ತುಂಗಭದ್ರಾ ತಟದಲ್ಲೊಂದು ನಂದನವನ: ಚಿರಂಜೀವಿಯೆಂಬ ಕೃಷಿಕನ ಕಥನ

Upayuktha
0

 


ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡಿ ಎಂದರೆ ಎಲ್ಲರ ಮನದಲ್ಲಿ ಮೂಡುವುದು ವಿದೇಶಿಗರ ಕಲರವ. ತುಂಗಭದ್ರ ನದಿಯ ತಟದಲ್ಲಿರುವ ಈ ಪ್ರದೇಶದಲ್ಲಿ ಹಲವಾರು ಹೋಂ ಸ್ಟೇಗಳು ಹಾಗೂ ಅತಿಥಿ ಗೃಹಗಳು ತುಂಬಿಕೊಂಡಿದ್ದು ವಿದೇಶಿಗರ ಸ್ವರ್ಗ ಎಂದೇ ಕರೆಯಲ್ಪಡುತ್ತಿತ್ತು. ಆದರೆ ಈಗ ಆ ಪ್ರದೇಶವನ್ನು ಜಿಲ್ಲಾಡಳಿತ ವಶಕ್ಕೆ ಪಡೆದು ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ. ಇಂತಲ್ಲಿ ಎರಡು ಎಕರೆ ಜಮೀನು ಮಾಡಿ ತಿಂಗಳಿಗೆ ನಿಶ್ಚಿತ ಎರಡು ಲಕ್ಷ ಆದಾಯ ಗಳಿಸಬೇಕೆಂಬ ನಿರ್ದಿಷ್ಠ ಗುರಿ ಇಟ್ಟುಕೊಂಡು ಕೃಷಿಗೆ ಇಳಿದವರು ಚಿರಂಜೀವಿ.


ಮೂಲತಃ ಆಂಧ್ರದವರಾದ ಇವರು ಕರ್ನಾಟಕಕ್ಕೆ ಬಂದು ಇಲ್ಲಿಯವರೇ ಆಗಿರುವುದು ವಿಶೇಷ. ನಿಶ್ಚಿತ ಆದಾಯಕ್ಕೆ ಇವರು ಆರಿಸಿಕೊಂಡಿರುವುದು ತೆಂಗಿನ ಸಂಕರಣ ತಳಿ. ಖಾಸಗಿ ಸಂಸ್ಥೆ ಅಭಿವೃದ್ದಿ ಪಡಿಸಿರುವ ಎಳನೀರು ಹೆಚ್ಚು ಕೊಡುವ 100 ತೆಂಗಿನ ಸಸಿಗಳನ್ನು ತಂದು ನಾಟಿ ಮಾಡಿ ಇಂದಿಗೆ 4 ವರ್ಷ.


ತುಂಗಭದ್ರೆಯ ಸಿಹಿನೀರಿನ ಆಸರೆಯಲ್ಲಿ ಬೆಳೆಯುತ್ತಿರುವ ಈ ಮರಗಳು ಸಂಪದ್ಬರಿತ ಫಸಲನ್ನು ನೀಡಲು ಪ್ರಾರಂಭಿಸಿವೆ. ಪ್ರತಿ ವರ್ಷಕ್ಕೆ ಪ್ರತಿ ಗಿಡಕ್ಕೆ ಕನಿಷ್ಠ 700 ಎಳನೀರು ಗ್ಯಾರೆಂಟಿ ಎನ್ನುತ್ತಾರೆ ಚಿರಂಜೀವಿ. ಆದರೆ ನೀರಿಲ್ಲದ ಹೊರಹೊಲದಲ್ಲಿ ಖಂಡಿತ ತೆಂಗು ಹಾಕಬೇಡಿ ಎಂದು ಹೇಳುವುದನ್ನು ಅವರು ಮರೆಯುವುದಿಲ್ಲ. ಉಳಿದಂತೆ ಅವರ ತೋಟದ ಆಕರ್ಷಣೆ ಎಂದರೆ ನಾವು ಹೆಸರಿಸುವ ಯಾವುದೇ ಹಣ್ಣಿನ ಹಾಗೂ ಔಷಧೀಯ ಸಸ್ಯಗಳನ್ನು ನಾವು ಇಲ್ಲಿ ಕಾಣಬಹುದು.


