ಜೇನು ವ್ಯವಸಾಯ ಪುಸ್ತಕದ 6ನೇ ಮುದ್ರಣ ಪ್ರಕಟ; ಆಸಕ್ತರಿಗೆ ಉಪಯುಕ್ತ ಕೈಪಿಡಿ

Upayuktha
0


ಜೇನುಸಾಕಣೆ ಇಂದು ಸಾಕಷ್ಟು ವಿಸ್ತಾರವಾಗಿ ಬೆಳೆದಿದೆ. ಪೆಟ್ಟಿಗೆಯಲ್ಲಿ ತೊಡುವೆ ಜೇನುಕುಟುಂಬಗಳನ್ನು ಶಾಸ್ತ್ರೀಯವಾಗಿ ಸಾಕಿ ಅಹಿಂಸಾತ್ಮಕ ರೀತಿಯಲ್ಲಿ ಜೇನುತುಪ್ಪ ಪಡೆಯುವ ವಿಧಾನ ಎಲ್ಲೆಡೆ ಜನಪ್ರಿಯವಾಗಿದೆ. ಜೇನ್ನೊಣಗಳಿಂದಾಗುವ ಪರಾಗಸ್ಪರ್ಶದಿಂದಾಗಿ ಫಲೋತ್ಪನ್ನಗಳ ಇಳುವರಿ ಹೆಚ್ಚುವುದನ್ನು ಅನೇಕರು ಅನುಭವದ ಮೂಲಕ ಕಂಡುಕೊಂಡಿದ್ದಾರೆ.


ಪ್ರತಿದಿನ ಜೇನು ಸೇವನೆ ಆರೋಗ್ಯಕ್ಕೆ ಎಷ್ಟು ಹಿತಕರವೆಂಬುದು ಕೂಡ ಹಲವರಿಗೆ ತಿಳಿದಿರುವ ಸಂಗತಿ. ಬೇರೆಬೇರೆ ಸ್ವಾದದ ಜೇನು ಸಂಗ್ರಹವೂ ಇತ್ತೀಚಿನ ದಿನಗಳಲ್ಲಿ ವಿವಿಧೆಡೆ ನಡೆಯುತ್ತಿದೆ.  


ಹೀಗೆ ಜೇನುಸಾಕಣೆ ಪಾರಿಸರಿಕ-ಔಷಧೀಯ-ವಾಣಿಜ್ಯಕ ದೃಷ್ಟಿಯಿಂದ ಹಿಂದೆಂದಿಗಿಂತ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಅನೇಕರು ಉತ್ಸಾಹದಿಂದ ಜೇನು ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಮುಂದೆಬರುತ್ತಿದ್ದಾರೆ. ಕೇಂದ್ರ-ರಾಜ್ಯ ಸರ್ಕಾರಗಳ ಕೃಷಿ-ತೋಟಗಾರಿಕೆ ಯೋಜನೆಗಳಡಿ ಜೇನುಸಾಕಣೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಕೂಡ ಆಸಕ್ತರಿಗೆ ಅನುಕೂಲ ಕಲ್ಪಿಸಿದೆ. ಕೆಲವರು ದೊಡ್ಡ ಪ್ರಮಾಣದಲ್ಲಿ ಜೇನು ಕುಟುಂಬಗಳನ್ನು ಅಭಿವೃದ್ಧಿಪಡಿಸಿ ಪೂರೈಸುವ ಮೂಲಕ ಉತ್ತಮ ಆದಾಯ ಗಳಿಸುತ್ತಿದ್ದಾರೆ.


ಮೊದಮೊದಲು ಅಪರೂಪವಾಗಿದ್ದ ಸ್ಥಳಾಂತರ ಜೇನುಸಾಕಣೆ ಇಂದು ಸರ್ವೇಸಾಮಾನ್ಯವಾಗಿದೆ. ಯಾವ ಹಂಗಾಮಿನಲ್ಲಿ ಎಲ್ಲಿ ಹೆಚ್ಚು ಮಕರಂದ ಲಭ್ಯ ಎಂಬುದು ವೃತ್ತಿಪರ ಜೇನು ವ್ಯವಸಾಯಗಾರರಿಗೆ ತಿಳಿದಿದೆ. ದಿನಬೆಳಗಾಗುವಷ್ಟರಲ್ಲಿ ತಮ್ಮ ಸುತ್ತಮುತ್ತಲಿನ ತೋಟ, ಹೊಲ-ಗದ್ದೆಗಳ ಪರಿಸರದಲ್ಲಿ ನೂರಾರು ಜೇನುಗೂಡುಗಳು ಅವತರಿಸುವುದು ಜನಸಾಮಾನ್ಯರ ಪಾಲಿಗೆ ಅಚ್ಚರಿಯ ಸಂಗತಿಯಾಗಿ ಉಳಿದಿಲ್ಲ.


