ಕಾಲಚಕ್ರ: ಕಾಲ ಹಿಂದೋಡುತ್ತಿದೆಯೇ? ಹಾಗಾಗದಂತೆ ತಡೆಯುವುದು ಹೇಗೆ? (ಭಾಗ-4)

Upayuktha
0

(ಜಗತ್ತು ಹಿಮ್ಮುಖ ಚಲನೆಗೆ ತೊಡಗಿದೆಯೇ? ಸರಣಿಯ ನಾಲ್ಕನೇ ಹಾಗೂ ಕೊನೆಯ ಭಾಗ)


ನಾವು ಈಗಾಗಲೇ ಐವತ್ತು ಅರುವತ್ತರ ದಶಕದಲ್ಲಿ ಜಗತ್ತು ಹೇಗಿತ್ತೆಂಬ ಬಗ್ಗೆ ಚಿಕ್ಕದಾಗಿ ತಿಳಿದು ಕೊಂಡಿದ್ದೇವೆ. ಹಾಗೆಯೇ ಅಲ್ಲಿಂದ ಮುಂದೆ ಹೇಗೆ ಮುಂದುವರಿಯುತ್ತಾ ಬಂದಿದೆ ಎಂಬುದನ್ನು ತಿಳಿಯುವ ಪ್ರಯತ್ನ ಮಾಡಿದ್ದೇವೆ. ಈಗ ಕೊರೋನಾ ಇನ್ನೂ ನಾಲ್ಕೈದು ವರ್ಷ ಭೂಲೋಕದಲ್ಲಿ ಇದೇ ಸ್ಥಿತಿಯಲ್ಲಿ ನಿಂತರೆ ಏನಾಗಬಹುದು ಎಂಬ ಬಗ್ಗೆ ಯೋಚಿಸೋಣ. ಇದೇ ಪರಿಸ್ಥಿತಿ ಇನ್ನೂ ಮುಂದುವರಿದರೆ ಭೂಲೋಕದ ಆರ್ಥಿಕ ಸ್ಥಿತಿ ಸಂಪೂರ್ಣವಾಗಿ ಹದಗೆಡಬಹುದಲ್ಲವೇ?


ಆಗ ಏನಾಗುತ್ತದೆ? ಹೊಟ್ಟೇಪಾಡು ಎಲ್ಲದಕ್ಕಿಂತಲೂ ಮುಂದೆ ನಿಲ್ಲುತ್ತದಲ್ಲವೇ?. ಉಳಿದುದೆಲ್ಲಾ ಅದರ ಹಿಂದೆ ನಿಲ್ಲಲೇ ಬೇಕಾಗುತ್ತದೆ. ಇದರೊಂದಿಗೆ ಉಪಗ್ರಹಗಳ ಉಡಾವಣೆ ನಿಂತು ಹೋಗಬಹುದು. ಆಗ ಅಂತರ್ಜಾಲ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗುತ್ತದೆ.


ಸಾರಿಗೆ ವ್ಯವಸ್ಥೆ ಹಿಂದೆ ಸರಿಯುತ್ತದೆ. ವಿದ್ಯುತ್‌ಚ್ಛಕ್ತಿ ದುಬಾರಿಯಾಗುತ್ತದೆ. ತುಂಬಾ ಮುಂದೆ ಹೋಗಿದ್ದ ಲೋಕ ಹಿಂದಕ್ಕೆ ಸರಿಯಲು ತೊಡಗುತ್ತದೆ. ಅದರ ಪರಿಣಾಮ ಏನು? ನಮ್ಮ ಕಾಲದಲ್ಲೇ ನಾವು ಐವತ್ತು ಅರುವತ್ತರ ದಶಕದ  ಸ್ಥಿತಿಯನ್ನು ಪುನ: ಕಾಣಬೇಕಾಗುತ್ತದೆ. ಮೂಲೆ ಸೇರಿದ ಬುಡ್ಡಿ ದೀಪಗಳು ಹೊರ ಬರಬೇಕಾಗುತ್ತದೆ. ಟಿವಿ ಇಲ್ಲದಾಗುತ್ತದೆ.


ಸಿನೆಮಾ ಅಪರೂಪವಾಗಿ ಟೆಂಟ್ ಸಿನೆಮ ಪುನ: ಬರಬಹುದು. ಯಕ್ಷಗಾನ, ನಾಟಕಗಳು ಮುಂದೆ ಬರುತ್ತದೆ. ದೊಂದಿ ಹಿಲಾಲು ಸೂಟೆಗಳೊಂದಿಗೆ ನಡೆಯುವ ಯಕ್ಷಗಾನ ಮನೋರಂಜನೆಯ ಪ್ರಥಮ ಆಯ್ಕೆಯಾಗುತ್ತದೆ. ಒಂದಿಗೆ ನಾಟಕ ರಂಗವೂ.

