ಪಾವನ ಗಂಗಾ: ಭುವಿಗೆ ಬಂದ ಭಾಗೀರಥಿ

Upayuktha
0

ಜೂನ್ 20 ಜ್ಯೇಷ್ಠ ಮಾಸದ ಶುದ್ದ ದಶಮಿ ಗಂಗಾವತರಣವಾದ ಸುದಿನ


ರಘುಕುಲದಲ್ಲಿ, ಸತ್ಯ ಹರಿಶ್ಚಂದ್ರನ ಅನಂತರ ಬಂದ ಅರಸರಲ್ಲಿ ಪ್ರಮುಖನಾದವನು ಸಗರ. ಸಂಸ್ಕೃತದಲ್ಲಿ ‘ಸಗರ’ ಎಂದರೆ ವಿಷಸಹಿತ ಎಂದರ್ಥ. ಅವನಿಗೆ ಆ ಹೆಸರು ಬಂದ ಸಂದರ್ಭವನ್ನು ಆದಿಕವಿ ವಾಲ್ಮೀಕಿ ಬಣ್ಣಿಸುವುದು ಹೀಗೆ: 


ಹರಿಶ್ಚಂದ್ರನ ಮಗ ರೋಹಿತ, ಅವನ ಪುತ್ರ ಹರಿತ, ಅವನ ಸಂತಾನ ಚಂಪ. ಅನಂತರ ಬಂದವನು ಸುದೇವ ಮತ್ತು ಅವನ ಕುವರ ವಿಜಯ. ಈ ಪರಂಪರೆಯ ಮುಂದಿನವರು ಭರುಕ, ವೃಕ ಹಗೂ ಬಾಹುಕ. ಇಲ್ಲಿಯವರೆವಿಗೂ ಬಲಶಾಲಿಗಳಾಗಿದ್ದ ಅರಸು ಮನೆತನಕ್ಕೆ ವಿಘ್ನ ಬಂದದ್ದು ಬಾಹುಕನ ಕಾಲದಲ್ಲಿಯೇ. ಅವನ ರಾಜ್ಯಭಾರದ ಸಮಯದಲ್ಲಿ ಶತ್ರುಗಳು ದಂಡೆತ್ತಿ ಬಂದು ಬಾಹುಕನನ್ನು ಸೋಲಿಸಿ ಪದಚ್ಯುತಗೊಳಿಸುತ್ತಾರೆ. ಸೋತು ಹಣ್ಣಾದ ಬಾಹುಕ ವೃದ್ಧಾಪ್ಯದಲ್ಲಿ ತನ್ನ ಹಿರಿಯ ಪತ್ನಿಯೊಂದಿಗೆ ಅರಣ್ಯಕ್ಕೆ ತೆರಳುತ್ತಾನೆ. ಅವನು ಅಲ್ಪಕಾಲದಲ್ಲಿಯೇ ಮೃತನಾದಾಗ ಅವನ ಪತ್ನಿ ಸಹಗಮನಕ್ಕೆ ಮುಂದಾಗುತ್ತಾಳೆ.


ಆಗ ಆ ಕಾಡಿನಲ್ಲಿದ್ದ ಜೌರ್ವನೆಮಬ ಮಹರ್ಷಿ, ಆಕೆ ಗರ್ಭಿಣಿ ಎಂದು ತಿಳಿದಿದ್ದರಿಂದ, ಸಹಗಮನದಿಂದ ಅವಳನ್ನು ತಡೆಯುತ್ತಾಕೆ. ತುಂಬು ಗರ್ಭಿಣಿಯಾದ ಅವಳ ಏಳಿಗೆಯನ್ನು ಸಹಿಸದ ಆಕೆಯ ಸವತಿಯರು ಅವಳಿಗೆ ಊಟದೊಂದಿಗೆ ‘ಗರ’ ಅಥವಾ ‘ವಿಷ’ವನ್ನು ತಿನ್ನಿಸುತ್ತಾರೆ. ಆದರೆ ಆ ವಿಷವು ಅವಳ ಗರ್ಭದ ಮೇಲೆ ಏನೊಂದು ಪ್ರಭಾವವನ್ನು ಮಾಡದೆ, ಮಗುವಿನ ‘ಸಗರ’ ಎಂದು ನಾಮಕರಣ ಮಾಡಲಾಗುತ್ತದೆ.