ಈ ಮಧ್ಯೆ, ಇಂದಿಗೆ 74 ವರ್ಷಗಳ ಹಿಂದೆ, 1944ರಲ್ಲಿ ಆಗಿನ ಪುತ್ತೂರು ತಾಲೂಕು ಸಹಕಾರಿ ಜೇನು ಸಂಗ್ರಹ ಮತ್ತು ಮಾರಾಟ ಸಂಘದಿಂದ ಪ್ರಕಟವಾಗಿದ್ದ `ಜೇನಿನ ವ್ಯವಸಾಯ’ ಕೃತಿ ಮತ್ತೆಮತ್ತೆ ಮರುಮುದ್ರಣಗೊಂಡು ಹೆಚ್ಚುಹೆಚ್ಚು ಜೇನುಕೃಷಿ ಆಸಕ್ತರನ್ನು ತಲುಪುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ.  

ಮಂಗಳೂರು ಅಜ್ಜ - ದಿವಂಗತ ಪೈಲೂರು ಲಕ್ಷ್ಮೀನಾರಾಯಣ ರಾವ್ ಅವರು ವೈಜ್ಞಾನಿಕ ಜೇನುವ್ಯವಸಾಯದ ಕುರಿತು ಬರೆದ ಮೊದಲ ಪುಸ್ತಕ `ಜೇನು ನೊಣ ಸಾಕುವಿಕೆ’ ಪ್ರಕಟವಾದುದು 1935ರಲ್ಲಿ. ಮುಂದೆ 1944ರಲ್ಲಿ ಜೇನುಸಂಘದಿಂದ ಪ್ರಕಟಗೊಂಡ ಅವರ `ಜೇನಿನ ವ್ಯವಸಾಯ’ ಪುಸ್ತಕಕ್ಕೆ ಡಾ. ಶಿವರಾಮ ಕಾರಂತರು ಮುನ್ನುಡಿ ಬರೆದಿದ್ದರು. ಈ ಪುಸ್ತಕಕ್ಕೆ ಮದರಾಸಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಬಹುಮಾನ ಬಂದಿತ್ತಲ್ಲದೆ ಅದರ ಕೆಲಭಾಗ ಶಾಲಾ ಪಠ್ಯದಲ್ಲೂ ಅಳವಡಿಸಲ್ಪಟ್ಟಿತ್ತು. ಜೇನುಸಂಘದ ಕೋರಿಕೆಯ ಮೇರೆಗೆ ಅಜ್ಜ 1995ರಲ್ಲಿ `ಜೇನು ವ್ಯವಸಾಯ’ ಕೃತಿಯನ್ನು ಹೊಸದಾಗಿ ಬರೆದರು. ಅದಕ್ಕೂ ಡಾ. ಕಾರಂತರೆ ಮುನ್ನುಡಿ ಬರೆದಿದ್ದರು. ಅದರಲ್ಲಿ ಅವರು `ಪೈಲೂರು ಲಕ್ಷ್ಮೀನಾರಾಯಣ ರಾವ್ ಹಾಗೂ ಪೈಲೂರು ನಾರಾಯಣ ರಾವ್ ಅವರ ನೆನಪು ಜೇನಿಗಿಂತ ಸವಿ’ ಎಂದು ಬಣ್ಣಿಸಿದ್ದಾರೆ.


