ಕವನ: ನಾವೆಯ ಪಯಣ

Upayuktha
0

 


******

ದೇವ ನಿನ್ನ ಮಹಿಮೆ ಎಂದು 

ನೋವನೆಲ್ಲ ನುಂಗಿಕೊಂಡೆ

ಕವಿದ ಇರುಳ ದೂರ ಸರಿಸಿ 

ಬೆಳಕ ತೋರೆಯಾ 

ಭವದ ಬಂಧ ಕಳೆವ ನಿನ್ನ

ಸೇವೆ ಮಾಡುವಂತೆ ಮನಕೆ 

ಭಾವ ಸತತ ಇರುವ ತರಹ

ಜ್ಞಾನ ನೀಡೆಯಾ 


ಯಾವ ಗುರಿಯ ಸೇರಲೆಂದು

ನಾವೆ ಶರಧಿಯೊಳಗಿಳಿವುದೊ 

ಯಾವ ಸುಳಿಯ ಅರಿವು ಇರದೆ 

ಸಾಗುತಿರುವುದು.  

ನೋವು ನಲಿವು ಇರುವ ರೀತಿ 

ಸಾವು ಹುಟ್ಟು ತಾಳಿಕೊಂಡು   

ಧಾವಿಸುತ್ತ ಇರುವ ನೌಕೆ 

ನಿಲ್ಲಲಾರದು. 


ಶರಧಿ ಒಳಗೆ ಧರೆಯು ನಡುಗಿ 

ತೆರೆಯು ಮೇಲೆ ಬರಲು ಬಹುದು

ಬಿರುಸಿನಿಂದ ಬೀಸೊ ಗಾಳಿ

ದಯೆಯ ತೋರದು. 

ಹರಿವ ನೀರು ಪಥ ಬದಲಿಸಿ 

ಗುರಿಯ ದೂರ ಮಾಡಬಹುದು 

ಹರಿಯೆ ನಿನ್ನ ಚಿತ್ತವನ್ನು 

ಯಾರುಬಲ್ಲರು 


ಒಡಲ ಬುತ್ತಿ ಕಟ್ಟಿಕೊಟ್ಟು 

ಕಡಲ ಒಳಗೆ ನೂಕಿದವನೆ

ಸಡಿಲವಾಗದಂತೆ ಬಂಧ 

ಬಿಗಿಯ ಮಾಡಿಕೋ 

ಚಡಪಡಿಕೆಯೆ ಇಲ್ಲದಂತೆ 

ಅಡಿಗಡಿಗೂ ಬೇಡುತಿಹೆನು 

ನಡೆವ ಗುರಿಯು ತಪ್ಪದಂತೆ 

ನನ್ನ ನೋಡಿಕೋ 


ಕಷ್ಟ ಸುಖವ ಕೊಡುವೆ ನೀನು

ಇಷ್ಟವಿರಲಿ ಇಲ್ಲದಿರಲಿ 

ನಿಷ್ಠೆಯಿಂದ ಇರುವ ತೆರದಿ 

ದಾರಿ ತೋರಿಸೋ 

ಭ್ರಷ್ಟನಾಗದಂತೆ ಎಂದು

ತುಷ್ಟ ಭಾವ ಬರುವ ವಿಧದಿ 

ಶಿಷ್ಟನಾಗಿ ಇರಲು ಹರಿಯೆ 

ಬುದ್ಧಿ ಕರುಣಿಸೋ

********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Tags

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top