ವಿದುಷಿ ವಿಂದ್ಯಾಶ್ರೀ ರೈಗೆ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Shreya Hegde
0

ಸಂತ ಫಿಲೋಮಿನಾ ಕಾಲೇಜಿನಿಂದ ಅಭಿನಂದನೆ




ಪುತ್ತೂರು: ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ತೃತೀಯ ವರ್ಷದ ಬಿ.ಎಸ್ಸಿ ವಿದ್ಯಾರ್ಥಿನಿ, ವಿದುಷಿ ವಿಂದ್ಯಾಶ್ರೀ ರೈ ಅವರು 'ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ'ಗೆ ಭಾಜನರಾಗಿದ್ದಾರೆ. ಈ ಸಾಧನೆಗೆ ಕಾಲೇಜಿನ ಸಂಚಾಲಕರಾದ ಅತಿ ವಂದನೀಯ ಡಾ. ಜಾನ್ ಬಿ. ಸಲ್ದಾನ್ಹ, ಪ್ರಾಚಾರ್ಯ ವಂದನೀಯ ಡಾ. ಆಂಟನಿ ಪ್ರಕಾಶ್ ಮೊಂತೆರೋ ಹಾಗೂ ಕಾಲೇಜಿನ ಗುರುಬಳಗ ಮತ್ತು ವಿದ್ಯಾರ್ಥಿ ವೃಂದ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.


ಹಿನ್ನೆಲೆ ಮತ್ತು ಶಿಕ್ಷಣ

ಉಮೇಶ್ ರೈ ಹಾಗೂ ಸಂಗೀತ ಕಲಾವಿದೆ ಶೋಭಾ ಯು. ರೈ ದಂಪತಿಯ ಪುತ್ರಿಯಾದ ವಿಂದ್ಯಾಶ್ರೀ ರೈ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ದಕ್ಷಿಣ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುರಿಯದಲ್ಲಿ ಪೂರ್ಣಗೊಳಿಸಿದರು. ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿ, ಪ್ರಸ್ತುತ ಅದೇ ಸಂಸ್ಥೆಯ ಸ್ವಾಯತ್ತ ಕಾಲೇಜಿನಲ್ಲಿ ತೃತೀಯ ವರ್ಷದ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಶೈಕ್ಷಣಿಕವಾಗಿಯೂ ಅತ್ಯುತ್ತಮ ಸಾಧನೆ ಮಾಡಿರುವ ಇವರು 10ನೇ ತರಗತಿಯಲ್ಲಿ (2021-22) 570 (92%) ಅಂಕಗಳನ್ನು ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ (PCMB) ವಿಭಾಗದಲ್ಲಿ 522 (87%) ಅಂಕಗಳನ್ನು ಪಡೆಯುವ ಮೂಲಕ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.



ಭರತನಾಟ್ಯ ಮತ್ತು ಸಂಗೀತ ಪಯಣ

ತಮ್ಮ 3ನೇ ವಯಸ್ಸಿನಿಂದಲೇ ಕರ್ನಾಟಕ ಕಲಾಶ್ರೀ ವಿದುಷಿ ನಯನಾ ವಿ. ರೈ ಕುದ್ಕಾಡಿ ಹಾಗೂ ವಿದುಷಿ ಸ್ವಸ್ತಿಕಾ ಆರ್. ಶೆಟ್ಟಿ ಅವರಲ್ಲಿ ಭರತನಾಟ್ಯ ಅಭ್ಯಾಸ ಪ್ರಾರಂಭಿಸಿದ ವಿಂದ್ಯಾಶ್ರೀ, ಭರತನಾಟ್ಯ ಜೂನಿಯರ್, ಸೀನಿಯರ್, ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಶೇಕಡಾ 81% ಅಂಕಗಳೊಂದಿಗೆ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಮುಂಬೈನ ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿಯ ಭರತನಾಟ್ಯ ಪ್ರಥಮ ಪರೀಕ್ಷೆಯಲ್ಲಿ ಶೇಕಡಾ 86.67% ಅಂಕಗಳನ್ನು ಪಡೆದಿದ್ದಾರೆ. ಸಂಗೀತದಲ್ಲೂ ಆಸಕ್ತಿ ಹೊಂದಿರುವ ಇವರು ಜೂನಿಯರ್ ಗ್ರೇಡ್ ಪರೀಕ್ಷೆ ಮುಗಿಸಿದ್ದು, ಪ್ರಸ್ತುತ ತಮ್ಮ ತಾಯಿ ಸಂಗೀತ ಕಲಾವಿದೆ ಶೋಭಾ ಉಮೇಶ್ ಅವರಿಂದ ಸೀನಿಯರ್ ಗ್ರೇಡ್‌ಗೆ ಅಭ್ಯಾಸ ನಡೆಸುತ್ತಿದ್ದಾರೆ.


