ಕಾಲ ಚಕ್ರ ಉರುಳಿದಂತೆ ಜನರು ಬದಲಾವಣೆ ಬಯಸುವುದು ಸಹಜ. ಜನರ ಆಹಾರ ಪದ್ಧತಿ ಜೀವನಶೈಲಿ ಮತ್ತು ಹವ್ಯಾಸಗಳು ಕಾಲಕ್ಕೆ ತಕ್ಕಂತೆ ಮಾರ್ಪಾಡಗುತ್ತಲೇ ಬಂದಿದೆ. ಬದಲಾಗುತ್ತಿರುವ ಹವಾಮಾನ, ಕೆಲಸದ ವಾತಾವರಣ, ಒತ್ತಡದ ಜೀವನ ಇವೆಲ್ಲವೂ ಆರೋಗ್ಯಕ್ಕೆ ಮಾರಕವಾಗುವಾಗ, ಜನರು ಕೂಡಾ ಬೇರೆ ಬೇರೆ ರೀತಿಯ ಮನಸ್ಸಿಗೆ ಮತ್ತು ದೇಹಕ್ಕೆ ಮುದ ನೀಡುವ ದೈಹಿಕ ಕಸರತ್ತುಗಳಿಗೆ ಮಾರುಹೋಗುವುದು ತಪ್ಪಲ್ಲ. ಸಾಂಪ್ರದಾಯಿಕವಾಗಿ ಹಿಂದಿನ ಕಾಲದ ಜನರು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿ ಇಡಲು ಯೋಗ ಪ್ರಾಣಯಾಮಕ್ಕೆ ಮೊರೆಹೋದರು. ಆದರೆ ಯುವಜನಾಂಗ ಮಾತ್ರ ಈ ರೀತಿಯ ಸಾಂಪ್ರದಾಯಿಕ ಯೋಗವನ್ನು ಯಾಕೋ ಅಷ್ಟಾಗಿ ಮೆಚ್ಚಲೇ ಇಲ್ಲ. ಎಲ್ಲೋ ಒಂದೆರಡು ಬೆರಳೆಣಿಕೆಯಷ್ಟು ಜನರು ಮಾತ್ರ ಯೋಗವನ್ನು ಒಪ್ಪಿ, ಅಭ್ಯಾಸ ಮಾಡಿದ್ದು ಬಿಟ್ಟರೆ, ಹಠ ಯೋಗ ಎನ್ನುವುದು ಯುವಕರ ಜೀವನಶೈಲಿಯ ಅವಿಭಾಜ್ಯ ಅಂಗವಾಗಲೇ ಇಲ್ಲ.
ಒಂದಷ್ಟು ದೈಹಿಕ ಶ್ರಮ, ಉಸಿರಾಟದ ಏರಿಳಿತ ಮತ್ತು ಏಕಾಗ್ರತೆಯ ಅವಶ್ಯಕತೆ ಇರುವ ಧ್ಯಾನ, ಯೋಗದ ಅವಿಭಾಜ್ಯ ಅಂಗವಾಗಿರುವ ಕಾರಣದಿಂದಲೋ ಏನೋ ಯುವಕರನ್ನು ಆಕರ್ಷಿಸುವಲ್ಲಿ ವಿಫಲವಾಯಿತು ಎಂದರೂ ಅತಿಶಯೋಕ್ತಿಯಲ್ಲ. ಯುವಜನತೆ ಮಾತ್ರ ಯೋಗ ಪ್ರಾಣಯಾಮ ಧ್ಯಾನಕ್ಕಿಂತ ಹೆಚ್ಚಾಗಿ, ದೈಹಿಕ ಕಸರತ್ತು ಹೆಚ್ಚಾಗಿರುವ ಜಿಮ್, ಜಾಂಗಿಗ್, ಸ್ವಿಮಿಂಗ್, ಸೈಕ್ಲಿಂಗ್, ಬಿರುಸು ನಡಿಗೆ, ಜುಂಬ ಡ್ಯಾನ್ಸ್ ಮುಂತಾದ ಆಧುನಿಕ ವ್ಯವಸ್ಥೆಗೆ ಮೊರೆ ಹೋಗುತ್ತಿದ್ದಾರೆ. ಇದಕ್ಕೆ ಹೊಸದಾಗಿ ಸೇರ್ಪಡೆಗೊಂಡ ಇನ್ನೊಂದು ಹೊಸದಾದ ಆಧುನಿಕ ಯೋಗ ಎಂದರೆ, ಆಂಟಿ ಗ್ರಾವಿಟಿ ಯೋಗ ಅಥವಾ ಜೋಕಾಲಿ ಯೋಗ (Aerial Yoga) ಎಂದರೂ ತಪ್ಪಲ್ಲ.