ಕೊಡಗಿನ ಕಾಫಿ, ಮೆಣಸು, ಏಲಕ್ಕಿಯಿಂದ ಮಲೆನಾಡಿನ ಅಡಿಕೆ, ಕೋಕೋವರೆಗೆ ಎಲ್ಲ ಗಿಡಗಳು ಇಲ್ಲಿ ಕಂಡುಬರುತ್ತವೆ. ದಾಲ್ಚಿನ್ನಿ, ಚಕ್ಕೆ, ಲವಂಗ, ಸಂಬಾರ ಎಲೆ, ವೀಳ್ಯೆದೆಲೆ - ಹೀಗೆ ಏನುಂಟು ಏನಿಲ್ಲ. ಆಸಕ್ತಿಯಿಂದ ನೋಡುವವರಿಗೆ ಅಷ್ಟೇ ಆಸಕ್ತಿಯಿಂದ ಪ್ರತಿಯೊಂದು ಗಿಡದ ಬಗ್ಗೆ ವಿವರಿಸುತ್ತಾರೆ ಚಿರಂಜೀವಿ. ಸಣ್ಣ ಪುಷ್ಪ ತೋಟವು ಅರಳಿದೆ. ವೈವಿಧ್ಯಮಯ ಜಾತಿಯ ಹೂಗಳ ಸಂಗ್ರಹ ಇಲ್ಲಿದೆ. ಹಲವಾರು ಜಾತಿಯ ತರಕಾರಿ ಬಳ್ಳಿಗಳು ಸುತ್ತಲೂ ಹಬ್ಬಿವೆ. ಮನೆ ಬಳಕೆಗೆ ಅಗತ್ಯ ಕೈತೋಟ ಹಸಿರಾಗಿದೆ. ರೋಗ ರುಜಿನಗಳ ಪರಿಹಾರಕ್ಕೆ ಅಗತ್ಯ ಆಯುರ್ವೇದ ಗಿಡಮೂಲಿಕೆಗಳು ಅಲ್ಲಲ್ಲಿ ಬೆಳೆದಿದ್ದು ಅವುಗಳ ಮಾಹಿತಿಯನ್ನು ಅಚ್ಚುಕಟ್ಟಾಗಿ ವಿರಿಸುತ್ತಾರೆ ಚಿರಂಜೀವಿ.


ಹಂಪೆಗೆ ಹರಿದು ಬರುವ ಪ್ರವಾಸಿಗರಿಗೆ ಕೃಷಿ ಹೇಗೆ ತೋರಿಸಬೇಕು ಎಂಬ ಅರಿವಿರುವುದರಿಂದ ಮುಂದೆ ಕೃಷಿ ಪ್ರವಾಸೋದಯಮಕ್ಕೆ ಅಗತ್ಯ ತಯಾರಿ ಈಗಿನಿಂದಲೇ ಶುರುವಾಗಿದೆ. ವಿದೇಶಿ ಪ್ರವಾಸಿಗರು ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಹಾಗಾಗಿ ಇವರ ಕೃಷಿಯು ಸಂಪೂರ್ಣ ಸಾವಯವದತ್ತ. ಅಗತ್ಯ ಒಳಸುರಿಗಳೆಲ್ಲ ತೋಟದಲ್ಲಿಯೇ ಉತ್ಪಾದನೆ. ಹೊರಗಿನಿಂದ ತರುವುದು ಬೇಕಾಗಿಲ್ಲ ಎಂಬ ಅಭಿಪ್ರಾಯ ಇವರದು. ತೋಟದಲ್ಲಿರುವ ಹಲವು ಬೆಳೆಗಳಿಗೆ ಬೇಕಾದ ಪರಾಗಸ್ಪರ್ಶ ಹಾಗೂ ವರ್ಷವಿಡೀ ಲಭ್ಯವಿರುವ ತೆಂಗಿನ ಪರಾಗದ ಸದ್ಬಳಕೆ ಇವರ ಮಧುವನದಿಂದ.


ಹತ್ತಾರು ಜೇನು ಪೆಟ್ಟಿಗೆಗಳು ತೋಟದ ತುಂಬೆಲ್ಲಾ ಹರಡಿ ತನ್ನ ಝೇಂಕಾರದಿಂದ ತನ್ನ ಇರುವಿಕೆಯನ್ನು ಪ್ರತಿಪಾದಿಸುತ್ತವೆ. ತುಪ್ಪಕ್ಕೆ ಸ್ಥಳೀಯವಾಗಿಯೇ ಬೇಡಿಕೆ ಇರುವುದರಿಂದ  ಪ್ರತಿ ಕೆಜಿ ಜೇನುತುಪ್ಪಕ್ಕೆ 700ರೂನಂತೆ ಎಲ್ಲಯೇ ಮಾರಾಟವಾಗುತ್ತದೆ. ಒಟ್ಟಾರೆ ಒಬ್ಬ ಆಸಕ್ತಿಯುತ ಕೃಷಿಕ ಅಗತ್ಯವಾಗಿ ಭೇಟಿ ನೀಡಲೇ ಬೇಕಾದ ಕ್ಷೇತ್ರ ಇವರದು. ಭೇಟಿ ನೀಡುವ ಮುನ್ನ ಅನುಮತಿಗಾಗಿ 9448584223ಗೆ ಕರೆಮಾಡಿ.


-ಡಾ. ಪಿ. ಆರ್ ಬದರಿ ಪ್ರಸಾದ್ (9900145705)

ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ)

ಕೃಷಿ ಮಹಾವಿದ್ಯಾಲಯ, ಗಂಗಾವತಿ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top