ಒಮ್ಮೆ ಡಾಕ್ಟರು ಮಾತಿಗೆ ಸಿಕ್ಕಾಗ ಹೇಳಿದರು, ದೇಶೀ ದನಗಳ ಮೂತ್ರ ವಾಗಲಿ, ಹಾಲಾಗಲಿ ಮೊಸರು ಆಗಲಿ, ತುಪ್ಪವಾಗಲಿ ಅತ್ಯಂತ ಶ್ರೇಷ್ಠ. "ಅದನ್ನು ಒಮ್ಮೆ ರೋಗಿಗಳ ಮೇಲೆ ಪ್ರಯೋಗಿಸಿ ನೋಡಿದ ಮೇಲೆ ನನಗೆ ಗೊತ್ತಾಯ್ತು ಅದರ ವಿಶೇಷತೆ. ಊಹನಾತೀತ ಫಲಿತಾಂಶ!". ಇನ್ನೊಮ್ಮೆ ಸೆಮಿನಾರ್ ಒಂದರಲ್ಲಿ ಚಿತ್ರ ಸಮೇತವಾಗಿ ರೋಗಿಗಳ ಮೇಲೆ ಮಾಡಿದ ಪ್ರಯೋಗ, ದಿನದಿಂದ ದಿನಕ್ಕೆ ಆದ ಫಲಿತಾಂಶದ ಬಗ್ಗೆ ಅದ್ಭುತವಾಗಿ ವಿವರಿಸಿದರು. ಈಗ ಅವರ ಮನೆಯಲ್ಲಿ ಐವತ್ತಕ್ಕೂ ಮಿಕ್ಕಿ ದೇಶಿ ಹಸುಗಳಿವೆ.
ಇನ್ನೊಬ್ಬರು ನಮ್ಮ ಆತ್ಮೀಯರು ಗಂಡ ಹೆಂಡತಿ ಇಬ್ಬರೂ ಡಾಕ್ಟರುಗಳು. ಇಬ್ಬರಿಗೂ ರಕ್ತದಲ್ಲಿ ಕೊಲೆಸ್ಟರಾಲ್ ಮಟ್ಟ 220 ರ ಮೇಲೆ ಸದಾ ಇರುತ್ತಿತ್ತಂತೆ. ದೇಶಿ ಹಾಲು ಉಪಯೋಗ ಶುರುಮಾಡಿ ಆರು ತಿಂಗಳಲ್ಲಿ ಸಹಜಸ್ಥಿತಿಗೆ ಬಂದಿತ್ತಂತೆ.
ನನ್ನ ಸಂಬಂಧಿಯೊಬ್ಬರಿಗೆ ಬೆಳಿಗ್ಗೆ ಎದ್ದಾಗ ಸದಾ ಒಂದು ನಮೂನೆಯ ಗಂಟಲು ಕೆರೆತ, ಸಣ್ಣ ಕೆಮ್ಮಿನ ರೀತಿ. ಅವರು ವಿದೇಶಿ ತಳಿ ಬಿಟ್ಟು ದೇಶೀ ದನದ ಉತ್ಪನ್ನಗಳನ್ನು ಉಪಯೋಗಿಸಲು ಆರಂಭಿಸಿದ ಮೇಲೆ ಇದೆಲ್ಲವೂ ಮಂಗಮಾಯ.
ನನ್ನ ಮಗನಿಗೆ ಚಿಕ್ಕ ಪ್ರಾಯದಿಂದಲೇ ತಲೆಯಲ್ಲಿ ಬಿಳಿಕೂದಲು ಇರುತ್ತಿತ್ತು. ಈಗ ಐದು ವರ್ಷದಿಂದೀಚೆಗೆ ದೇಸೀದನದ ಉತ್ಪನ್ನಗಳು ಬಳಸಲು ಆರಂಭಿಸಿದ ಮೇಲೆ ಬಿಳಿ ಕೂದಲು ಇಲ್ಲ.
ನಮ್ಮಲ್ಲಿರುವ ಕೃಷಿ ಸಹಾಯಕಿಯೋರ್ವಳಿಗೆ ಚಿಕ್ಕ ಪ್ರಾಯದಿಂದಲೇ ಮೈಗ್ರೇನ್ ತಲೆನೋವು. ಎಷ್ಟು ತೀವ್ರವಾಗಿತ್ತೆಂದರೆ ವಾರಕ್ಕೊಮ್ಮೆಯಾದರೂ ಬರುತ್ತಿತ್ತು. ವಾಂತಿಯಾಗಿ ಎರಡು ದಿನವಾದರೂ ವಿಶ್ರಾಂತಿ ಮಾಡಬೇಕಿತ್ತು. ಕಿನ್ನಿಗೋಳಿ ಆಶ್ರಮದವರು ತಯಾರು ಮಾಡಿದ ಘ್ರತವನ್ನು ನಾನೊಮ್ಮೆ ಬಳಸಲು ಕೊಟ್ಟೆ. ಪರಮಾಶ್ಚರ್ಯ ಮೂವತ್ತು ವರ್ಷಗಳಿಂದ ಅನುಭವಿಸಿದ ಮೈಗ್ರೇನ್ ತಲೆನೋವು ಈಗ ಬಲು ಅಪರೂಪ.
ನನಗೆ ಗೊತ್ತಾದ ಕೆಲವು ಅನುಭವಗಳನ್ನು ಹಂಚಿಕೊಂಡೆ. ಇದೆಲ್ಲವೂ ದೇಶೀ ಗೋವು ಮತ್ತು ಗವ್ಯೋತ್ಪನ್ನಗಳ ವಿಶೇಷತೆಯನ್ನು ಸಾರುತ್ತದೆ. ಹಾಗಾಗಿ ನಾವೆಲ್ಲರೂ ದೇಶೀ ದನಗಳನ್ನು ಸಾಕೋಣ. ಗವ್ಯ ಉತ್ಪನ್ನಗಳನ್ನು ಬಳಸೋಣ.