ಪ್ರದರ್ಶನ ಮತ್ತು ಸಾಂಸ್ಕೃತಿಕ ಸಾಧನೆಗಳು

ಮೈಸೂರಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಆಷಾಢ ಉತ್ಸವ, ನವರಾತ್ರಿ ಉತ್ಸವ, ಪೆರುಮ್ ಕಲಿಯಾಟ ಹಾಗೂ ಉದಯ ಟಿವಿಯ 'ಹೆಮ್ಮೆಯ ಕನ್ನಡಿಗ' ಸೇರಿದಂತೆ ಕರ್ನಾಟಕ ಮತ್ತು ಕೇರಳದಾದ್ಯಂತ ಹಲವಾರು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ. ರಾಷ್ಟ್ರ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿದ ತಂಡದಲ್ಲಿ ಭಾಗವಹಿಸಿದ್ದ ಇವರು, ಕಲಾ ತಪಸ್ವಿ ತಂಡ ನಡೆಸಿದ "ಗೆಜ್ಜೆನಾದ 2025" ಏಕವ್ಯಕ್ತಿ ನೃತ್ಯ ಸ್ಪರ್ಧೆಯಲ್ಲಿ 'ರನ್ನರ್ ಅಪ್' ಸ್ಥಾನ ಪಡೆದಿದ್ದಾರೆ. ಜೊತೆಗೆ ಶ್ರೀನಿವಾಸ್ ಕಾಲೇಜು ವಲಚ್ಚಿಲ್‌ನಲ್ಲಿ ನಡೆದ ಭರತನಾಟ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇದಲ್ಲದೆ, ಪುತ್ತೂರಿನ ಕುರಿಯದಲ್ಲಿ 'ವಿಶ್ವಗುರು ಭರತನಾಟ್ಯ ಮತ್ತು ಸಂಗೀತ ಕಲಾ ಶಾಲೆ' ನಡೆಸುತ್ತಿದ್ದು, ಇವರ ನಿರ್ದೇಶನದ ನೃತ್ಯ ತಂಡಗಳು ಮಂಗಲ್ಪಾಡಿ (ದ್ವಿತೀಯ) ಮತ್ತು ಕುಕ್ಕಾಜೆಯಲ್ಲಿ (ತೃತೀಯ) ನಡೆದ ನೃತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ.


ಅಭಿನಯ ಮತ್ತು ಕಾರ್ಯಕ್ರಮ ನಿರೂಪಣೆ

ನೃತ್ಯ-ಸಂಗೀತದೊಂದಿಗೆ ಅಭಿನಯ ರಂಗದಲ್ಲೂ ಸಕ್ರಿಯರಾಗಿರುವ ಇವರು, 'ಡ್ರೀಮ್ ಕ್ಯಾಚರ್ಸ್ ಫಿಲಂ ಆಕ್ಟಿಂಗ್ ಕ್ಲಾಸ್'ನಲ್ಲಿ 6 ತಿಂಗಳ ಅಭಿನಯ ತರಬೇತಿ ಪೂರ್ಣಗೊಳಿಸಿದ್ದಾರೆ. 'ಪೆನ್ಸಿಲ್ ಬಾಕ್ಸ್' ಚಲನಚಿತ್ರದ ಮೂಲಕ ಅಭಿನಯ ರಂಗಕ್ಕೆ ಪಾದಾರ್ಪಣೆ ಮಾಡಿ, ನಂತರ 'ಹೊಸ ತಿರುವು', 'ಧನ್ವಂತರಿ ಮಿಸ್ಸಿಂಗ್' ಕಿರುಚಿತ್ರಗಳಲ್ಲಿ ಹಾಗೂ 'ತಿಂಗೊಳ್ದ ಬೊಲ್ಪು' ತುಳು ಆಲ್ಬಮ್ ಹಾಡಿನಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಯಶಸ್ವಿ ನಿರೂಪಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.


ಸ್ಪರ್ಧೆಗಳು ಮತ್ತು ಪಡೆದ ಗೌರವಗಳು

ಭಾಷಣ ಮತ್ತು ಚರ್ಚಾಸ್ಪರ್ಧೆ: ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ ಹಾಗೂ ಜಿಲ್ಲಾ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪಿಯುಸಿ ಹಂತದ ಚರ್ಚಾಸ್ಪರ್ಧೆಯಲ್ಲಿ ಮೂಡಬಿದ್ರೆಯಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ, ಮಂಡ್ಯದಲ್ಲಿ ನಡೆದ ವಿಭಾಗೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದು, ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ರೋಟರಿ ಕ್ಲಬ್ ಉಪ್ಪಿನಂಗಡಿ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಭಾವಗೀತೆ ಸ್ಪರ್ಧೆ: ರೋಟರಿ ಕ್ಲಬ್ ಉಪ್ಪಿನಂಗಡಿ ಸ್ಪರ್ಧೆಯಲ್ಲಿ ತೃತೀಯ ಹಾಗೂ ವಿವೇಕಾನಂದ ಪದವಿ ಕಾಲೇಜಿನ "ಮೇಧಾನ್ವೇಷ" ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ವಿಶೇಷ ಪ್ರಶಸ್ತಿ: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ 2023-24ನೇ ಸಾಲಿನ "ಬಹುಮುಖ ಪ್ರತಿಭೆ" ಪ್ರಶಸ್ತಿಗೆ ಭಾಜನರಾಗಿದ್ದಾರೆ.

إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top