ಕೇರಳಕ್ಕೂ ತಲುಪಿದ ’ಬಾಕಾಹು’ (ಬಾಳೆಕಾಯಿ ಹುಡಿ) ಘಮ

Upayuktha
0

ಮಂಗಳೂರು: ಸುಮಾರು ಒಂದು ತಿಂಗಳಿನಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕಾಸರಗೋಡು, ಶಿವಮೊಗ್ಗ, ತುಮಕೂರು, ಬೆಳಗಾವಿ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ವ್ಯಾಪಿಸಿರುವ 'ಬಾಕಾಹು' ಅಭಿಯಾನದ ಘಮವೀಗ ಕೇರಳಕ್ಕೂ ತಲುಪಿದೆ.


ಹಿರಿಯ ಪತ್ರಕರ್ತ, ಅಭಿವೃದ್ಧಿ ಪತ್ರಿಕೋದ್ಯಮದಲ್ಲಿ ಹಲವಾರು ಯಶಸ್ವೀ ಮೈಲುಗಲ್ಲುಗಳನ್ನು ದಾಖಲಿಸಿರುವ ಅಡಿಕೆ ಪತ್ರಿಕೆ ಸಂಪಾದಕರಾದ ಶ್ರೀಪಡ್ರೆ ಅವರಿಂದ ಪ್ರೇರಣೆ ಪಡೆದ ಅನೇಕ ಕೃಷಿಕ ಕುಟುಂಬಗಳು ಈಗ ಬಾಳೆಕಾಯಿ ಹುಡಿ, ಬಾಳೆಕಾಯಿ ರವೆಗಳನ್ನು ತಯಾರಿಸಿ, ಅದರಿಂದ ನಾನಾ ಬಗೆಯ ರುಚಿಕಟ್ಟಾದ ತಿಂಡಿ-ತಿನಿಸುಗಳನ್ನೂ ತಯಾರಿಸಿ 'ಬಾಕಾಹು' ಅಭಿಯಾನವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ.


ಆರಂಭದಲ್ಲಿ ಕೇವಲ ಮನೆಗಳಲ್ಲೆ ಪ್ರಯೋಗಕ್ಕೆ ಸೀಮಿತವಾಗಿದ್ದ 'ಬಾಕಾಹು ಮತ್ತು ಬಾಕಾ ರವೆಯ ಪಾಕೇತನ ಪ್ರಯೋಗಗಳು ಈಗ ಸಣ್ಣ ಮಟ್ಟಿನ ಗೃಹೋದ್ಯಮದ ಸ್ವರೂಪವನ್ನೂ ಪಡೆದುಕೊಳ್ಳುತ್ತಿದೆ. ಬಾಳೆ ಬೆಳೆದು ನಷ್ಟ ಅನುಭವಿಸುವ ಕೃಷಿಕರಿಗೆ ಬಾಳೆಕಾಯಿಯನ್ನು ದೀರ್ಘಕಾಲ ಕಾಪಿಟ್ಟು ಬಳಸುವ ಒಂದು ಹೊಸ ಮಾದರಿಯ ಚಿಂತನೆಯನ್ನು ಪ್ರಚುರಪಡಿಸಲು ಅಪಾರ ಸಮಯ ಮತ್ತು ಶ್ರಮವನ್ನು ವಹಿಸುತ್ತಿರುವವರು ಶ್ರೀಪಡ್ರೆಯವರು.


ಅಡಿಕೆ ಪತ್ರಿಕೆಯ ವಾಟ್ಸಪ್‌ ಗ್ರೂಪ್ಗಳ ಮೂಲಕ, ಎನಿಟೈಮ್ ವೆಜಿಟೇಬಲ್‌ ಎಂಬ ತರಕಾರಿ ಬೆಳೆ ಮತ್ತು ಉತ್ಪನ್ನಗಳಿಗೇ ಮೀಸಲಾದ ಮತ್ತೊಂದು ಬಗೆಯ ವಾಟ್ಸಪ್‌ ಗ್ರೂಪ್‌ಗಳ ಮೂಲಕ ಸಾವಿರಾರು ಮಂದಿಯನ್ನು ಏಕಕಾಲಕ್ಕೆ ತಲುಪಿ ಅವರಲ್ಲಿ ಪ್ರತಿದಿನ ಹೊಸ ಪ್ರಯೋಗಗಳಿಗೆ ಪ್ರೇರಣೆ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಶ್ರೀಪಡ್ರೆಯವರು.


ಈ ಹಿಂದೆ ಮಳೆಕೊಯ್ಲು- ಚಾವಣಿ ನೀರಿನ ಸಂಗ್ರಹ ಅಭಿಯಾನ, ಕಟ್ಟಗಳ ಕುರಿತ ಅಭಿಯಾನ,  ಹಲಸಿನ ಹಣ್ಣಿನ ಮೌಲ್ಯವರ್ಧನೆ ಕುರಿತ ಅಭಿಯಾನ ಮತ್ತು ಇನ್ನೂ ಹಲವು ಕೃಷಿಕರ ಬದಕುನ್ನು ಹಸನುಗೊಳಿಸುವ ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸಿ ರಾಷ್ಟ್ರಮಟ್ಟದಲ್ಲಿ ಸುದ್ದಿಮಾಡಿದವರು ಅವರು.


ಇದೀಗ ಅವರು ನಡೆಸುತ್ತಿರುವ ಬಾಕಾಹು ಅಭಿಯಾನವು ಕೃಷಿ ಪ್ರಯೋಗಗಳ ತವರೂರು ಎನಿಸಿದ ಕೇರಳಕ್ಕೂ ತಲುಪಿ ಜನಪ್ರಿಯತೆ ಪಡೆಯುತ್ತಿದೆ. ಕೇರಳದ ಪ್ರಮೂಕ ದಿನಪತ್ರಿಕೆಯಾದ 'ಮಾತೃಭೂಮಿ' ಕರ್ನಾಟಕದಲ್ಲಿ ಈಗ ನಡೆಯುತ್ತಿರುವ 'ಬಾಕಾಹು' ಅಭಿಯಾನದ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದೆ.


Key Words: Banana Flour, Banana Powder, Adike Patrike, Shree Padre, Mathrubhumi, ಬಾಕಾಹು ಅಭಿಯಾನ, ಬಾಳೆಕಾಯಿ ಹುಡಿ, 


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top