ನಾವೆಲ್ಲಾ ಯೋಗ ಮಾಡುವುದೇ ನಿಜವಾದಲ್ಲಿ, ಮಾಡುವಾತ ಅಲೋಚಿಸಬೇಕಾದ ಮುಖ್ಯ ವಿಚಾರವೇನೆಂದರೆ- ಯೋಗ ಎನ್ನುವುದು ಯಾವುದೋ ಒಂದು ಕೆಳ ಸ್ತರದ ಅಂಗ (ಮನೋ ತತ್ವ) ಇನ್ಯಾವುದೋ ಮೇಲ್ ಸ್ತರದ (ದೈವ ತತ್ವ) ಅಂಗದೊಂದಿಗೆ ಸೇರುವಂತಾದ್ದು. ಸೇರಿಕೊಳ್ಳುವ ತತ್ವವಿಲ್ಲದೇ ಯೋಗವಾಗಲಾರದು. ಈಗ ನಾವು ಆ ಕೆಳ ಸ್ತರದ ಹಾಗೂ ಮೇಲ್ ಸ್ತರದ ಅಂಗಗಳಾವುವು ಎಂಬುದರ ತಿಳಿಯದೇ ಯೋಗಾಭ್ಯಾಸ ಮಾಡುವುದಾದರೆ ಆ ಎರಡನ್ನೂ ಸೇರಿಸುವ ಪ್ರಕ್ರಿಯೆಯ ಪ್ರಶ್ನೆಯೇ ಬಾರದು. ಎಂದರೆ ಯೋಗ ಮಾಡುತ್ತಿದ್ದೇನೆ ಎಂದು ಅಹಂಭಾವವ ತೃಪ್ತಿಗೊಳಿಸಬಹುದಷ್ಟೇ!! ಸ್ವಲ್ಪ ಅಹಮಿಕೆ ಇದ್ದರೂ ಅಧ್ಯಾತ್ಮ ಸಾಧನೆ ಶೂನ್ಯ ಪ್ರಯೋಜನಕಾರಿ. ಎಂದರೆ ಯೋಗ ಮಾಡುತ್ತೇನೆ ಎಂದು ಭಾವಿಸುತ್ತಾ ಆಸನಂಗಳ ಮಾಡುತ್ತಿದ್ದರೂ ಮಾಡಿದಂತಲ್ಲ.ಅದ್ದರಿಂದ ಯೋಗದಲ್ಲಿ ಯಾವುದು ಯಾವುದನ್ನು ಸೇರಬೇಕಾದದ್ದು ಎಂಬುದೇ ಪ್ರಾಮುಖ್ಯ. ಯಾವುದಾದರೂ ಕೆಲಸ ಮಾಡುವುದಾದರೆ ಅದಕ್ಕೆ ಒಂದು ನಿಯಮವಿರುವುದಷ್ಟೇ.
ಹೊಟ್ಟೆ ತುಂಬುವಂತೇ ಊಟ ಮಾಡಬೇಕೆಂದಿದ್ದರೆ ಬಾಯಿಯ ಮುಖಾಂತರ ಆಹಾರ ತೆಗೆದುಕೊಳ್ಳಬೇಕಲ್ಲದೇ ಹೊಟ್ಟೆಗೆ ಆಹಾರವ ಮೆತ್ತಿಕೊಂಡರೆ ಊಟ ಮಾಡಿದಂತೇ ಆಗದಲ್ಲಾ? ಮನಸ್ಸು, ಕೈ, ಬಾಯಿ, ಹೊಟ್ಟೆಗಳ ಸಹಭಾಗಿತ್ವದಲ್ಲಿ ಭೋಜನದ ಸಂತೃಪ್ತತೆ ಒದಗೀತು. ಅದಕ್ಕೆ ಅವುಗಳ ಸರಿಯಾದ ಮಾಹಿತಿ ಅಗತ್ಯ. ಹಾಗೇನೆ ಯೋಗಾಸನ ನಮಗೆ ಸಂತೃಪ್ತತೆ ದೊರಕಿಸಬೇಕಾದರೆ ಅಲ್ಲಿ ಯಾವ್ಯಾವ ಅಂಗಗಳ ಒಳಗೊಳ್ಳುವಿಕೆ ಬೇಕು, ಅವುಗಳ ಸಹಭಾಗಿತ್ವ ಹೇಗಿರಬೇಕು ಎಂಬ ಅರಿವು ಮುಖ್ಯ. ಅರಿವಿನೊಂದಿಗೆ ಮಾಡುವ ಯಾವುದೇ ಕಾರ್ಯ ನಮಗೆ ಹೆಚ್ಚಿನ ಸಂತೃಪ್ತಿ ಕೊಡದೇ ಇರದು. ಯೋಗಾಸನ ಅಭ್ಯಾಸ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಬೇಕಾದ ಅಂಗಗಳ ಅರಿವನ್ನು ಹೊಂದದೇ ತೊಡಗಿಸಿಕೊಳ್ಳುವುದು- ಊಟವೆಂದು ಬಾಯಿಯಿಂದ ಸೇವಿಸುವ ಬದಲು ಹೊಟ್ಟೆಗೆ ಆಹಾರ ಮತ್ತಿದಂತೇ.
ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳುವಾಗ ಅದರಲ್ಲಿ ಇರುವ ಅಂಗಗಳ ಅರಿವಿನೊಂದಿಗೆ ತೊಡಗಿಸಿಕೊಳ್ಳುವುದಾದರೆ ಅದು ನಮಗೆ ಸಂತೃಪ್ತತೆಯ ಒದಗಿಸೀತು. ಅವುಗಳ ಅರಿಯುವ ಅಂಗವೇ- ಅಷ್ಟಾಂಗ ಯೋಗದ ನಿಯಮದ ಅಂಗವಾದ ಸ್ವಾಧ್ಯಾಯವೇ ಆಗಿರುವುದು. ಸ್ವಾಧ್ಯಾಯ ಎಂದರೆ ತನ್ನ ತಾನರಿವ ವಿದ್ಯೆ. ಅದು ವೇದಾಂತ ಜ್ಞಾನವೇ ಆಗಿರುವುದು. ತನ್ನ ತಾನರಿಯುತ ಯೋಗಾಭ್ಯಾಸ ಮಾಡುವುದಾದರೆ ಅದೇ ನಿಯಮಪಾಲನೆಯೊಂದಿಗೆ ಯೋಗಾಭ್ಯಾಸ ಮಾಡಿದಂತೆ. ಅದು ಹೆಚ್ಚಿನ ಸಂತೃಪ್ತತೆ ಒದಗಿಸೀತು. ಆದ್ದರಿಂದ ಸ್ವಾಧ್ಯಾಯ ಚಿಂತನ ಸಹಿತ ಯೋಗಾಭ್ಯಾಸ ಮಾಡುವುದಾದರೆ ಅದು ಅಷ್ಟಾಂಗ ಯೋಗವೆಂದಾದೀತು. ಇಲ್ಲದಿದ್ದರೆ ಅದು ಬರೀ ವ್ಯಾಯಾಮವಷ್ಟೇ. ವ್ಯಾಯಾಮದ ಲಾಭ ದೊರಕೀತು. ಆದರೆ ಯೋಗದ ಮುಖ್ಯ ಗುರಿಯಾದ ಆತ್ಮ ಸಂತೃಪ್ತಿ ದೊರಕದು.
ಸ್ವಾಧ್ಯಾಯ ನಮ್ಮ ಅಸ್ತಿತ್ವದ ಬೇರೆಬೇರೆ ಅಂಗಗಳ ಚೆನ್ನಾಗಿ ಗುರುತಿಸಿ ಅವುಗಳ ತೊಡಗಿಸಿಕೊಳ್ಳುವಿಕೆಗಳು ಹೇಗಿರಬೇಕು ಎಂದು ವಿವರಿಸಿದೆ. ಅದರಂತೇ ತೊಡಗಿಸಿಕೊಂಡರೆ ನಮಗೆ ಯೋಗಾಭ್ಯಾಸ ಪ್ರಕ್ರಿಯೆ ಸಮಾಧಾನವ ಕೊಡುವುದು. ನಮ್ಮ ಮನಕ್ಕೆ ಒಂದು ಧನ್ಯತಾ ಭಾವ ಉಂಟಾದೀತು.
