ವೇದಮೂರ್ತಿ ಅಲಂಗಾರು ಈಶ್ವರ ಭಟ್ ಅಸ್ತಂಗತ: ಪೇಜಾವರ ಶ್ರೀ ಸಂತಾಪ

Upayuktha
0



ಮೂಡಬಿದಿರೆ: ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು, ಹಿರಿಯ ಜ್ಯೋತಿಷಿ, ಧಾರ್ಮಿಕ ಮಾರ್ಗದರ್ಶಕ ಹಾಗೂ ಅನನ್ಯ ಕಲಾಪೋಷಕರಾದ ವೇದಮೂರ್ತಿ ಶ್ರೀ ಅಲಂಗಾರು ಈಶ್ವರ ಭಟ್ ಅವರು ವಿಧಿವಶರಾಗಿದ್ದು, ಅವರ ನಿಧನಕ್ಕೆ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಕಂಬನಿ ಮಿಡಿದಿದ್ದಾರೆ.


ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದ ಈಶ್ವರ ಭಟ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಶ್ರೀಗಳು, ಅಲಂಗಾರು ಕ್ಷೇತ್ರದ ಸಮಗ್ರ ಏಳಿಗೆ ಹಾಗೂ ಧಾರ್ಮಿಕ-ಸಾಮಾಜಿಕ ಕಾರ್ಯಗಳಲ್ಲಿ ಅವರ ಸೇವೆಯನ್ನು ಸ್ಮರಿಸಿದ್ದಾರೆ.


ಪೇಜಾವರ ಶ್ರೀಗಳ ಸಂತಾಪ ಸಂದೇಶದ ವಿವರ:

"ಧರ್ಮಕ್ಷೇತ್ರವೊಂದರ ಮುಖ್ಯಸ್ಥರು ಹೇಗಿರಬೇಕು ಅನ್ನುವುದಕ್ಕೆ ಮಾದರಿಯಾಗಿದ್ದವರು ಶ್ರೀ ಈಶ್ವರ ಭಟ್ಟರು. ಅಲಂಗಾರು ಮಹಾಲಿಂಗೇಶ್ವರ ಕ್ಷೇತ್ರದ ಸಮಗ್ರ ಏಳಿಗೆ, ಸುವ್ಯವಸ್ಥೆ ಹಾಗೂ ದೇವಳದ ಮೂಲಕ ಹತ್ತಾರು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರು ಅಪಾರ ಭಕ್ತರ ಗೌರವ ಹಾಗೂ ಅಭಿಮಾನಕ್ಕೆ ಪಾತ್ರರಾಗಿದ್ದರು" ಎಂದು ಶ್ರೀಪಾದರು ಬಣ್ಣಿಸಿದ್ದಾರೆ.


"ಅವರ ನಿಧನದಿಂದ ನಾಡಿನ ಧಾರ್ಮಿಕ ಕ್ಷೇತ್ರಕ್ಕೆ ಓರ್ವ ಧೀಮಂತ ವ್ಯಕ್ತಿಯ ನಷ್ಟವಾಗಿದೆ. ಪೇಜಾವರ ಮಠದ ಮೇಲೆಯೂ ಅಪಾರ ಭಕ್ತಿ ಇಟ್ಟುಕೊಂಡಿದ್ದ ಅವರನ್ನು ಎರಡು ವರ್ಷಗಳ ಹಿಂದೆ ಪೆರಣಂಕಿಲದಲ್ಲಿ ನಡೆದ 'ಭಕ್ತಿಸಿದ್ಧಾಂತೋತ್ಸವ'ದಲ್ಲಿ ಪುರಸ್ಕರಿಸಿ ಗೌರವಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇವೆ. ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ನಮ್ಮ ಆರಾಧ್ಯಮೂರ್ತಿ ಶ್ರೀ ರಾಮವಿಠಲ ದೇವರಲ್ಲಿ ಪ್ರಾರ್ಥಿಸುತ್ತೇವೆ" ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top