ಹೀಗೆ ಹುಟ್ಟಿನಿಂದಲೇ ಬಂದ ಯಶೋವಂತ ‘ಸಗರ’ ಚಕ್ರವರ್ತಿ ಪಟ್ಟ ಏರಲು ಬಹಳ ಸಾಹಸಪಡಬೇಕಾಗುತ್ತದೆ. ತನ್ನ ತಂದೆಯ ಶತ್ರುಗಳಾದ ತಾಲ, ಜಂಘ, ಯವನ, ಶಕ, ಹೈದಯ, ಬರ್ಬರ ಮುಂತಾದ ಜಾತಿಯವರನ್ನೆಲ್ಲ ಗೆದ್ದು ಮರಳಿ ರಾಜ್ಯವನ್ನು –ಕೋಸಲ ಸಾಮ್ರಾಜ್ಯವನ್ನು ಪಡೆಯುತ್ತಾನೆ. ಅವನಿಗೆ ಇಬ್ಬರು ಧರ್ಮಪತ್ನಿಯರು. ಹಿರಿಯವಳು ಕೇಶಿನಿ. ಅವಳ ಒಬ್ಬನೇ ಮಗ ಅಸಮಂಜ.


ಅವನು ತನ್ನ ಹಿಂದಿನ ಜನ್ಮದಲ್ಲಿ ಯೋಗಿಯಾಗಿದ್ದವನು. ತಪಶ್ಚರ್ಯೆಯಲ್ಲಿ ನಿರತನಾಗಿದ್ದ ಅವನು ಮಾನಿನಿಯರ ಸಂಗದಿಂದ ವಿಚಲಿತನಾಗಿ, ಅರ್ಧದಲ್ಲಿಯೇ ಅದನ್ನು ಬಿಟ್ಟು ಭೋಗ ಜೀವನಕ್ಕೆ ತೊಡಗಿದವನು. ವೃದ್ಧಾಪ್ಯದಲ್ಲಿ ತನ್ನ ತಪ್ಪಿನ ಅರಿವಾದರೂ ಜೀವನದಲ್ಲಿ ಬಹಳ ದೂರ ಬಂದಿದ್ದರಿಂದ ಪಶ್ಚಾತ್ತಾಪಪಟ್ಟು ಮೂಢನಾದವನು. ಅಸಮಂಜನಿಗೆ ತನ್ನ ಪೂರ್ವಜನ್ಮದ ವಾಸನೆ ಪದೇ ಪದೇ ಕಾಡಿ, ಈ ಜನ್ಮದಲ್ಲಿ ಅರೆಹುಚ್ಚನಾಗಿ, ಹೆಸರಿಗೆ ತಕ್ಕಂತೆ ಅಸಮಂಜಸ ಕಾರ್ಯಗಳನ್ನು ಮಾಡುತ್ತಿದ್ದ. ಅವನ ಮಗನೆ ಅಂಶುಮಂತ. ತುಂಬ ಸಂಭಾವಿತ ಬಾಲಕ.


ಈ ಅಸಮಂಜ ಕೋಸಲದ ಪ್ರಜೆಗಳ ಪುತ್ರರನ್ನು ವಿನಾಕಾರಣ ನೀರಿಗೆಸೆಯುವುದು, ಸರಯೂ ನದಿ ತೀರದಲ್ಲಿ ಕುಕಾರ್ಯಗಳನ್ನು ಮಾಡುವುದು, ಸುಮ್ಮಸುಮ್ಮನೆ ನಗುವುದು- ಹೀಗೆಲ್ಲ ಮಾಡಿ ರಾಜಗಾಂಭಿರ್ಯವನ್ನು ಕಳೆದುಕೊಂಡು ತಂದೆಗೆ ಬೇಡವಾದ ಮಗನಾಗಿ ಅರಣ್ಯ ಸೇರುತ್ತಾನೆ. ಅಲ್ಲಿ ತನ್ನ ಪೂರ್ವಜನ್ಮದ ತಪಸ್ಸನ್ನು ಮುಂದುವರಿದಿ ಸಂನ್ಯಾಸಿಯಾಗುತ್ತಾನೆ. ಇಂತಹ ಮಗನ ವಿಯೋಗದಿಂದ ನೊಂದ ಸಗರ ದೈವ ಪ್ರಾರ್ಥನೆ ಮಾಡಿ, ತನ್ನ ಸಾಮ್ರಾಜ್ಯವನ್ನು ವಿಸ್ತರಿಸಬೇಕೆಂಬ ಬಯಕೆಯಿಂದ, ಮಂತ್ರಶಕ್ತಿಯಿದೆ. ಕಿರಿಯ ಪತ್ನಿ ಸುಮತಿಯ ಮೂಲಕ ಅರವತ್ತು ಸಾವಿರ ಮಕ್ಕಳನ್ನು ಪಡೆಯುತ್ತಾನೆ.