ವೇದಾಂತ ದರ್ಶನ ನಮ್ಮ ಅಸ್ತಿತ್ವವ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳೆಂದು ಗುರುತಿಸಿದೆ ಮತ್ತು ಈ ಕೋಶಗಳೆಲ್ಲಾ ನನ್ನ ಕೋಶಗಳು ಹಾಗೂ ನನ್ನ ಪರಿಚಾರಿಕೆಯರುಗಳು. ಅವುಗಳ ಗಮನಿಸುವ ಅಂಗವೇ ನಿಜ ನಾನೇ ಆದ ಸಾಕ್ಷಿ ಯಾ ಆತ್ಮ ಸಾಕ್ಷಿ ಎಂದೇ ಹೇಳಿದೆ. ನಿಜ ಯಜಮಾನನಾದ ಸಾಕ್ಷಿಯಾದ ನನಗೆ ನನ್ನ ಪರಿಚಾರಿಕೆಯರುಗಳು ಶರಣು ಹೋಗುತ್ತಾ ಸಾಕ್ಷಿಯೊಂದಿಗೆ ಸೇರುವ ಪ್ರಕ್ರಿಯೆಗೆ ಸಹಾಯವಾಗುವ ಸಾಧನಾ ಕ್ರಮವ ಯೋಗವೆಂದು ಹೇಳುವರು.
ಒಂದು ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸವಿದ್ದಂತೆ ಅನ್ನಮಯ ಕೋಶದ ಆರೋಗ್ಯಕ್ಕೆ ದೇಹದ ಚಲನೆ ಹಾಗೂ ಸ್ನಾಯುಗಳ ಸೆಳೆತಗಳು ಮುಖ್ಯ. ಅದನ್ನು ನಾನು - ನನ್ನ ದೇಹವ ಮೂರನೇ ವ್ಯಕ್ತಿ ನನ್ನ ದೇಹ ಗಮನಿಸುವಂತೇ ಗಮನಿಸುವುದು. ಅದಕ್ಕೆ ಸಾಕ್ಷೀ ಭಾವದ ಗಮನವೆನ್ನುವುದು. ಪ್ರಾಣಮಯಕೋಶಕ್ಕೆ ಉಸಿರಿನ ಗತಿ ಹಾಗೂ ಪ್ರಾಣದ ಹರಿವಿನ ಅರಿವಿನೊಂದಿಗೆ ಎಲ್ಲಾ 72 ಸಾವಿರ ನಾಡಿಗಳಿಗೆ ಪ್ರಾಣ ಶಕ್ತಿ ಒದಗಿಸುವುದರ ಸಾಕ್ಷೀ ಭಾವದಿಂದ ಗಮನಿಸುವಿಕೆ ಇರಬೇಕು. ಯಥಾ ಮನಃ ತಥಾ ಪ್ರಾಣ ಎಂದಿದೆ ಹಠ ಯೋಗ ಪ್ರದೀಪಿಕಾ. ಉಸಿರು ತೆಗೆದುಕೊಳ್ಳುವಾಗ ಎರಡೂ ಮೂಗಿನ ಹೊಳ್ಳೆಗಳ ಮುಖಾಂತರ ಉಸಿರಿನ ಸಮಾನ ಹರಿವು ಆಗುವುದೇ ಎಂದು ಗಮನಿಸಬೇಕು. ಒಂದು ವೇಳೆ ಉಸಿರಿನ ಹರಿವು ಸಮಾನವಾಗಿ ಇಲ್ಲದಿದ್ದರೆ, ಕಡಿಮೆ ಹರಿವು ಆಗುವ ಹೊಳ್ಳಯ ಹೆಚ್ಚು ಗಮನಿಸಬೇಕು. ಆಗ ಕಡಿಮೆ ಹರಿವು ಆಗುವ ಮೂಗಿನ ಹೊಳ್ಳೆಯಲ್ಲಿ ಉಸಿರಿನ ಗತಿ ಹೆಚ್ಚಾಗಿ ಎರಡೂ ಮೂಗಿನ ಹೊಳ್ಳೆಗಳಲ್ಲಿ ಸಮಾನ ಹರಿವು ಉಂಟಾಗುವುದು. ಎರಡೂ ಮೂಗಿನ ಹೊಳ್ಳೆಗಳಲ್ಲಿ ಸಮಾನ ಉಸಿರಿನ ಹರಿವು ಮನವ ಪ್ರಶಾಂತಗೊಳಿಸುವುದೆಂದು ಹಠಯೋಗ ಪ್ರದೀಪಿಕ ಹೇಳುತ್ತದೆ.
