ಯೋಗ ಅಂತರ್ಯದ ಪಯಣಕ್ಕಾಗಿ. ಆದರೆ ಹೆಚ್ಚಾಗಿ ಬಹುಜನ ಯೋಗ ಮಾಡುವಾಗ ಸಾಮಾನ್ಯವಾಗಿ ಹೆಚ್ಚಿನ ಗಮನ ದೇಹದ ಚಲನೆ ಮತ್ತು ಉಸಿರಿನ ಗತಿಗಳ ಬಗ್ಗೆ ಇಡುತ್ತಾ ಆರೋಗ್ಯಕ್ಕಾಗಿ ಯೋಗ ಮಾಡುವವರೇ ಹೆಚ್ಚು. ಅಧ್ಯಾತ್ಮಿಕ ಸಾಧನೆಗಾಗಿ ಯೋಗ ಮಾಡುವರು ವಿರಳ. ಹಾಗಿರುವಾಗ ಯೋಗ ಸಾಧನೆಗೂ ವೇದಾಂತ ಚಿಂತನೆಗೂ ಏನು ಸಂಬಂಧ ?!! ಯೋಗ ಎಂಬ ಉಚ್ಚಾರವ ಗಮನಿಸಿ. ಯೋಗ ಎಂದರೆ ಅದು ಸಂಸ್ಕೃತ ಪದ ಅದರ ಅರ್ಥ ಕೂಡಿಸು ಯಾ ಸೇರಿಸು ಎಂದೇ. ಹಾಗಾದರೆ ಯಾವುದನ್ನು ಯಾವುದರೊಂದಿಗೆ ಸೇರಿಸಬೇಕು?! ಎಂದಾಗ ನನ್ನ ದೇಹ ಇಂದ್ರಿಯ ಮನೋ ಬುದ್ದಿ ಅಹಂ ಚಿತ್ತಾದಿಗಳು ನಿಜ ಶರಣಾಗತಿಯಿಂದ ಅದರ ಅಧಿಪತಿಯಾದ ಎಂದರೆ ದೇಹೇಂದ್ರಿಯ ಮನೋಬುದ್ದ್ಯಾದಿಗಳ ಅಧಿಪತಿಯಾದ ನಿಜ ನಾನೇ ಆದ ನನ್ನ ಆತ್ಮವ ಸೇರುವುದೇ ಯೋಗ.
ಹಾಗೆ ಸೇರುವ ಪ್ರಕ್ರಿಯೆಯೇ ಆತ್ಮ ರತಿ ಅಥವಾ ಆತ್ಮ ಮಿಲನ. ಮನಃಶಾಸ್ತ್ರದ ಪ್ರಕಾರ ಗಂಡ ಹೆಂಡಿರ ರತಿಕ್ರೀಡೆ ಮನಸ್ಸಂತೃಪ್ತಿ ಕೊಡುವುದಾದರೆ ಶಿವ ಮಾನಸ ಸ್ತೋತ್ರದ ಆಧಾರದಲ್ಲಿ ಆತ್ಮ ರತಿ ಎಂದರೆ ಆತ್ಮವೇ ಶಿವ ಹಾಗು ಮನವೇ ಗಿರಿಜೆಯಾಗಿ, ಇಂದ್ರಿಯ ಪ್ರಾಣಾದಿಗಳು ಆತ್ಮ ಹಾಗೂ ಗಿರಿಜೆಯರ ಪರಿಚಾರಿಕೆಯರುಗಳು ಮತ್ತು ಶರೀರ ಇವುಗಳ ಮನೆ. ಈಗ ಆತ್ಮನೊಂದಿಗೆ ಮನವು ಶರಣಾಗತಿಯೊಂದಿಗೆ ಅನುಸಂಧಾನಗೊಂಡರೆ ಆನಂದೋನ್ಮಾದ ಉಂಟಾಗುವುದು. ಇದು ಜಗದ ಯಾವುದೇ ಆನಂದಕ್ಕಿಂತ ಮಿಗಿಲು. ಹೀಗೆ... (ಅಕ್ಕಮಹಾದೇವಿಯವರಂತೆ) ಅನುಭಾವಿಯಾಗಬೇಕು ಎಂಬುದೇ ಯೋಗಾಭ್ಯಾಸದ ಉದ್ದೇಶ. ಈ ರೀತಿಯ ಅಭ್ಯಾಸದಿಂದ ಅಂದರೆ ಸಾಧನೆಯಿಂದ ನನ್ನ ಒಳಗೇ ಇರುವುದರ ಅನುಸಂಧಾನವ ಸಾಧ್ಯವಾಗಿಸಿಕೊಳ್ಳುವ ಪ್ರಕ್ರಿಯೆಗೆ ಯೋಗ ಸಾಧನೆ ಎನ್ನುವುದು.
ಸಾಧನೆಯಿಂದ ಆನಂದಾನುಭೂತಿ ಹೊಂದುವುದೇ ಪರಮ ಸಿದ್ಧಿ. ಇದಕ್ಕೆ ಒಂದು ಪೈಸೆ ಖರ್ಚು ಇಲ್ಲ. ಆದರೆ ಇದೇ ಪರಮ ಸಿದ್ಧಿ ಎಂದು ಅರ್ಥ ಆಗಬೇಕು. ಆ ದಾರಿಯಲ್ಲಿ ಹೋಗಬೇಕು ಎಂಬ ಮನಸ್ಸು ಬರಬೇಕಾದರೆ ಆತ್ಮಾನಾತ್ಮ ವಿಚಾರಗಳ ತಿಳಿಸುವ ವೇದಾಂತ ವಿಚಾರಂಗಳ ಬಾರೀ ಆಸಕ್ತಿ, ಕುತೂಹಲ ಹಾಗೂ ಉತ್ಸಾಹದಿಂದ ಶ್ರವಣ ಮನನ ಮಾಡ್ತಾ ಆ ವಿಚಾರಗಳಿಂದ ನಮಗೆ ನಾವೇ ಆಶ್ಚರ್ಯಗೊಳ್ಳುವ ಮನಸ್ಥಿತಿ ಇದ್ದು ತೊಡಗಿಸಿಕೊಳ್ಳುವವರಾಗಬೇಕು. ಆಗ ಅದರ ಅನುಸಂಧಾನ ವಿಚಾರಗಳತ್ತ ಮನ ತಿರುಗುವುದು. ವೇದಾಂತ ವಿಚಾರ ರಕ್ತಗಾತವಾಗುವುದು. ಇಂತಹಾ ವಿಚಾರಗಳು ಅನುಸಂಧಾನವಾಗಲು ಯಾವುದಾದರೂ ಪ್ರಾಯೋಗಿಕ ಸಾಧನಾ ಮಾರ್ಗ ಅವಶ್ಯ. ಸಾಧನಾ ಮಾರ್ಗಗಳು ವೇದಾಂತ ವಿಚಾರಗಳ ನಮ್ಮ ಅಂತರ್ಯದಲ್ಲಿ ಪ್ರತಿಫಲನಗೊಳಿಸುವಂತೆ ಮಾಡಬಲ್ಲದು. ಅದೇ ನಿಧಿದ್ಯಾಸನ.
