು ಕೇಳಿದ್ದೆ. ನಾನು ಏರ್ಪಾಡು ಮಾಡಿ ಕೊಡುತ್ತೇನೆ ಎಂದಿದ್ದರು ಶಾಸ್ತ್ರಿಗಳು.
ಕೆಲವೇ ದಿನಗಳಲ್ಲಿ ಅವರು ಹೇಳಿದವರ ಮೂಲಕ ಪುಸ್ತಕ ನನಗೆ ತಲಪಿತು. ಅದು ನವರಾತ್ರಿಯ ಸಮಯ ಒಂದೇ ಸಲ ಏಳೆಂಟು ಪುಸ್ತಕಗಳು ಬೇರೆ ಬೇರೆಯವರ ಮೂಲಕ ತಲಪಿತ್ತು. ಈಗಂತೂ ಹದಿನೈದಕ್ಕೂ ಹೆಚ್ಚು ಪುಸ್ತಕಗಳು ಬಂದುದಿದೆ. ಅದರಲ್ಲಿ ಕೇವಲ ಐದು ಪುಸ್ತಕ ಓದಿ ಮುಗಿಸಿದೆನಷ್ಟೆ. ಸಮಯದ ಅಭಾವ ಕಾಡುತ್ತಿದೆ.
(ಇದನ್ನು ಕಳುಹಿಸಿ ಕೊಟ್ಟವರು ವಿದ್ಯಾಶ್ರೀ ಎಂಬವರು. ಉಪ್ಪಿನಂಗಡಿಯಲ್ಲಿ ಮನೆಯಂತೆ.ಅವರ ಸಂಪರ್ಕ ನಂಬರ್ +91 82963 52905 ಅವರು ಬೇರೆ ಬೇರೆ ಪುಸ್ತಕಗಳನ್ನೂ ಕಳುಹಿಸಿ ಕೊಡುತ್ತಾರೆ. ಯಾವುದೇ ಪುಸ್ತಕದ ಅವಶ್ಯ ಇರುವವರು ಅವರನ್ನು ಸಂಪರ್ಕಿಸ ಬಹುದು ಎಂದು ತಿಳಿಸಿರುತ್ತಾರೆ.)
ಈ ಸಲದ ನವರಾತ್ರಿಗೆ ಲಾಕ್ಡೌನ್ ನ ನಂತರ ಅಳಿಯ ಮಗಳು ಮೊಮ್ಮಕ್ಕಳು ಪ್ರಥಮ ಬಾರಿ ಬಂದಿದ್ದರು. ಆದ್ದರಿಂದ ಪುಸ್ತಕ ಬಿಡಿಸಲೂ ಸಮಯ ಸಿಕ್ಕಿರಲಿಲ್ಲ. ಕೊನೆಗೂ ಒಂದು ದಿನ ಸಮಯ ಸಿಕ್ಕಿದಾಗ ಮೊದಲ ಪ್ರಾಶಸ್ತ್ಯ ಕೊಟ್ಟು ಪುನರ್ವಸು ಪುಸ್ತಕ ಓದಲು ಕುಳಿತೆ.
ಆ ಪುಸ್ತಕದ ಮೋಡಿ ಎಷ್ಟಿತ್ತೆಂದರೆ ಮೂರು ದಿನ ಎಡೆಬಿಡದೆ ಅದನ್ನು ಓದಿದೆ. ಒಟ್ಟು 544 ಪುಟಗಳ ದೊಡ್ಡ ಕಾದಂಬರಿ ಅದು. ಬಹುಶ: ನಾನು ಇತ್ತೀಚೆಗೆ ಓದಿದ ಯಾವ ಕಾದಂಬರಿಯೂ ಈ ನಮುನೆ ಹೃದಯವನ್ನು ತಟ್ಟಿಲ್ಲ. ಜನವರಿ 2019 ರಂದು ಮೊದಲ ಮುದ್ರಣ ಕಂಡ ಇದನ್ನು ಈಗಾಗಲೇ ಎಷ್ಟೋ ಜನ ಓದಿ ಅದರ ಸ್ವಾದವನ್ನು ಸವಿದಿರಬಹುದು. ಆದರೂ ನಾನು ಪ್ರಥಮವಾಗಿ ಈ ಕಾದಂಬರಿಯನ್ನು ಓದಿದಾಗ ಆದ ಅನುಭವ ಬರೆಯದೆ ಇರಲು ಸಾಧ್ಯವಾಗಲಿಲ್ಲ.
