ಎಐ ಚಿತ್ರ (ಇಲ್ಲಿರುವವರು ನೈಜ ವ್ಯಕ್ತಿಗಳಲ್ಲ)
ದೀಪಾವಳಿ ಬಂತೆಂದರೆ ಸಾಕು, ಎಲ್ಲರ ಮನೆ-ಮನಗಳಲ್ಲಿ ಬೆಳಕಿನ ಹಬ್ಬದ ಸಂಭ್ರಮ ಮನೆಮಾಡುತ್ತದೆ. ಮನೆಗಳ ಮುಂದೆ ಹಣತೆಗಳ ಸಾಲು, ಬಣ್ಣಬಣ್ಣದ ವಿದ್ಯುತ್ ದೀಪಗಳು, ಸಿಹಿ ತಿಂಡಿಗಳು ಹಬ್ಬದ ವಾತಾವರಣವನ್ನು ಇಮ್ಮಡಿಗೊಳಿಸುತ್ತವೆ. ದೀಪಾವಳಿಯ ರಾತ್ರಿ ಆಕಾಶದಲ್ಲಿ ನಗುವ ಚಂದಿರನ ಜೊತೆಜೊತೆಗೆ ಬಣ್ಣಬಣ್ಣದ ಪಟಾಕಿಗಳೂ ಮಿನುಗುತ್ತವೆ. ಆದರೆ ಈ ಸಂಭ್ರಮದ ನಡುವೆಯೇ ಎಲ್ಲೋ ಒಂದು ಕಡೆ ಮಗುವಿನ ಕಣ್ಣಿಗೆ ಬ್ಯಾಂಡೇಜ್ ಸುತ್ತಿಕೊಂಡಿರುವ ದೃಶ್ಯವೂ ಕಣ್ಣಮುಂದೆ ಬರುತ್ತದೆ. ಕ್ಷಣಕಾಲದ ಸಂಭ್ರಮಕ್ಕಾಗಿ ಕಣ್ಣಿನ ದೃಷ್ಟಿಯನ್ನೇ ಅಪಾಯಕ್ಕೆ ಒಡ್ಡುವ ದುಸ್ಥಿತಿ ಹಲವಾರು ಮನೆಗಳಲ್ಲಿ ಪ್ರತಿವರ್ಷ ಮರುಕಳಿಸುತ್ತಲೇ ಇದೆ. ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ವಿಭಾಗದಲ್ಲಿ ದಾಖಲಾಗುವವರ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ.
ಆಸ್ಪತ್ರೆಗಳ ಅಂಕಿ-ಅಂಶಗಳು ಹೇಳುವ ಕಥೆ:
2024ರ ದೀಪಾವಳಿ ಸಂದರ್ಭದಲ್ಲಿ ಬೆಂಗಳೂರಿನ ಆರು ಕಣ್ಣಿನ ಆಸ್ಪತ್ರೆಗಳಲ್ಲಿ ಸರಿಸುಮಾರು 174 ಮಂದಿ ಪಟಾಕಿಯಿಂದ ಉಂಟಾದ ಕಣ್ಣಿನ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದರು. ಅಚ್ಚರಿಯ ಸಂಗತಿಯೆಂದರೆ, ಇದರಲ್ಲಿ ಬರೋಬ್ಬರಿ 93 ಗಾಯಾಳುಗಳು ಪುಟ್ಟ ಮಕ್ಕಳಾಗಿದ್ದರು! ಇನ್ನು 2025ರಲ್ಲಿ ಈ ಸಂಖ್ಯೆ 186ಕ್ಕೆ ಏರಿಕೆಯಾಯಿತು. ಇದರಿಂದ ನಾವು ಅರ್ಥಮಾಡಿಕೊಳ್ಳಬೇಕಾದ ಕಹಿ ಸಂಗತಿಯೆಂದರೆ, ಎಷ್ಟೇ ಜಾಗೃತಿ ಮೂಡಿಸಿದರೂ ಪಟಾಕಿಯಿಂದ ಕಣ್ಣಿಗೆ ಆಗುವ ಗಾಯಗಳ ಸಮಸ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿಲ್ಲ ಎಂಬುದು.