ವೇದಾಂತ ಎಂದರೆ ವೇದದ ಕೊನೆಯ ಭಾಗ, ಅದು ಉಪನಿಷತ್ತುಗಳು. ಉಪನಿಷತ್ತುಗಳು ತನ್ನ ತಾನರಿವ ವಿದ್ಯೆ. ತೈತ್ತರೀಯ ಉಪನಿಷತ್ತಿನಲ್ಲಿ ಆತ್ಮ ತತ್ವದ ಬಗ್ಗೆ ಒಂದು ಸುಂದರ ನಿರೂಪಣೆ ಇದೆ. ವರುಣ ಎಂಬ ಒಬ್ಬ ಸಾಧಕ ಅವನ ತಂದೆ ಹಾಗೂ ಗುರುವಾದ ಭೃಗುವಿನ ಬಳಿ- 'ಅನೇಕ ತಾರೆ ನಕ್ಷತ್ರಗಳಿಂದ ಕೂಡಿದ ಜಗದ ನಡೆಯುವಿಕೆ ಹಿಂದೆ ಇರತಕ್ಕ ಕೈವಾಡ ಯಾವುದು ?!!'ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಾನೆ. ಭೃಗು ಮಹರ್ಷಿ ತಪಸ್ಸು ಮಾಡು ಎಂದು ಆಜ್ಞಾಪಿಸುತ್ತಾನೆ. ವರುಣ ತಪಸ್ಸನ ಕೊನೆಗೆ ಅನ್ನದಿಂದ ಉಂಟಾದ ಈ ದೇಹವೇ ಉನ್ನತವಾದ ಸತ್ಯವೆಂದೂ ದೇಹವಿಲ್ಲದೇ ಏನೂ ಇಲ್ಲವೆಂದು ತಿಳಿದು ತಂದೆಯ ಬಳಿ-' ಅನ್ನಂ ಬ್ರಹ್ಮೇತಿ ವ್ಯಜನಾತ್' ಎಂದು ತಂದೆಗೆ ತನ್ನ ಕಾಣ್ಕೆಯ ವಿವರಿಸುತ್ತಾನೆ. ತಂದೆ ಮಗನಿಗೆ ಪುನಃ ತಪಸ್ಸು ಮಾಡಲು ಕಳಿಸುತ್ತಾನೆ. ಪುನಃ ತಪಸ್ಸು ಮಾಡಿದ ವರುಣನಿಗೆ- ಈ ದೇಹಕ್ಕೆ ಚೈತನ್ಯ ಕೊಡುವ ದೇಹಕ್ಕಿಂತ ಮಿಗಿಲಾದ ಒಂದು ಅಂಗ ಇದೆ. ಅದು ಪ್ರಾಣ ವಾಯು. ಅದು ನಮ್ಮ ದೇಹದ ಕಣಕಣಗಳಿಗೆ ಪ್ರಾಣ ಶಕ್ತಿ ಒದಗಿಸುತ್ತದೆ. ಆದ್ದರಿಂದ- ಪ್ರಾಣೋ ಬ್ರಹ್ಮೇತಿ ವ್ಯಜನಾತ್- ಎಂದು ವರುಣ ತನ್ನ ತಂದೆಗೆ ಹೇಳುತ್ತಾನೆ.
ಭೃಗು ಮಹರ್ಷಿಗಳು ಮಗನಿಗೆ ಪುನಃ ತಪಸ್ಸು ಮಾಡಲು ಹೇಳಲು, ವರಣ ಪುನಃ ತಪಸ್ಸು ಮಾಡಿ- ಮನಸ್ಸಿನ ಏರುಪೇರುಗಳು ಉಸಿರಿನ ಯಾ ಪ್ರಾಣದ ಏರುಪೇರಿಗೆ ಕಾರಣ ಎಂಬುದರ ತಿಳಿಯುತ್ತಾನೆ ಹಾಗೇ ಅದನ್ನು- 'ಮನೋ ಬ್ರಹ್ಮೇತಿ ವ್ಯಜನಾತ್' ಎಂದು ತಂದೆಗೆ ವರದಿ ಮಾಡಲು ತಂದೆ ಮಗನನ್ನು ಪುನಃ ತಪಸ್ಸು ಮಾಡೆಂದು ಕಳಿಸುತ್ತಾನೆ. ಪುನಃ ತಪಸ್ಸು ಮಾಡಲಾಗಿ- ಮನಸ್ಸು ಚಂಚಲ ಅದನ್ನು ಸದ್ ಬುದ್ದಿಯ ಸಹಾಯದಿಂದ, ವಿಶೇಷ ಜ್ಞಾನದಿಂದ ಹಿಡಿತಕ್ಕೆ ತರಬಹುದು ಎಂಬುದರ ಅರ್ಥೈಸಿ ಕೊಂಡು ತಂದೆಗೆ- 'ವಿಜ್ಞಾನಂ ಬ್ರಹ್ಮೇತಿ ವ್ಯಜನಾತ್' ಎಂದು ತನ್ನ ಕಾಣ್ಕೆಯನ್ನು ಒಪ್ಪಿಸುತ್ತಾನೆ. ತಂದೆ ಪುನಃ ತಪಸ್ಸು ಮಾಡಲು ಹೇಳಿದಾಗ ತಪಸ್ಸನ್ನು ಮಾಡಲು ... ವರುಣನಿಗೆ ತಿಳಿಯುತ್ತದೆ- ಬುದ್ದಿಯ ಪ್ರಚೋದಿಸುವ ಯಾವುದೋ ಒಂದು ಇದೆ. ಅದು ಆನಂದ ಸ್ವರೂಪಿ ಅದು ಬುದ್ದಿಗೆ ನಿರಂತರ ಒಳಿತನ್ನು ತಿಳಿಸುತ್ತಿರುತ್ತದೆ ಹಾಗೂ ಈ ರೀತಿಯ ವ್ಯವಸ್ಥೆ ತನ್ನಂತೇ ಇತರರಲ್ಲೂ ಇರುವುದರ ಗಮನಿಸುತ್ತಾನೆ.