ಉಸಿರು ಒಳಹೋಗಲು ಪ್ರಾರಂಭಿಸಿದಂತೇ ಮನವ ಕಾಲ ಬೆರಳ ತುದಿಗೆ ತೆಗೆದುಕೊಂಡು ಹೋಗಿ ಅಲ್ಲಿ ಸಾಕ್ಷೀ ಭಾವದಿಂದ ಗಮನಿಸುತ್ತಾ ಪ್ರಾಣ ಚೈತನ್ಯ ಕಾಲಬೆರಳುಗಳಿಗೆ ಒದಗಿ ಬರುತ್ತಿದೆ ಎಂದು ಭಾವಿಸಬೇಕು. ಹಾಗೂ ನಿಧಾನವಾಗಿ ಉಸಿರು ತೆಗೆದುಕೊಳ್ಳುತ್ತಿದ್ದಂತೇ ಮನವ- ಮೊಣಕಾಲು, ಮಂಡಿಚಿಪ್ಪು ಇತ್ಯಾದಿಗಳ ಗಮನಿಸುತ್ತಾ ಮೇಲ್ಮುಖವಾಗಿ ಮನವ ತೆಗೆದುಕೊಳ್ಳುತ್ತಾ ತಲೆಯ ನಡು ನೆತ್ತಿಯಲ್ಲಿರುವ ಸಹಸ್ರಾರ ಚಕ್ರದವರೆಗೆ ಗಮನಿಸುತ್ತಾ, ಮನ ಗಮನವಿರುವಲ್ಲಿ ಪ್ರಾಣದ ಹರಿವು ಆಗುತ್ತಿದೆ, ದೈವೀ ಚೈತನ್ಯ ಒದಗಿ ಬರುತ್ತಿದೆ ಎಂದು ಭಾವಿಸುತ್ತಾ ತೊಡಗಿಸಿಕೊಳ್ಳಬೇಕು. ಉಸಿರು ಬಿಡಲು ಮನವ ಕಾಲ ಬೇರಳ ಕಡೆಗೆ ತೆಗೆದುಕೊಂಡು ಹೋಗಬೇಕು ಹಾಗೂ ಉಸಿರಿನೊಂದಿಗೆ ಕಾಲ ಬೆರಳು, ಪಾದಗಳಲ್ಲಿರುವ ಎಲ್ಲಾ ಕಲ್ಮಶಗಳು ಉಸಿರಿನೊಂದಿಗೆ ಹೊರಹೊಗುತ್ತಿದೆ ಎಂದು ಭಾವಿಸಬೇಕು. ಹಾಗೇ ಉಸಿರು ಬಿಡುತ್ತಾ ಮನದ ಗಮನವ ನಿಧಾನವಾಗಿ ಮೇಲ್ಮುಖವಾಗಿ ತಲೆಯ ನಡುನೆತ್ತಿಯವರೆಗೆ ತೆಗೆದುಕೊಂಡು ಹೋಗುತ್ತಾ ಮನದ ಗಮನಿಸುವಿಕೆ ಇರುವಲ್ಲಿ ಇರುವ ಕಲ್ಮಶಗಳು ಉಸಿರಿನೊಂದಿಗೆ ಹೊರಹೋಗುತ್ತಿದೆ ಎಂದು ಭಾವಿಸುತ್ತಾ ತೊಡಗಿಸಿಕೊಳ್ಳಬೇಕು ಹಾಗೂ ಮನ ಗಮನಿಸುವುದರ ಸಾಕ್ಷೀ ಭಾವದಿಂದ ಗಮನಿಸಬೇಕು. ಇದು ಪ್ರಾಣಮಯ ಕೋಶಕ್ಕೆ ಶಕ್ತಿ ಒದಗಿಸುವ ಕ್ರಮ.