 


ಸಾವಿರದ ಲೆಕ್ಕದಲ್ಲಿ ಅತಿಥಿ ಅಭ್ಯಾಗತರನ್ನು ಕರೆದು ಅಬ್ಬರವಾಗಿ ನಡೆಸುತ್ತಿದ್ದ ಮದುವೆ ಇನ್ನಿತರ ಸಮಾರಂಭಗಳು ನೂರಿನ್ನೂರು ಜನರ ಸೀಮಿತ ಸಭೆಯ ಮುಂದೆ ನಡೆಯುವಂತಾಗುತ್ತದೆ. ಆಕಾಶದೆತ್ತರ ಬೆಳೆದ ಮನುಷ್ಯನಿಗೆ ನೆಲ ಕಾಣ ತೊಡಗುತ್ತದೆ. ಎಲ್ಲರೂ ಬೇಡವೆಂದು ಹೀಗಳೆದು ಬಿಟ್ಟು ಹೋದ ಕೃಷಿ ಕ್ಷೇತ್ರ ಮತ್ತು ಹೈನುಗಾರಿಕೆಯೇ ಪ್ರಮುಖ ಆರ್ಥಿಕ ಶಕ್ತಿಯಾಗುತ್ತದೆ.


ಈಗ ರೇ ಲೋಕದಿಂದ ಹೊರಗೆ ಬರೋಣ. ನಿಜವಾಗಿಯೂ ಹೀಗಾಗಬಹುದೇ? ಅಸಾಧ್ಯ ಎಂದೇ ಹೇಳಬಹುದು. ಕಾರಣ ಈಗ ಮನುಷ್ಯ ಜಾಸ್ತಿ ಬುದ್ದಿವಂತನಾಗಿದ್ದಾನೆ. ಮುಂದೆ ಬರುವುದನ್ನು ಆಲೋಚಿಸಿ ಅತಿ ಜಾಗ್ರತೆಯಿಂದ ಮುಂದೆ ಹೆಜ್ಜೆ ಇಡಲು‌ ಕಲಿತಿದ್ದಾನೆ. ಆದರೆ ಈ ಅತಿ ಬುದ್ಧಿವಂತಿಕೆಯೂ ಅಪಾಯಕಾರಿ ಆಗಬಲ್ಲುದು.


ಅದರ ಸಣ್ಣ ಪ್ರದರ್ಶನ ನಾವು ಈಗಾಗಲೇ ಕಂಡಿದ್ದೇವೆ. ಸರ್ಕಾರದ ಸಾವಿರ ಎಚ್ಚರಿಕೆಗಳನ್ನು ಕಡೆಗಣಿಸಿ ಬೇಕಾಬಿಟ್ಟಿ ತಿರುಗಾಡುವ ಜನಗಳು. ಯಾವುದೇ ಮುಂಜಾಗ್ರತೆಗಳನ್ನು ಪಾಲಿಸದೆ ಏನೂ ಆಗೋದಿಲ್ಲ ಎಂಬ ಹುಂಬತನ. ಲಸಿಕೆ (ವೇಕ್ಸಿನೇಶನ್) ತೆಗೊಳ್ಳಿ ಎಂದು ಸಾರಿ ಸಾರಿ ಹೇಳಿದರೂ ನಿರ್ಲಕ್ಷಿಸಿ ಹೋಗುವ ಜನಗಳು. ಪರಂಪರೆಯಿಂದ ಬಂದ ವೈದ್ಯಶಾಸ್ತ್ರದ ಕಡೆಗಣನೆ. ದೇಹದ ಆಂತರಿಕ ದಾರ್ಢ್ಯವನ್ನು ಹೆಚ್ವಿಸಲು (ಇಮ್ಯುನಿಟೀ ಲೆವೆಲ್) ಮುಂಜಾಗ್ರತೆಯಾಗಿ ಮಾಡ ಬೇಕಾದ ಚಿಕಿತ್ಸೆಗಳ ಬಗ್ಗೆ ನಿರ್ಲಕ್ಷ್ಯ. ಇದೆಲ್ಲಾ ಕಾಲದ ಹಿನ್ನಡೆಗೆ ಚಾಲನೆ ಕೊಡ ಬಹುದು.


ಹಾಗಾದರೆ ಕಾಲದ ಹಿನ್ನೆಡೆಯನ್ನು ತಡೆಗಟ್ಟಲು ಚಿಕಿತ್ಸೆ ಇದೆಯೇ? ಇದ್ದರೆ ಯಾವ ಚಿಕಿತ್ಸೆ?  ಇದು ಪ್ರಶ್ನೆ ಆಗಿಯೇ ಉಳಿಯಬಾರದು. ಅದಕ್ಕೆ ಉತ್ತರ ಕಂಡು ಹಿಡಿಯಲೇ ಬೇಕಿದೆ. ಭೂಲೋಕದ ಶಕ್ತಿವಂತ ರಾಷ್ಟ್ರಗಳು ತಮ್ಮ ಮೇಲಾಟಕ್ಕೆ ಈ ಜೈವಿಕ ಅಸ್ತ್ರಗಳನ್ನು ಬಳಸಿರ ಬಹುದೇ? ಬಳಸಿರಲೂಬಹುದು. ಹಾಗೆಂದೇ ತಿಳಿದು ಮುಂದುವರಿಯೋಣ. ಮನುಷ್ಯನ ಮನೋದಾರ್ಢ್ಯ ಇವೆಲ್ಲವನ್ನೂ ಮೆಟ್ಟಿ ನಿಲ್ಲಬಹುದು ಎಂಬ ವಿಶ್ವಾಸವಿರಲಿ. ಕೊರೋನಾಕ್ಕೆ ಅತಿ ಶೀಘ್ರವಾಗಿ ಲಸಿಕೆ (ವೇಕ್ಸಿನೇಶನ್) ಕಂಡು ಹಿಡಿದು ಮನುಷ್ಯ ಅನಿವಾರ್ಯ ಪರಿಸ್ಥಿತಿ ಬಂದರೆ ತಾನು ಏನನ್ನೂ ಸಾಧಿಸಬಲ್ಲೆ ಎಂದು ತೋರಿಸಿ ಕೊಟ್ಟಿದ್ದಾನೆ.