ಇದರಿಂದ ಪ್ರತಿಯೊಬ್ಬರಲಿ ಇರುವ ಆ ಏಕಂ ಸತ್ ನನ್ನಲ್ಲೂ ಅದ್ದರಿಂದ ನಾನು ಇನ್ನೊಬ್ಬರಿಂದ ಮೇಲಾಗಲಿ ಕೀಳಾಗಲಿ ಅಲ್ಲ ಎಂಬ ನಿರ್ಣಯಕ್ಕೆ ಬರುತ್ತಾ ಸಮತ್ವಂ ಯೋಗಮುಚ್ಚತೇ ಎಂಬ ನಿಶ್ಚಯ ಬುದ್ದಿ ಉಂಟಾಗಿ ಅಹಂ ನಾಶವಾಗಿ ಚಿತ್ತ ಶುದ್ದಿಯನ್ನೂ ಹೊಂದುವಂತಾಗಿ ಶ್ರೀ ಪತಂಜಲಿಯ ಎರಡನೇ ಯೋಗ ಸೂತ್ರದ- ಯೋಗಃ ಚಿತ್ತ ವೃತ್ತಿ ನಿರೋಧಃ ಎಂಬ ಮಟ್ಟಕ್ಕೆ ಏರಿದವನಾಗಿ ಆನಂದಾನುಭೂತಿ ಹೊಂದುವನು. ಆನಂದಕ್ಕಾಗಿ ಎಲ್ಲವೂ ಎಂಬ ಅರಿವಿನಿಂದ ವರುಣ- 'ಆನಂದಂ ಬ್ರಹ್ಮೇತಿ ವ್ಯಜನಾತ್' ಎಂಬ ತೀರ್ಮಾನವ ತನ್ನ ತಂದೆಗೆ ತಿಳಿಸುತ್ತಾನೆ. ಇದರಿಂದ ನಮಗೆ ತಿಳಿಯುವುದೇನೆಂದರೆ- ನನಗೆ ದೇಹ ಪ್ರಾಣ ಮನೋಬುದ್ದಿ ಅಹಂ ಚಿತ್ತ (ಎಲ್ಲಾ ಹಳೇ ವಿಚಾರ ಭಂಡಾರಗಳ ರಾಶಿ) ಗಳಿವೆ ಅವುಗಳ ನಾನು ಗಮನಿಸಬಲ್ಲೆ. ಅದನ್ನೆಲ್ಲಾ ಗಮನಿಸುವ ಆ ಅಂಗವೇ ಆತ್ಮ ಅದೇ ನಿಜ ನಾನು ಮತ್ತು ಗಮನಿಸುವ ಪ್ರಕ್ರಿಯೆಯೇ ಸಾಕ್ಷೀ ಭಾವ.
ನನ್ನ ದೇಹ ಮನೋ ಬುದ್ದ್ಯಾದಿಗಳೇ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಕೋಶಗಳು ಅದನ್ನೆಲ್ಲಾ ನನ್ನನ್ನೇ ನಾನು ಮೂರನೇ ವ್ಯಕ್ತಿ ಗಮನಿಸುವಂತೇ ಗಮನಿಸಬಲ್ಲ ಅಂಗವೇ ಸಾಕ್ಷಿ ಹಾಗೂ ಅದೆ ಅನಂದಮಯ ಕೋಶ. ಈ ವಿವರಗಳು ಅಷ್ಟಾಂಗ ಯೋಗಗಳಲ್ಲಿ ಬರುತ್ತದೆ. ವೇದಾಂತ ದರ್ಶನ ಮೊದಲೇ ಬಂದಿದ್ದು ಅದೇ ಅಷ್ಟಾಂಗ ಯೋಗ ಸಾದನಾ ಪಥಕ್ಕೆ ಮೂಲ ಅಧಾರ ಗ್ರಂಥವಾಗಿ ಬಂದಿದ್ದು ವೇದಾಂತ ವಿಚಾರಗಳ ಅನುಸಂಧಾನ ಮಾಡಲೆಂದೇ ಅಷ್ಟಾಂಗ ಯೋಗ ಸಾಧನಾ ವಿಧಾನಗಳು ಬಂದಿದ್ದು ಅಷ್ಟಾಂಗ ಯೋಗಾಭ್ಯಾಸದಲ್ಲಿ ಈ ಎಲ್ಲಾ ಕೋಶಗಳಿಗೆ ಅವುಗಳಿಗೆ ಹಿತವಾಗುವ ರೀತಿಯ ಆಹಾರವೊದಗಿಸಿ ಅವುಗಳ ಸುಸ್ಥಿತಿಗೆ ದುಡಿಯುವ ಪ್ರಕ್ರಿಯೆಯ ಯೋಗ ಸಾಧನೆ ಎನ್ನುವರು. ಆಸನ ದೇಹದ ಪ್ರತೀ ಕಣಕಣಗಳಿಗೆ ಸೆಳೆತ ಸಂಕುಚಿತತೆಗಳಿಂದ ವ್ಯಾಯಾಮ ಸಿಗುವಂತೇ ಮಾಡಿ ಉಲ್ಲಾಸದಲ್ಲಿರುವಂತೇ ಮಾಡುತ್ತಿದ್ದರೆ ಅದೇ ದೇಹಕ್ಕೆ ಹಿತವುಂಟು ಮಾಡುವುದು. ಅದೇ ಅನ್ನಮಯ ಕೋಶಕ್ಕೆ ಸಿಗುವ ಸಂತೃಪ್ತತೆ.
