ಕಾಲಚಕ್ರ: ಜಗತ್ತು ಹಿಮ್ಮುಖ ಚಲನೆಗೆ ತೊಡಗಿದೆಯೇ? (ಭಾಗ-1)

Upayuktha
0

ಹಿರಿಯರಾದ ಶ್ರೀಯುತ ಎಡನಾಡು ಕೃಷ್ಣಮೋಹನ ಭಟ್ಟ ಅವರು ಮೂಲತಃ ಕೃಷಿಕರು. ಜತೆಗೆ ಸಾಕಷ್ಟು ಅಕ್ಷರ ಕೃಷಿಯನ್ನೂ ಮಾಡಿದವರು. ತಮ್ಮ ವಿಶಿಷ್ಟ ಶೈಲಿಯಲ್ಲಿ ಹಲವಾರು ಲೇಖನಗಳನ್ನು ಬರೆದಿರುವ ಅವರು ಸಾಕಷ್ಟು ಓದುಗರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಪ್ರಸ್ತುತ ಕೊರೊನಾ ಸಾಂಕ್ರಾಮಿಕದ ಕಾಲ ಘಟ್ಟದಲ್ಲಿ ಜಗತ್ತು ಸಾಗುತ್ತಿರುವಾಗ ತಮ್ಮ ಹಿಂದಿನ ಅನುಭವದ ಮೂಟೆಯೊಂದಿಗೆ ಮುಂದಿನ ಕೆಲವು ವರ್ಷಗಳ ಕಾಲ ಜನಜೀವನದ ಸ್ಥಿತಿಗತಿ ಹೇಗಿರಬಹುದು ಎಂಬ ತುಲನಾತ್ಮಕ ನೋಟವನ್ನು ಮುಂದಿಟ್ಟಿದ್ದಾರೆ.


ಉಪಯುಕ್ತ ನ್ಯೂಸ್ ಬಳಗಕ್ಕಾಗಿ ಅವರು ವಿಶೇಷವಾಗಿ ಬರೆದು ಕಳುಹಿಸಿದ ಈ ಲೇಖನ ಸರಣಿಯನ್ನು ಓದುಗರ ಮುಂದಿಡಲು ಹೆಮ್ಮೆಪಡುತ್ತಿದ್ದೇವೆ. ಮುಂದಕ್ಕೆ ಓದಿ:


**********


ಕಳೆದ ಕೆಲವು ದಿನಗಳಿಂದ ಹೀಗೊಂದು ಯೋಚನೆ ತಲೆಯಲ್ಲಿ ಸುಳಿಯತೊಡಗಿತು. ನಾನು 1949ರಲ್ಲಿ ಹುಟ್ಟಿದವ. 1956ರ ನಂತರದ ಲೋಕದ ಮುಖ್ಯ ಘಟನೆ ಆಗಿನ ಪರಿಸ್ಥಿತಿಯ ಪರಿಚಯ ಇದೆ. ಕೆಲವು ಅಸ್ಪಷ್ಟವಾದರೆ ಕೆಲವು ಸ್ಪಷ್ಟವಾಗಿಯೇ ಇದೆ. ಇರಲಿ ಇದು ಯಾಕೆ ಹೇಳಿದೆ ಎಂಬುದು ಮುಂದೆ ತಿಳಿಯಬಹುದು.