ಏನಿದು ಆಂಟಿ ಗ್ರಾವಿಟಿ ಯೋಗ?:
ನಿರಂತರವಾಗಿ ಸಾಂಪ್ರದಾಯಿಕ ಹಠ ಯೋಗ ಅಥವಾ ಪಂತಂಜಲಿ ಯೋಗ ಅಭ್ಯಾಸ ಮಾಡಿದ ಜನರು ಬದಲಾವಣೆ ಬಯಸಿದಾಗ, ಹೊಸತನಕ್ಕಾಗಿ ಸದಾ ಹಪಹಪಿಸುವ ಅಮೇರಿಕದ ಯುವ ಜನತೆ ನ್ಯೂಯಾರ್ಕ್ ನಗರದಲ್ಲಿ 1991ರಲ್ಲಿ ಹೊಸತೊಂದು ಯೋಗದ ಅವತರಣಿಕೆಯನ್ನು ಹುಟ್ಟು ಹಾಕಿದರು. ಸುಸಜ್ಜಿತವಾದ ಹವಾನಿಯಂತ್ರಿತ ಕೊಠಡಿಯಲ್ಲಿ, ಚಾವಡಿಗೆ ನೇತು ಹಾಕಿದ ತೆಳುವಾದ ರೇಷ್ಮೆಯ ಹಗ್ಗದಲ್ಲಿ ನೇತಾಡುತ್ತಾ, ಬಗೆಬಗೆಯ ದೈಹಿಕ ಕಸರತ್ತು ಮಾಡುತ್ತಾ, ದೇಹವನ್ನು ಗಾಳಿಯಲ್ಲಿ ತೇಲಿ ಬಿಡುತ್ತಾ, ದೇಹದ ಮೇಲೆ ನಿಯಂತ್ರಣ ಸಾಧಿಸಿ ಗಾಳಿಯಲ್ಲಿಯೇ ಬಗೆಬಗೆಯ ವಿಧ ವಿಧದ ಯೋಗದ ಆಸನಗಳನ್ನು ಮಾಡಲು ವಿಭಿನ್ನವಾದ ಪ್ರಯತ್ನ ಮಾಡಿದರು. ಸುಮಾರು 300 ಕಿಲೋಗ್ರಾಂ ವರೆಗೆ ಭಾರವನ್ನು ತಡೆದುಕೊಳ್ಳುವ ಈ ರೇಷ್ಮೆಯ ಬಟ್ಟೆಯನ್ನು ಉಯ್ಯಾಲೆ ಅಥವಾ ಜೋಕಾಲಿಯ ರೀತಿಯಲ್ಲಿ ನೇತು ಹಾಕಿ, ಅದರ ಸಹಾಯದಿಂದ ದೇಹದ ಮೇಲೆ ನಿಯಂತ್ರಣ ಸಾಧಿಸಿ ದೈಹಿಕ ಕಸರತ್ತಿನ ಜೊತೆ ಯೋಗವನ್ನು ವಿಲೀನ ಮಾಡಲಾಯಿತು.