ಸಾಮ್ರಾಜ್ಯ ವಿಸ್ತರಿಸಿದ ಹಾಗೆ ಸಗರನ ಬಯಕೆಯೂ ಹೆಚ್ಚಾಗಿ, ಅವನ ಕಣ್ಣು ಇಂದ್ರ ಪದವಿಯ ಮೇಲೆ ಬೀಳುತ್ತದೆ. ತನ್ನ ಕುಲಗುರು ಚೌರ್ವ ಮಹರ್ಷಿಗಳ ಸಲಹೆಯಂತೆ ‘ಅಶ್ವಮೇಧ’ ಯಜ್ಞದ ಮೂಲಕ ಸರ್ವಶಕ್ತಿವಂತನಾದ ಶ್ರೀಹರಿಯ ಆರಾಧನೆಗೆ ತೊಡಗುತ್ತಾನೆ. ಆ ಯಜ್ಞದ ನಿಯಮದಂತೆ, ಭೂಮಂಡಲದಲ್ಲಿ ತನ್ನ ಸಾರ್ವಭೌಮತ್ವವನ್ನು ಸಾರಲು ಯಜ್ಞಾಶ್ವವನ್ನು ಕೋಸಲ ಸಾಮ್ಯಾಜ್ಯದಲ್ಲಿ ಸಂಚರಿಸಲು ಬಿಡುತ್ತಾನೆ. ಅದನ್ನು ಕಟ್ಟಿದವರೊಂದಿಗೆ ಹೋರಾಡಿ ಗೆಲ್ಲುವುದು ನಿಯಮ. ಸೋತರೆ ಶರಣಾಗತಿ.


ಸಗರನ ಯಜ್ಞದ ವಿಷಯ ದೇವೇಂದ್ರನಿಗೆ ತಿಳಿಯದೇ ಹೋದಿತೆ? ತನ್ನ ಪದವಿಗೆ ಚ್ಯುತಿ ಬರುತ್ತಿದೆಯೆಂಬ ಸುಳಿವು ಸಿಕ್ಕ ಕೂಡಲೆ ಅವನು ಕಾರ್ಯ ಸನ್ನದ್ಧನಾಗುತ್ತಾನೆ. ಏನೇ ಆಗಲಿ ಸಗರನ ಯಜ್ಞ ವಿಫಲವಾಗಲೇಬೇಕು. ಅಂದರೆ ಆ ಯಜ್ಞಾಶ್ವವನ್ನು ಯಾರಾದರೂ ಜಯಿಸಬೇಕು ಅಥವಾ ಬಚ್ಚಿಡಬೇಕು. ಸಗರನನ್ನು ಗೆಲ್ಲುವ ಧೀರ ಯಾರಿದ್ದಾನೆ, ಅದು ಅಸಾಧ್ಯ ಕುದುರೆಯನ್ನು ಬಚ್ಚಿಡುವುದೇ ಲೇಸು ಎಂದರಿತ ಇಂದ್ರ ಅದನ್ನು ಅಪಹರಿಸಿ ಅತ್ಯಂತ ಸುರಕ್ಷಿತ ಸ್ಥಳವಾದ ಕಪಿಲ ಮುನಿಗಳ ಕುಟೀರದ ಬಳಿ-ಪಾತಾಳ ಲೋಕದ ಈಶಾನ್ಯ ಭಾಗದಂಚಿನಲ್ಲಿ ಕಟ್ಟಿ ಹಾಕುತ್ತಾನೆ. ತಪೋನಿರತರಾದ ಮುನಿಗಳು, ಇಂದ್ರನ ಈ ಕಾರ್ಯಕ್ಕೆ ಸಹಕರಿಸುತ್ತಾರೆ.