ಇದೇ ವರ್ಷದ ಮೇ ಒಂದರಂದು ನಾನು ಕೊರೋನಾ ರೋಗಿ ಎಂದು ಘೋಷಿಸಲ್ಪಟ್ಟೆ. ಸಧ್ಯ ಸಂಪೂರ್ಣ ಗುಣಮುಖನಾಗಿ ಹೊರ ಬಂದಿದ್ದೇನೆ. ಈ ರೋಗ ನನ್ನನ್ನು ಹಿಡಿದು ಕೊಂಡಿರುವಾಗ ಕೊರೋನಾದೊಂದಿಗೆ ಸಂಪೂರ್ಣ ಲೋಕ ಹೇಗೆ ಹಿಂದಕ್ಕೆ ಸರಿಯ ತೊಡಗಿದೆ ಎಂಬುದನ್ನು ಗಮನಿಸತೊಡಗಿದೆ. ಈ ಪರಿಸ್ಥಿತಿಯೊಂದಿಗೆ ಇನ್ನಷ್ಟು ಸೇರಿಕೊಳ್ಳುತ್ತಿರುವ ಹೊಸ ರೋಗಗಳ ಪಟ್ಟಿ ನೋಡಿದರೆ ಇನ್ನೊಂದು ಐದು ವರ್ಷದಲ್ಲಿ ಲೋಕ ನಲುವತ್ತು ಐವತ್ತು ವರ್ಷಗಳಷ್ಟು ಹಿಂದಕ್ಕೆ ಚಲಿಸಬಹುದೇನೋ ಅನ್ನಿಸ ತೊಡಗಿತು. ಹಾಗಾಗದಿರಲಿ ಎಂಬ ಪ್ರಾರ್ಥನೆಯೊಂದಿಗೂ ಹಾಗಾಗಲಾರದೆಂಬ ವಿಶ್ವಾಸದೊಂದಿಗೂ ಈ ಲೇಖನ ಮಾಲೆಯನ್ನು ಸುರು ಮಾಡಿದ್ದೇನೆ. ಆ ಕಾಲ ಹೇಗಿತ್ತು ಎಂದು ತಿಳಿದರೆ ಮಾತ್ರವಲ್ಲವೇ ಆ ಕಾಲಕ್ಕೆ ಹೋಗ ಬಹುದೇ ಎಂದು ತಿಳಿಯಲು ಸಾಧ್ಯ?. ಅದಕ್ಕಾಗಿಯೇ ನಾನು ನೋಡಿದ ಆ ಕಾಲದ ಚಿತ್ರಣ ನಿಮ್ಮ ಮುಂದಿಡೋಣ ಅನ್ನಿಸಿದೆ.  


ಲೋಕದ ಇಂದಿನ ಈ ಸ್ಥಿತಿಗೆ ತಲಪುವುದರಲ್ಲಿ ವಿದ್ಯುತ್ ಹಾಗೂ ಅಂತರ್ಜಾಲ ಲೋಕದ ಕೊಡುಗೆ ಅಪಾರ. ವಿದ್ಯುತ್ ನ ಬಗ್ಗೆ ನಾವೆಲ್ಲಾ ತಿಳಿದವರೆ. ಅಂತರ್ಜಾಲದ ಬಗ್ಗೆ ಸಂಪೂರ್ಣ ತಿಳಿಯೋದು ಸುಲಭವಲ್ಲ. ಆದರೆ ಅಂತರ್ಜಾಲ ಕೆಲಸ ಮಾಡುವುದರ ಹಿಂದಿನ ಶಕ್ತಿ  ಉಪಗ್ರಹಗಳಾಗಿದೆ. ಸ್ವಲ್ಪ ಸಮಯ ಕಣ್ಣು ಮುಚ್ಚಿ ಆಲೋಚಿಸಿ. ಈ ಉಪಗ್ರಹಗಳ ಆಯುಸ್ಸು ಮುಗಿಯುವಾಗ ಹೊಸ ಉಪಗ್ರಹಗಳು ಆ ಸ್ಥಾನವನ್ನು‌ ತುಂಬದಿದ್ದರೆ ಏನಾಗಬಹುದು?


ಈಗ ಇರುವ ಪರಿಸ್ಥಿತಿ ಹೀಗೇ ಮುಂದುವರಿದರೆ ಹಾಗಾಗಲಾರದು ಎನ್ನುವಂತಿಲ್ಲವಲ್ಲ?. ಸಂಪೂರ್ಣ ಲೋಕವೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಅಂತಹ ಸ್ಥಿತಿಯಲ್ಲಿ ಆಹಾರದ ವ್ಯವಸ್ಥೆಯೇ ಪ್ರಥಮ. ಆ ಮೇಲೆ ಉಡುಪು ಮುಂದೆ ಅವಶ್ಯವನ್ನು ಅನುಸರಿಸಿ ಬಾಕಿ ಉಳಿದವುಗಳು. ಹಾಗಿರುವಾಗ ಇನ್ನೊಂದು ಉಪಗ್ರಹ ಕಳುಹಿಸಲು ಸಾಧ್ಯವಾಗದೇ ಇರುವ ಪರಿಸ್ಥಿತಿ ಬರಲಾರದೆನ್ನಲು ಸಾಧ್ಯವೇ? ಹಾಗಾಗಿ ಹೋದರೆ ಲೋಕದ ಚಲನೆ ಹಿಮ್ಮುಖವಾಗಲಾರದೇ?