ಒಂದೇ ರೀತಿಯ ದೈಹಿಕ ವ್ಯಾಯಾಮದಿಂದ ಏಕತಾನತೆಗೆ ಒಳಪಟ್ಟ ಜನರು, ಈ ರೀತಿಯ ಹೆಚ್ಚು ಶ್ರಮದಿಂದ ಕೂಡಿದ, ಹೆಚ್ಚು ಕೊಬ್ಬು ಕರಗಿಸುವ ಈ ‘ತೇಲಾಡುವ ಜೋಕಾಲಿ ಯೋಗ’ಕ್ಕೆ ಹೆಚ್ಚು ಆಕರ್ಷಿತರಾದರು. ಅಮೇರಿಕಾದಲ್ಲಿ ಉಗಮವಾದ ಈ ತೇಲಾಡುವ ಯೋಗ ಕ್ರಮೇಣ ಜರ್ಮನಿ, ಹಾಂಕಾಂಗ್, ಇಟೆಲಿ, ಆಸ್ಟೇಲಿಯ ಹೀಗೆ ಜಗತ್ತಿನ ಎಲ್ಲೆಡೆ ಪಸರಿಸಿತು. ಕ್ರಮೇಣ ಎರಡು ವರ್ಷಗಳ ಹಿಂದೆ ಭಾರತಕ್ಕೂ ಈ ಯೋಗ ಬಂದಿಳಿಯಿತು. ದೆಹಲಿ, ಬಾಂಬೈ, ಚೆನೈ, ಬರೋಡಾ, ಕೊಲ್ಕತಾ, ಬೆಂಗಳೂರು ಹೀಗೆ ಎಲ್ಲಾ ನಗರದಲ್ಲಿ ಯುವಜನರನ್ನು ಹೆಚ್ಚು ಹೆಚ್ಚು ಆಕರ್ಷಿಸಿ ‘ತೇಲಾಡುವ ಯೋಗ’ ಮತ್ತಷ್ಟು ಜನಪ್ರಿಯವಾಯಿತು.
ಮೊದಮೊದಲು ಸಿನಿಮಾ ನಟರು, ಕ್ರೀಡಾಪಟುಗಳು ಮತ್ತು ಸೆಲೆಬ್ರೆಟಿಗಳನ್ನು ತನ್ನೆಡೆಗೆ ಸೆಳೆದ ಈ ತೇಲು ಯೋಗ ಈದೀಗ ಯುವಜನರ ಮತ್ತು ಹದಿಹರೆಯದ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಕೇವಲ ಕೆಂಪು ಹಾಸಿನ ನೆಲದ ಮೇಲೆ ಜಮಾಖಾನ ಹಾಸಿ, ಶುದ್ಧ ಗಾಳಿ ಬೆಳಕಿನಿಂದ ಕೂಡಿದ ಸಾಂಪ್ರದಾಯಿಕ ಯೋಗದಿಂದ ಯುವಜನರು ವಿಮುಖರಾಗಿ, ಹವಾನಿಯಂತ್ರಿತ ಕೊಠಡಿಯೊಳಗೆ ತಂಪಾಗಿನ ಮೆದುವಾದ ರತ್ನಗಂಬಳಿಯ ಮೇಲೆ, ಕಿವಿಗೆ ಇಂಪಾದ ಸಂಗೀತದ ಜೊತೆಗೆ, ತೆಳುವಾದ ರೇಷ್ಮೆಯ ಉಯ್ಯಾಲೆಯಲ್ಲಿ ನೇತಾಡುತ್ತಾ, ಕಸರತ್ತು ಮಾಡುತ್ತಾ, ಗಾಳಿಯಲ್ಲಿ ತೇಲಾಡುತ್ತಾ ಮಾಡುವ ಆಧುನಿಕ ‘ತೇಲು ಯೋಗ’ಕ್ಕೆ ಯುವಜನರು ಮಾರುಹೋದದ್ದು ಆಶ್ಚರ್ಯವೇನಲ್ಲ.