ದೇಹದ ಎಲ್ಲಾ ಭಾಗಕ್ಕೆ ಪ್ರಾಣದ ಹರಿವನ್ನು ಗಮನಿಸುತ್ತಾ ಮಾಡುವುದಾದರೆ ಅದು ಪ್ರಾಣಮಯ ಕೋಶಕ್ಕೆ ಸಂತೃಪ್ತತೆ ಒದಗಿಸುತ್ತದೆ. ಮನಸ್ಸು ಪರಿಶುದ್ದತೆಗೆ ದೈವ ಶರಣಾಗತಿಯೇ ಮುಖ್ಯ. ಅಷ್ಟಾಂಗ ಯೋಗದ ಎರಡನೇ ಅಂಗ - ನಿಯಮ. ಅದು ಶೌಚ, ಸಂತೋಷ, ತಪಃ,ಸ್ವಾಧ್ಯಾಯ, ಈಶ್ವರ ಪ್ರಣಿಧಾನಾನಿ ನಿಯಮಾಃ ಎಂದು. ದಾಸರು ಹೇಳಿದರು- ಮಡಿ ಮಡಿ ಮಡಿ ಎಂದು ಬಡಿದಾಡಬೇಡಿ... ಮಡಿ ಮಾಡ ಮಾಡುವ ಪರಿ ಬೇರುಂಟು- ಎಂದು. ನಮಗೆಲ್ಲಾ ತಿಳಿದ ಶ್ಲೋಕ- ಅಪವಿತ್ರ ಪವಿತ್ರೋ ವಾ ಸರ್ವಾವಸ್ತಾಂಗ ತೋಪಿವಾ| ಯಸ್ಮರೇತ್ ಪುಂಡರೀಕಾಕ್ಷಂ ಸಭಾಹ್ಯಾಭ್ಯಂತರ ಶುಚಿಃ| ಎಲ್ಲೆಲ್ಲೂ ಭಗವಂತನೇ ಎಂದು ತಿಳಿದು ಧ್ಯಾನಿಸುವುದಾದರೆ ಮನವು ಒಳ ಹೊರಗೆ ಶುದ್ದಿಗೊಳ್ಳುವುದು.
ಆದರೆ ಈ ಭಾವ ಬಲಿಯಬೇಕಾದರೆ ನಿಯಮದ ಅಂಗವಾದ ಸ್ವಾಧ್ಯಾಯ (ಸ್ವ=ತನ್ನ ಅಧ್ಯಾಯ = ತಾನರಿವ) ವ ಆಧರಿಸಬೇಕು. ಸ್ವಾಧ್ಯಯವೇ ವೇದಾಂತ ವಿಚಾರ.ಇದು ತನ್ನ ಅಂತರ್ಯದಲ್ಲಿರುವ (ಸುಷುಮ್ನಾ ನಾಡಿಯಲ್ಲಿ ಏಳೂ ಚಕ್ರಗಳಲ್ಲಿರುವ) ಭಗವತ್ ಚೈತನ್ಯವ ಗುರುತಿಸುತ್ತಾ ಇಂತಹಾ ವ್ಯವಸ್ಥೆ ಇತರರಲ್ಲೂ ಗುರುತಿಸುವಂತೆ ಮಾಡಿ ತಾನು ಇತರಿಂದ ಉತ್ತಮನೂ ಅಲ್ಲ ಕನಿಷ್ಠನೂ ಅಲ್ಲ ಎಂಬ ಭಾವ ಬಲಗೊಂಡು ಅಹಂ ನಾಶಗೊಳಿಸಿ ಚಿತ್ತ ಶುದ್ದಿಗೊಳಿಸಿ ಬುದ್ದಿಗೆ ಸಮತ್ವವನ್ನು ಒದಗಿಸುವುದು. ಈ ರೀತಿಯ ಸಾಧನೆಗೆ ಈಶಾವಾಸ್ಯೋಪನಿಷತ್ತಿನ ಅಥವಾ ಭಗವದ್ಗೀತೆಯ ಎಲ್ಲವೂ ಈಶ್ವರನಿಂದ ಈಶ್ವರನಿಗಾಗಿ ಈಶ್ವರನೇ ಮಾಡುತ್ತಾನೆ ಎನ್ನುವ ನಂಬಿಕೆ ಅಥವಾ ಪತಂಜಲಿ ಯೋಗ ಸೂತ್ರದ ಈಶ್ವರ ಪ್ರಣಿಧಾನಾ ಧ್ವ ಎಂಬ ಈಶ್ವರ ಪ್ರಸಾದ ಬುದ್ದಿ ಎಂದರೆ ಏನು ಅವನಿಚ್ಚೆಯೋ ಅದರಂತೇ ನಡೆಯಲಿ ನನ್ನ ಕರ್ತವ್ಯವ ನಾನು ಮಾಡುತ್ತೇನೆ ಎಂಬ ಯಜ್ಞ ಭಾವ. ಆಗ ಮನವು ಅಪ್ರಯತ್ನಪೂರ್ವಕವಾಗಿ ದೈವ ಶರಣಾಗತಿಯಲ್ಲಿರುವಂತೇ ಆಗಿ ಶಾಂತಿ ಸಮಾಧಾನ ಹೊಂದುವುದು ಯಾ ಮನ ತನ್ನಿಂದ ತಾನೇ ನಿರಾಳತೆ ಹೊಂದುವುದು. ಇದು ಮುಖ್ಯ.