ಈಗ ಮೊದಲು  ನನ್ನ ಬಾಲ್ಯದ ದಿನಗಳ ಲೋಕ ಹೇಗಿತ್ತು ಎಂಬುದನ್ನು ನೋಡೋಣ. ಆ ಮೇಲೆಯೇ ಅಂದಿನ ಪರಿಸ್ಥಿತಿಯನ್ನು ಇಂದಿನ ಪರಿಸ್ಥಿತಿಯನ್ನು ಹೋಲಿಸಲು ಸಾಧ್ಯವಾಗಬಹುದಷ್ಟೇ ಅಲ್ಲವೇ?.  


ನಾವು ಚಿಕ್ಕವರಿರುವಾಗ ಸಂಪರ್ಕಕ್ಕೆ ಇದ್ದ ಮುಖ್ಯ ವ್ಯವಸ್ಥೆ ಅಂಚೆಯ ಮೂಲಕ ಪತ್ರ ವ್ಯವಹಾರ ಮಾತ್ರ. ಇದಲ್ಲದೆ ಟೆಲಿಗ್ರಾಂ ಕಳುಹಿಸುವ ವ್ಯವಸ್ಥೆ ಇತ್ತು. ಇದರಲ್ಲಿ ಎಷ್ಟು ಕಡಿಮೆ ಶಬ್ದದಲ್ಲಿ ಸಾಧ್ಯವೋ ಅಷ್ಟು ಕಡಿಮೆ ಶಬ್ಧಗಳಲ್ಲಿ ಹೇಳುವುದನ್ನು ಹೇಳ ಬೇಕಿತ್ತು. ಅದೂ ಇಂಗ್ಲೀಷ್ ಶಬ್ಧಗಳಲ್ಲಿ. (ಇದನ್ನು ಮೋರ್ಸ್ ಕೋಡ್ ಎಂಬ ಶಬ್ದತರಂಗಗಳ ಮೂಲಕ ಕಳುಹಿಸುತ್ತಿದ್ದರು) ಇದು ಕೂಡ ಅಂದಂದೇ ತಲಪ ಬೇಕಾದವನಿಗೆ ತಲಪುವುದೆಂಬ ಭರವಸೆ ಏನೂ ಇರಲಿಲ್ಲ. ಇನ್ನು ಅಂಚೆ ಪತ್ರಗಳಲ್ಲಿ ಕಾರ್ಡು ಇದಲ್ಲದೆ ಇನ್ ಲೇಂಡ್ ಲೆಟರ್ ಎಂಬ ಜಾಸ್ತಿ ಜಾಗ ಇರುವ ಪತ್ರ ಅದಲ್ಲದೆ ಪೋಸ್ಟಲ್ ಕವರ್ ಎಂಬ ಇನ್ನೊಂದು ವ್ಯವಸ್ಥೆ ಇತ್ತು.


ಪ್ರತ್ಯೇಕ ಕಾಗದಗಳಲ್ಲಿ ಬರೆಯಲಿರುವುದನ್ನು ಬರೆದು ಆ ಕವರಿನೊಳಗೆ ತುಂಬಿ ಅವರಂದಷ್ಟು ಸ್ಟ್ಯಾಂಪ್ ಹಚ್ಚಿ ಬೇಕಾದಲ್ಲಿಗೆ ಕಳುಹಿಸಬಹುದಿತ್ತು. ಇದಲ್ಲದೆ ವಿದೇಶಕ್ಕೆ ಪತ್ರ ಕಳುಹಿಸುವ ಬೇರೆಯೇ ವ್ಯವಸ್ಥೆ ಇತ್ತು. ಆಗೆಲ್ಲಾ ಇದು ತುಂಬಾ ದುಬಾರಿಯ ವ್ಯವಹಾರವೂ ಆಗಿತ್ತು. ಇದಲ್ಲದೆ ಕಡಿಮೆ ಭಾರದ ವಸ್ತುಗಳನ್ನು ಪಾರ್ಸೆಲ್ ಕಳುಹಿಸುವ ವ್ಯವಸ್ಥೆ ಬೇರೆ ಇತ್ತು. ಜಾಸ್ತಿ ಸಾಮಾನುಗಳಿದ್ದರೆ ರೈಲ್ವೇ ಪಾರ್ಸೆಲ್ ಮುಖಾಂತರ ಕಳುಹಿಸ ಬಹುದಿತ್ತು. ಲಾರೀ ಸರ್ವೀಸ್‌ಗಳು ಮುಖ್ಯ ಮುಖ್ಯ ಪಟ್ಟಣಗಳಿಗೆ ಇತ್ತು. ಇದರ ಬಗ್ಗೆಯೇ ಹೆಚ್ಚು ಬರೆಯುವ ಅವಶ್ಯವಿಲ್ಲ ಅನ್ನಿಸುತ್ತಿದೆ.  


