ಭಾರತೀಯ ಆರ್ಥಿಕತೆಯ ಹೊಸ ಯುಗದ ವೇಗವರ್ಧಕ
(ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ದಿನ (27 ಜೂನ್ 2021)
ದೇಶದ ಯುವ ಜನಸಂಖ್ಯೆ, ಆರೋಗ್ಯಕರ ಉಳಿತಾಯ, ಹೂಡಿಕೆಯ ಮಟ್ಟಗಳು ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಸಂಯೋಜನೆಯಿಂದಾಗಿ ಭಾರತದ ಆರ್ಥಿಕತೆಯು ಅಭಿವೃದ್ಧಿಶೀಲ ಮಾರುಕಟ್ಟೆಯ ಚಿತ್ರಣವನ್ನು ಪಡೆದುಕೊಂಡಿದೆ. ಆರ್ಥಿಕತೆಯ ನವಯುಗದಲ್ಲಿ ಭಾರತೀಯ ಆರ್ಥಿಕತೆಯ ವೇಗವರ್ಧಕಗಳಾಗಿ ಹೊರಹೊಮ್ಮಿರುವ ಒSಒಇ ಗಳ ಪಾತ್ರವನ್ನು ಹಾಗೂ ಸವಾಲುಗಳನ್ನು ಗುರುತಿಸಿ ಪೂರಕ ವಾತವರಣ ಕಂಡುಕೊಳ್ಳುವ ಅಗತ್ಯ ಇದೆ.
27 ಜೂನ್-MSME ಉದ್ಯಮಗಳ ದಿನ
ಅಂತಾರಾಷ್ಟ್ರೀಯ ಕೌನ್ಸಿಲ್ ಫಾರ್ ಸ್ಮಾಲ್ ಬಿಸಿನೆಸ್ (ISBC) ಪ್ರಕಾರ ಶೇ.95 ರಷ್ಟು ಉದ್ದಿಮೆಗಳು ಅಪೌಚಾರಿಕ ಹಾಗೂ ಅನೌಪಚಾರಿಕ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಾಗಿದ್ದು ಜಾಗತಿಕವಾಗಿ ಶೇ.70 ರಷ್ಟು ಉದ್ಯೋಗ ಹಾಗೂ ಶೇ. 50ರಷ್ಟು ಜಿಡಿಪಿಗೆ ಕೊಡುಗೆಯನ್ನು ನೀಡುತ್ತವೆ. ಹಾಗಾಗಿ ಸುಸ್ಥಿರ ಅಭಿವೃದ್ಧಿ ಮತ್ತು ಜಾಗತಿಕ ಆರ್ಥಿಕತೆಗೆ ನೀಡುವ ಕೊಡುಗೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಜೂನ್ 27 ನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ (MSME) ದಿನ ಎಂದು ವಿಶ್ವ ಸಂಸ್ಥೆಯು ಘೋಷಿಸಿದೆ.
ವಿಶ್ವದ ಪ್ರಗತಿಯ ಇಂಜಿನ್
ಇಂದಿನ ಸಂಕ್ರಮಣ ಕಾಲದಲ್ಲಿ ನಮಗೆ ಗಾಂಧೀಜಿಯವರ ಸ್ವಾವಲಂಬಿ ಗ್ರಾಮದ ಪರಿಕಲ್ಪನೆ ಹಾಗೂ ಅವರಿಂದ ಪ್ರೇರಿತರಾದ ಶುಮೇಕರ್ ಅವರ “ಸಣ್ಣದು ಸುಂದರ” ಪರಿಕಲ್ಪನೆ ಬಹಳ ಆಪ್ಯಾಮಾನವಾಗಿ ಕಾಣುತ್ತದೆ. ಪುಟ್ಟ ಪುಟ್ಟ ವ್ಯವಹಾರಗಳು ಇಂದು ರಾಷ್ಟ್ರದ “ಆರ್ಥಿಕ ಇಂಜಿನ್” ಗಳಾಗಿ ನಮಗೆ ಗೋಚರಿಸುತ್ತದೆ.