ಹಾಗಲ್ಲದೇ ಮನಸ್ಸು ಹಿಡಿತಕ್ಕೆ ಬಾರದು ಹಾಗೂ ಯೋಗಾಸನ ಕೇವಲ ಯಾಂತ್ರಿಕವಾಗಬಹುದು. ಬುದ್ದಿಯು ನಿಯಮದ ಅಂಗವಾದ ಈಶ್ವರ ಪ್ರಣೀಧಾನ (ಈಶ್ವರ ಪ್ರಸಾದ ಬುದ್ದಿ- ಎಲ್ಲಾ ದೈವೇಚ್ಚೆ) ಹೊಂದಿ ಮನವು ಈ ಮಟ್ಟದಲ್ಲಿ ನಿರಂತರ ಇರುವ ಪ್ರಯತ್ನ ಸಂತೋಷದಲ್ಲಿರಿಸುವುದು. ಈ ಸ್ಥಿತಿ ಮುಂದುವರಿಯಲಿ ಎಂದು ಸಹಜ ಇಚ್ಚೆ ಉಂಟಾಗಿ ಅದೇ ಮನೋ ಭೂಮಿಕೆಯಲ್ಲಿ ಮುಂದುವರಿಯುವ ಸಹಜ ಪ್ರವೃತ್ತಿ ಗಟ್ಟಿಗೊಳ್ಳುವುದು.ಅದೇ ನಿಯಮದ ಮೂರನೇ ಅಂಗ ತಪಃ. ಹೀಗೆ ನಿಯಮದ ಐದೂ ಅಂಗಗಳ ಅನುಸಂಧಾನ ಮಾಡುತ್ತಾ ಯೋಗಾಭ್ಯಾಸ ಮಾಡುವುದನ್ನೇ ವೇದಾಂತ ಚಿಂತನೆ ಸಹಿತ ಯೋಗ ಸಾಧನೆ ಎಂದು ತಿಳಿಯತಕ್ಕದ್ದು. ಇದರಿಂದ ಮನವು ಆತ್ಮನೊಂದಿಗೆ ಸಂಯೋಗವಾದಂತೇ ಆಗಿ ಆನಂದಾನೂಭೂತಿ ಹೊಂದುವುದು.
ವೇದಾಂತ ಚಿಂತನೆ ನಿಜ ನನ್ನ ತಿಳಿಯುವ ಪಠ್ಯವಾದರೆ (theory class) ಯೋಗ ಸಾಧನೆ ಪಠ್ಯದ ಸಂದೇಶಗಳ ಅನುಸಂಧಾನಗೊಳಿಸಲು ಸಹಾಯಕವಾಗಿರುವ ಪ್ರಾಯೋಗಿಕ (practical class) ತರಗತಿ. ಆದ್ದರಿಂದ ಯೋಗ ಸಾಧನೆ ಹಾಗೂ ವೇದಾಂತ ಚಿಂತನೆ ಒಂದಕ್ಕೊಂದು ಪೂರಕ ಹಾಗೂ ಅವಶ್ಯಕ ಅಂಗಗಳು. ಒಂದು ಇಲ್ಲದೇ ಇನ್ನೊಂದಕ್ಕೆ ಬೆಲೆ ಬಾರದು. ಇದನ್ನು ಅರಿತು ತಾವು ಮಾಡುವ ಯೋಗಾಸನಗಳಲ್ಲಿ ಪ್ರತಿಯೊಬ್ಬರೂ ಇಂತಾ ವಿಚಾರಗಳ ಅಳವಡಿಸಿ ತಮ್ಮ ದೈಹಿಕ ಮಾನಸಿಕ ಮಾತ್ರವಲ್ಲದೇ ಸಾಮಾಜಿಕ, ಅಧ್ಯಾತ್ಮಿಕ ಆರೋಗ್ಯ ಹೆಚ್ಚಿಸಿಕೊಳ್ಳಲಿರುವ ಸುಲಭೋಪಾಯವ ಬಳಸಿಕೊಳ್ಳುವುದು ಬುದ್ದಿವಂತಿಕೆ. ಯೋಗಾಭ್ಯಾಸ ಮಾಡುವ ಸಂದರ್ಭದಲ್ಲಿ ಅದೇ ಸಮಯದಲ್ಲಿ ಇನ್ನೂ ಹೆಚ್ಚಿನ ಸಮಯ ತೆಗೆದುಕೊಳ್ಳದೇ ಯೋಗಾಸನ ಮಾಡುವಾಗ ವೇದಾಂತ ಚಿಂತನೆಗಳ ಅಳವಡಿಸುತ್ತಾ ಹೆಚ್ಚಿನ ಲಾಭ ಅಂದರೆ ದೈಹಿಕ, ಮಾನಸಿಕ ಆರೋಗ್ಯದೊಂದಿಗೆ ಸಮಾಜಿಕ, ಅಧ್ಯಾತ್ಮಿಕ ಆರೋಗ್ಯ ಪಡೆಯುವುದಾದರೆ ಅದರ ಬುದ್ದಿವಂತಿಕೆ ಎಂದು ಹೇಳಬಹುದಲ್ಲಾ.