ಆಧುನಿಕ ಸ್ತ್ರೀ ಪುರುಷರೆಲ್ಲರೂ ತಿಳಕೊಳ್ಳಬೇಕಾದ ಸತ್ಯವನ್ನು ನಾನೊಂದು ಕಲಿತೆ. ಹುಟ್ಟಿದ ಹೆಣ್ಣು ಕರುಗಳು ಕೆಲವೊಮ್ಮೆ ಕೃತಕ ಗರ್ಭಧಾರಣೆಯಲ್ಲಿ ಗಬ್ಬವಾಗಲು ನಿಧಾನಿಸುತ್ತವೆ. ಕೆಲವು ಸಮಯ ಮುಂದೆ ಹೋದಲ್ಲಿ ಮತ್ತೆ ಅವು ಗಬ್ಬ ಕಟ್ಟುವುದು ಸಮಸ್ಯಾತ್ಮಕವಾಗುತ್ತದೆ. ಶರೀರ ಸ್ಥೂಲವಾದಂತೆ ಮತ್ತೆ ಗಬ್ಬ ಕಟ್ಟುವುದೇ ಇಲ್ಲ. (ಗ್ರಾಮೀಣ ಭಾಷೆಯಲ್ಲಿ ಗೊಡ್ಡು ಕಟ್ಟುವುದು ಅನ್ನುತ್ತಾರೆ) ಸಾಧನೆಯ ಹೆಸರಿನಲ್ಲಿ ವಿವಾಹವನ್ನು ಮುಂದೂಡುವುದು, ಮಕ್ಕಳಾಗುವುದನ್ನು ಮುಂದೂಡುವುದು, ಪ್ರಕೃತಿಯಲ್ಲಿ ನಮ್ಮ ಹುಟ್ಟಿನ ಉದ್ದೇಶವನ್ನೇ ಮರೆತಂತೆ ಎಂಬ ಪಾಠವನ್ನು ಕಲಿತೆ.
ಹೀಗೆ ಬದುಕಿನಲ್ಲಿ ಆರೋಗ್ಯಕ್ಕಾಗಿ ಆಹಾರಕ್ಕಾಗಿ ಕೃಷಿಗಾಗಿ ಎಲ್ಲದಕ್ಕೂ ಬೇಕಾದ ಗೋವು ಭಾರತೀಯರಿಗೆ ನಾನಾ ರೂಪದಲ್ಲಿ ಕಾಣಸಿಗುತ್ತಾಳೆ. ಮಹಾವಿಷ್ಣುವು ದಶಾವತಾರದಲ್ಲಿ ಕಂಡಂತೆ. ಕೆಲವರಿಗೆ ಗೋವು ದೇವತೆಯಾಗಿ, ಇನ್ನು ಕೆಲವರಿಗೆ ಔಷಧೀಯ ಭಂಡಾರವಾಗಿ,ಮತ್ತೆ ಕೆಲವರಿಗೆ ಉತ್ಪನ್ನಗಳನ್ನು ನೀಡುವ ಯಂತ್ರಗಳಾಗಿ, ಕೆಲವೊಮ್ಮೆ ಗೊಬ್ಬರವನ್ನು ನೀಡುವ ಕಾರ್ಖಾನೆಗಳಾಗಿ, ಕೆಲವರಿಗೆ ಮಾರಾಟದ ವಸ್ತುವಾಗಿ, ಕೆಲವರಿಗೆ ಬಂಧನವಾಗಿ, ಇನ್ನು ಕೆಲವರಿಗೆ ತರಕಾರಿಯಂತೆ ಆಹಾರದ ರೂಪದಲ್ಲಿ (ಅವರವರ ಮನಸ್ಥಿತಿಗೆ ಅನುಗುಣವಾಗಿ) ಕಾಣಸಿಗುತ್ತಳೆ.
ಹೀಗೆ ನನಗೆ 40 ವರ್ಷದಿಂದ ಗೋವು ಕಲಿಸಿದ ಪಾಠ ಅನೇಕ. ಆದರೂ ನಾನು ಕಲಿತದ್ದು ತೃಣದಷ್ಟು ಎಂಬ ಪರಿಜ್ಞಾನ ನನಗಿದೆ. ನನ್ನ ಸೀಮಿತ ಜ್ಞಾನದ ಅನುಭವಕ್ಕೆ ಬಂದ ಗೋ ಪುರಾಣವನ್ನು ಕೆಲವು ಕಂತುಗಳಲ್ಲಿ ಓದುಗರೊಂದಿಗೆ ಹಂಚಿಕೊಂಡೆ. ಓದಿದವರಿಗೆ, ಬೆನ್ನು ತಟ್ಟಿದವರಿಗೆ, ಮೆಚ್ಚಿಕೊಂಡು ಪ್ರತಿಕ್ರಿಯಿಸಿದವರಿಗೆ ಎಲ್ಲರಿಗೂ ಅನಂತ ನಮನಗಳು. ಗೋವಿನಿಂದ ವಿಮುಖರಾದ ವರೆಲ್ಲರೂ ಮತ್ತೆ ಗೋಸಾಕಣೆಯತ್ತ ಮುಖ ಮಾಡಲಿ ಎಂಬ ಆಶಯದೊಂದಿಗೆ ವಿರಮಿಸುತ್ತೇನೆ.
-ಎ.ಪಿ. ಸದಾಶಿವ ಮರಿಕೆ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