ದೇಶದಲ್ಲಿ ಕೃಷಿ ಬಿಟ್ಟರೆ ಅತ್ಯಧಿಕ ಪ್ರಮಾಣದಲ್ಲಿ ದುಡಿಯುವ ಕೈಗಳಿಗೆ ಉದ್ಯೋಗ ನೀಡುವ ಕ್ಷೇತ್ರವೇ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ. ಇವುಗಳನ್ನು ಸಂಕ್ಷಿಪ್ತವಾಗಿ ‘ಎಂಎಸ್‍ಎಂಇ’ (MSME) ಎಂದು ಕರೆಯಲಾಗುತ್ತದೆ. ಇವನ್ನು ‘ವಿಶ್ವದ ಪ್ರಗತಿಯ ಇಂಜಿನ್’ ಎಂದೇ ಗುರುತಿಸಲಾಗಿದೆ.
ಭಾರೀ ಪ್ರಮಾಣದ ಬಂಡವಾಳದ ಹೂಡಿಕೆಯ ಅಗತ್ಯವಿಲ್ಲದ ಹಳ್ಳಿ ಹಾಗೂ ಸಣ್ಣ ನಗರಗಳಲ್ಲಿ ಸುಲಭವಾಗಿ ಆರಂಭಿಸಬಹುದಾದ MSME ಗಳು ದುಡಿಯುವ ಕೈಗಳಿಗೆ ಭಾರೀ ಪ್ರಮಾಣದ ಉದ್ಯೋಗ ನೀಡುವ ಕೇಂದ್ರಗಳಾಗಿ ಬೆಳೆದು ನಿಂತಿವೆ. ತೆರೆದ ಮಾರುಕಟ್ಟೆಯ ಒತ್ತಡಗಳಿಂದಾಗಿ ಪೂರೈಕೆದಾರರು ಗುಣಮಟ್ಟದ ಸರಕು ಹಾಗೂ ಸೇವೆಗಳನ್ನು ಸ್ಪರ್ಧಾತ್ಮಕ ದರದಲ್ಲಿ ಪೂರೈಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಸಹಜವಾಗಿ ವೆಚ್ಚ ನಿಯಂತ್ರಕಗಳಾಗಿ ತಮ್ಮ ಅನುಕೂಲಕರ ಸ್ಥಳ ಆಯ್ಕೆಯೊಂದಿಗೆ ಶ್ರಮ ಉಳಿತಾಯಕ್ಕೆ ಪೂರಕವಾದ ಯಾಂತ್ರೀಕರಣದ ಅನ್ವೇಷಣೆ ಹಾಗೂ ಆಧುನೀಕರಣದ ಸವಾಲುಗಳನ್ನು ಸರಿಯಾಗಿ ಎದುರಿಸಿದರೆ ಮಾತ್ರ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯ. ಈ ಒತ್ತಡಗಳ ನಡುವೆಯೂ ಈ ವರ್ಗದ ಚಟುವಟಿಕೆಗಳು ಪ್ರಾದೇಶಿಕವಾಗಿ ಉದ್ಯೋಗ ಸೃಷ್ಠಿಸುವಲ್ಲಿ ಸಿಂಹಪಾಲನ್ನು ಪಡೆದುಕೊಂಡಿದೆ.