ಆದರೆ ಇದೆಲ್ಲದರ ಸಫಲತೆ ಇರುವುದು ಮನುಷ್ಯ ಅದರ ಪ್ರಯೋಜನ ಪಡೆದಾಗ ಮಾತ್ರ. ಆದ್ದರಿಂದ ಇಂದಿರಲಿ ಮುಂದೆ ಇರಲಿ ತಜ್ಞರ ಸಲಹೆಯಂತೆ ನಡೆದುಕೊಂಡರೆ ಮಾತ್ರ ಅಪಾಯದಿಂದ ಪಾರಾಗ ಬಹುದು. ಸದ್ಯಕ್ಕೆ ಕೊರೋನಾದ ಹಿಡಿತದಿಂದ ಪಾರಾಗುವುದೇ ನಮ್ಮ ಆದ್ಯತೆ.


ಒಂದನೆಯದಾಗಿ ಲಸಿಕೆ ತೆಗೆದು ಕೊಳ್ಳುವುದು ಅತಿ ಪ್ರಾಮುಖ್ಯ. ಹಾಗೇಯೇ ಮಾಸ್ಕ್ ಧರಿಸುವುದು. ಅದೂ ಯುಕ್ತವಾದ ಮಾಸ್ಕನ್ನೇ ಧರಿಸಬೇಕು. ಇನ್ನು ಅಂತರ ಕಾಪಾಡುವುದು. ಅಂತರವನ್ನು ಸರಿಯಾಗಿ‌ ಕಾಪಾಡಿ ಕೊಂಡವರಿಗೆ ಹಬ್ಬುವ ಯಾವ ರೋಗವೂ ಖಂಡಿತಾ ಬಾಧಿಸಲಾರದು. ಇನ್ನು ರೋಗದ ಅತಿ ಸಣ್ಣ ಲಕ್ಷಣ ಕಂಡರೂ ಕೂಡಲೇ ಪರೀಕ್ಷಿಸಿ ಯುಕ್ತ ಚಿಕಿತ್ಸೆ ಪಡೆಯುವುದು.ರೋಗ ಬಂದವರು ತಮ್ಮಿಂದ ರೋಗ ಇನ್ನೊಬ್ಬರಿಗೆ ಹಬ್ಬದಂತೆ 14 ದಿನದ ಕ್ವಾರೆಂಟೈನ್ ನ್ನು ಸರಿಯಾಗಿ ಪಾಲಿಸುವುದು.


ಎಲ್ಲರೂ ಒಂದಾಗಿ ಕಾಲ ಹಿಂದೆ ಚಲಿಸದಂತೆ ತಡೆಯೋಣ ಈ ಹಿಂಬದಿ ಚಲನೆಗೆ ನಾವೇ ತಡೆ (ಬ್ರೇಕ್) ಆಗೋಣ. ಅದೇ ಇಂದಿನ ಅವಶ್ಯಕತೆ. ಜೋಡಿಸೋಣ ಈ ಕಾರ್ಯಕ್ಕೆ ಕೈ. ಸರಕಾರ ಕಾಲಾಕಾಲಕ್ಕೆ ಕೊಡುವ ಎಲ್ಲಾ ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸೋಣ.


ಹಿಮ್ಮುಖ ಚಲನೆಗೆ ತಡೆಯೊಡ್ಡಿ ಅದನ್ನು ಮುಮ್ಮುಖ ಚಲನೆಯಾಗಿಸೋದೇ ನಮ್ಮ ಕೈಯಲ್ಲಿದೆ ಅದೇ ಕರ್ತವ್ಯಕೂಡಾ. ಸಾಧಿಸಿಯೇ ಸಾಧಿಸುತ್ತೇವೆ ಎಂಬ ವಿಶ್ವಾಸವಿರಲಿ.


ಜೈ ಭಾರತ್ ಮಾತಾ. ವಂದೇ ಮಾತರಂ


-ಎಡನಾಡು ಕೃಷ್ಣ ಮೋಹನ ಭಟ್ಟ

(ಉಪಯುಕ್ತ ನ್ಯೂಸ್)


Visit: Upayuktha Directory- You get here You want


‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top