ಏನು ವ್ಯತ್ಯಾಸ?:
ಸಾಂಪ್ರದಾಯಿಕ ಪತಂಜಲಿ ಯೋಗದಲ್ಲಿ ಧ್ಯಾನ ಪ್ರಾಣಯಾಮ ಮತ್ತು ದೈಹಿಕ ವಿವಿಧ ಯೋಗಾಸನಗಳು ಒಂದಕ್ಕೊಂದು ಪೂರಕವಾಗಿ ಇರುತ್ತದೆ. ಉಸಿರಾಟದ ಏರಿಳಿತಕ್ಕೆ ಅನುಗುಣವಾಗಿ ದೈಹಿಕ ಆಸನಗಳನ್ನು ಮಾಡಬೇಕಾಗುತ್ತದೆ ಮತ್ತು ಧ್ಯಾನಕ್ಕೆ ಮಹತ್ವ ನೀಡಲಾಗುತ್ತದೆ. ಮನಸ್ಸಿನ ಏಕಾಗ್ರತೆಗೆ ಕೂಡಾ ಅತಿಯಾದ ಮಹತ್ವ ನೀಡಲಾಗುತ್ತದೆ. ದೈಹಿಕ ಕಸರತ್ತು ಮತ್ತು ವ್ಯಾಯಾಮಕ್ಕೆ ಅತಿಯಾದ ಪ್ರಾಮುಖ್ಯತೆ ಇರುವುದಿಲ್ಲ. ಆದರೆ ಆಧುನಿಕ ತೇಲು ಯೋಗದಲ್ಲಿ ಧ್ಯಾನ ಮತ್ತು ಏಕಾಗ್ರತೆಗೆ ಹೆಚ್ಚಿನ ಮಹತ್ವ ಇರುವುದಿಲ್ಲ. ಅದೇ ರೀತಿ ಪ್ರಾಣಯಾಮಕ್ಕೂ ವಿಷೇಶ ಮಹತ್ವ ಇರುವುದಿಲ್ಲ. ದೈಹಿಕ ವ್ಯಾಯಾಮ ಮತ್ತು ಕಸರತ್ತುಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ದೇಹದ ಸಮತೋಲನ ಮತ್ತು ಹಾವಭಾವಗಳಿಗೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ.
ಸಾಂಪ್ರದಾಯಿಕ ಯೋಗಕ್ಕೆ ಹೋಲಿಸಿದ್ದಲ್ಲಿ ತೇಲು ಯೋಗದಲ್ಲಿ ದೇಹದ ಎಲ್ಲಾ ಭಾಗಕ್ಕೂ ಹೆಚ್ಚಿನ ರಕ್ತ ಪರಿಚಲನೆಯಾಗುತ್ತದೆ. ಜೀರ್ಣದ ಪ್ರಕ್ರಿಯೆಗೂ ಹೆಚ್ಚಿನ ಸಹಾಯವಾಗುತ್ತದೆ. ದೇಹದ ಸಮತೋಲನ ಹೆಚ್ಚಾಗಿ ನೆನಪು ಶಕ್ತಿ ಕೂಡಾ ವೃದ್ಧಿಸುತ್ತದೆ. ಮಾನಸಿಕವಾಗಿ ಹೆಚ್ಚಿನ ಆತ್ಮಸ್ಥೆರ್ಯ, ಸ್ನಾಯುಗಳ ಶಕ್ತಿ ವೃದ್ಧಿಯಾಗುವುದು ಮತ್ತು ಬೆನ್ನು ನೋವಿಗೆ ಹೆಚ್ಚಿನ ಪರಿಹಾರ ಹೀಗೆ ಹಲವಾರು ಹೆಚ್ಚಿನ ಲಾಭವಂತೂ ಇರುವುದು ಸತ್ಯವಾದ ಮಾತು. ಮನಸ್ಸಿಗೆ ಹೆಚ್ಚಿನ ಮುದ ನೀಡುವುದರ ಜೊತೆಗೆ, ದೈಹಿಕ ಕಸರತ್ತಿನಿಂದಾಗಿ ಸ್ನಾಯುಗಳ ಶಕ್ತಿ ಹೆಚ್ಚಾಗಿ ದೈಹಿಕವಾಗಿ ಹೆಚ್ಚು ದೃಢತೆ ಮತ್ತು ಸ್ಥಿರತೆ ಸಿಗುವುದು ಹೆಚ್ಚು ಎಂದು ಪರಿಣಿತರು ಹೇಳುತ್ತಾರೆ.