2020ರ ಹಣಕಾಸು ವರ್ಷದಲ್ಲಿ 6.34 ಕೋಟಿ ‘ಎಂಎಸ್‍ಎಂಇ’ ಹೊಂದಿರುವ ಭಾರತವು ಜಾಗತಿಕವಾಗಿ ಚೈನಾದ ನಂತರ ಅತೀ ಹೆಚ್ಚು ಸಂಖ್ಯೆಯ ಚಟುವಟಿಕೆಯನ್ನು ಹೊಂದಿರುವ ದೇಶವಾಗಿದೆ. 12 ಕೋಟಿ ಜನರಿಗೆ ಉದ್ಯೋಗ ನೀಡುವ ಈ ಕ್ಷೇತ್ರ ದೇಶೀಯ ಉತ್ಪನ್ನಕ್ಕೆ ಸುಮಾರು 30% ಹಾಗೂ ಒಟ್ಟಾರೆ ರಪ್ತಿಗೆ 40% ಕೊಡುಗೆ ನೀಡುವ ಮೂಲಕ ಭಾರತದ ಆರ್ಥಿಕತೆಯ ಬೆಳವಣಿಗೆಯ ವೇಗವರ್ಧಕಗಳಾಗಿ ಗುರುತಿಸಲ್ಪಟ್ಟಿದೆ. ದೇಶದ 95% ಕೈಗಾರಿಕೆಗಳು ಈ ವಲಯದಲ್ಲೇ ಇದೆ. ಸುಮಾರು ಶೇ.50ಕ್ಕಿಂತಲೂ ಹೆಚ್ಚು ಉದ್ಯಮಗಳು ಗ್ರಾಮೀಣ ಭಾಗಗಳಲ್ಲಿದ್ದು ಗ್ರಾಮೀಣ ಆರ್ಥಿಕತೆಯ ಬೆಳವಣಿಗೆಗೆ ಪೂರಕವಾUವೆ. ಇದು ಸುಸ್ಥಿರ ಹಾಗೂ ಅಂತರ್ಗತ ಅಭಿವೃದ್ಧಿ ಉತ್ತೇಜಿಸುವಲ್ಲಿ ಈ ವಲಯದ ಮಹತ್ವವನ್ನು ಪ್ರದರ್ಶಿಸುತ್ತದೆ.
ಈ ವಲಯವು ರಾಷ್ಟ್ರೀಯ ಆರ್ಥಿಕ ರಚನೆಯ ಬೆನ್ನೆಲುಬಾಗಿದೆ ಮತ್ತು ಜಾಗತಿಕ ಆರ್ಥಿಕ ಆಘಾತಗಳು ಹಾಗೂ ಪ್ರತಿಕೂಲತೆಗಳನ್ನು ನಿವಾರಿಸಲು ಸ್ಥಿತಿಸ್ಥಾಪಕತ್ವವನ್ನು ಒದಗಿಸುವ ಮೂಲಕ ಭಾರತಿಯ ಆರ್ಥಿಕತೆಗೆ ಭದ್ರಕೋಟೆಯಾಗಿ ಕಾರ್ಯನಿರ್ವಹಿಸುತ್ತದೆ.
ಕೋವಿಡ್-19ರ ಆರ್ಥಿಕ ಸಂಕಷ್ಟದಿಂದ ಆರ್ಥಿಕತೆ ನವಚೈತನ್ಯ ನೀಡಲು ಸರಕಾರವು ಘೋಷಿಸಿದ ‘ಆತ್ಮನಿರ್ಭರ ಭಾರತ’ ಉಪಕ್ರಮದಡಿಯಲ್ಲಿ ಕೆಲವು ಯೋಜನೆಗಳನ್ನು ಘೋಷಿಸಿದೆ.
ಭಾರತದಲ್ಲಿ ಕೇಂದ್ರ, ರಾಜ್ಯ ಹಾಗೂ ಸ್ಥಳೀಯ ಸಂಸ್ಥೆಗಳ ಸುಮಾರು 6000 ಅನುಸರಣೆಗಳ ಹೊರೆಯನ್ನು ಗುರುತಿಸಲಾಗಿದೆ. ಭಾರತದಲ್ಲಿ ವ್ಯವಹಾರವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಅನಗತ್ಯ ನಿಯಮಗಳು, ಅವಶ್ಯಕತೆಗಳು ಮತ್ತು ಕಾರ್ಯವಿಧಾನಗಳನ್ನು ತೆಗೆದುಹಾಕಿ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಪ್ರಯತ್ನ ಅನಾವರಣಗೊಂಡಿದೆ. ಅನುಮೋದನೆಗಳು ಮತ್ತು ಅನುಮತಿಗಳಿಗಾಗಿ ಏಕಗವಾಕ್ಷಿ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯೋನ್ಮುಖವಾಗಿದೆ.