ಈಗ ಮನೋಮಯ ಕೋಶದ ತೊಡಗಿಸಿಕೊಳ್ಳುವಿಕೆ ಹೇಗಿರಬೇಕೆಂದು ಗಮನಿಸೋಣ. ನಮಗೆಲ್ಲಾ ತಿಳಿದೇ ಇದೆ- ಮನ ಪ್ರಶಾಂತವಾಗಿದ್ದಾಗ ಉಸಿರು ದೀರ್ಘವಾಗಿರುತ್ತದೆ ಹಾಗೂ ಪ್ರಕ್ಷುಬ್ದವಾಗಿದ್ದಾಗ, ಕಲ್ಮಶಗಳಿದ್ದಾಗ ಉಸಿರಿನ ಗತಿ ವೇಗವಾಗಿರುತ್ತದೆ ಹಾಗೂ ಪ್ರಾಣಮಯ ಕೋಶವನ್ನೂ ಕಲ್ಮಶಗೊಳಿಸುವುದು. ಮನವ ಪ್ರಶಾಂತವಾಗಿಡದೇ ಯೋಗಾಭ್ಯಾಸ ಮಾಡುವುದರಿಂದ ಮನೋಮಯ ಕೋಶ ಹಿಡಿತಕ್ಕೆ ಸಿಗದು ಹಾಗೂ ಅದಕ್ಕೆ ಶಕ್ತಿ ಸಿಗದೇ ಮನ ಕ್ಷೀಣವಾದೀತು. ಮನೋಮಯ ಕೋಶಕ್ಕೆ ನ್ಯಾಯವೊದಗದೇ ಯೋಗಾಭ್ಯಾಸ ಬರೀ ಯಾಂತ್ರಿಕವಾದೀತು. ಮನವನಿಚ್ಚೆ ಮಡಿಯಾಡಿರಣ್ಣ ಎಂದಿದ್ದಾರೆ ದಾಸರು. ಮನ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೊಃ ಎಂದಿದೆ ಭಗವದ್ಗೀತೆ.
ಡಿವಿಜಿಯವರು- ಯುಕ್ತಿಯಿಂದಲಿ ಕರಣ ಚೇಷ್ಟಿತವ ತಿದ್ದುತೆ ಶಕ್ತಿವಂತನೆ ಮುಕ್ತ ಮಂಕುತಿಮ್ಮ ಎಂದಿದ್ದಾರೆ. ಅಪವಿತ್ರವಾಗುವ ಮನವ ಮಡಿ ಮಾಡಲು ಇರುವ ಸುಲಭ ಉಪಾಯ ಮನವ ದೈವ ಶರಣಾಗತಿಯಲ್ಲಿ ಇರಿಸುದರಲ್ಲಿ ಇದೆ. ಮನವು ಆ ಎತ್ತರಕ್ಕೆ ಏರಬೇಕಾದರೆ ಅದಕ್ಕೆ ಬುದ್ದಿಯ ಸಹಾಯವೂ ಬೇಕು. ಬುದ್ದಿ ವಿಜ್ಞಾನಮಯ ಕೋಶ. ಅದಕ್ಕೆ ವೇದಾಂತ ಚಿಂತನೆ ಯಾ ಸ್ವಾಧ್ಯಾಯ ಎಂಬ ಜ್ಞಾನ ಯಜ್ಞ ಮುಖ್ಯ. ಅದರ ಆಧಾರದಿಂದ ಸರ್ವ ವ್ಯಾಪಕನಾದ ಭಗವಂತ ನನ್ನ ಬೆನ್ನು ಹುರಿಯ ಕೊನೆಯ ಮೂಲಾಧಾರದಿಂದ ನಡುನೆತ್ತಿಯ ಸಹಸ್ರಾರ ಚಕ್ರಗಳವರೆಗಿನ ಏಳೂ ಚಕ್ರಗಳಲ್ಲಿ ಇದ್ದಾನೆ ಎಂದು ಗುರುತಿಸಬೇಕು. ಆಗ ಬುದ್ದಿಗೆ ಸ್ಥಮಿತವೊದಗಿ ಅದು ಮನಕ್ಕೆ ತಿಳಿಹೇಳಿದಾಗ ಮನ ಅದನ್ನು ನಂಬಿದರೆ ಮನ- ಎಲ್ಲವೂ ದೈವೇಚ್ಚೆ ಯಾ ಈಶ್ವರ ಪ್ರಣಿಧಾನ ಎಂಬ ನಿಶ್ಚಲ ತತ್ವಕ್ಕೆ ಬಂದೀತು. ನನ್ನ ಒಳಗೇ ಇದ್ದು ನನ್ನ ಜೀವನ ನಡೆಸುವ ಆ ವಿಚಿತ್ರಕೆ ನಮಿಸೋ - ಮಂಕುತಿಮ್ಮ ಎಂಬಂತಾಗಿ ಮನ ನಿಶ್ಚಿಂತಾ ಆಗುವುದು.
