ಶಿವಮೊಗ್ಗ: ಕರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಒಂದು ಬಾರಿ ತಲಾ 2 ಸಾವಿರ ರೂ. ಪರಿಹಾರ ಒದಗಿಸುವ ಯೋಜನೆಯಡಿ ಅರ್ಹರಿಗೆ ಸಹಾಯಧನ ಒದಗಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸೂಚನೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಸಂಘಟಿತ ವರ್ಗದ ಕಾರ್ಮಿಕರಿಗೆ ಸಹಾಯಧನ ಒದಗಿಸುವ ಕುರಿತು ಸಮಿತಿ ಸಭೆ ನಡೆಸಿದರು.
ಕೋವಿಡ್ ಪ್ರಥಮ ಅಲೆಯ ಸಂದರ್ಭದಲ್ಲಿ ಸಹಾಯಧನವನ್ನು ಪಡೆದಿರುವ ಕ್ಷೌರಿಕರು ಹಾಗೂ ಅಗಸರು, `ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ ನೋಂದಣಿಯಾದ ಕುಟುಂಬಗಳ ಅರ್ಹ ಫಲಾನುಭವಿಗಳು ನೆರವು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಈಗಾಗಲೇ ಲಭ್ಯವಿರುವ ಮಾಹಿತಿ ಆಧಾರದಲ್ಲಿ ಅವರಿಗೆ ಸಹಾಯಧನ ಒದಗಿಸಲು ಕ್ರಮ ಕೈಗೊಳ್ಳಬೇಕು.
ಇನ್ನುಳಿದಂತೆ ಗೃಹ ಕಾರ್ಮಿಕರು, ಟೈಲರ್‍ಗಳು, ಮೆಕ್ಯಾನಿಕ್‍ಗಳು, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಮತ್ತು ಭಟ್ಟಿ ಕಾರ್ಮಿಕ ವೃತ್ತಿಯಲ್ಲಿ ತೊಡಗಿರುವವರು ಸಹಾಯಧನಕ್ಕಾಗಿ ಸೇವಾಸಿಂಧು ವೆಬ್‍ಸೈಟ್ ಮೂಲಕ ಮಾತ್ರವೇ ದಾಖಲೆಗಳನ್ನು ಸಲ್ಲಿಸಬೇಕಾಗಿದೆ. ಸೇವಾ ಕೇಂದ್ರಗಳಲ್ಲಿ ಅರ್ಜಿಯನ್ನು ಸಲ್ಲಿಸಲು ನೆರವು ನೀಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ್ ಅವರು ಮಾತನಾಡಿ, ಪರಿಹಾರ ಪಡೆಯ ಬಯಸುವವರು 18ರಿಂದ 65ವರ್ಷ ಒಳಗಿನವರಾಗಿರಬೇಕು. ಕುಟಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ನೀಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರಬೇಕು. ಮೇಲೆ ನಮೂದಿಸಿರುವ ವೃತ್ತಿಯಲ್ಲಿ ತೊಡಗಿರುವ ವಲಸೆ ಕಾರ್ಮಿಕರು ಸಹ ಪರಿಹಾರಕ್ಕೆ ಅರ್ಹರಿರುವರು. ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಕಡ್ಡಾಯವಾಗಿ ಹೊಂದಿರಬೇಕು. ವೃತ್ತಿ ನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳಿಂದ ಪಡೆದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ಅರ್ಹ ಫಲಾನುಭವಿ ಕಾರ್ಮಿಕರು ಸೇವಾಸಿಂಧು ಪೋರ್ಟಲ್‍ನಲ್ಲಿ ಅರ್ಜಿ ಸಲ್ಲಿಸಬೇಕು. ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ ಮಾಡಬೇಕು. ಆಧಾರ್ ಕಾರ್ಡ್, ವಿಳಾಸ ದೃಢೀಕರಣ ಪತ್ರದ ಅಧಿಕೃತ ದಾಖಲೆ ಅಪ್‍ಲೋಡ್ ಮಾಡಬೇಕು. ಮೊಬೈಲ್ ಸಂಖ್ಯೆ ನಮೂದಿಸಬೇಕು. ಜನ್ಮ ದಿನಾಂಕ ನಮೂದಿಸಿದ ಪ್ರಮಾಣ ಪತ್ರ, ಬಿಪಿಎಲ್ ಸಂಖ್ಯೆ, ಪಾಸ್‍ಪೋರ್ಟ್ ಅಳತೆ ಭಾವಚಿತ್ರ ಅಪ್‍ಲೋಡ್ ಮಾಡಬೇಕು. ಬ್ಯಾಂಕ್ ಖಾತೆಯ ವಿವರ, ಸ್ವಯಂ ಘೋಷಣೆ ಸಲ್ಲಿಸಬೇಕು. ಅರ್ಜಿದಾರರ ವೃತ್ತಿಯ ಕುರಿತಾದ ಉದ್ಯೋಗ ಪ್ರಮಾಣ ಪತ್ರವನ್ನು ಕಂದಾಯ ಅಧಿಕಾರಿಗಳು, ನಿರೀಕ್ಷಕರು, ಕಾರ್ಮಿಕ ಇಲಾಖೆ ಅಧಿಕಾರಿಗಳು, ಯಾವುದೇ ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಮೂಲ ಪ್ರತಿಯನ್ನು ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಸಮಿತಿ ಸದಸ್ಯರು ಹಾಗೂ ವಿವಿಧ ಅಸಂಘಟಿತ ವಲಯದ ಕಾರ್ಮಿಕರ ಪ್ರತಿನಿಧಿಗಳು ಭಾಗವಹಿಸಿದ್ದರು.
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