ಕುದುರೆಯ ಹಿಂದಿರುಗುವಿಕೆಗಾಗಿ ಕಾತರದಿಂದ ಕಾಯುತ್ತಿದ್ದ ಸಗರ ಅದರ ಸುಳಿವು ಸಿಗದೆ, ಯಜ್ಞವನ್ನು ಅರ್ಧಕ್ಕೆ ನಿಲ್ಲಿಸಿ, ಅದರ ಶೋಧಕ್ಕಾಗಿ ತನ್ನ ಅರವತ್ತು ಸಹಸ್ರ ಪುತ್ರರನ್ನು ಕಳುಹಿಸುತ್ತಾನೆ. ಇಡೀ ಭೂಮಂಡಲವನ್ನೆಲ್ಲ ಶೋಧಿಸಿದರೂ ಅಶ್ವ ಕಾಣದಿರಲಿ ಆ ಪಿತೃ ವಾಕ್ಯ ಪರಿಪಾಲಕರು ಭೂಮಿಯ ಈಶಾನ್ಯ ಭಾಗದಲ್ಲಿ ರಂಧ್ರವೊಂದನ್ನು ಕಂಡು ಅಲ್ಲಿಯೇನೋ ಮರ್ಮವಿರಬೇಕೆಂದು ಊಹಿಸಿ ನೆಲವನ್ನು ಅಗೆದು ಪಾತಾಳಕ್ಕೆ ಬರುತ್ತಾರೆ. ಮೊದಲೆ ಸಗರ ಪುತ್ರ ವೀರರು ತಾವೆಂಬ ಗರ್ವದಿಂದಿದ್ದ ಅವರು ಅಶ್ವವನ್ನು ಮುನಿ ಕುಟೀರದ ಸಮೀಪ ಕಂಡ ಕೂಡಲೇ ಮತಿಗೆಡುತ್ತಾರೆ. ಅವಿವೇಕದಿಂದ, ಕಪಿಲ ಮುನಿಯೇ ತಮ್ಮ ತಂದೆಯ ಯಜ್ಞಕ್ಕೆ ಆಪತ್ತು ತಂದ ಕಳ್ಳ ಸಂನ್ಯಾಸಿಯೆಂದು ಭಾವಿಸಿ, ಆತನನ್ನು ವಧೀಸಬೇಕೆಂಬ ಹಠದಿಂದ ಆಯುಧಗಳನ್ನು ಸಜ್ಜು ಮಾಡಿಕೊಂಡು, “ಇವನು ಕಳ್ಳ, ಕಣ್ಣುಮುಚ್ಚಿ ಮುನಿಯಂತೆ ನಾಟಕ ಮಾಡುತ್ತಿದ್ದಾನೆ. ಪಾಪಿಯನ್ನು ಕೊಂದು ಬಿಡಿ” ಎಂದು ಅವನ ಮೇಲೆ ಎರಗಿ ಬರುತ್ತಾರೆ.  


ಇವರ ಗದ್ದಲದಿಂದ ಎಚ್ಚೆತ್ತ ಕಪಿಲ ಮುನಿಯ ದೃಷ್ಟಿ ಈ ಗುಂಪಿನ ಮೇಲೆ ಬೀಳುತ್ತದೆ. ಕಪಿಲ ಮುನಿ ಸಾಮಾನ್ಯ ಋಷಿಯೇ? ಅವನ ತಪಶ್ಯಕ್ತಿಯಾದರೂ ಎಂತಹುದು? ಅವನ ಒಂದು ಕಣ್ಣು ನೋಟ ಆ ಸಗರ ಪುತ್ರರನ್ನು ಸುಟ್ಟು ಭಸ್ಮವನ್ನಾಗಿಸುತ್ತದೆ. ಈ ಪ್ರಸಂಗವನ್ನು ವಿವರಿಸುತ್ತಾ ವಾಲ್ಮೀಕಿ ಉದ್ಗರಿಸುವುದು- “ಇಂದ್ರನು ಕೇವಲ ಯಜ್ಞಾಶ್ವವನ್ನಷ್ಟೇ ಅಲ್ಲ ಆ ರಾಜಕುಮಾರರ ಚಿತ್ತವನ್ನೂ ಅಪಹರಿಸಿದ್ದನು”. ಸುಮಾರು ಸಮಯ ಕಳೆದರೂ ಯಜ್ಞದ ಅಶ್ವವಾಗಲಿ ಅಥವಾ ಅದನ್ನು ಹುಡುಕಲು ಹೊರಟ ಸಹಸ್ರಾರು ಪುತ್ರರಾಗಲಿ ಹಿಂದಿರುಗದಿರಲು, ಚಿಂತಾಕ್ರಾಂತನಾದ ಸಗರನು ತನ್ನ ಮೊಮ್ಮಗ ಅಂಶುಮಾನನನ್ನು ತಪಾಸಣೆಗೆ ಕಳುಹಿಸುತ್ತಾನೆ.


