ಕೆಲವು ಪ್ರವಾಸಗಳು ಕೇವಲ ಸ್ಥಳಗಳ ದರ್ಶನಕ್ಕೆ ಸೀಮಿತವಾಗದೆ, ಬದುಕಿನ ಸುಂದರ ಕಥನಗಳಾಗಿ ಉಳಿಯುತ್ತವೆ. ದೈಹಿಕವಾಗಿ ಒಂದಿಷ್ಟು ಪ್ರಯಾಸವಿದ್ದರೂ, ಮಾನಸಿಕವಾಗಿ ಅಪಾರ ನೆಮ್ಮದಿ ನೀಡುವ ಅಂತಹದ್ದೊಂದು ಅಪೂರ್ವ ಯಾತ್ರೆಯೇ ಹನುಮಂತನ ಜನ್ಮಭೂಮಿ ‘ಅಂಜನಾದ್ರಿ ಬೆಟ್ಟ’ದ ಪಯಣ.
ಮಂತ್ರಾಲಯದಲ್ಲಿ ಗುರುರಾಯರ ದರ್ಶನ ಹಾಗೂ ಪಂಚಮುಖಿ ಆಂಜನೇಯನ ಪ್ರಾರ್ಥನೆಯ ಬಳಿಕ, ಶಿರೂರಿನ ಆತ್ಮೀಯ ಗೆಳೆಯರು ಮತ್ತು ಕುಟುಂಬದವರು ಸೇರಿ ಸುಮಾರು 20 ಜನರ ನಮ್ಮ ತಂಡ ಅಂಜನಾದ್ರಿಯತ್ತ ಸಾಗಿತು.
ಬಿಸಿಲು, ಹಸಿವು ಮತ್ತು ಮಗನ ಅಚಲ ಸಂಕಲ್ಪ
ಕೊಪ್ಪಳ ಜಿಲ್ಲೆಯ ಆನೆಗುಂದಿ ಸಮೀಪದ ಅಂಜನಾದ್ರಿ ಬೆಟ್ಟದ ತಪ್ಪಲಿಗೆ ತಲುಪುವಾಗ ಮಧ್ಯಾಹ್ನ 2:30. ಆಕಾಶದಿಂದ ಬೆಂಕಿಯ ಉಂಡೆ ಸುರಿಯುತ್ತಿರುವಂತಹ ಉರಿ ಬಿಸಿಲು; ಹೊಟ್ಟೆಯಲ್ಲಿ ಹಸಿವು. ಬೆಟ್ಟದ ಬುಡದಲ್ಲಿದ್ದ 560ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹಸುಬಿಸಿಲಿನಲ್ಲಿ ಹತ್ತುವುದು ಹೇಗೆಂಬ ಅಳುಕು ಎಲ್ಲರ ಮುಖದಲ್ಲೂ ಇತ್ತು.
ಅಷ್ಟರಲ್ಲಿ ನನ್ನ ಕಿರಿಯ ಮಗ ಉತ್ಥಾನ, "ಪಪ್ಪಾ, ನೀವು ಯಾರೂ ಬರದಿದ್ದರೂ ಪರವಾಗಿಲ್ಲ, ನಾನೊಬ್ಬನೇ ಬೆಟ್ಟ ಹತ್ತಿ ನನ್ನ ಹನುಮನನ್ನು ನೋಡಿಕೊಂಡು ಬರುತ್ತೇನೆ" ಎಂದು ಭಾವುಕನಾಗಿ ಅತ್ತ. ಟಿವಿ, ಯೂಟ್ಯೂಬ್‌ಗಳಲ್ಲಿ ಹನುಮಂತನ ಕಥೆಗಳನ್ನು ನೋಡಿ ಬೆಳೆದಿದ್ದ ಅವನ ಪುಟ್ಟ ಮನಸ್ಸಿನಲ್ಲಿ ಆರಾಧ್ಯ ದೈವದ ಜನ್ಮಸ್ಥಳವನ್ನು ಕಣ್ಣಾರೆ ಕಾಣಬೇಕೆಂಬ ಹಂಬಲವಿತ್ತು. ಬಿಸಿಲು, ಆಯಾಸ ಯಾವುದೂ ಅವನಿಗೆ ಮುಖ್ಯವಾಗಿರಲಿಲ್ಲ. ಮಗನ ಆ ಅಚಲ ನಿರ್ಧಾರ ನಮ್ಮೆಲ್ಲರಲ್ಲೂ ಹೊಸ ಉತ್ಸಾಹ ತುಂಬಿತು.
ರಾಮನಾಮದ ಸ್ಮರಣೆಯೊಂದಿಗೆ ಬೆಟ್ಟದ ಹಾದಿ
ಬೆಟ್ಟದ ಮಹಾದ್ವಾರದಲ್ಲಿ ಶ್ರೀರಾಮನ ಪಾದಕ್ಕೆ ನಮಸ್ಕರಿಸಿ ಯಾತ್ರೆ ಆರಂಭವಾಯಿತು. ಕೈಯಲ್ಲಿ ಹನುಮಧ್ವಜ, ಕೊರಳಲ್ಲಿ ಶಾಲು ಧರಿಸಿ ಮೇಲೇರುವಾಗ ಅಯೋಧ್ಯೆಯ ನೆನಪು ಮರುಕಳಿಸಿತು. ದಾರಿಯುದ್ದಕ್ಕೂ ಪ್ರಕೃತಿಯ ಕೈಚಳಕದಂತೆ ಒಂದರ ಮೇಲೊಂದು ನಿಂತಿರುವ ಬೃಹತ್ ಬಂಡೆಗಳು ವಿಸ್ಮಯ ಮೂಡಿಸಿದವು.
