ಬಡಗುತಿಟ್ಟಿನ ಯುವ ಮಹಿಳಾ ಭಾಗವತರು ಕುಮಾರಿ ಶ್ರೀರಕ್ಷಾ ರತ್ನವರ್ಮ ಹೆಗಡೆ

Upayuktha
0

 



ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಶ್ರೀಮತಿ ಶ್ರೀಲಕ್ಷ್ಮಿ ಹೆಗಡೆ ಹಾಗೂ ರತ್ನವರ್ಮ ಹೆಗಡೆ ಇವರ ಮಗಳಾಗಿ ದಿನಾಂಕ 05.03.2004ರಂದು ಇವರ ಜನನ. ಪ್ರಸ್ತುತ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.


ಅವರು ಯಕ್ಷಗಾನ ರಂಗಕ್ಕೆ ಬಂದಿದ್ದು ಹೇಗೆ ಎಂದು ಅವರ ಮಾತುಗಳಲ್ಲೇ ಮುಂದಕ್ಕೆ ಓದಿ:


ನಮ್ಮ ಮನೆಯಲ್ಲಿ ಕಲಾವಿದರಿಲ್ಲ, ಆದರೂ ಯಕ್ಷಗಾನದ ಮೇಲೆ ಅತಿಯಾದ ಆಸಕ್ತಿ. ಪದ್ಯ ಕೇಳೋದು, ಆಟಕ್ಕೆ ಹೋಗೋದು ಜಾಸ್ತಿ. ಹಾಗೆ ನನಗೆ 3ನೇ ಕ್ಲಾಸ್ ನಲ್ಲಿದ್ದಾಗ ಶ್ರೀ ಸತೀಶ್ ಉಪಾಧ್ಯಾಯ ಉಡುಪಿ ಅವರ ಬೇಸಿಗೆ ಶಿಬಿರಕ್ಕೆ ಕರೆದುಕೊಂಡು ಹೋದರು. ಅಲ್ಲಿ ಯಕ್ಷಗಾನ ತಾಳಗಳ ಬಗ್ಗೆ ಕಲಿತು ಗೋಪಾಲ ವೇಷ ಮಾಡಿದೆ. ನಂತರ ಇಡುವಾಣಿ ತ್ರಯಂಬಕ ಹೆಗಡೆ ಅವರ ಹತ್ತಿರ ತಾಳ ಹೆಜ್ಜೆ ಅಭ್ಯಾಸ. 3 ವರ್ಷ 3 ಪ್ರಸಂಗಗಳಲ್ಲಿ ವೇಷ ಮಾಡಿದೆ.  


ಕಾಳಿಂಗ ನಾವಡರ ಪದ್ಯದ ಪ್ರಭಾವದಿಂದ ಹಲವಾರು ಪ್ರಸಿದ್ಧ ಭಾಗವತರು ರಂಗದಲ್ಲಿದ್ದಾರೆ. ಅಂತಹ ನಾವಡರ ಪದ್ಯದ‌ ಸ್ಪೂರ್ತಿಯೂ ಈಕೆಯ ಭಾಗವತಿಕೆಗೆ ಕಾರಣವಂತೆ.ಕಾರಿನಲ್ಲಿ ನಾವು ಹೊರಗಡೆ ಹೋಗುವಾಗ ನನ್ನ ತಂದೆ ಕಾಳಿಂಗ ನಾವಡ ಅವರ ಪದ್ಯ ಯಾವಾಗಲೂ ಹಾಕ್ತಾರೆ. ಅದನ್ನು ಕೇಳಿ ಹಾಗೇನೇ ಹಾಡ್ತಿದ್ದೆ. ಅದನ್ನು ನೋಡಿ ಭಾಗವತಿಕೆ ಕಲಿಯಲು ಕಳುಹಿಸಿದ್ದಾರೆ ಚಂದ ಹಾಡಬಹುದು ಅಂತ. ಮೊದಲು ಇಡುವಾಣಿ ಬಳಿ ಪ್ರಾಥಮಿಕ ಪಾಠವನ್ನು ಕಲಿತೆ. ಪ್ರಸ್ತುತ A.P ಪಾಠಕ್ ಹಾಗೂ N.G ಹೆಗಡೆ ಅವರ ಬಳಿ ಅಭ್ಯಾಸ ಮಾಡುತ್ತಿದ್ದೇನೆ ಎಂದು ಶ್ರೀರಕ್ಷಾರವರು ಹೇಳುತ್ತಾರೆ.


ಸಣ್ಣ ಮಕ್ಕಳ ಟೀಮ್ ನಲ್ಲಿ ಸೀತಾ ಸ್ವಯಂವರದ ರಾಮ, ಕಂಸವಧೆಯ ಎರಡನೇ ಕಂಸ, ರುಕ್ಮಿಣಿ ಕಲ್ಯಾಣದ ಕೃಷ್ಣ ಹಾಗೂ ದೊಡ್ಡವರ ಆಟದಲ್ಲಿ ಕೃಷ್ಣಾರ್ಜುನ ಕಾಳಗದ ಅಭಿಮನ್ಯು ಹಾಗೂ ಚಂದ್ರಹಾಸದ ಬಾಲಚಂದ್ರಹಾಸ ರಂಗದಲ್ಲಿ ವೇಷಧಾರಿಯಾಗಿ ಕುಣಿದ ಅನುಭವವಿರುವುದರಿಂದ ಭಾಗವತಿಕೆಗೆ ಮತ್ತಷ್ಟು ಬಲ‌ ಸಿಕ್ಕಿದೆ.


