ಕಲಾ ಸ್ವಪ್ನ ಜಾಲತಾಣ ವೇದಿಕೆಯಲ್ಲಿ ಪರಿಸರ ಉತ್ಸವ

Upayuktha
0


ಈ ಲಾಕ್ ಡೌನ್ ಅವಧಿಯಲ್ಲಿ ಮನೆ ಒಳಗೆ ಬಂಧಿ ಆಗಿರುವ ಪುಟ್ಟ ಮನಸುಗಳಿಗೆ ಒಂದು ಸ್ಫೂರ್ತಿ ಬೇಕಿತ್ತು. ಕೆಲಸ ಬಯಸುವ ಪುಟ್ಟ ಕೈಗಳಿಗೆ ಒಂದು ಚಟುವಟಿಕೆ ಬೇಕಾಗಿತ್ತು. ಪರಿಸರ ದಿನದ ಹಸಿರು ಸಂದೇಶವನ್ನು ನೂರಾರು ಎಳೆಯೆ ಮನಸ್ಸುಗಳಿಗೆ ತಲುಪಿಸುವ ಪ್ರಯತ್ನ ಬೇಕಿತ್ತು. ಅದನ್ನು ಮಾಡಿ ಗೆದ್ದವರು ಕಲಾ ಸ್ವಪ್ನ ಜಾಲತಾಣದ ಯುವ ಸ್ನೇಹಿತರು. ಅದಕ್ಕಾಗಿ ಅವರನ್ನು ಅಭಿನಂದಿಸುವ ಅಗತ್ಯ ಇದೆ. 

ಜೂನ್ ಮೊದಲ ವಾರದಲ್ಲಿ ಜಾಲತಾಣದ ಮೂಲಕ ಎಳೆಯ ಮಕ್ಕಳಿಗೆ ಜೂನ್ ಐದರ ಮೊದಲು ಒಂದೆಡೆ ಪುಟ್ಟ ಮಕ್ಕಳು ಗಿಡ ನೆಟ್ಟು ವಿಡಿಯೋ ಮಾಡಿ ಅದರ ಜೊತೆಗೆ ಪರಿಸರ ಸಂರಕ್ಷಣೆ ಬಗ್ಗೆ ಎರಡು ನಿಮಿಷ ಮಾತುಗಳನ್ನು ಜೋಡಿಸಿ ಕಳುಹಿಸಲು ಆಮಂತ್ರಣ ನೀಡಲಾಗಿತ್ತು. ಕೇವಲ ಎರಡೇ ದಿನಗಳಲ್ಲಿ ಬಂದ ಸ್ಪಂದನೆ ಅದ್ಭುತ ಆಗಿತ್ತು. ಹೆತ್ತವರ ಆಶಯವೂ ಇದಕ್ಕೆ ಪೂರಕ ಆಗಿತ್ತು.

ಎರಡು ತಿಂಗಳ ಪುಟ್ಟ ಮಗುವಿನಿಂದ ಹಿಡಿದು 10 ವರ್ಷಗಳ ಮಗುವಿನ ತನಕ ಒಟ್ಟು 120 ಮಕ್ಕಳು ತಮ್ಮ ಮನೆ ಅಂಗಳದಲ್ಲಿ ಗಿಡ ನೆಟ್ಟು ವಿಡಿಯೋ ಮಾಡಿದರು. ಒಂದಷ್ಟು ಫೋಟೋಗಳು ಕೂಡ ಬಂದವು. ಸಣ್ಣ ಮಕ್ಕಳು ಮಾತು ಆಡದಿದ್ದರೂ ಗಿಡ ನೆಟ್ಟು ನೀರು ಹಾಕಿ ಸಂಭ್ರಮ ಪಟ್ಟರು. ಸ್ವಲ್ಪ ದೊಡ್ಡ ಮಕ್ಕಳು ಬಹಳ ಚಂದವಾಗಿ ಪರಿಸರ, ಹಸಿರು ಮೊದಲಾದ ಬಗ್ಗೆ ಪ್ರೀತಿಯಿಂದ ಮಾತಾಡಿದರು. ಕೇವಲ ಉಡುಪಿ ಜಿಲ್ಲೆಯ ಮಾತ್ರವಲ್ಲ ದೂರದ ಜಿಲ್ಲೆಗಳ ಮಕ್ಕಳೂ ಉತ್ಸಾಹದಿಂದ ಭಾಗವಹಿಸಿದ್ದು ವಿಶೇಷವಾಗಿತ್ತು. ಅಷ್ಟೂ ವಿಡಿಯೋಗಳನ್ನು ಕಲಾ ಸ್ವಪ್ನ ಫೇಸ್ ಬುಕ್ ಪುಟದಲ್ಲಿ ಜೂನ್ ಐದರಂದು ಅಪ್ಲೋಡ್ ಮಾಡಿ ಮಕ್ಕಳ ಸಂಭ್ರಮವನ್ನು ಹೆಚ್ಚು ಮಾಡಲಾಯಿತು. 

ಎಳೆಯ ಮನಸ್ಸಿನ ಮುಗ್ಧ ಮಕ್ಕಳ ಭಾವಕೋಶದಲ್ಲಿ ಹಸಿರು ಪ್ರೇಮದ ಒಂದು ಸೆಲೆಯನ್ನು ಪರಿಸರ ದಿನದಂದು ಬಿತ್ತಿದ ಧನ್ಯತೆ ಕಲಾ ಸ್ವಪ್ನ ಜಾಲ ತಾಣ ವೇದಿಕೆಯ ಸ್ನೇಹಿತರದ್ದು.  ಅವರಿಗೆ ಅಭಿನಂದನೆ.

-ರಾಜೇಂದ್ರ ಭಟ್ ಕೆ.

ಜೇಸಿಐ ರಾಷ್ಟ್ರ ಮಟ್ಟದ ತರಬೇತುದಾರರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top