ಆ ಮೇಲೆ ಮುಖ್ಯ ಪೋಸ್ಟಾಫೀಸುಗಳಲ್ಲಿ ಫೋನ್ ವ್ಯವಸ್ಥೆ ಬಂತು. ಅದರಲ್ಲಿ ಸಾಧಾರಣ, ಎಕ್ಸ್‌ಪ್ರೆಸ್, ಹಾಗೂ ಲೈಟ್ನಿಂಗ್ ಎಂಬ ವ್ಯವಸ್ಥೆ ಇತ್ತು. ಮುಂದೆ ಎಕ್ಸ್ಪ್ರೆಸ್ ಮತ್ತು ಲೈಟ್ನಿಂಗ್ ಮಧ್ಯೆ ಇನ್ನೊಂದು ವ್ಯವಸ್ಥೆ ಬಂತು. (ಇದರ ಹೆಸರು ನೆನಪಿಗೆ ಬರುತ್ತಿಲ್ಲ. ಇದಕ್ಕೆ ನಾಲ್ಕು ಪಾಲು ದುಡ್ಡು ಕೊಡಬೇಕಿತ್ತು). ಫೋನ್ ಕಾಲ್ ಬುಕ್ ಮಾಡಿದ ಮೇಲೆ ನೀವು ಅಲ್ಲೇ ಇರ ಬೇಕಿತ್ತು. ಕಾಲ್ ಸಿಗುವಾಗ ಎಷ್ಟೇ ಸಮಯವಾದರೂ ಕಾಲ್ ಸಿಗುವಲ್ಲಿ ವರೆಗೂ ನೀವು ಅಲ್ಲಿಯೇ ಇರುವುದು ಅತೀ ಅವಶ್ಯವಾಗಿತ್ತು. ಇದು ದೂರ ಸ್ಥಳಗಳಾದಂತೆ ಹನ್ನೆರಡು ಗಂಟೆಗಿಂತಲೂ ಜಾಸ್ತಿಯಾಗುವ ಸಾಧ್ಯತೆಯೇ ಇದ್ದಿದ್ದುದು. ಮಂಗಳೂರಿನಿಂದ ಪುತ್ತೂರಿಗೆ ಸಾಧಾರಣ ಒಂದು ಗಂಟೆಗಿಂತಲೂ ಜಾಸ್ತಿ ಸಮಯ ತೆಗೆದುಕೊಳ್ಳುತ್ತಿತ್ತು.