ಸಗರನ ಕಿರಿಯ ಪತ್ರನಿಯ ಮಕ್ಕಳು ಅವನಿಗೆ ಚಿಕ್ಕಪ್ಪಂದಿರಷ್ಟೆ. ಅವರು ಮುನಿಯ ಕುಟೀರವನ್ನು ತಲುಪುತ್ತಾನೆ. ವಿವೇಕಿಯಾದ ಈ ಯುವಕ ಚಿಕ್ಕಪ್ಪಂದಿರಂತೆ ದುಡುಕದೆ ಕಪಿಲ ಮುನಿಯ ಆಶೀರ್ವಾದ ಪಡೆಯಲು ಮುನಿಯ ಸ್ತುತಿಗೆ ತೊಡಗುತ್ತಾನೆ. ಆ ಋಷಿಯ ಹಿರಿಮೆಯನ್ನು ಕೊಂಡಾಡುತ್ತಾನೆ. ಇವನ ಆರಾಧನೆಯಿಂದ ಸುಪ್ರೀತಗೊಂಡ ಮುನಿ ಯಜ್ಞಾಶ್ವವನ್ನು ಬಿಡುಗಡೆ ಮಾಡುವುದಲ್ಲದೆ ಅವನ ಚಿಕ್ಕಪ್ಪಂದಿರ ಮೋಕ್ಷಕ್ಕೆ ಪರಿಹಾರವನ್ನೂ ತಿಳಿಸುತ್ತಾನೆ. ಆ ಪರಿಹಾರವೆಂದರೆ “ದೇವಲೋಕದ ಪವಿತ್ರ ಗಂಗೆಯ ಜಲ ಆ ಭಸ್ಮಗಳ ಮೇಲೆ ಹರಿಯಬೇಕು.” ಇದರ ಹೊರತು ಅನ್ಯ ಮಾರ್ಗವಿಲ್ಲವೆಂದರಿತ ಅಂಶುಮಾನ ಕುದುರೆಯೊಂದಿಗೆ ರಾಜಧಾನಿಗೆ ಹಿಂದಿರುಗುತ್ತಾನೆ. ಸಗರನ ಯಜ್ಞ ಪರಿಪೂರ್ಣವಾಗುತ್ತದೆ.


ಪುತ್ರ ಶೋಕದಲ್ಲಿ ಮಿಂದ ಸಗರನಿಗೆ ಯಜ್ಞ ಮಧ್ಯದಲ್ಲಿ ವಿಘ್ನವಾಗಿ ಸಕಾಲಕ್ಕೆ ಪೂರ್ಣಾಹುತಿ ಕೊಡಲಾಗದೆ ಇಂದ್ರ ಪದವಿ ದೊರೆಯದೆ ವಾರ್ಧಕ್ಯದಿಂದ ಇಹಲೋಕ ತ್ಯಜಿಸುವಂತಾಗುತ್ತದೆ. ಯನ್ನ ಪುತ್ರರಿಗೆ ಅಕಾಲ ಮೃತ್ಯು ಸಂಭವಿಸಿದುದನ್ನು ನೆನೆಯುತ್ತಿದ್ದ ವನ ಹತಾಶೆ ಮೊಮ್ಮಗ ಅಂಶುಮಾನನನ್ನು ಧೃತಿಗೆಡುವಂತೆ ಮಾಡುತ್ತದೆ. ಅಂಶುಮಾನ ಘೋರ ತಪಸ್ಸು ಮಾಡಿದರೂ ಅವನು ಗಂಗೆಯ ಮೂಲವನ್ನು ಪತ್ತೆ ಮಾಡುವುದರಲ್ಲಿಯೇ ವಿಫಲನಾಗುತ್ತಾನೆ. ಅವನಂತೆಯೇ ಅವನ ಮಗ ದಿಲೀಪನ ‘ಗಂಗಾ ಶೋಧನೆ’ಯ ಪ್ರಯತ್ನವೂ ಅಸಫಲವಾಗುತ್ತದೆ.