ಉದ್ಯಮಸ್ನೇಹಿ ವಾತಾವರಣ:
ವಿಶ್ವಬ್ಯಾಂಕ್ ಬಿಡುಗಡೆಗೊಳಿಸುವ 190 ದೇಶಗಳ ಜಾಗತಿಕ ವ್ಯವಹಾರ ವರದಿಯಲ್ಲಿ (Doing Business Report) ಭಾರತದ ಶ್ರೇಯಾಂಕವು 2014ರಲ್ಲಿ 142ನೇ ಸ್ಥಾನದಿಂದ 2020ರಲ್ಲಿ 63ನೇ ಸ್ಥಾನಕ್ಕೆ ಏರಿದೆ. ಇದರಿಂದಾಗಿ ವಿಶ್ವದ ಅಗ್ರ 10 ಸುಧಾರಣಾಕಾರ ದೇಶಗಳ ಪಟ್ಟಿಯಲ್ಲಿ ಭಾರತ ಸತತವಾಗಿ ಮೂರು ವರ್ಷಗಳಿಂದ ಸ್ಥಾನವನ್ನು ಗಳಿಸುತ್ತಾ ಬಂದಿರುವುದು ಹೆಮ್ಮೆಯ ಸಂಗತಿ. ಬೆಂಬಲಿಸುವ ಗುರಿಯನ್ನು ಹೊಂದಿರುವ ಉದ್ಯಮ ಸ್ನೇಹಿ ನೀತಿಗಳು ಉತ್ಪಾದಕತೆಯ ಸುಧಾರಣೆಗಳನ್ನು ಪಡೆದುಕೊಳ್ಳುವ ಮತ್ತು ಜಾಗತಿಕ ಮೌಲ್ಯ ಸರಪಣಿಗಳಿಗೆ ಪ್ರವೇಶಿಸುವ ಉದ್ಧೇಶದಿಂದ ಉತ್ಪಾದನೆಯತ್ತ ಆರ್ಥಿಕ ಬೆಳವಣಿಗೆಯನ್ನು ಮರು ಸಮತೋಲನಗೊಳಿಸುತ್ತದೆ.
ಹೂಡಿಕೆಯನ್ನು ಆಕರ್ಷಿಸುವುದರ ಜೊತೆಗೆ ಉತ್ಪಾದಕತೆ ಹಾಗೂ ಸ್ಪರ್ಧಾತ್ಮಕತೆಯನ್ನು ಸುಧಾರಿಸಲು ಉದಾರೀಕೃತ ವಿದೇಶಿ ಬಂಡವಾಳ ಹೂಡಿಕೆ ನೀತಿಯ ಚೌಕಟ್ಟಿನಲ್ಲಿ ಪ್ರಯತ್ನಗಳು ಸಾಗಬೇಕು. ಇದರೊಂದಿಗೆ ಪ್ರಮಾಣದ ಆರ್ಥಿಕತೆಯ ಲಾಭ ಪಡೆಯಲು ಒಂದೇ ರೀತಿಯ ಉತ್ಪನ್ನ ಹಾಗೂ ಸೇವೆಯನ್ನು ಒದಗಿಸುವ ಕಿರು ಸಂಸ್ಥೆಗಳ ಗುಂಪುಗಳನ್ನು ಉತ್ತೇಜಿಸುವ ಪ್ರಕ್ರಿಯೆ ದೀರ್ಘಾವಧಿಯಲ್ಲಿ ಉತ್ತಮ ಫಲವನ್ನು ನೀಡಬಹುದು.
ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಜಾಗತಿಕ ಪಾಲುದಾರರೊಂದಿಗೆ ತಂತ್ರಜ್ಞಾನದ ಸಹಯೋಗಕ್ಕೆ ಒತ್ತು ನೀಡುವುದರೊಂದಿಗೆ ತಮ್ಮ ಉತ್ಪಾದಕತೆ ಹಾಗೂ ಉತ್ಪಾದನೆಯನ್ನು ಹೆಚ್ಚಿಸಿ ಜಾಗತಿಕ ಮೌಲ್ಯ ಸರಪಳಿಯ ಭಾಗವಾಗುವತ್ತ ಗಮನ ಹರಿಸಬೇಕಾಗಿದೆ.
ಭಾರತದ ಆರ್ಥಿಕತೆಗೆ ಅನೌಪಚಾರಿಕ ವಲಯದ ಗಣನೀಯ ಕೊಡುಗೆಯ ಹೊರತಾಗಿಯೂ ಕೊವಿಡ್ ಸಾಂಕ್ರಾಮಿಕ ಹಾಗೂ ಲಾಕ್ಡೌನ್ ಪರಿಣಾಮವಾಗಿ ಅತೀ ಹೆಚ್ಚು ಹಾನಿಗೊಳಗಾದ ಕ್ಷೇತ್ರವೂ MSME ಗಳಾಗಿವೆ. ಅದರ ಕಾರ್ಯಾಚರಣೆಯನ್ನು ಬೆಂಬಲಿಸುವ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡಂತೆ ಅವುಗಳು ಎದುರಿಸುತ್ತಿರುವ ಕೆಲವು ವ್ಯವಸ್ಥಿತ ಸವಾಲುಗಳೂ ಹೆಚ್ಚಿದವು. ಸರಕಾರ ಒದಗಿಸುವ ವಿಶೇಷ ಸವಲತ್ತುಗಳ ಬಗ್ಗೆ ಅನಾದರತೆ ಕೆಲವು ಅಜಾಗರೂಕತೆಯ ಹಾಗೂ ಅಪ್ರಯೋಗಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಕಾರಣವಾಗಿ ಹಲವು ಬಿಕ್ಕಟ್ಟುಗಳಿಗೆ ಕಾರಣವಾಗುತ್ತದೆ.
ಸಣ್ಣದು ಸುಂದರ- ಆದರೆ ಅಸಹಾಯಕ!
ಭಾರತದ ಆರ್ಥಿಕತೆಗೆ ಅತೀ ಸಣ್ಣ ಘಟಕಗಳÀ ಕೊಡುಗೆ ಅಪಾರ. ಕಡಿಮೆ ಉದ್ಯೋಗಿಗಳನ್ನು (ಸಾಮಾನ್ಯವಾಗಿ 10 ರವರೆಗೆ) ಹೊಂದಿರುವ ಸೂಕ್ಷ್ಮ ಉದ್ಯಮಗಳು ಕಡಿಮೆ ಬಂಡವಾಳದಿಂದ ಪ್ರಾರಂಭಿಸಬಹುದಾಗಿದೆ ಮತ್ತು ತುಲನಾತ್ಮಕವಾಗಿ ಸ್ಥಳೀಯ ಮಾರುಕಟ್ಟೆಯನ್ನು ಹೊಂದಿವೆ. ಪೂರೈಕೆ ಮತ್ತು ಮಾರುಕಟ್ಟೆ ಸರಪಳಿ ಸ್ಥಳೀಯವಾಗಿರುವುದರಿಂದ ಇತರ ಚಟುವಟಿಕೆಗಳಿಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುತ್ತವೆ.
ಉತ್ಪಾದನೆ ಆಧಾರಿತ ಸೂಕ್ಷ್ಮ ಉದ್ಯಮಗಳು ಎಂಎಸ್‍ಎಂಇ ಗಳಲ್ಲಿ ಶೇ.99.7ರಷ್ಟಿದ್ದರೆ, 97.5ರಷ್ಟು ಉದ್ಯೋಗ, ಉತ್ಪಾದನೆಯಲ್ಲಿ ಶೇ. 90.1 ಹಾಗೂ ಆದಾಯ ಉತ್ಪಾದನೆಯಲ್ಲಿ ಶೇ.91.9 ಪಾಲನ್ನು ಹೊಂದಿದೆ.