ಒಟ್ಟಿನಲ್ಲಿ ತೇಲು ಯೋಗ, ಸಾಂಪ್ರದಾಯಿಕ ಆಸನಗಳ ಜೊತೆಗೆ ನೃತ್ಯ, ಗಾಳಿಯಲ್ಲಿನ ಕಸರತ್ತು ಮತ್ತು ದೈಹಿಕ ಪರಿಶ್ರಮದಿಂದಾಗಿ ಹೆಚ್ಚು ಕೊಬ್ಬು ಕರಗಿಸುವ ಸಾಧ್ಯತೆ ಇದೆ. ಅದೇ ರೀತಿ ಗಾಳಿಯಲ್ಲಿ ಮಾಡುವ ಕಸರತ್ತಿನಿಂದಾಗಿ ಕುತ್ತಿಗೆ ಮತ್ತು ತಲೆಗೆ ಹೆಚ್ಚಿನ ಒತ್ತಡ ಇರುವುದಿಲ್ಲ. ಆದರೆ ಸಾಂಪ್ರದಾಯಿಕ ಯೋಗವನ್ನು ನೆಲದ ಮೇಲೆ ಮಾಡಬೇಕಿರುವುದರಿಂದ ಕುತ್ತಿಗೆ ಮತ್ತು ತಲೆಗೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆ ಹೆಚ್ಚಾಗಿರುತ್ತದೆ, ಅದೇ ರೀತಿ ಬೆನ್ನು ನೋವು ಇರುವವರು ಹೆಚ್ಚಿನ ಸಾಂಪ್ರದಾಯಿಕ ಆಸನಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.
ಕೊನೆ ಮಾತು:
ಆಂಟಿ ಗ್ರಾವಿಟಿ ಯೋಗ, ತೇಲಾಡುವ ಯೋಗ, ತೇಲು ಯೋಗ, ಜೋಕಾಲಿ ಯೋಗ ಹೀಗೆ ಹತ್ತು ಹಲವು ಹೆಸರುಗಳಿಂದ ಕರೆಯಲ್ಪಡುವ ಈ 21ನೇ ಶತಮಾನದ ಯೋಗ ದಿನೇ ದಿನೇ ಜನಪ್ರಿಯವಾಗುತ್ತಿರುವುದಂತೂ ನಿಜ. ಸೆಲೆಬ್ರೆಟಿಗಳು ಹೆಚ್ಚು ಇಷ್ಟಪಡುವ ಹದಿಹರೆಯದ ಯುವಕರನ್ನು ಸೂಜಿಗಲ್ಲಿನಲ್ಲಿ ಸೆಳೆಯುವ ಈ ‘ಜೋಕಾಲಿ ಯೋಗ’ ಸಾಂಪ್ರದಾಯಿಕ ಯೋಗ ಮಾಡುವ ಜನರನ್ನು ಹುಬ್ಬೇರಿಸುವಂತೆ ಮಾಡಿ, ಜನ ಮಾನಸದಲ್ಲಿ ತನ್ನದೇ ಆದ ಕುತೂಹಲ ಮತ್ತು ಕೌತುಕವನ್ನು ಹುಟ್ಟು ಹಾಕಿದೆ. ಅರ್ಧ ಗಂಟೆಗಳ ಜೋಕಾಲಿ ಯೋಗ ಏನಿಲ್ಲವೆಂದರೂ ಎರಡು ಗಂಟೆಗಳ ಸಾಂಪ್ರದಾಯಿಕ ಯೋಗಕ್ಕೆ ಸಮ ಎಂದು ಈ ಜೋಕಾಲಿ ಯೋಗದ ಪ್ರತಿಪಾದಕರು ವಾದಿಸುತ್ತಾರೆ. ಸಾಮಾನ್ಯ ಅರ್ಧ ಗಂಟೆಗಳ ಜೋಕಾಲಿ ಯೋಗದಿಂದ ಒಬ್ಬ ವ್ಯಕ್ತಿ ಏನಿಲ್ಲವೆಂದರೂ ಎರಡು ಗಂಟೆಗಳ ಸಾಂಪ್ರದಾಯಿಕ ಯೋಗದಿಂದ ಕರಗಿಸುವ ಕೊಬ್ಬನ್ನು ಕರಗಿಸಲು ಸಾಧ್ಯ ಎಂದು ಈ ಜೋಕಾಲಿ ಯೋಗದ ಹಿಂಬಾಲಕರು ಸಮಾಜಾಯಿಷಿ ನೀಡುತ್ತಾರೆ.