ಮನ ಪ್ರೀತಿಯಿಂದ ತಾನು ಮಾಡುವ ಸಾಧನೆಯಲ್ಲಿ ತೊಡಗಿಸಿಕೊಳ್ಳುವುದು. ಶ್ರದ್ದಾ ಭಕ್ತಿ ಸಮನ್ವಿತನಾಗಿ ಹಸನ್ಮುಖವಾಗಿರುತ್ತಾ ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಹಜ ಮನ ಸ್ಪಂದನ ದೊಂದಿಗೆ ಮನಸ್ಸು ಇನ್ನಷ್ಟೂ ದೃಡತೆಯೊಂದಿಗೆ ಭಗವದರ್ಪಣ ಬುದ್ದಿಯಲ್ಲಿದ್ದು ನಿರುಮ್ಮಳ ಭಾವದಲ್ಲಿ ಶೌಚ ಎಂದರೆ ಪರಿಶುದ್ದವಾಗುವುದು.ಆಗಲೇ ಸಂತೋಷದ (ನಿಯಮದ ಅಂಗ) ನಿಜಾನುಭೂತಿ ಉಂಟಾಗಿ ಸಹಜಾನಂದದ ಬುಗ್ಗೆಗಳು ಚಿಮ್ಮವುದು. ಈ ಸ್ಥಿತಿ ಸ್ಥಿರವಾಗಿರಬೇಕೆಂದೆನಿಸುವ ಮನಸ್ಸಿನ ಇಚ್ಚೆ ದೈವ ಸ್ಮರಣೆಯ ನಿರಂತರತೆಯಲ್ಲಿರುವಂತೆ ಪ್ರಚೋದಿಸುವುದು. ಇದೇ ನಿಯಮದ ಅಂಗವಾದ ತಪಃ.
ಹೀಗೆ ವಿಜ್ಞಾನಮಯ ಕೋಶ ಮನೋಮಯ ಕೋಶದ ಮನೋ ಬುದ್ದಿ ಸಂಯೋಜನೆಯ ತೊಡಗಿಸಿಕೊಳ್ಳುವಿಕೆಯ ಸಾಕ್ಷೀ ಭಾವದಿಂದ ಗುರುತಿಸಿಕೊಳ್ಳಬೇಕು. ಈ ಪ್ರಕ್ರಿಯೆ ನಡೆಯುತ್ತಿದ್ದಂತೇ ನಮ್ಮ ಅಹಂ ಜಾಗೃತವಾಗುವ ಸಾಧ್ಯತೆ ಇಲ್ಲದೇ ಇಲ್ಲ. ನಾನೇ ಇದನ್ನೆಲ್ಲಾಮಾಡುತ್ತಿರುವೆ, ನಾನು ಶ್ರೇಷ್ಠ ಎಂಬ ಭಾವ ಬಂದರೆ ಅಧ್ಯಾತ್ಮದ ಒಳಕ್ಕೆ ಪ್ರವೇಶ ಸಿಗದು. ಆದ್ದರಿಂದ ಈ ಹಂತದಲ್ಲಿ ಇಂತಹಾ ಯಾವುದೇ ಆಲೋಚನೆ ಬಾರದಂತೆ ವೇದಾಂತ ವಿಚಾರವ ಇನ್ನಷ್ಟೂ ದೀರ್ಘವಾಗಿ ಆಲೋಚಿಸಿದಾಗ- ನನ್ನಂತೇ ಪ್ರತೀ ಜೀವಿಯ ಏಳೂ ಚಕ್ರಗಳಲ್ಲಿ ಭಗವಂತನ ಚೈತನ್ಯವಿರುವುದು, ಎಲ್ಲೆಲ್ಲೂ ಅವನೇ ಎಂಬ ಭಾವ - ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಞ ಎಂಬಂತಾ ಸರ್ವ ಸಮಾನ ಭಾವ ಬುದ್ದಿ ಬೆಳೆದು ಎಲ್ಲರ ಅಂತರ್ಯಕ್ಕೆ ತಲೆ ಭಾಗುವ ಬುದ್ದಿ ಉಂಟಾಗುವುದು. ಆಗ ಅಹಂ ನಾಶಗೊಂಡು- ಜೀವನದಲ್ಲಿ ಬರಬಹುದಾದ ಪ್ರಾರಬ್ದ ಕರ್ಮಗಳಾವುದೇ ಇದ್ದರೂ ಅದರ ಸ್ವೀಕರಿಸುವೆ ಆಗಾಮಿ ಕರ್ಮಗಳೂ ಅವುಗಳ ಫಲಗಳೂ ಅವನದೇ ಎಂಬ ಮನಸ್ತಿತಿ ದೃಢವಾಗಿ- ಕರ್ಮಲೇಪನಗಳಿಲ್ಲದೇ ಪಾಪ ಪುಣ್ಯರಾಹಿತ್ಯನಾಗುವೆ ಎಂಬ ಚಿಂತನೆ- ಚಿತ್ತ ಶುದ್ಧಿಗೊಳಿಸುವುದು.