ಎಂಎಸ್‍ಎಇ ಯಲ್ಲಿರುವ ಎಲ್ಲಾ ಘಟಕಗಳನ್ನು ಒಂದೇ ತಕ್ಕಡಿಯಲ್ಲಿ ತೂಗಲು ಸಾಧ್ಯವಿಲ್ಲ. ಕಡಿಮೆ ಬಂಡವಾಳ ಮತ್ತು ಕೌಶಲ ಬೇಕಾಗಿರುವ ಸೂಕ್ಷ್ಮ ಘಟಕಗಳು ಸ್ಥಳೀಯವಾಗಿ ಉದ್ಯೋಗ ಹಾಗೂ ಆದಾಯ ಸೃಷ್ಟಿ ಮಾಡುವ ಹಾಗೂ ಆ ಮೂಲಕ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುವ ವಲಯವಾಗಿದೆ.
ಹೆಚ್ಚಿನ ಶಿಕ್ಷಣ ತರಬೇತಿಗಳ ಅವಕಾಶವಿಲ್ಲದವರು ಅಥವಾ ತಮ್ಮೂರಿನಲ್ಲಿಯೇ ಅನಿವಾರ್ಯವಾಗಿ ನೆಲಸಬೇಕಾದವರು ಸಹಜವಾಗಿ ಜೀವನೋಪಾಯಕ್ಕಾಗಿ ಹಮ್ಮಿಕೊಂಡ ಚಟಿವಟಿಕೆಗಳಿವು. ವಿವಿಧ ಚಟುವಟಿಕೆಗಳಲ್ಲಿ ಹಂಚಿ ಹೋಗಿರುವ ಇವರ ಆದಾಯದ ಉತ್ಪಾದನೆಯೂ ಚೌಕಾಶಿ ಸಾಮರ್ಥ್ಯವೂ ಕಡಿಮೆಯೆ.
ಕೋವಿಡ್-19ನ್ನು ನಿಯಂತ್ರಿಸಲು ಏಕೈಕ ತಂತ್ರವಾದ ವಿವಿಧ ಹಂತಗಳ ಲಾಕ್ ಡೌನ್ ಪ್ರಕ್ರಿಯೆ ಈ ವಲಯನ್ನು ಬಲಿಪಶುವಾಗಿಸಿದೆ. ನಮ್ಮ ಸುತ್ತಲಿನ ವ್ಯವಹಾರದಲ್ಲಿ ತೊಡಗಿರುವ ಕುಶಲಕರ್ಮಿಗಳು, ಆಹಾರ ಸಂಸ್ಕರಣಾ ಘಟಕಗಳು, ಬೀದಿ ಬದಿಯ ಅಂಗಡಿಗಳು, ಗ್ಯಾರೇಜ್, ಬ್ಯೂಟಿ ಪಾರ್ಲರ್ ಗಳು ಇವೇ ಮೊದಲಾದ ಚಟುವಟಿಕೆಗಳು ಅಪಾರವಾದ ಹಾನಿಗೊಳಗಾಗಿವೆ.