ಡಿ.ವಿ.ಜಿ ಯವರು ತಮ್ಮ ಕಗ್ಗದಲ್ಲಿ ಹೀಗೆ ಹೇಳಿದ್ದಾರೆ- ಮುಕ್ತಿಯೆಂಬುದು ಮನದ ಸಂಸ್ತಿತಿಯೆ ಬೆರಲ್ಲ ರಕ್ತಿ ವಿಪರೀತವದಕಾಗದಿರೆ ಮುಕ್ತಿ |
ಯುಕ್ತಿಯಿಂದಲಿ ಕರಣ ಚೇಷ್ಟಿತವ ತಿದ್ದುತೆ ಶಕ್ತಿವಂತನೆ ಮುಕ್ತ ಮಂಕುತಿಮ್ಮ||
ನಿಷ್ಕಾಮದಿಂದ (ಸ್ವಾಂತಾಚ್ಚ ಭಾವ) ಅಂತರ್ಯದ ಭಗವಂತನ ಧ್ಯಾನ ಮಾಡುತ್ತಾ ಆನಂದದ ಅನುಭೂತಿ (ಸಮಾಧಿ) ಪಡೆಯುವ ವಿಧಾನವೇ ಇದು. ಆದ್ದರಿಂದ ಇದನ್ನು ನಿಷ್ಕಾಮ ಸಮಾಧಿ ಎನ್ನಹುದು. ಆದರೆ ತಾಂತ್ರಿಕ ಶಬ್ದಗಳ ಬಗ್ಗೆ ಪಾಂಡಿತ್ಯದ ಚಿಂತನೆಗಿಂತಲೂ ಪ್ರಾಯೋಗಿಕ ಸಾಧನೆ ಗುರಿಯಾಗಿರುವುದು ಉತ್ತಮ. ಮತ್ತೆ ನಾನು ಆ ಹಂತದಲ್ಲಿದ್ದೇನೆ, ಈ ಹಂತದಲ್ಲಿ ಇದ್ದೇನೆ ಎಂಬ ಆಲೋಚನೆ ನಮ್ಮ ಅಹಮಿಕೆಗೆ ಆಹಾರ. ಅಹಂ ಮೇಲೆದ್ದರೆ ಅಧ್ಯಾತ್ಮ ಸಾಧನೆ ಶೂನ್ಯಕ್ಕೆ ತಲಪುವುದು. ಆದ್ದರಿಂದ ನಿರಂತರ ಎಚ್ಚರ ಮುಖ್ಯ. ಲಕ್ಷ್ಮಣ ವನವಾಸದ ಹದಿನಾಲ್ಕು ವರ್ಷ ನಿರಂತರ ಅಧ್ಯಾತ್ಮಿಕ ಎಚ್ಚರದಲ್ಲಿದ್ದು ಅಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಂಡ ಹಾಗೂ ಅದರಿಂದ ಇಂದ್ರಜೀತು (ರಾಕ್ಷಸ) ಸಂಹಾರ ಮಾಡಿದ. ನಮ್ಮೊಳಗಿನ ರಾಕ್ಷಸ ಸಂಹಾರಕ್ಕೂ ಅಧ್ಯಾತ್ಮಿಕ ಎಚ್ಚರ ಮುಖ್ಯ.
ಈಗ ಎಲ್ಲರೂ ತಾವು ಕುಳಿತಲ್ಲೇ ನೇರವಾಗಿ ಕುಳಿತುಕೊಳ್ಳಿ. ಕುರ್ಚಿಯಲ್ಲಿ ಕುಳಿತಿದ್ದರೆ ಎರಡೂ ಪಾದಗಳ ಲಂಬವಾಗಿ ನೆಲಕ್ಕೆ ಊರಿ ಕುಳಿತುಕೊಳ್ಳಿ. ಕೈಗಳು ಚಿನ್ಮುದ್ರೆಯಲ್ಲಿರ ಲಿ. ತೋರು ಬೆರಳನ್ನು ಹೆಬ್ಬೆಟ್ಟು ಬೆರಳನ್ನು ಹದವಾಗಿ ಸ್ಪರ್ಶಿಸುತ್ತಿರಲಿ. ಅಲ್ಲಿ ಆಗುವ ನಾಡೀ ಮಿಡಿತವ ಪ್ರೀತಿಯಿಂದ ಗಮನಿಸಿ.ವೇದಾಂತದಲ್ಲಿಹೇಳಿದ - ನಮಸ್ತೇ ವಾಯೋಃ... ತ್ವಮೇವ ಪ್ರತ್ಯಕ್ಷಂ ಬ್ರಹ್ಮಾಸಿ ಎಂದರೆ ವಾಯುವೇ ದೈವೀ ಚೇತನ ಅದಕ್ಕೆ ಶರಣು ಶರಣು ಎಂದು ಭಾವಿಸುತ್ತಾ ನಿಧಾನವಾಗಿ ಉಸಿರನ್ನು ಒಳಕ್ಕೆ ತೆಗೆದುಕೊಳ್ಳಿ.ನೋಡಿ ವಾಯು ಒಂದು ನಿಮಿಷ ಇಲ್ಲದಿದ್ದರೂ ನಾವಾರೂ ಉಳಿಯಲಾರೆವು. ಅಲ್ಲವೇ?.. ಆದ್ದರಿಂದ ವಾಯುವೇ ದೇವರೆಂದು ನಿಜ ಶರಣಾಗತ ಭಾವದೊಂದಿಗೆ ನಿಧಾನವಾಗಿ ಉಸಿರನ್ನು ಒಳಕ್ಕೆ ತಗೆದುಕೊಳ್ಳಿ.
ಸಾಮಾನ್ಯವಾಗಿ ನಮ್ಮ ಮೂಗಿನ ಯಾವುದಾದರೂ ಒಂದು ಮೂಗಿನ ಹೊಳ್ಳೆಯಲ್ಲಿ ಇನ್ನೊಂದಕ್ಕಿಂತ ಹೆಚ್ಚಿನ ವಾಯು ಸಂಚಾರವಾಗುತ್ತಿರುತ್ತದೆ ಅದನ್ನು ಗಮನಿಸಿ ಹಾಗೂ ಯಾವ ಮೂಗಿನ ಹೊಳ್ಳೆಯಲ್ಲಿ ಕಡಿಮೆ ಉಸಿರು ಹೊಗುತ್ತಿದೆಯೋ ಅದನ್ನು ಹೆಚ್ಚು ಗಮನಿಸಿ ಮತ್ತು ಆ ಮೂಗಿನ ಹೊಳ್ಳೆ ಮುಖಾಂತರ ಹೆಚ್ಚಿನ ವಾಯು ಹೊಗಲಿ ಎಂದು ಭಾವಿಸಿ. ಈಗ ನಿಧಾನವಾಗಿ ಆ ಮೂಗಿನ ಹೊಳ್ಳೆ ಮುಖಾಂತರ ಹಚ್ಚು ಹೆಚ್ಚು ವಾಯು ಸಂಚಾರ ಪ್ರಾರಂಭವಾಗುತ್ತದೆ. ಅದನ್ನು ಗಮನಿಸಿ. ಹೆಚ್ಚಾಗದಿದ್ದರೆ ಅದರ ಬಗ್ಗೆ ಬೆಸರಿಸಬೇಡಿ, ಪ್ರೀತಿಯಿಂದ ಉಸಿರಾಟ ಗಮನಿಸಿ. ಎರಡೂ ಮೂಗಿನ ಹೊಳ್ಳೆಗಳಲ್ಲಿ ಸಮಾನವಾಗಿ ಉಸಿರು ಯಾ ಪ್ರಾಣದ ಹರಿವು ಉಂಟಾದಾಗ ಮನಸ್ಸು ತನ್ನಿಂದ ತಾನೇ ಒಂದು ಹಿಡಿತಕ್ಕೆ ಬಂದು ನಿರಾಳತೆ ಉಂಟಾಗುವುದು. ಇದು ಹಠ ಯೋಗ ಪ್ರಧೀಪಕದಲ್ಲಿ ವಿವರಿಸಿದ ವಿಚಾರ.