ಆದರೆ ಸಾಂಪ್ರದಾಯಿಕ ಯೋಗ ಪ್ರತಿಪಾದಕರು ಮಾತ್ರ ಬರೀ ಕೊಬ್ಬು ಕರಗಿಸಲು ನೀವು ಜೋಕಾಲಿ ಯೋಗ ಮಾಡಬೇಕಿಲ್ಲ. ಸ್ವಿಮಿಂಗ್, ಸೈಕ್ಲಿಂಗ್, ಬಿರುಸುನಡಿಗೆ ಮಾಡಿ ಎಂದು ಎದುರೇಟು ನೀಡಿರುವುದಂತೂ ನಿಜ. ಆದರೆ ಒಂದಂತೂ ನಿಜ ಸಾಂಪ್ರದಾಯಿಕ ಯೋಗದಲ್ಲಿ ಧ್ಯಾನ, ಏಕಾಗ್ರತೆ, ಉಸಿರಾಟಕ್ಕೆ ಹೆಚ್ಚು ಮಹತ್ವ ನೀಡಿ ಯೋಗ ಆಸನಗಳನ್ನು ಮಾಡಿದರೆ, ಜೋಕಾಲಿ ಯೋಗದಲ್ಲಿ ದೈಹಿಕ ಕಸರತ್ತು, ದೈಹಿಕ ಸಮತೋಲನ ಮತ್ತು ವ್ಯಾಯಾಮಕ್ಕೆ ಹೆಚ್ಚು ಹೊತ್ತು ನೀಡಲಾಗುತ್ತದೆ. ಸಾಂಪ್ರದಾಯಿಕ ಯೋಗವನ್ನು ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಎಲ್ಲೆಂದರಲ್ಲಿ ಮಾಡಬಹುದು. ಆದರೆ ಜೋಕಾಲಿ ಯೋಗವನ್ನು ಎಲ್ಲರಿಗೂ ಎಲ್ಲೆಂದರಲ್ಲಿ ಮಾಡಲು ಸಾಧ್ಯವಿಲ್ಲ. ಸೂಕ್ತ ತರಬೇತಿ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆಯಲ್ಲಿ ಮಾತ್ರ ಮಾಡಬಹುದಾಗಿದೆ.
ಆರಂಭದಲ್ಲಿ ಕಷ್ಟವೆನಿಸಿದರೂ, ಕ್ರಮೇಣ ದೇಹದ ಮೇಲೆ ನಿಯಂತ್ರಣ ಸಾಧಿಸಿದ್ದಲ್ಲಿ ಸುಲಭವಾಗಿ ಮಾಡಬಹುದು. ಅದು ಏನೇ ಇರಲಿ ಯೋಗ ಎನ್ನುವುದು ದೈಹಿಕ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕ ಎಂದು ನಮಗೆ ತಿಳಿದೇ ಇದೆ. ಯುವಜನರು ಸಾಂಪ್ರದಾಯಿಕ ಹಠ ಯೋಗದಿಂದ ವಿಮುಖರಾದರೂ, ಹೆಚ್ಚು ವೈಭವಿಕರಿಸಿದ ಮತ್ತು ಆಕರ್ಷಕವಾಗಿರುವ ಜೋಕಾಲಿ ಯೋಗ ಮಾಡುವುದರಿಂದ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಂಡಲ್ಲಿ ಸುಂದರ ಸುದೃಢ ಆರೋಗ್ಯವಂತ, ಸಮಾಜ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
-ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671 323
ಮೊ : 09845135787
Key Words: Aerial Yoga, International Yoga Day, World Yoga Day, ವಿಶ್ವ ಯೋಗ ದಿನ, ಯೋಗಾಭ್ಯಾಸ, ಏರಿಯಲ್ ಯೋಗ, ಜೋಕಾಲಿ ಯೋಗ
(ಉಪಯುಕ್ತ ನ್ಯೂಸ್)
Visit: Upayuktha Directory- You get here You want
‘ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