ಫೋನ್ ಕಾಲ್ ಮಾಡಲು ಆ ಕಾಲದಲ್ಲಿ ನೀವು ಒಬ್ಬರೇ ಹೋದಿರೆಂದರೆ ಕೆಟ್ಟಿರೆಂದೇ ಲೆಕ್ಕ. ಒಂದು ಚಾ ಕುಡಿಯಲು ಹೋಗುವುದೂ ಅಸಾಧ್ಯ. ಆಗಲೇ ಕಾಲ್ ಬಂದು ಬಿಟ್ಟು ನೀವು ಅಲ್ಲಿ ಇಲ್ಲದಿದ್ದರೆ ಕಾಲ್ ಕಟ್ ದುಡ್ಡು ಕೊಡ್ಲೇ ಬೇಕು. ಪುನ: ಬೇಕಿದ್ದರೆ ಪುನ: ಬುಕ್ ಮಾಡ ಬೇಕು. ರಿ ಕನೆಕ್ಟ್ ಮಾಡುವ ಸೌಕರ್ಯ ಇತ್ತು ಆಗಲೇ ಆದರೆ. ಅದಕ್ಕೆ ಇಮ್ಮಡಿ ದುಡ್ಡು ಕೊಡ ಬೇಕಿತ್ತು. ಆದ್ದರಿಂದ ಸಾಮಾನ್ಯವಾಗಿ ದೂರಕ್ಕೆ ಫೋನ್ ಕಾಲ್ ಬುಕ್ ಮಾಡ ಬೇಕಿದ್ದರೆ ಇಬ್ಬರು ಹೋಗ ಬೇಕಿತ್ತು. ಇನ್ನು ನೀವು ಮಾತಾಡಿದ ಸೆಕೆಂಡುಗಳ ಮೇಲೆ ದುಡ್ಡು ಕೊಡ ಬೇಕಿತ್ತು. ಎಕ್ಸ್‌ಪ್ರೆಸ್‌ ಅಂದರೆ ಇದರ ಎರಡು ಪಾಲು ದುಡ್ಡು ಕೊಡ ಬೇಕಿತ್ತು. ಇದು ಸ್ವಲ್ಪ ಬೇಗ ಸಿಗುತ್ತಿತ್ತು. ಇದಲ್ಲದೆ ಲೈಟ್ನಿಂಗ್ ಕಾಲ್ ಎಂಬ ವ್ಯವಸ್ಥೆ ಇತ್ತು. ಅದಕ್ಕೆ ಎಂಟು‌ ಪಾಲು ದುಡ್ಡು ಕೊಡ ಬೇಕಿತ್ತು. ಸಾಮಾನ್ಯವಾಗಿ ಕೂಡಲೇ ಅಥವಾ ಅರ್ಧಗಂಟೆ ಗಳೊಳಗೆ ಈ ಕಾಲ್ ಸಿಗುತ್ತಿತ್ತು.


ಪತ್ರಗಳು ಮಂಗಳೂರಿನಿಂದ ಕಾಸರಗೋಡಿಗೆ ತಲಪಲು ಎರಡರಿಂದ ಮೂರು ದಿನ ತೆಗೆದು ಕೊಳ್ಳುವುದು ಸಾಮಾನ್ಯವಾಗಿತ್ತು. ಈ ಪತ್ರಗಳು ಒಂದು ಮುಖ್ಯ ಪೋಸ್ಟಾಫೀಸಿನಿಂದ ಇನ್ನೊಂದು ಮುಖ್ಯ ಪೋಸ್ಟಾಫೀಸಿಗೆ ಬಂದು ಅಲ್ಲಿಂದ ಬ್ರೇಂಚ್ ಪೋಸ್ಟಾಫೀಸುಗಳಿಗೆ ಕಳುಹಿಸಲ್ಪಡುತ್ತಿತ್ತು. ಮುಖ್ಯ ಪೋಸ್ಟಾಫೀಸಿನಿಂದ ಬ್ರೇಂಚ್ ಪೋಸ್ಟಾಫೀಸಿಗೆ ಕಾಗದ ಪತ್ರ ಪಾರ್ಸೆಲ್ ಗಳನ್ನು ಪ್ರತ್ಯೇಕವಾದ ಚೀಲದಲ್ಲಿ ಹಾಕಿ ಅದಕ್ಕೆ ಬೀಗ ಹಾಗೂ ಸೀಲ್ ಹಾಕಿ "ರನ್ನರ್" ಎಂದು ಕರೆಯಲ್ಪಡುವ ಸಿಬಂದಿಯ ಮೂಲಕ ಕಳುಹಿಸುತ್ತಿದ್ದರು. ಆ ಬರುವ ಚೀಲದ ಬೀಗದ ಕೈ ಅದು ತಲಪ ಬೇಕಾದ ಬ್ರೇಂಚ್ ಆಫೀಸಿನಲ್ಲಿರುತ್ತಿತ್ತು. ಮುಂದೆ ಬರೇ ಹಗ್ಗ ಕಟ್ಟಿ ಅದರ ಮೇಲೆ ಅರಗಿನ ಸೀಲು ಹಾಕುವ ವ್ಯವಸ್ಥೆ ಮಾತ್ರವಾಗಿ ಇದು ಮುಂದುವರಿದಿತ್ತು.