ಇನ್ನೂ ಮುಂದಕ್ಕೆ ಹೊಗೋಣ. ಈಗ ಉಸಿರು ತೆಗೆದುಕೊಳ್ಳುತ್ತಿದ್ದಂತೇ... ನಿಮ್ಮ ಗಮನವ ಕಾಲ ಬೆರಳ ತುದಿಗೆ ತನ್ನಿ ಆ ಜಾಗಕ್ಕೆ ಉಸಿರಿನ ಯಾ ಪ್ರಾಣದ ಹರಿವು ಆಗುತ್ತಿದೆ ಎಂದು ಭಾವಿಸಿ. ಹಾಗೇ ಉಸಿರು ತೆಗೆದುಕೊಳ್ಳುತ್ತಾ ನಿಮ್ಮ ಗಮನದೊಂದಿಗೆ ಪ್ರಾಣದ ಹರಿವು ದೈವೀ ಚೈತನ್ಯ ಪಾದ,ಕಾಲುಗಳು, ಪೃಷ್ಟ ಭಾಗ, ಬೆನ್ನ ಹುರಿಯ ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದವರೆಗೆ ಹರಿಯುತ್ತಾ ನಮ್ಮೊಳಗೆ ಶಕ್ತಿ ಸಂಚಾಯನಗೊಳ್ಳುತ್ತಿದೆ ಎಂದೇ ಭಾವಸಿ. ಯದ್ ಭಾವಂ ತದ್ ಭವತಿ ಎಂಬಂತೇ. ನಿಮ್ಮ ಭಾವನೆ ಎಷ್ಟು ಹೆಚ್ಚಾಗಿದೆಯೋ ಅಷ್ಟು ಹೆಚ್ಚಿನ ಪ್ರಯೋಜನ ಕಾಣುವಿರಿ. ನಿಧಾನವಾಗಿ ಉಸಿರು ಬಿಡುತ್ತಾ ಋಣಾತ್ಮಕ ಶಕ್ತಿ ನಿಮ್ಮ ಕಾಲ ಬೆರಳ ತುದಿ, ಕಾಲುಗಳು ಹಾಗೇ ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದವರೆಗೆ ಹೊರ ದಬ್ಬಲ್ಪಡುತ್ತಿದೆ ಎಂದು ಭಾವಿಸಿ. ಚಿತ್ತ ಶುದ್ಧಿಗೊಂಡು ಮನಸ್ಸು ಇನ್ನಷ್ಟೂ ಹಗುರತೆ ಪಡೆಯುವುದು.
ಹೀಗೇ ವೇದಾಂತ ಚಿಂತನೆ ಅನುಸಂಧಾನ ಮಾಡುತ್ತಾ ಏಳೂ ಚಕ್ರಗಳಲ್ಲಿರುವ ದೈವೀ ಶಕ್ತಿ ಗುರುತಿಸುತ್ತಾ ಎಲ್ಲರ ಅಂತರ್ಯಾಲ್ಲೂ ಇದೇ ವ್ಯವಸ್ಥೆ ಇದೆ ಎಂದು ಭಾವಿಸಿದಾಗ ನಾನು ಯಾರಿಂದಲೂ ಕೀಳೂ ಅಲ್ಲ ಮೇಲೂ ಅಲ್ಲ ಎಂಬ ಭಾವ ಬಲಗೊಂಡು ಅಹಂ ನಾಶಗೊಂಡು ಚಿತ್ತ ಶುದ್ದಿಗೊಳ್ಳುವುದು ಹಾಗೂ ಬುದ್ದಿ, ಮನಸ್ಸು ಇನ್ನಷ್ಟೂ ಪ್ರಶಾಂತಗೊಳ್ಳುವುದರ ಗಮನಿಸಿ. ಒಂದು ರೀತಿಯ ಧ್ಯಾನಸ್ಥ ಸ್ಥಿತಿಯಲ್ಲಿ ದೇಹ, ಮನಸ್ಸು, ಬುದ್ದಿ, ಅಹಂ, ಚಿತ್ತಗಳ ಯುಕ್ತಿಯಿಂದ ಗಮನಿಸುವ ಅಂಗವೇ ಸಾಕ್ಷಿ ಹಾಗೂ ಅದೇ ನಾನು. ದೇಹಾದಿಗಳೆಲ್ಲಾ ನನ್ನ ಪರಿಚಾರಿಕೆಯರು ಎಂದು ಭಾವಿಸುತ್ತಾ ಅವುಗಳ ನನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕಾದ್ದು -ಈ ರೀತಿ ತೊಡಗಿಸಿಕೊಳ್ಳುತ್ತಾ ಮಾಡುವ ಪ್ರಕ್ರಿಯೆಯೇ ನಿಜ ಯೋಗವಾಗುವುದು.