ದಿಲೀಪ ಮಹಾರಾಜನ ಮಗನೇ ಭಗೀರಥ. ತನ್ನ ತಂದೆ-ತಾತರ ಪ್ರಯತ್ನಗಳಲ್ಲಿ ಸಕ್ರಿಯವಾಗಿ ಭಾಗಗೊಳ್ಳುತ್ತಿದ್ದ ಭಗೀರಥನಿಗೆ ಗಂಗೆ ದೇವಲೋಕದಲ್ಲಿ ಬ್ರಹ್ಮನ ಸಮೀಪ ಕಮಂಡಲವೊಂದರಲ್ಲಿ ವಿಹರಿಸುತ್ತಿರುವ ಸಂಗತಿ ತಿಳಿಯುತ್ತದೆ. ಆಗ ಭಗೀರಥನು ಚತುರ್ಮುಖನನ್ನು ಕುರಿತು ತಪೋನಿರತನಾಗುತ್ತಾನೆ. ಚತುರ್ಮುಖನ ಸಲಹೆಯಂತೆ ವಿಷ್ಣುವಿನ ವಾಮನವತಾರಕ್ಕಾಗಿ ತಾಳ್ಮೆಯಿಂದ ಕಾದ ಭಗೀರಥನಿಗೆ, ಆ ಮಹಾತಾಯಿ ವಾಮನನ ಪಾದ ಸ್ಪರ್ಶ ಮಾಡುವುದನ್ನು ಕಾಣುವ ಸುಯೋಗ ದೊರಕುತ್ತದೆ. ಆಕೆಯ ಪಾದ ಸ್ಪರ್ಶದಿಂದ ಪುನೀತನಾದ ಭಗೀರಥ ಬ್ರಹ್ಮ ಮತ್ತು ಗಂಗೆಯನ್ನು ಪುನಃ ಪುನಃ ಪ್ರಾರ್ಥಿಸಿದರೂ ಗಂಗೆ ಭೂಲೋಕಕ್ಕೆ ಬರಲು ಇಚ್ಚಿಸುವುದಿಲ್ಲ. ದೇವಲೋಕದಿಂದ ಭೂಲೋಕಕ್ಕೆ ಬಂದರೆ ನಾನು ಮಲಿನಳಾಗುತ್ತೇನೆ. ನನ್ನ ಮಲಿನತೆಯನ್ನು ಕಳೆಯುವುದಾದರೂ ಎಂತು ಎಂಬುದು ಆಕೆಯ ಚಿಂತನೆ.


ಆದರೆ ಪಿತನಾದ ಬ್ರಹ್ಮ ಉಸುರುತ್ತಾನೆ. “ಗಂಗಾ, ನಿನ್ನ ಸೃಷ್ಟಿಯ ಮೂಲ ಉದ್ದೇಶವೇ ಅದು. ನಿನಗೆಲ್ಲಿಯ ಮಲಿನತೆ?” ಭಗೀರಥನು ನಮ್ರ ಭಾವದಿಂದ, “ತಾಯಿ, ನೀನು ಭೂಲೋಕಕ್ಕೆ ಆಗಮಿಸಿ, ರಸಾತಳದಲ್ಲಿ ಕಪಿಲ ಮುನಿಯ ಕುಟೀರದ ಬಳಿ ಬೂದಿಯ ಗುಡೆಯಾಗಿರುವ ನನ್ನ ಪಿತೃಕುಲವನ್ನು ಉದ್ಧರಿಸು. ಭೂಲೋಕದಲ್ಲಿರುವ ಸಾಧು ಸಂತರು ಲೋಕ ಪಾವನರು, ಶಾಂತರೂ ಬ್ರಹ್ಮ ನಿಷ್ಠರೂ ಆದ ಆ ಮುನಿಗಳ ಅಂಗ ಸ್ಪರ್ಶವೇ ಸಾಕು ನಿನ್ನ ಮಲಿನತೆಯನ್ನು ತೊಳೆಯಲು. ಆ ಸಾಧುಗಳಲ್ಲಿ ನಿನ್ನಲ್ಲಿಯಂತೆಯೇ ಪಾಪನಾಶಕ ಶ್ರೀಹರಿಯೂ ಸರ್ವದಾ ನೆಲಸಿರುತ್ತಾನೆ” ಎಂದಾಗ ನಿರುತ್ತರಳಾದ ಗಂಗೆ ಮತ್ತೊಂದು ಕಾರಣವನ್ನು ಮುಂದಿಡುತ್ತಾಳೆ.