ಯೋಗಃ ಚಿತ್ತ ವೃತ್ತಿ ನಿರೋಧಃ ಎಂದರೆ ಇದೇ ಹಾಗೂ ಇದೇ ಆನಂದಮಯ ಕೋಶವ ತೃಪ್ತಿಕರವಾಗಿ ಇಡಲು ಇರುವ ಯುಕ್ತಿ. ಬೇರೆ ದಾರಿ ಇಲ್ಲ. ಈ ಪ್ರಕ್ರಿಯೆಯ ಸಾಕ್ಷೀ ಭಾವದಿಂದ ಗಮನಿಸುತ್ತಿರಬೇಕು. ಆಸನ ಮಾಡುವಾಗ ಒಂದು ಭಂಗಿಯಿಂದ ಇನ್ನೊಂದಕ್ಕೆ ಹೋಗುತ್ತಿರುವಾಗ ಆಸನಗಳು ದೇವರಿಗೆ ಮಾಡುವ ಪ್ರಣಾಮದ ವಿವಿಧ ಭಂಗಿಗಳೆಂದೇ ಭಾವಿಸುತ್ತಾ, ಐದೂ ಕೋಶಗಳ ಮೇಲೆ ಹೇಳಿದಂತೇ ಗಮನಿಸುತ್ತಾ ತೊಡಗಿಸಿಕೊಳ್ಳುತ್ತಿದ್ದಲ್ಲಿ ಅದು ನಿಜ ಯೋಗವಾದೀತು. ಇಲ್ಲದಿದ್ದರೆ ಅದು ಮನ್ನಣೆಗೆ ಮಾಡುವ ಅಹಂ ಪೋಷಕ ಕ್ರಿಯಯಷ್ಟೇ ಆದೀತು. ಇದರ ಹಿಂದಿನ ವಿಜ್ಞಾನವ ನೋಡೋಣ. ದೇಹಕ್ಕೆ ವ್ಯಾಯಾಮವೊದಗಿಸುವುದರಿಂದ ನಮ್ಮ ದೇಹದಲ್ಲಿ ಎಂಡೋರ್ಫಿನ್ ಹಾರ್ಮೋನ್ ಸ್ರವಿಸುವುದು. ಇದು ದೇಹದ ನೋವು ನಿವಾರಕ. ಮನ ಶರಣಾಗತ ಭಾವದಲ್ಲಿದ್ದಾಗ ಹಸನ್ಮುಖವುಂಟಾಗಿ ಸರೋಟಿನಿನ್ ಹಾರ್ಮೋನ್ ಸ್ರವಿಸುವಿಕೆ ಉಂಟಾಗಿ ಮನ ನಿರುಮ್ಮಳವಾಗಿ ಸಂತೋಷದ ಅನುಭೂತಿಯಲ್ಲಿರುವುದು. ಆಗ ಪ್ರಾಣದ ಹರಿವು ದೀರ್ಘವಾಗಿ ದೇಹಕ್ಕೆ ಇನ್ನಷ್ಟು ಚೈತನ್ಯವೊದಗುವುದು.