ಉರಿ ಬಿಸಿಲು ಮತ್ತು ಏರು ಮೆಟ್ಟಿಲುಗಳಿಂದ ಕೆಲವರು ಬಳಲಿದಾಗ, ಹನುಮಾನ್ ಚಾಲೀಸಾ ಪಠಣ ಹಾಗೂ ದಾರಿಯಲ್ಲಿ ಸಿಕ್ಕವರ "ಇನ್ನೊಂದಿಷ್ಟು ಮೆಟ್ಟಿಲುಗಳಷ್ಟೇ ಇದೆ, ಹತ್ತಿ ಬನ್ನಿ" ಎನ್ನುವ ಪ್ರೋತ್ಸಾಹದ ಮಾತುಗಳು ಹೊಸ ಶಕ್ತಿ ತುಂಬಿದವು. ಅಪರಿಚಿತರ ನಡುವೆಯೂ ಭಕ್ತಿಯೊಂದು ಸುಂದರ ಸಂಬಂಧವನ್ನು ಬೆಸೆದಿತ್ತು.
ಕಣ್ಣೆದುರು ತೆರೆದುಕೊಂಡ ಹಂಪೆಯ ನಿಸರ್ಗ ವೈಭವ
ಅರ್ಧ ಬೆಟ್ಟ ದಾಟುತ್ತಿದ್ದಂತೆ ಸುತ್ತಲಿನ ದೃಶ್ಯಗಳು ಮಂತ್ರಮುಗ್ಧಗೊಳಿಸಿದವು. ಮೇಲಿನಿಂದ ಕಂಡ ಬೃಹತ್ ಬಂಡೆಗಳು, ಹಸಿರು ಕಣಿವೆಗಳು, ತುಂಗಭದ್ರೆಯ ಪರಿಸರ ಮತ್ತು ಐತಿಹಾಸಿಕ ಹಂಪೆಯ ವಿಶಾಲ ಭೂಪ್ರದೇಶ ರೋಮಾಂಚನಕಾರಿಯಾಗಿತ್ತು. ಪುರಾಣದ ಕಿಷ್ಕಿಂಧೆಯ ನೆಲ ಹಾಗೂ ಇತಿಹಾಸದ ಹೆಜ್ಜೆಗುರುತುಗಳು ಒಂದೇ ಕಡೆ ಸಂಗಮಿಸಿದ ಆ ದೃಶ್ಯಗಳು ಪದಗಳಿಗೆ ನಿಲುಕದವು.
ಹನುಮನ ಸನ್ನಿಧಿಯಲ್ಲಿ ಧನ್ಯತೆಯ ಕ್ಷಣ
ಅಂತೂ ಎಲ್ಲರೂ ಬೆಟ್ಟದ ತುದಿ ತಲುಪಿದೆವು. ದೇವಸ್ಥಾನದ ಎದುರಿನ ಧರ್ಮಜಾಗೃತಿ ಗಂಟೆಗಳ ನಿನಾದದ ನಡುವೆ ಹನುಮಂತನ ದರ್ಶನ ಪಡೆದ ಕ್ಷಣ ಅವಿಸ್ಮರಣೀಯ. ಬೆಟ್ಟ ಹತ್ತುವ ಮುನ್ನ ಕಣ್ಣೀರಿಟ್ಟಿದ್ದ ಮಗ ಉತ್ಥಾನನ ಮುಖದಲ್ಲಿದ್ದ ಆ ತೃಪ್ತಿಯ ನಗು ನನಗೆ ಯಾವುದೇ ಪ್ರವಾಸದ ಸಾಧನೆಗಿಂತ ದೊಡ್ಡದಾಗಿ ಕಂಡಿತು. ಮನಸ್ಸಿನಲ್ಲಿ ಅಚಲ ಸಂಕಲ್ಪವಿದ್ದರೆ ದಾರಿಯ ಕಷ್ಟಗಳು ಸಣ್ಣದಾಗಿ ಕಾಣುತ್ತವೆ ಎಂಬುದನ್ನು ಅಂದು ಮಗ ನಮಗೆ ಕಲಿಸಿಕೊಟ್ಟನು.
ಬೆಟ್ಟ ಇಳಿಯುವಾಗ ಆಯಾಸವೆಲ್ಲ ಕರಗಿ, ಮನಸ್ಸು ಮಾತ್ರ ಹನುಮನ ಸನ್ನಿಧಿಯಲ್ಲೇ ಉಳಿದಿತ್ತು.
ಅಂಜನಾದ್ರಿ ಕೇವಲ ಧಾರ್ಮಿಕ ಶ್ರದ್ಧೆಯ ತಾಣವಲ್ಲ; ಅದು ನಂಬಿಕೆ, ಭಕ್ತಿ ಮತ್ತು ಒಗ್ಗಟ್ಟಿನ ಸಂಕೇತ. ಹಂಪೆಯಿಂದ 30 ಕಿ.ಮೀ ದೂರದಲ್ಲಿರುವ ಈ ಪವಿತ್ರ ನೆಲದ ಅನುಭವದ ಎತ್ತರದಿಂದ ನಮ್ಮ ಮನಸ್ಸು ಎಂದಿಗೂ ಕೆಳಗಿಳಿಯುವುದಿಲ್ಲ!
ಜೈ ಶ್ರೀರಾಮ್! ಜೈ ಹನುಮಾನ್!
- ಉಮೇಶ ಮುಂಡಳ್ಳಿ, ಭಟ್ಕಳ