“ವತ್ಸ, ಭಗೀರಥ, ನಾನು ಸ್ವರ್ಗದಿಂದ ಭೂಮಿಗೆ ರಭಸದಿಂದ ಧುಮುಕುವಾಗ, ಭೂಮಿ ಛಿದ್ರ ಛಿದ್ರವಾದೀತು. ನನ್ನ ವೇಗದ ನಿಯಂತ್ರಣವಿಲ್ಲದಿದ್ದರೆ ಅನಾಹುತ ಖಂಡಿತ” ಎನ್ನಲು ಭಗೀರಥನು,ಅರ್ಥಾತ್, “ಸಕಲ ಪ್ರಾಣಿಗಳ ಆತ್ಮರೂಪಿಯಾದ ರುದ್ರನು ನಿನ್ನ ವೇಗವನ್ನು ಧರಿಸಲು ಶಕ್ತನಾಗಿದ್ದಾನೆ. ಬಟ್ಟೆಯಲ್ಲಿ ದಾರವು ವ್ಯಾಪಿಸಿರುವ ಹಾಗೆ ಈ ಜಗತ್ತು ಆ ದೇವನಲ್ಲಿ ಅಡಕವಾಗಿದೆ” ಎಂದು ಪ್ರಾರ್ಥಿಸುತ್ತಾನೆ. ಕೊನೆಗೆ ಬ್ರಹ್ಮದೇವನು ತನ್ನ ಪುತ್ರಿಗೆ, “ಗಂಗಾ, ನೀನು ಕರ್ತವ್ಯದಿಂದ ವಿಮುಖಳಾಗಬೇಡ. ಜಗತ್ತಿನ ಜನರ ಪಾಪಗಳನ್ನು ತೊಳೆಯಲು ನೀನು ನಿಯಾಮಕಳಾಗಿದ್ದೆ. ಭಗೀರಥನನ್ನು ಹರಸು” ಎನ್ನಲು ಆಕೆ ಸಮ್ಮತಿಸುತ್ತಾಳೆ.


ಆದರೆ ಪರಶಿವನನ್ನು ಗಂಗೆಯನ್ನು ತಡೆಯುವಂತೆ ಪ್ರೇರೇಪಿಸುವುದು ಅಷ್ಟು ಸುಲಭವೆ? ಭಗೀರಥ ಗಂಗೆಯನ್ನು ಸ್ತುತಿಸಿ, ಶಿವನನ್ನು ಕುರಿತು ಉಗ್ರ ತಪಸ್ಸಿಗೆ ತೊಡಗುತ್ತಾನೆ. ಮಹಾದೇವ ಎಷ್ಟಾದರೂ ಭಕ್ತ ವತ್ಸಲನಲ್ಲವೆ? ಭಗೀರಥನ ಕಾರ್ಯ ಶ್ರದ್ಧೆಯನ್ನು, ಛಲವನ್ನು ತಿಳಿಯದವನಲ್ಲ ಅವನು. ಅವನು, “ಅಸ್ತು” ಎಂದು ಆಶ್ವಾಸನೆ ನೀಡಿದ ಮೇಲೆ ದೇವ ಗಂಗೆ ಸುರಲೋಕದಿಂದ, ಶ್ರೀಹರಿಯ ಪದತಲದಿಂದ ಭುವಿಗೆ ಧುಮುಕಿದಳು. ಆ ರಭಸಮತಿಯನ್ನು ಪರಮೇಶ್ವರ ತನ್ನ ಜಟೆಯಲ್ಲಿ ಹಿಡಿದಿಟ್ಟನು. ಆ ಜಟಾಜೂಟಧಾರಿಯನ್ನು ತನ್ನ ಜಟೆ ಸಡಿಲಿಸುವಂತೆ ಬೇಡಿ ಭಗೀರಥ ಅವಳ ಹರಿಯುವಿಕೆಗೆ ಪಥ ತೋರಿಸುತ್ತಾ ನಡೆದನು.


ರಥದಲ್ಲಿ ಭಗೀರಥ ಭಾನಿನಿಂದ, ಗಂಗೋತ್ರಿಯಿಂದ ಮುಂದೆ ಮುಂದೆ ಸಾಗುತ್ತಾ ನಡೆದ ಹಾಗೆಲ್ಲ ಆ ದೇವ ಜಲ ಅವನನ್ನು ಹಿಂಬಾಲಿಸಿ ಹರಿಯತೊಡಗಿತು. ಭೂಲೋಕ ಪಂಚಭೂತ ನಿರ್ಮಿತವಷ್ಟೆ. ಭುವಿಯಲ್ಲಿ ಆಕೆ ಇಲ್ಲಿಯ ನಿಯಮಗಳಿಗೆ ಬದ್ಧಳಷ್ಟೆ. ಉಷ್ಣಾಂಶ ತೀರ ಕಡಿಮೆಯಾದಾಗ ಮಂಜಾಗುವುದು. ಸೂರ್ಯ ರಶ್ಮಿ ಪ್ರಖರವಾದಾಗ ಜಲವಾಗಿ ಮುಂದುವರಿಯುವುದು. ಹೀಗೆ ಭಗೀರಥ ಮುಂದೆ, ಅವನ ಹಿಂದೆ ಭಾಗೀರಥಿ ನಡೆದಾಡುವಾಗ, ಅನುಕ್ಷಣವೂ ಎಚ್ಚರ. ಆ ಅರಸನಿಗೆ ನಿದ್ರೆಯಲ್ಲಿಯದು?