ಅದರಲ್ಲಿ ಬಂದ ದತ್ತಪ್ಪ ಹೆಗಡೆ, ತುಂಗಕ್ಕಯ್ಯ, ಗಣೇಶ, ಕೃಷ್ಣ ಮೂರ್ತಿ, ಮುರಾರಿ, ಗಣೇಶ..... ಪ್ರತಿಯೊಂದು ಪಾತ್ರವೂ ನೈಜವಾಗಿದೆ. ಅವರೆಲ್ಲಾ ಅಲ್ಲಿ ಇದ್ದರೆ ಒಮ್ಮೆ ಹೋಗಿ ಮಾತನಾಡಿಸಿ ಬರೋಣ ಎಂಬಷ್ಟು ನೈಜತೆ ಆ ಪಾತ್ರಗಳಿಗೆ ತುಂಬಿದ್ದಾರೆ ಲೇಖಕ ಗಜಾನನ ಶರ್ಮ ಅವರು.
ಮುಖಪುಟದಲ್ಲಿ ಬರೆದಂತೆ ಮುಳುಗಿದ್ಧು ಭಾರಂಗಿಯೇ? ಭರವಸೆಯ ಬದುಕೇ? ಎಂಬ ಪ್ರಶ್ನೆ ಕೊನೆಗೂ ಹಾಗೆಯೇ ಉಳಿಯಿತು.
ಮುಳುಗಡೆಯ ಸಂಕಟ ನೋವು ಅದರೊಂದಿಗೆ ತಮ್ಮ ಸ್ವಾರ್ಥ ಸಾಧಿಸುವ ಕುಟಿಲರ ಕುಟಿಲತೆ ಎಲ್ಲವನ್ನೂ ತೆರೆದಿಟ್ಟ ಪರಿ ಅನನ್ಯ. ಕೃಷ್ಣ ಮೂರ್ತಿಯಂತಹಾ ನಿಷ್ಟಾವಂತ ಅಧಿಕಾರಿಗಳು ಈಗ ಇರಬಹುದೇ? ಎಂಬ ಸಂಶಯವೂ ಕಾಡಿತು. ಕಣ್ಣಿನ ಬದಿಗಳನ್ನು ಕಟ್ಟಿ ಎದುರು ಮಾತ್ರ ಕಾಣುವಂತೆ ನಡೆಸುವ ಕುದುರೆಗೆ ಇಂತಹಾ ನಿಷ್ಟಾವಂತ ಅಧಿಕಾರಿಗಳನ್ನು ಹೋಲಿಸ ಬಹುದೇನೊ? ಅನ್ನಿಸಿತು.
ಭಾವನೆಗಳಿಗೆ ಬೆಲೆ ಕೊಟ್ಟರೆ ಕೆಲಸ ನಡೆಯದು. ಆದ್ದರಿಂದ ಅದು ಬಹುಶ: ಅನಿವಾರ್ಯ. ವಸುಧಳ ಪಾತ್ರವೂ ನೈಜತೆಗೆ ಅತಿ ಹತ್ತಿರವಾಗಿದೆ.
ಇಂದಿಗೂ ಆಧುನಿಕ ವೈದ್ಯಕೀಯ ಪದ್ದತಿಗೆ ಸವಾಲು ಹೊಡೆಯಬಲ್ಲ ಔಷಧಗಳು ಇದೆ. ಆದರೆ ಅರಿತವರು ಕಡಿಮೆ. ಪುನರ್ವಸುವಿನ ಜನನ ಆ ಕಾಲದ ವೈದ್ಯಕೀಯ ಪದ್ದತಿಗೇ ಹೊಡೆದ ಸವಾಲು ಅನ್ನಿಸಿತು.
ಬರೆದಷ್ಟೂ ಮುಗಿಯದು ಈ ಅಭಿಪ್ರಾಯ ಮಂಡನೆ. ಆದ್ದರಿಂದ ಈ ಪುಸ್ತಕ ಪರಿಚಯ ನಿಲ್ಲಿಸಲೇ ಬೇಕು. ಕೊಂಡು ಓದಲು ಸಾಧ್ಯ ಇದ್ದವರು ಕೊಂಡು ಓದ ಬೇಕು. ಇಲ್ಲದವರು ಹೇಗಾದರೂ ಓದಲೇ ಬೇಕಾದ ಒಂದು ಬೃಹತ್ ಕಾದಂಬರಿ ಪುನರ್ವಸು
********
ಪುಸ್ತಕದ ವಿವರ:
ಪುನರ್ವಸು-ಕನ್ನಡ ಕಾದಂಬರಿ
ಲೇಖಕರು: ಡಾ. ಗಜಾನನ ಶರ್ಮಾ
ಪ್ರಕಾಶನ: ಅಂಕಿತ ಪುಸ್ತಕ
ಪುಟಗಳು: 544
ಬೆಲೆ: 450 ರೂ.ಗಳು
- ಎಡನಾಡು ಕೃಷ್ಣ ಮೋಹನ ಭಟ್ಟ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