ಸ್ಕಿಲ್ ಇಂಡಿಯಾ ಮಿಷನ್:
ಸ್ಕಿಲ್ ಇಂಡಿಯಾ ಮಿಷನ್ 2022ರ ವೇಳೆಗೆ ಸುಮಾರು 40.2 ಕೋಟಿ ಯುವ ಸಮುದಾಯವನ್ನು ಕೌಶಲ್ಯ ಪೂರ್ಣರನ್ನಗಿಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಭಾರತವು ಜಗತ್ತಿನಲ್ಲಿಯೇ ಅತ್ಯಧಿಕ ಕಾರ್ಮಿಕ ಬಲವನ್ನು ಹೊಂದಿರುವ ದೇಶವಾಗಿ ಮೂಡಿಬರಲಿದೆ. ಚೀನಾ ವಿಶ್ವದ ಉತ್ಪಾದನೆ ಕಾರ್ಖಾನೆಯಾಗಿ ಗುರುತಿಸಲಾಗಿದ್ದರೆ ಭಾರತವು ವಿಶ್ವದ ಮಾನವ ಸಂಪನ್ಮೂಲ ಬಂಡವಳವಾಗಿಸುವ ನಿಟ್ಟಿನಲ್ಲಿ ಹೆಜ್ಜೆಯಿಡುತ್ತಿದ್ದೇವೆ. ಅನುಕೂಲಕರ ಜನಸಂಖ್ಯಾ ರಚನೆ ಮತ್ತು ಹೆಚ್ಚುತ್ತಿರುವ ಪದವೀಧರರ ಸಂಖ್ಯೆಯು ದೇಶಿಯ ಮತ್ತು ಅಂತರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಗಳಲ್ಲಿ ಬದಲಾಗುತ್ತಿರುವ ಆವಶ್ಯಕತೆಗಳನ್ನು ಪೂರೈಸಲು ಭಾರತವು ಅನುಕೂಲಕರವಾದ ಅವಕಾಶವನ್ನು ಹೊಂದಿದೆ.
ರುಡ್ಸೆಟಿ ಪರಿಕಲ್ಪನೆ:
ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ ಅಂದಿನ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕಿನ ಸಹಭಾಗಿತ್ವದಲ್ಲಿ 1982 ರಲ್ಲಿ ಆರಂಭವಾದ ರುಡ್‍ಸೆಟಿ ಸಂಸ್ಥೆ ನಿರುದ್ಯೋಗಿ ಯುವಕ ಯುವತಿಯರಿಗೆ ಸುಸ್ಥಿರ ಜೀವನಾಧಾರವನ್ನು ಒದಗಿಸಲು ಅಗತ್ಯ ಪ್ರೇರಣೆ, ತರಬೇತಿ ಹಾಗೂ ಮಾರ್ಗದರ್ಶನವನ್ನು ನೀಡುವ ಮೂಲಕ ಅನುಕರಣೀಯ ಮಾದರಿ ಸಂಸ್ಥೆಯಾಗಿ ರಾಷ್ಟ್ರದಾದ್ಯಂತ ಗುರುತಿಸಲ್ಪಟ್ಟಿದೆ.
ಇಂದು ದೇಶದಾದ್ಯಂತ ಇರುವ 27 ತರಬೇತಿ ಕೇಂದ್ರಗಳಲ್ಲಿ ಸುಮಾರು 200 ವಿವಿಧ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮಗಳಲ್ಲಿ ಸುಮಾರು 5 ಲಕ್ಷಕ್ಕಿಂತಲೂ ಹೆಚ್ಚು ನಿರುದ್ಯೋಗಿಗಳು ತರಬೇತಿ ಪಡೆದು 73% ಜನರು ಅಗತ್ಯ ಕೌಶಲ್ಯಗಳನ್ನು ತಮ್ಮದಾಗಿಸಿಕೊಂಡು ಸ್ವ ಉದ್ಯೋಗಿಗಳಾಗುತ್ತಿರುವ ಯಶೋಗಾಥೆಯನ್ನು ಕೇಂದ್ರ ಸರಕಾರ ಗಮನಿಸಿ ಅದೇ ಮಾದರಿಯಲ್ಲಿ 586 ಆರ್‍ಸೆಟಿಗಳನ್ನು ಪ್ರಾರಂಭಿಸಿದೆ. ಪೂಜ್ಯ ಹೆಗ್ಗಡೆಯವರ ಅಧ್ಯಕ್ಷತೆ ಹಾಗೂ ಮಾರ್ಗದರ್ಶನದಲ್ಲಿ ಆರ್‍ಸೆಟಿಗಳು ಕೂಡಾ ಕಾರ್ಯಾಚರಿಸುತ್ತಿವೆ. ರಾಷ್ಟ್ರದಾದ್ಯಂತ ಸ್ಥಾಪಿತವಾಗಿರುವ ಈ ಸಂಸ್ಥೆಗಳಲ್ಲಿ ಇಂದು ವಾರ್ಷಿಕವಾಗಿ ಸುಮಾರು ಒಂದು ಲಕ್ಷ ಯುವಕ ಯುವತಿಯರು ತರಬೇತಿಯನ್ನು ಪಡೆದುಕೊಂಡು ಸ್ವಾಭಿಮಾನದ ಬದುಕಿನತ್ತ ಹೆಜ್ಜೆ ಹಾಕುತ್ತಿರುವುದು ಶ್ಲಾಘನೀಯ ಪರಿಕ್ರಮ.