ಈ ರನ್ನರ್ ಗೆ ವಿಶೇಷ ಪೋಷಾಕು ಇರುತ್ತಿತ್ತು. ಅವನ ಕೈಯಲ್ಲೊಂದು ಗೆಜ್ಜೆ ಕಟ್ಟಿದ ಕೋಲು ಹಾಗೂ ದೊಡ್ಡ ಕೊಡೆ ಇರುತ್ತಿತ್ತು. ಅವ ಬರುವಾಗ ಯಾವರೀತಿಯಲ್ಲೂ ಅವನಿಗೆ ತಡೆ ಒಡ್ಡುವಂತಿರಲಿಲ್ಲ. ಒಬ್ಬನೇ ಹೋಗುವ ದಾರಿಯಾದರೆ ಅವನನ್ನು ಮುಂದೆ ಹೋಗಲು ಬಿಡಲೇ ಬೇಕಿತ್ತು. ಅವರು ನಡೆದೇ ಹೋಗುತ್ತಿದ್ದರು. ಮುಂದೆ ಸೈಕಲಲ್ಲಿ ಹೋಗಲು ಸುರು ಮಾಡಿದ್ದರು. ಕೆಲವರು ಇವರನ್ನು ಪರಿಚಯ ಮಾಡಿಕೊಂಡು ಪೇಟೆಯಿಂದ ಏನಾದರೂ ತರ ಬೇಕಿದ್ದರೆ ಇವರ ಮೂಲಕವೇ ತರಿಸುತ್ತಿದ್ದರು. ಇವರಿಗೆ ಅದಕ್ಕೆ ಪ್ರತ್ಯೇಕ ಭಕ್ಷೀಸು ಸಲ್ಲುತ್ತಿತ್ತು. ಇದು ನಿಯಮ ಬಾಹಿರ ಕೆಲಸವಾದರೂ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಯುತ್ತಿತ್ತು. ಇನ್ನು ಈ ರನ್ನರ್ ಗಳೇ ಊರಿನ ಪ್ರತಿಷ್ಟಿತ ವ್ಯಕ್ತಿಗಳ ಪರಿಚಯ ಮಾಡಿಕೊಂಡು ಅವರಿಗೆ ಬೇಕಾದ ಕೆಲಸ ಮಾಡಿ ಕೊಟ್ಟು ಭಕ್ಷೀಸ್ ಪಡೆಯುವ ಕ್ರಮವೂ ಇತ್ತು.


ಇನ್ನು ಪತ್ರ ಹಂಚುವ ಕೆಲಸ ಪೋಸ್ಟ್ ಮ್ಯಾನ್‌ನದ್ಧು. ಇವರು ಸಾಮಾನ್ಯವಾಗಿ ಯಾರದೋ ಕೈಯಲ್ಲಿ ಪತ್ರ ಕೊಟ್ಟು ಕಳುಹಿಸುವುದೇ ಕ್ರಮವಾಗಿತ್ತು. ಆದರೆ ಪ್ರತಿಷ್ಠಿತ ವ್ಯಕ್ತಿಗಳ ಮನೆಗೆ ಅವರೇ ಹೋಗಿ ಪತ್ರ ಯಾ ಇತರ ಕಟ್ಟುಗಳಿದ್ದರೆ ಕೊಡುತ್ತಿದ್ದರು. ಅವರಿಗೆ ಒಂದು ಚಾ ನೋ ತಿಂಡಿಯೋ ಅಪರೂಪಕ್ಕೆ ನಾಲ್ಕಾಣೆ ಎಂಟಾಣೆ ಭಕ್ಷೀಸು ಸಿಕ್ಕಿದರೂ ಸಿಗ್ತಿತ್ತು. ಇಲ್ಲಿಗೆ ಆ ಕಾಲದ ಸಂಪರ್ಕ ವ್ಯವಸ್ಥೆಯ ಒಂದು ಭಾಗ ಪರಿಚಯವಾಗಿರಬಹುದಲ್ಲವೇ?


(ಮುಂದಿನ ಭಾಗವನ್ನು ನಿರೀಕ್ಷಿಸಿ)



- ಎಡನಾಡು ಕೃಷ್ಣ ಮೋಹನ ಭಟ್ಟ


(ಉಪಯುಕ್ತ ನ್ಯೂಸ್)

Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top