ಮಕ್ಕಳ ಸುರಕ್ಷತೆ ಮತ್ತು ನಮ್ಮ ನಿರ್ಲಕ್ಷ್ಯ:
ಪ್ರತಿಯೊಬ್ಬರಿಗೂ ಕಣ್ಣು ಅತ್ಯಮೂಲ್ಯವಾದ ಅಂಗ. ಅದರಲ್ಲೂ ಮಕ್ಕಳ ಕಣ್ಣಿನ ಸುರಕ್ಷತೆ ನಮ್ಮ ಪ್ರಥಮ ಆದ್ಯತೆಯಾಗಬೇಕು. ಪಟಾಕಿ ಸಿಡಿಸುವುದರಿಂದ ಅಪಾಯವಿದೆ ಎಂಬ ಅರಿವಿದ್ದರೂ, ಕಿರಿಯರ ಎದುರೇ ಪಟಾಕಿ ಹಚ್ಚುವ ಪ್ರವೃತ್ತಿ ಹೆಚ್ಚಾಗಿದೆ. ಪಟಾಕಿ ಸಿಡಿಸುವಾಗ ಹತ್ತಿರ ನಿಲ್ಲುವುದು, ಹೊತ್ತಿಕೊಂಡ ಪಟಾಕಿಯನ್ನು ಕೈಯಲ್ಲಿ ಹಿಡಿಯುವುದು ಅಥವಾ ಪಟಾಕಿ ಸಿಡಿಯಲಿಲ್ಲವೆಂದು ಮರು ಪರೀಕ್ಷೆಗೆ ಮುಂದಾಗುವುದು ನೇರವಾಗಿ ಅಪಾಯಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಕಣ್ಣಿಗೆ ತೀವ್ರ ಹಾನಿಯಾಗಿ, ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಸಂಭವವಿರುತ್ತದೆ. ಹೀಗಾಗಿ ಮಕ್ಕಳಿಗೆ ಇದರ ಅಪಾಯದ ಬಗ್ಗೆ ಮನವರಿಕೆ ಮಾಡಿಕೊಡುವುದು ಮತ್ತು ಪಟಾಕಿಗಳಿಂದ ದೂರವಿಡುವುದು ಅತ್ಯಂತ ಅವಶ್ಯಕ.
ದಾರಿಹೋಕರಿಗೂ ತಪ್ಪದ ಆಪತ್ತು:
ಪಟಾಕಿಯಿಂದ ಆಗುವ ಅಪಾಯ ಕೇವಲ ಪಟಾಕಿ ಸಿಡಿಸುವವರಿಗಷ್ಟೇ ಸೀಮಿತವಾಗಿಲ್ಲ; ರಸ್ತೆಯಲ್ಲಿ ನಡೆದುಕೊಂಡು ಹೋಗುವವರು ಹಾಗೂ ಪಕ್ಕದಲ್ಲಿ ನಿಂತು ವೀಕ್ಷಿಸುವವರೂ ಇದರ ಬಲಿಪಶುಗಳಾಗುತ್ತಾರೆ. 2024ರಲ್ಲಿ ನಾರಾಯಣ ನೇತ್ರಾಲಯದಲ್ಲಿ ದಾಖಲಾಗಿದ್ದ 73 ಗಾಯಾಳುಗಳಲ್ಲಿ ಬರೋಬ್ಬರಿ 37 ಮಂದಿ ದಾರಿಯಲ್ಲಿ ಹೋಗುತ್ತಿದ್ದ ಮುಗ್ಧ ದಾರಿಹೋಕ10ರೇ ಆಗಿದ್ದರು! ಪಟಾಕಿ ಸಿಡಿಸುವವರ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದಾಗಿ ಯಾವುದೇ ತಪ್ಪು ಮಾಡದ ನಿರಪರಾಧಿಗಳೂ ಸಹ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯಾದ್ಯಂತ ಆತಂಕ:
ಪಟಾಕಿ ಅಪಘಾತಗಳು ಕೇವಲ ರಾಜಧಾನಿಗೆ ಮಾತ್ರ ಸೀಮಿತವಾಗಿಲ್ಲ. ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿಯೂ ಇಂತಹದೇ ಕಳವಳಕಾರಿ ಸಂಗತಿಗಳು ವರದಿಯಾಗಿವೆ. 2025ರ ಅಕ್ಟೋಬರ್ 19 ರಿಂದ 23ರ ಅವಧಿಯೊಂದರಲ್ಲೇ 15 ಮಂದಿ ಕಣ್ಣಿನ ಗಾಯಗಳಿಗೆ ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾದರೆ, ಇನ್ನು ಕೆಲವರಿಗೆ ದೃಷ್ಟಿಯೇ ಮಂದವಾಗುವಷ್ಟು ತೀವ್ರ ಸ್ವರೂಪದ ಗಾಯಗಳಾಗಿವೆ.