ಈಗ ಬೇರೆ ಬೇರೆ ಆಸನಗಳ ಭಂಗಿಗಳು ದೇವರಿಗೆ ಮಾಡುವ ನಮಸ್ಕಾರ ಎಂದೇ ಭಾವಿಸುತ್ತಾ ದೇಹದ ಭಾಗಗಳಿಗೆ ಒತ್ತಡ ಬೀಳುವಲ್ಲಿ ಪ್ರಾಣದ ಹರಿವು ಭಗವದ್ ಚೈತನ್ಯದ ಹರಿವು ಉಂಟಾಗುತ್ತಿದೆ ಎಂದೇ ಭಾವಿಸುತ್ತಾ ಸಾಕ್ಷೀ ಭಾವದಿಂದ ತೊಡಗಿಸಿಕೊಳ್ಳಬೇಕು. ಆಗ ಬೇರೆ ಬೇರೆ ಆಸನಗಳಿಂದ ನಮ್ಮ ದೇಹದ ಬೇರೆಬೇರೆ ಭಾಗಗಳು ಶಕ್ತಿ ಸಂಚಯಗೊಂಡ ಅನುಭವವಾಗಿ ಲಘುತ್ವ ಸಿದ್ದಿಸುವುದು. ಸರಳ ಚಿಂತನೆಯ ಅಳವಡಿಸಿಕೊಳ್ಳುತ್ತಾ- ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ- ಎಂಬ ವಾಕ್ಯಕ್ಕೆ ಪೂರಕ ದಾರಿಯಲ್ಲಿ ನಡೆಯುತ್ತಾ ನಮ್ಮೊಳಗಿನ ಭಗವಂತನ ಲೋಕಗಳ ಗಮನಿಸುತ್ತಾ ಮನದಲ್ಲಿ ಶರಣಾಗತ ಭಾವ, ಬುದ್ದಿಯಲ್ಲಿ ನಿತ್ಯಾನಿತ್ಯ ವಿವೇಕ ವಿಚಾರ, ಅಹಂ ನಾಶ, ಚಿತ್ತ ಶುದ್ದಿಯನ್ನೆಲ್ಲಾ ಗಮನಿಸುವ ಸಾಕ್ಷಿಯ ಉಪಸ್ಥಿತಿ ಗುರುತಿಸುವಿಕೆಯೊಂದಿಗೆ ಯೋಗ ಮಾಡುವಾಗ ನಾವು ನಿಜವಾಗಿ ಪೂರ್ತಿ ತೊಡಗಿಸಿಕೊಂಡವರಾದರೆ ನಮ್ಮ ಏಳೂ ಚಕ್ರಗಳಲ್ಲಿರುವ ದೈವೀ ಚೈತನ್ಯ ಅದಕ್ಕೆ ಜೋಡನೆಯಾಗಿರುವ ಎಂಡೋಕ್ರೇನ್ ಗ್ಲಾಂಡ್ ಗಳಿಗೆ ದೇಹ ಸುಸ್ಥಿತಿಯಲ್ಲರಲು ಬೇಕಾದಷ್ಟು ಹಾರ್ಮೋನ್ ಸ್ರವಿಸುವಂತೇ ಆಜ್ಞೆ ಮಾಡುವುದು. ಹಾರ್ಮೋನ್ ಸೃವಿಸುವಿಕೆ ನಮ್ಮಲ್ಲಿ ಆನಂದದ ಅನುಭೂತಿ ಉಂಟುಮಾಡುವುದು. ಇದು ಇದರ ಹಿಂದಿರುವ ವಿಜ್ಞಾನ. ನಾಟಕೀಯತೆಯಿಂದ ಪ್ರಯೋಜನವಾಗದು. ಅದ್ದರಿಂದ ಯೋಗದಲ್ಲಿ ಪ್ರಾಮಾಣಿಕ ತೊಡಗಿಸಿಕೊಳ್ಳುವಿಕೆಯೊಂದಿಗೆ ಜೀವನದ ನಿಜಾನಂದವ ಹೊಂದೋಣ.
ಏನೇ ಆದರೂ ವೇದಾಂತ ದರ್ಶನದ ಮಹಾ ವಾಕ್ಯಗಳ ಘೋಷಣೆಗಳಾದ- ಅಹಂ ಬ್ರಹ್ಮಾಸ್ಮಿ, ಸೋಹಮಸ್ಮಿ, ತತ್ ತ್ವಂ ಅಸಿ, ಪ್ರಜ್ಞಾನಂ ಬ್ರಹ್ಮ ಎಂಬ ವಿಚಾರಗಳಲ್ಲಿ ವಿಶ್ವಾಸವಿಲ್ಲದೇ ಹಾಗೂ ದೈವ ಶರಣಾಗತ ಭಾವವಿಲ್ಲದೇ ಯೋಗಾಭ್ಯಾಸ ಮಾಡುವುದಾದರೆ ಮೇಲೆ ವಿವರಿಸಿದ ಭಾವೋನ್ನತಿ ಹೊಂದಲಾಗದು. ಅದು ಕೇವಲ ವ್ಯಾಯಾಮವಾದೀತು. ಯೋಗದ ಸಹಾಯದಿಂದ ನಾವೆಲ್ಲಾ ವಿಶ್ವ ಬ್ರಾತೃತ್ವ ಸಾಧಿಸುವಂತಾಗಲಿ ನಮ್ಮ ಎಲ್ಲಾ ಸತ್ಕಾರ್ಯಗಳಲ್ಲಿ ದೈವೀ ಭಾಗವಿರುದರ ಗುರುತಿಸುವಂತಾಗಿ ವಿಶ್ವದ ಪ್ರತಿಯೊಬ್ಬರೂ ಸಾಮರಸ್ಯದಿಂದ ಬಾಳುವಂತಾಗಲಿ
|| ಓಂ ಸಂಘಚ್ಚದ್ವಂ ಸಂವಧದ್ವಂ... ಸಂವೋ ಮನಾಂಸಿ ಜಾನತಾಮ್...| ದೇವಾ ಭಾಗಂ ಯಥಾ ಪೂರ್ವೇ ಸಂಜಾನಾನ ಉಪಾಸತೇ...||
|| ಓಂ ಶಾಂತಿ ಶಾಂತಿ ಶಾಂತಿಃ||
- ಶ್ಯಾಮ ಪ್ರಸಾದ ಮುದ್ರಜೆ