ಜೇನು ಸಂಘ 1957ರ ಏಪ್ರಿಲ್‌ನಲ್ಲಿ ಆರಂಭಿಸಿದ್ದ `ಮಧುವನ’ ಮಾಸಪತ್ರಿಕೆಗೆ ಅಜ್ಜ ಪ್ರಧಾನ ಸಂಪಾದಕರಾಗಿದ್ದರು. ಕೃಷಿ ಪತ್ರಿಕೋದ್ಯಮದ ಆರಂಭಿಕ ಪ್ರಯತ್ನಗಳಲ್ಲಿ ಈ ಪತ್ರಿಕೆ ಕೂಡ ಒಂದು. ಆಗ ಅದರ ವಾರ್ಷಿಕ ಚಂದಾ 2 ರೂ.  


ಅಜ್ಜ ತಮ್ಮ ಕೊನೆಯ ದಿನಗಳ ವರೆಗೂ ಜೇನಿನೊಂದಿಗೆ ನಿಕಟ ನಂಟು ಹೊಂದಿದ್ದರು. ಸದಾ ಒಂದಲ್ಲ ಒಂದು ಪ್ರಯೋಗದಲ್ಲಿ ನಿರತರಾಗಿದ್ದರು. ಮಣ್ಣಿನ ಜೇನುಗೂಡು ಸುಲಭ ವೆಚ್ಚದ್ದೆಂಬ ಗ್ರಹಿಕೆಯಲ್ಲಿ ಅವರು ಮಂಗಳೂರಿನಲ್ಲಿ ತಮ್ಮ ಸ್ನೇಹಿತರ ಹಂಚಿನ ಕಾರ್ಖಾನೆಯಿಂದ ಹದಮಾಡಿದ ಮಣ್ಣನ್ನು ತಂದು ಜೇನುಗೂಡು ತಯಾರಿಸಲು ನಡೆಸುತ್ತಿದ್ದ ಪ್ರಯತ್ನ ಮರೆಯುವಂತಿಲ್ಲ. ಜೇನುಸಂಘದ ಪ್ರಮುಖ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗಿಯಾಗುತ್ತಿದ್ದರು. ಇಳಿ ವಯಸ್ಸಿನಲ್ಲೂ ಬಸ್ಸು ಹಿಡಿದು ಮಂಗಳೂರಿನಿಂದ ಪುತ್ತೂರಿಗೆ ತೆರಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಅವರಿಗೆ ಅಭಿಮಾನದ ಕ್ಷಣವಾಗಿತ್ತು.  


2002ರ ಏಪ್ರಿಲ್‌ನಲ್ಲಿ ಬಿಡುಗಡೆಯಾದ `ಮಧುಪ್ರಪಂಚ’ ವಿಶೇಷಾಂಕದಲ್ಲಿ ಪ್ರಕಟವಾದ `ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೇನುವ್ಯವಸಾಯದ ಆರಂಭ ಮತ್ತು ಪ್ರಗತಿ’ ಲೇಖನ ಅಜ್ಜನ ಕೊನೆಯ ಬರಹ. ಅದೇ ವರ್ಷದ ಡಿಸೆಂಬರ್ 8ರಂದು ತಮ್ಮ 90ನೇ ವಯಸ್ಸಿನಲ್ಲಿ ಅವರು ನಿಧನರಾದರು.


ಈಗ ಈ ಪುಸ್ತಕ ಮರುಮುದ್ರಣಗೊಳ್ಳುತ್ತಿರುವುದು ಅವರಿಗೆ ಸಲ್ಲುವ ಗೌರವವೆಂದೇ ಪರಿಗಣಿಸುವೆ. ಇದಕ್ಕೆ ಕಾರಣರಾದ ದ.ಕ. ಜೇನುವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆಗಳು. ಜೇನುಸಾಕಣೆಯಲ್ಲಿ ಆಸಕ್ತಿ ವಹಿಸುವ ಹೊಸಬರಿಗೆ ಈ ಪುಸ್ತಕ ಪ್ರೇರಣೆ ನೀಡಲಿ ಎಂದು ಆಶಿಸುತ್ತೇನೆ.


-ಶಿವರಾಂ ಪೈಲೂರು

------------------------

ಪುಸ್ತಕ ಅನ್ ಲೈನ್ ಖರೀದಿಗೆ - 

https://booksloka.com/product/jenu-vyavasaya/

ಮೊಬೈಲ್ 9886856364

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top