ಭರತನಾಟ್ಯ ವಿದುಷಿ ಸೀಮಾ ಭಾಗವತ್ ಅವರಲ್ಲಿ ಸೀನಿಯರ್ ಕಲಿತಿರುವ ಇವರು, ಹಿಂದೂಸ್ತಾನಿ ಸಂಗೀತವನ್ನು ರಾಜೇಂದ್ರ ಹೆಗಡೆ ಅವರಲ್ಲಿ ಸೀನಿಯರ್ ಅಭ್ಯಾಸವನ್ನು ಮಾಡುತ್ತಿದ್ದಾರೆ. 2 ವರ್ಷಗಳಿಂದ ನಾಟಕ ತಂಡದಲ್ಲಿ ಹಿನ್ನಲೆ ಹಾಡುಗಾರ್ತಿಯಾಗಿ ಹಾಗೂ ಅದೇ ತಂಡದಲ್ಲಿ 1 ಪಾತ್ರವನ್ನು ಸಹ ಮಾಡಿದ್ದಾರೆ. ಚಿತ್ರ ಕಲೆ ಇವರ ಹವ್ಯಾಸ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಇವತ್ತಿನ ಪ್ರೇಕ್ಷಕರ ಬಗ್ಗೆ ಹೇಳುವಷ್ಟು ಸಾಧನೆ ನಾನು ಇನ್ನು ಮಾಡಬೇಕು ಅಷ್ಟೇ. ಆದರೆ ಪದ್ಯಗಳನ್ನು short ಆಗಿ ಮುಗಿಸಿದ್ರೆ ಜನಕ್ಕೆ ಮುಟ್ಟೋದಿಲ್ಲ. ಮೊದ್ಲಿನ ಹಾಗೆ. ಅದ್ಕೆ ಸ್ವಲ್ಪ ಜಾಸ್ತಿ ಹಾಡಬೇಕಾಗುತ್ತೆ. ಆಟದಲ್ಲಲ್ಲ, ಗಾನವೈಭವದಲ್ಲಿ ಎಲ್ಲ ಮಾಡಬೇಕು ಎಂದು ಶ್ರೀರಕ್ಷಾ ಅವರು ಹೇಳುತ್ತಾರೆ.


ಯಕ್ಷಗಾನ ರಂಗದ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯೋಜನೆ ಅಂತ ಏನು ಇಲ್ಲ. ಯಕ್ಷಗಾನದ ಬಗ್ಗೆ ಇನ್ನು ಕಲಿಯಬೇಕು. ನನ್ನ ಗುರುಗಳು N.G ಹೆಗಡೆ ಅವರೇ ಹೇಳಬೇಕು, ಯಾಕಂದ್ರೆ ನಾನೊಬ್ಬಳು ಯಕ್ಷಗಾನ ರಂಗದಲ್ಲಿ ಒಳ್ಳೆ ಪ್ರಬುದ್ಧ ಭಾಗವತೆ ಆಗಬೇಕಂತ ಅವರು ತುಂಬಾ ಶ್ರಮ ಪಡುತ್ತಿದ್ದಾರೆ. ಪ್ರೋಗ್ರಾಮ್ fix ಮಾಡುತ್ತಿದ್ದಾರೆ. ಪ್ರತೀ ದಿನ online ತರಗತಿ ಮಾಡಿ ಹಳೆಯ ಶೈಲಿಗಳನ್ನು ಹೇಳಿಕೊಡುತ್ತಿದ್ದಾರೆ. ನಾನು ತಯಾರು ಮಾಡುವಲ್ಲಿ ನನ್ನ ಗುರುಗಳು, ಅಪ್ಪ ಅಮ್ಮ ಮಾರ್ಗದರ್ಶನ ಮಾಡುತ್ತಿದ್ದಾರೆ. ಹಾಗಾಗಿ ಅವರು ತೋರಿಸಿದ ಹಾದಿಯಲ್ಲೇ ನಡಿಯೋದು ನನ್ನ ಮುಂದಿನ ಯೋಜನೆ ಯೋಚನೆ ಎಂದು ಶ್ರೀರಕ್ಷಾ ಅವರು ಹೇಳುತ್ತಾರೆ.


ಬಡಗು ಮಹಿಳಾ ಭಾಗವತಿಕೆಯ‌ ಆಶಾಕಿರಣವಾಗಿ‌ ಶ್ರೀರಕ್ಷಾ ಗಮನ ಸೆಳೆಯುತ್ತಾರೆ.ತನ್ನ ಮಧುರ ಕಂಠಸಿರಿಯಿಂದ ಈಗಾಗಲೇ ‌ಯಕ್ಷರಸಿಕರ ಮನಮೆಚ್ಚಿಸಿದ ಈ ಯುವ‌ ಯಕ್ಷ ಗಾಯಕಿಗೆ ಉತ್ತಮ ‌ಭವಿಷ್ಯವಿದೆ.ಜನಪ್ರಿಯತೆ,ಪ್ರಸಿದ್ಧಿ ಕಲಾ ಕಲಿಕೆಗೆ, ಸಾಧನೆಯ ಹಾದಿಗೆ‌ ತೊಡರಾಗದೆ, ಗುರು ‌ತೋರಿದ ಮಾರ್ಗದಲ್ಲಿ ಸ್ವಪ್ರತಿಭೆಯಿಂದ  ಬೆಳಗುವಂತಾಗಲಿ. ಬಡಗಿನ ಯಕ್ಷ ರಂಗಸ್ಥಳ ಗಳಲ್ಲಿ‌ ಯಕ್ಷ ಕೋಗಿಲೆಯಾಗಿ ಇಂಪಿನ ಕಂಪು ಪಸರಿಸಲಿ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


#Photo_Click:- Dheeraj Udupa Uppinakudru & Ganapati Hedge


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top