ಪ್ರಾಣಮಯ, ಮನೋಮಯ ಕೋಶ ಸುಸ್ಥಿತಿಯಲ್ಲಿರುವುದು. ಈಗ ಬುದ್ದಿ ಏಳೂ ಚಕ್ರಗಳಲ್ಲಿರುವ ದೈವೀ ಚೈತನ್ಯ ಗಮನಿಸುವುದರಿಂದ ಡೊಪಮೀನ್ ಹಾರ್ಮೋನ್ ಸ್ರವಿಸಿ ಸಂತೋಷ ವೃದ್ದಿಗೊಂಡು ವಿಜ್ಞಾನಮಯ ಕೋಶ ಸಂತೃಪ್ತತೆಯಲ್ಲಿದ್ದು ದೇಹದ ಕಣಕಣಗಳ ಆರೋಗ್ಯ ವೃದ್ದಿಗೊಳ್ಳಿಸುವುದು. ಆನಮದಮಯ ಕೋಶ ಉದ್ದೀಪನಗೊಳ್ಳಲು ಎಲ್ಲರ ಅಂತರ್ಯದಲ್ಲಿರುವ ಭಗವಂತನ ಗುರುತಿಸುವಿಕೆ ಸರ್ವ ಸಮತ್ವ ಭಾವ ಮುಖ್ಯ. ಸಮತ್ವಂ ಯೋಗಮುಚ್ಚತೇ. ತತ್ ತ್ವಂ ಅಸಿ ಭಾವ- ನಮ್ಮ ಒಳಗಿನ ಷಡ್ ವೈರಿಗಳ ನಾಶಗೊಳಿಸಿ ಜೀವನದ ಉನ್ನತ ಗುರಿಯ ಹೊಂದಿರುವೆ ಎಂಬಷ್ಟು ಸಂತೃಪ್ತತೆ ಕೊಡುವುದು. ಅದೇ ಆನಂದ ಉದ್ದಿಪನಗೊಳಿಸುವುದು. ಅದರಿಂದ ಓಕ್ಸಿಟೋಸಿನ್ ಹಾರ್ಮೋನ್ ಸ್ರವಿಸುವಿಕೆ ಉಂಟಾಗಿ ಎಲ್ಲವೂ ದೈವಮಯ- ಸರ್ವಂ ಬ್ರಹ್ಮಮಯಂ ರೇ ರೇ- ಎಂಬ ಆಶ್ಚರ್ಯಾನುಭೂತಿಯೇ ಆಗುವುದು. ಅದೇ ಆನಂದನಿಭೂತಿ ಯಾ ಸಮಾಧಿಯ ಅನುಭೂತಿಯಾಗಿರುವುದು. ಅಷ್ಟಾಂಗ ಯೋಗದ ಅಭ್ಯಾಸದಿಂದ ದೈಹಿಕ, ಮಾನಸಿಕ, ಬೌದ್ದಿಕ, ಅಧ್ಯಾತ್ಮಿಕ ಆರೋಗ್ಯ ಹೊಂದುವ ಪರಿ ಇದೇ ಆಗಿದೆ. ಬೇರೆ ದಾರಿ ಇಲ್ಲ.
ಲಲಿತ ಸಹಸ್ರನಾಮದಲ್ಲಿ ಲಲಿತೆಯ 160 ರಿಂದ 163 ರ ವರೆಗಿನ ಹೆಸರು- ನಿಶ್ಚಿಂತಾ, ನಿರಹಂಕಾರ, ನಿರ್ಮೋಹ, ಮೋಹನಾಶಿನಿ ಎಂದಿದೆ. ದೇವರನ್ನು ಕೊಂಡಾಡುವುದು ದೇವರ ಖಷಿ ಪಡಿಸಲಲ್ಲಾ. ಆ ಗುಣಗಳು ನಮ್ಮೊಳಗೆ ಅನುಸಂಧಾನವಾಗಲು. ಜ್ಞಾನದ ಬೆಳಕಿನಿಂದ ನಮ್ಮ ಮನ ನಿಶ್ಚಿಂತಾ ನಿರಹಂಕಾರ ಗುಣ ಹೊಂದಿ ಜಗದ ಮೋಹ ನಾಶವಾಗಿ ನಾವೇ ಸೋ ಹಂ ಎಂಬ ಭಾವ ಹೊಂದಿ ನಿರ್ಮೋಹ, ಮೋಹನಾಶಿನಿಗಳೆಂದೇ ಆಗುವೆವು. ಹಾಗೇ ಆಗಬೇಕು ಎಂಬುದೇ ಅಷ್ಟಾಂಗ ಯೋಗದ ಪರಮ ಗುರಿ.
|| ಓಂ ತತ್ ಸತ್ ||
-ಶ್ಯಾಮ ಪ್ರಸಾದ ಮುದ್ರಜೆ