ಮುಂಬಯಿ: ಊರು-ಕೇರಿಗಳನ್ನು ಮಾತ್ರವಲ್ಲ, ಕೆರೆ, ಬಾವಿ, ನದಿಗಳನ್ನೂ ನುಂಗಿ ನೀರು ಕುಡಿದು ನಗರಗಳು ಬೆಳೆಯುತ್ತಿರುವುದು ಈಗಿನ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ಹೊಸತೇನೂ ಅಲ್ಲ. ಮುಂಬಯಿ ಮಹಾನಗರದ ಘಾಟ್‌ಕೋಪರ್‌ನಲ್ಲೊಂದು ವಿಸ್ಮಯದ ವಿದ್ಯಮಾನ ಎರಡು ದಿನಗಳ ಹಿಂದೆ ನಡೆದಿದೆ. ರಸ್ತೆ ಬದಿಯಲ್ಲಿ ಪಾರ್ಕ್ ಮಾಡಿದ್ದ ಕಾರೊಂದನ್ನು ನೆಲವೇ ಬಾಯ್ತೆರೆದು ನುಂಗಿಬಿಟ್ಟಿದೆ.
ಆಗಿದ್ದು ಇಷ್ಟೇ: ಮೊದಲೇ ಇದ್ದ ಹಳೆಯ ಬಾವಿಯೊಂದರ ಮೇಲೆ ಕಾಂಕ್ರೀಟ್ ಸ್ಲ್ಯಾಬ್ ಹಾಕಿ ಮುಚ್ಚಿ ಪಾರ್ಕಿಂಗ್ ಜಾಗ ನಿರ್ಮಿಸಲಾಗಿತ್ತು. ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಾವಿಯಲ್ಲಿ ನೀರು ತುಂಬಿಕೊಂಡಿದ್ದು, ಕಾಂಕ್ರೀಟ್ ಸ್ಲ್ಯಾಬ್ ದುರ್ಬಲವಾಗಿತ್ತು. ಈ ವಿಷಯ ಗಮನಕ್ಕೆ ಬಾರದೆ ಅಲ್ಲಿ ನಿಲ್ಲಿಸಲಾಗಿದ್ದ ಕಾರೊಂದು ಸ್ಲ್ಯಾಬ್ ಕುಸಿದು ಬಾವಿಯೊಳಕ್ಕೆ ಬಿದ್ದಿದೆ.
ಇದ್ದಕ್ಕಿದ್ದಂತೆ ನೆಲ ಬಾಯ್ತೆರೆದು ಕಾರು ಬಾವಿಯೊಳಗೆ ಬೀಳುತ್ತಿರುವ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರ ಮಾಲೀಕ ಕಿರಣ್ ದೋಶಿ ವೃತ್ತಿಯಲ್ಲಿ ವೈದ್ಯರಾಗಿದ್ದು, ಘಟನೆ ನಡೆದಾಗ ಅದೃಷ್ಟವಶಾತ್ ಅವರು ಕಾರಿನೊಳಗಿರಲಿಲ್ಲ. ಕಾರು ಮುಳುಗುವ ದೃಶ್ಯವನ್ನು ವೀಡಿಯೋ ಮಾಡಿ ಅವರೆ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದು ವೈರಲ್ ಆಗಿದೆ.
ಘಟನೆ ನಡೆಯುತ್ತಿದ್ದಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಮುಳುಗಿದ ಕಾರನ್ನು ಹೊರತೆಗೆದಿದ್ದಾರೆ. ಬಾವಿಯಲ್ಲಿದ್ದ ನೀರನ್ನು ಪಂಪ್ ಮಾಡಿ ಹೊರತೆಗೆಯಲಾಯಿತು. ನಂತರ ಕ್ರೇನ್ ಬಳಸಿ ಕಾರನ್ನು ಮೇಲೆತ್ತಲಾಯಿತು. ಈ ದೃಶ್ಯದ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದುಬಂದಿದೆ.
ಪಾಲಿಕೆಗೂ ಈ ಘಟನೆಗೂ ಯಾವುದೇ ಸಂಬಂಧವಿಲ್ಲ. ಇದು ಖಾಸಗಿ ಜಾಗದಲ್ಲಿ ನಡೆದ ಘಟನೆ ಎಂದು ಮುಂಬಯಿ ಮಹಾನಗರಪಾಲಿಕೆ ಸ್ಪಷ್ಟನೆ ನೀಡಿದೆ.
ಉಪಯುಕ್ತ ನ್ಯೂಸ್ ಓದುಗರಿಗಾಗಿ ಈ ವೀಡಿಯೋ:
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