ಜೀವನಾಡಿಗೆ ಬೇಕು ಕಾಯಕಲ್ಪ:
ಅರ್ಥವ್ಯವಸ್ಥೆಯ ಮಾಹಾಯಾತ್ರೆಯಲ್ಲಿ ಬಲಹೀನ ವರ್ಗ ಸೇರದೆ ಅಭಿವೃದ್ಧಿಯ ಪರಿಕಲ್ಪನೆ ಅರ್ಥಪೂರ್ಣವೆನಿಸದು. ಉದ್ಯೋಗಗಳನ್ನು ಸೃಷ್ಟಿಸುವ, ವಿತರಣಾ ನ್ಯಾಯವನ್ನು ಒದಗಿಸಿ ಆರ್ಥಿಕ ಬೆಳವಣಿಗೆಗೆ ಪೂರಕವಾದ ಗ್ರಾಮೀಣ ಸಣ್ಣ ಉದ್ಯಮಗಳನ್ನು ಸುಧಾರಿಸಬೇಕು. ಅವು ಆರ್ಥಿಕತೆಗೆ ತಮ್ಮದೇ ಕೊಡುಗೆ ನೀಡುವುದಲ್ಲದೆ, ಗ್ರಾಮೀಣ ಸಮುದಾಯಗಳ ಸ್ಥಿತಿಗತಿ ಚೈತನ್ಯಗಳನ್ನು ಸುಧಾರಿಸುತ್ತವೆ, ನಗರ ವಲಸೆಗಳನ್ನು ಸುಧಾರಿಸುತ್ತವೆ. ಇದನ್ನೇ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಪ್ರತಿಪಾದಿಸಿದ್ದರು. ಈ ನಿಟ್ಟಿನಲ್ಲಿ ಭಾರತೀಯ ಆರ್ಥಿಕತೆಯ ಹೊಸ ಯುಗದ ವೇಗವರ್ಧಕಗಳೆಂದು ಮಾನ್ಯ ಮಾಡಲ್ಪಟ್ಟ ‘ಎಂಎಸ್‍ಎಂಇ’ ಗಳಲ್ಲಿ ಸೇರ್ಪಡೆಯುಳ್ಳ ಅಭಿವೃದ್ಧಿಗೆ ಒತ್ತು ನೀಡುವ ಸೂಕ್ಷ ಘಟಕಗಳ ಬೆಳವಣಿಗೆಗೆ ಪೂರಕವಾದ ವಾತಾವರಣ ಒದಗಿಸಿದಾಗ ಸಹಜವಾಗಿ ನಿಜವಾದ ಅರ್ಥದಲ್ಲಿ ಆರ್ಥಿಕ ಅಭಿವೃದ್ಧಿಯನ್ನು ಪಡೆಯಲು ಸಾಧ್ಯ.
-ಡಾ.ಎ.ಜಯ ಕುಮಾರ ಶೆಟ್ಟಿ
ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ
ಶ್ರೀ.ಧ.ಮಂ.ಕಾಲೇಜು, ಉಜಿರೆ
9448154001/ ajkshetty@sdmcujire.in
Key Words: MSME, International MSME day, Indian Economy, Economic growth, ಎಂಎಸ್‌ಎಂಇ, ಆರ್ಥಿಕ ಪ್ರಗತಿ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