ಪಟಾಕಿಯ ಅನಾಹುತ ಕೇವಲ ಕಣ್ಣಿಗೆ ಮಾತ್ರ ಸೀಮಿತವಲ್ಲ. ಇದಕ್ಕೆ ಉದಾಹರಣೆಯೆಂಬಂತೆ, 2023ರ ಅಕ್ಟೋಬರ್ 7ರಂದು ಬೆಂಗಳೂರಿನ ಆನೇಕಲ್ ತಾಲೂಕಿನ ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ಫ್ಯಾಕ್ಟರಿ ಅಗ್ನಿ ದುರಂತದಲ್ಲಿ 17 ಅಮಾಯಕ ಜೀವಗಳು ಕರಕಲಾಗಿಹೋದವು. ಪಟಾಕಿಯ ಸಾಗಾಟ, ಸಂಗ್ರಹಣೆ ಮತ್ತು ಮಾರಾಟದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅದರ ಪರಿಣಾಮ ಎಷ್ಟು ಭೀಕರವಾಗಿರುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
ಸರ್ಕಾರದ ನಿಯಮಗಳು ಮತ್ತು ನಮ್ಮ ಜವಾಬ್ದಾರಿ:
ಪಟಾಕಿಯ ಮಾರಾಟ ಮತ್ತು ಬಳಕೆಯನ್ನು ನಿಯಂತ್ರಿಸಲು ಸರ್ಕಾರ ಹಲವಾರು ಕಠಿಣ ನಿಯಮಗಳನ್ನು ಜಾರಿಗೊಳಿಸಿದೆ. ಪರಿಸರ ಸ್ನೇಹಿಯಾಗಿರುವ 'ಹಸಿರು ಪಟಾಕಿ'ಗಳ (Green Crackers) ಬಳಕೆಗೆ ಒತ್ತು ನೀಡಲಾಗಿದೆ. ಅನುಮತಿ ಪಡೆದ ಅಧಿಕೃತ ಮಾರಾಟಗಾರರಿಂದ ಮಾತ್ರ ಪಟಾಕಿ ಖರೀದಿಸುವಂತೆ ಸೂಚಿಸಲಾಗಿದೆ. ಹಾಗೆಯೇ, ಪಟಾಕಿ ಸಿಡಿಸಲು ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಸಮಯದ ನಿರ್ಬಂಧ ವಿಧಿಸಲಾಗಿದೆ. ಆದರೆ ನೆನಪಿಡಬೇಕಾದ ಸಂಗತಿಯೆಂದರೆ, ಹಸಿರು ಪಟಾಕಿಗಳು ಕೂಡ ಸಂಪೂರ್ಣವಾಗಿ ಅಪಾಯರಹಿತವೇನಲ್ಲ. ಅವುಗಳಿಂದಲೂ ಸಣ್ಣಪುಟ್ಟ ಕಿಡಿಗಳು ಹಾರಿ ಗಾಯಗಳಾಗುವ ಸಾಧ್ಯತೆ ಇದ್ದೇ ಇರುತ್ತದೆ.
ಪ್ರತಿವರ್ಷ ದೀಪಾವಳಿ ಬರುತ್ತದೆ, ದೀಪಗಳು ಬೆಳಗುತ್ತವೆ, ಪಟಾಕಿಗಳು ಸದ್ದು ಮಾಡುತ್ತವೆ. ಆದರೆ ಹಬ್ಬ ಮುಗಿದ ಬಳಿಕ ಆಸ್ಪತ್ರೆಗಳ ಕತ್ತಲ ಕೋಣೆಯಲ್ಲಿ ನೋವಿನಿಂದ ನರಳುವವರ ಸಂಖ್ಯೆ ಮಾತ್ರ ಹೆಚ್ಚಾಗಬಾರದು. ದೀಪಾವಳಿ ಎಂದರೆ ಸಂಭ್ರಮ ಎಂಬ ಹೆಸರಿನಲ್ಲಿ ನಮ್ಮ ಅಮೂಲ್ಯ ದೃಷ್ಟಿಯನ್ನು ಪಣಕ್ಕಿಡುವ ಬದಲು, ಎಚ್ಚರಿಕೆ ಮತ್ತು ಸುರಕ್ಷತೆಯಿಂದ ಹಬ್ಬವನ್ನು ಆಚರಿಸುವ ಸತ್ಸಂಪ್ರದಾಯವನ್ನು ನಾವೆಲ್ಲರೂ ರೂಢಿಸಿಕೊಳ್ಳೋಣ.
- ಶ್ರಾವ್ಯಾ ಭಟ್ ಸ್ವರ್ಗ
ದ್ವಿತೀಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್.ಡಿ.ಎಂ. ಸ್ನಾತಕೋತ್ತರ ಕಾಲೇಜು, ಉಜಿರೆ