ಹಾಗಿರುವಾಗ, ಒಮ್ಮೆ ಭಗೀರಥ ಹಿಂದುರುಗಿ ನೋಡುತ್ತಾನೆ. ಭಾಗೀರಥಿ ನಾಪತ್ತೆ. ಮಂಜಿನ ರೂಪವೂ ಕಾಣದು. ಚಿಂತಾಕ್ರಾಂತನಾದ ಅವನು ಹಿಂದೆ ಬಂದಂತೆ ಆ ಗುಡ್ಡದ ಸಮತಲ ಪ್ರದೇಶದಲ್ಲಿ ಮುನಿಯೊಬ್ಬ ಆದಿತ್ಯನಿಗೆ ಅರ್ಘ್ಯ ಕೊಡುತ್ತಿರುವುದು ಕಂಡುಬರುತ್ತದೆ. ಅಲ್ಲಿದ್ದ ಶಿಷ್ಯವೃಂದದಿಂದ ಆ ಮುನಿ ಜುಹ್ನುವೆಂದು ಆ ಪ್ರದೇಶ ಅವನ ತಪೋವನವೆಂದು ತಿಳಿದುಬರುತ್ತದೆ. ಆ ಶಿಷ್ಯರಿಂದಲೆ ಗಂಗೆ ಅಲ್ಲಿಗೆ ರಭಸವಾಗಿ ಬಂದು ಅವರ ತಪೋಭೂಮಿಯ ಮೇಲೆ ಹರಿದು ಧ್ವಂಸವಾದಾಗ, ಆಕೆಯ ಅಬ್ಬರವನ್ನು, ಅಟ್ಟಹಾಸವನ್ನು ತಡೆಯಲು ಜುಹ್ನು ಮುನಿ ಆಕೆಯನ್ನು ಆಪೋಶನ ತೆಗೆದುಕೊಂಡು ಉದರದಲ್ಲಿ ಅಟಗಿಸಿಟ್ಟಿರುವ ಸಂಗತಿ ತಿಳಿದುಬರುತ್ತದೆ.


ವಿಷಯವನ್ನು ತಿಳಿದ ಭಗೀರಥನು ಆಶ್ರಮಕ್ಕೆ ಬಂದು, ಜುಹ್ನು ಮುನಿಗೆ ಸಾಷ್ಟಾಂಗ ನಮಸ್ಕರಿಸಿ, ತಾನು ಸುರ ಗಂಗೆಯನ್ನು ಕರೆತರಲು ಮಾಡಿದ ಸಾಹಸವನ್ನೆಲ್ಲ ಬಣ್ಣಿಸಿ, ಆಕೆಯ ಅಟ್ಟಹಾಸವನ್ನು ಮನ್ನಿಸಿ ಬಿಡುಗಡೆ ಮಾಡಿ ತನ್ನೊಂದಿಗೆ ಕಳುಹಿಸಿಕೊಡಬೇಕೆಂದು ವಿನಂತಿಸುತ್ತಾನೆ. ಇದರಿಂದ ಸುಪ್ರೀತನಾದ ಆ ಚಂದ್ರವಂಶಿ ತನ್ನ ಕರ್ಣಗಳ ಮೂಲಕ ಆಕೆಯನ್ನು ಬಿಡುಗಡೆ ಮಾಡುತ್ತಾರೆ. ಆ ದೇವ ಗಂಗೆ, ಭಗೀರಥನಿಂದಾಗಿ ಭಾಗೀರಥಿ ಎನಿಸಿಕೊಂಡವಳು, ಈಗ ‘ಜಾಹ್ನವಿ’ಯೂ ಆಗುತ್ತಾಳೆ.

-ಡಾ. ಗುರುರಾಜ ಪೋಶೆಟ್ಟಿಹಳ್ಳಿ,

ಸಂಸ್ಕೃತಿ ಚಿಂತಕರು, 9739369621

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
To Top